ಕೋಟಿ ಚೆನ್ನಯ ಜೋಡುಕರೆ ಕಂಬಳದಲ್ಲಿ ರಾಜ್ಯ ಮಟ್ಟದ ಪುರುಷರ ಕೆಸರುಗದ್ದೆ ಓಟ ಸ್ಪರ್ಧೆ ವಿಶೇಷ

0

ಪುತ್ತೂರು:ಹಲವು ಹೊಸತನವನ್ನು ಪುತ್ತೂರು ಕಂಬಳಕ್ಕೆ ಕೊಡುತ್ತಿರುವ ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿಯವರು ಈ ಬಾರಿ ಕಂಬಳದ ಉದ್ಘಾಟನೆಯ ಬಳಿಕ ರಾಜ್ಯ ಮಟ್ಟದ ಕೆಸರುಗದ್ದೆ ಓಟ ಸ್ಪರ್ಧೆಯನ್ನು ಆಯೋಜನೆ ಮಾಡುವ ಮೂಲಕ ಎಲ್ಲಾ ಕಂಬಳ ಕೂಟಗಳಿಗೆ ಮಾದರಿಯಾಗುವ ಕಾರ್ಯಕ್ರಮವೊಂದಕ್ಕೆ ಮುನ್ನುಡಿ ಬರೆದಿದ್ದಾರೆ. ಸ್ಪರ್ಧೆಯಲ್ಲಿ,ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದ 7 ಮಂದಿ ಕ್ರೀಡಾಪಟುಗಳೂ ಭಾಗಿಯಾಗಿದ್ದರು.


ಬೆಳಿಗ್ಗೆ ಕೋಟಿ ಚೆನ್ನಯ ಜೋಡುಕರೆ ಕಂಬಳದ ಉದ್ಘಾಟನೆಯ ಬಳಿಕ ಕರೆಗೆ ಕೋಣಗಳನ್ನು ಇಳಿಸುವ ಪ್ರದರ್ಶನ ನಡೆಯಿತು. ಇದಾದ ನಂತರ ಮಧ್ಯಾಹ್ನ ರಾಜ್ಯಮಟ್ಟದ ಕೆಸರುಗದ್ದೆ ಓಟ ಸ್ಪರ್ಧೆ ನಡೆಯಿತು. ಪ್ರೊ|ಕಬಡ್ಡಿ ಆಟಗಾರ ಪ್ರಶಾಂತ್ ರೈ ಕೈಕಾರ ಕೆಸರುಗದ್ದೆ ಓಟ ಸ್ಪರ್ಧೆಗೆ ಕೆಂಪು ಬಾವುಟ ನಿಶಾನೆಯೊಂದಿಗೆ ಚಾಲನೆ ನೀಡಿದರು.ಕೋಟಿ ಮತ್ತು ಚೆನ್ನಯ ಕರೆಯಲ್ಲಿ ತಲಾ 4 ಮಂದಿಯಂತೆ 10 ಸುತ್ತಿನ ಕೆಸರುಗದ್ದೆ ಓಟ ನಡೆಯಿತು.ಓಟದಲ್ಲಿ ಪ್ರಥಮ, ದ್ವಿತೀಯ ಮತ್ತು ಉತ್ತಮ ಸಮಯ ನಿರ್ವಹಣೆ ಮಾಡಿದ ಓಟಗಾರನ್ನು ಆಯ್ಕೆ ಮಾಡಿ ಸಂಜೆ ಸೆಮಿ ಫೈನಲ್ ನಡೆಯಿತು.ಸೆಮಿ ಫೈನಲ್‌ಗೆ 13 ಮಂದಿ ಭಾಗವಹಿಸಿದ್ದರು.ಫೈನಲ್ ಓಟದಲ್ಲಿ ವಿಜೇತರನ್ನು ಆಯ್ಕೆ ಮಾಡಲಾಯಿತು.


ಸನ್ಮಾನ:
ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ(ಎಸ್‌ಸಿಆರ್)ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ‘ಸಹಕಾರ ರತ್ನ’ಡಾ|ಎಂ.ಎನ್.ರಾಜೇಂದ್ರ ಕುಮಾರ್ ಮತ್ತು ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಅವರನ್ನು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿಯಿಂದ ಸನ್ಮಾನಿಸಲಾಯಿತು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಮತ್ತು ಕಂಬಳ ಸಮಿತಿ ಸಂಚಾಲಕ ವಸಂತ ಕುಮಾರ್ ರೈ ಅವರು ಸನ್ಮಾನ ಪತ್ರ ವಾಚಿಸಿದರು.ಪಾಪ್ಯುಲರ್ ಸ್ವೀಟ್ಸ್‌ನ ಮಾಲಕ ನರಸಿಂಹ ಕಾಮತ್, ರಾಜ್ಯ ಪ್ರಶಸ್ತಿ ವಿಜೇತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ, ಎಡಪದವು ಸ್ವಾಮಿ ವಿವೇಕಾನಂದ ಪ.ಪೂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರೇಮನಾಥ ಶೆಟ್ಟಿ ಕಾವು ಅತಿಥಿಗಳಾಗಿ ಭಾಗವಹಿಸಿದ್ದರು.ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶ್ಯಾಮ್ ಭಟ್ ಅವರನ್ನೂ ಕಂಬಳ ಸಮಿತಿಯಿಂದ ಗೌರವಿಸಲಾಯಿತು.


ನಮ್ಮ ಕುಟುಂಬಕ್ಕೂ ಪುತ್ತೂರಿನ ಮಣ್ಣಿಗೂ ಅನಾದಿ ಕಾಲದ ಸಂಬಂಧ:
ಮಾಜಿ ಸಚಿವ ರಮಾನಾಥ ರೈ ಅವರು ಮಾತನಾಡಿ 6 ಬಾರಿ ಶಾಸಕನಾಗಿ, 13 ವರ್ಷ ಸಚಿವನಾಗುವ ಭಾಗ್ಯ ಬೆಳ್ಳಿಪ್ಪಾಡಿಯ ಮನೆತನಕ್ಕೆ ಸಿಕ್ಕಿದೆ.ಇದಕ್ಕೆ ಕಾರಣ ನಮ್ಮ ಕುಟುಂಬಕ್ಕೂ ಪುತ್ತೂರಿನ ಮಣ್ಣಿಗೆ ಅನಾದಿ ಕಾಲದ ಸಂಬಂಧ. ಈ ಕಂಬಳ ಯಶಸ್ವಿಯಾಗಲು ಕಂಬಳ ಆಯೋಜನೆ ಮಾಡಿದವರ ಶ್ರಮವಿದೆ. ಒಂದು ಸಮಯ ನಿಂತು ಹೋದರೂ ಮತ್ತೆ ಪುನರಾರಂಭಗೊಂಡು ಅಭೂತಪೂರ್ವವಾಗಿ ಮಹಾಲಿಂಗೇಶ್ವರ ದೇವರ ಆಶೀರ್ವಾದದಿಂದ ನಡೆಯುತ್ತಿದೆ ಎಂದರು.


ಕಂಬಳ ಜನಪ್ರಿಯ ಮಾತ್ರವಲ್ಲ ಜಗತ್ ಪ್ರಸಿದ್ದವಾಗಿದೆ:
ಮಾಜಿ ಸಂಸದ,ಕರ್ನಾಟಕ ಬಿಜೆಪಿಯ ಮಾಜಿ ಅಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ ತುಳುನಾಡಿನ ಪರಂಪರೆಯಲ್ಲಿ ವಿಶಿಷ್ಟವಾದ ಜನಪದ ಕ್ರೀಡೆ ಕಂಬಳ.ಇವತ್ತು ಪಾರಂಪರಿಕವಾಗಿ ಸುಮಾರು 32 ವರ್ಷಗಳ ಸುದೀರ್ಘ ಕಂಬಳವಿದ್ದರೆ ಅದು ಪುತ್ತೂರಿನ ಕೋಟಿ ಚೆನ್ನಯ ಜೋಡುಕರೆ ಕಂಬಳವಾಗಿದೆ.ಇಂತಹ ಕಂಬಳ ಸಂಸ್ಕೃತಿಯನ್ನು ಉಳಿಸುವ ಕೆಲಸ ಚಂದ್ರಹಾಸ ಶೆಟ್ಟಿಯವರ ತಂಡ ಮಾಡುತ್ತಿದೆ.ಪುತ್ತೂರು, ಮೂಡಬಿದ್ರೆ ಮತ್ತು ಕಾರ್ಕಳ ಪ್ರಸಿದ್ದವಾದ ಕಂಬಳ.ಆದರೆ ಪುತ್ತೂರಿನ ಕಂಬಳ ಹಿರಿತನದ ಕಂಬಳವಾಗಿದೆ.ಮಹಾಲಿಂಗೇಶ್ವರ ದೇವಳದ ಗದ್ದೆಯಲ್ಲಿರುವ ಕಾರಣ ಬಹಳ ಜಾಗ್ರತೆಯಿಂದ ನಡೆಯುವ ಕಂಬಳ ಪುತ್ತೂರು ಕಂಬಳ.ಕಂಬಳಕ್ಕೆ ಒಂದು ಕಾಲದಲ್ಲಿ ಕಾನೂನು ಸಮಸ್ಯೆ ಎದುರಾದಾಗ,ನಮ್ಮ ಜಿಲ್ಲೆಯವರೇ ಆದ ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಇದಕ್ಕೆ ಹೆಚ್ಚು ಪ್ರೋತ್ಸಾಹ ಕೊಡುವ ಕೆಲಸ ಸರಕಾರದಿಂದ ಮಾಡಿದರು.ಹಾಗಾಗಿ ಇವತ್ತು ಬಹಳ ಎಚ್ಚರಿಕೆಯಿಂದ ಈ ಕಂಬಳ ಮಾಡಬೇಕಾಗಿದೆ.ಕಂಬಳ ಜನಪ್ರಿಯ ಮಾತ್ರವಲ್ಲ ಜಗತ್ಪ್ರಸಿದ್ದವಾಗಿದೆ ಎಂದರು.


ಕಂಬಳದ ಆರಂಭದಲ್ಲಿ ನಳಿನ್ ನಮ್ಮೊಂದಿಗಿದ್ದರು:
ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿಯವರು ಮಾತನಾಡಿ ನಳಿನ್ ಕುಮಾರ್ ಕಟೀಲ್ ಅವರು ಕಂಬಳ ಆರಂಭದಲ್ಲಿ ನಮ್ಮ ಜೊತೆ ಇದ್ದರು. ಕೀರ್ತಿಶೇಷ ಜಯಂತ ರೈ ಅವರು ಕಂಬಳ ಆರಂಭಿಸಿದ ಸಮಯ ನಳಿನ್ ವಿದ್ಯಾರ್ಥಿ ಜೀವನದಲ್ಲಿ ನಮ್ಮೊಂದಿಗಿದ್ದರು. ಅವರು ನಮ್ಮ ದೊಡ್ಡ ಜೋಸ್ತಿ. ಅವರು ಬಿಜೆಪಿ ರಾಜ್ಯ ಅಧ್ಯಕ್ಷರು,ಮೂರು ಬಾರಿ ಲೋಕಸಭಾ ಸದಸ್ಯರಾಗಿದ್ದರು. ಅದು ನಮಗೆ ತುಂಬಾ ಕುಶಿ. ಯಾವಾಗಲೂ ಅವರನ್ನು ಕಂಬಳಕ್ಕೆ ಕರೆಯುತ್ತಿದ್ದೆ. ಆಗ ಒತ್ತಡದ ಕಾರಣದಿಂದಲೋ ಏನೋ ಬರುತ್ತಿರಲಿಲ್ಲ. ಈ ಬಾರಿ ಕರೆದಾಗ ಖಂಡಿತಾ ಬರುತ್ತೇನೆಂದು ಹೇಳಿದರು.ಹಾಗೆ ಬಂದಿರುವುದು ಸಂತೋಷ ಆಗಿದೆ ಎಂದರು.

ರಾಜ್ಯ ಮಟ್ಟದ ಕೆಸರು ಗದ್ದೆ ಓಟದ ಸ್ಪರ್ಧೆಯ ತಾಂತ್ರಿಕ ಸಮಿತಿ ಮತ್ತು ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್ ಕೂಡಮರ ಅವರು ಕ್ರೀಡಾಕೂಟದ ನಿರ್ವಹಣೆ ಮಾಡಿದರು.ತೀರ್ಪುಗಾರರಾದ ನಿರಂಜನ ರೈ ಮಠಂತಬೆಟ್ಟು ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಅವರು ಕಾರ್ಯಕ್ರಮ ನಿರೂಪಿಸಿದರು.ಈ ಸಂದರ್ಭ ಕೋಟಿ ಚೆನ್ನಯ ಜೋಡು ಕರೆ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ದಿನೇಶ್ ಪಿ.ವಿ, ಕೋಶಾಧಿಕಾರಿ ಈಶ್ವರ ಭಟ್ ಪಂಜಿಗುಡ್ಡೆ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಕಂಬಳ ಸಮಿತಿ ಪದಾಧಿಕಾರಿಗಳು ಅತಿಥಿಗಳನ್ನು ಸ್ವಾಗತಿಸಿದರು.ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ,ಬಿಜೆಪಿ ಗ್ರಾಮಾಂತರ ಮಂಡಲದ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ,ನಗರಸಭಾ ಸದಸ್ಯ ಜೀವಂಧರ್ ಜೈನ್,ಸುಳ್ಯ ಅಕ್ರಮ ಸಕ್ರಮ ಸಮಿತಿ ಮಾಜಿ ಸದಸ್ಯ ರಾಕೇಶ್ ರೈ ಕೆಡೆಂಜಿ,ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು,ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥ, ಪ್ರಸಾದ್ ನಳಿನ್ ಕುಮಾರ್ ಜೊತೆ ಬಂದಿದ್ದರು.ಕ್ರೀಡಾ ಪಟುಗಳಾದ ಕರುಣಾಕರ ಶೆಟ್ಟಿ, ತಾರಾನಾಥ ಶೆಟ್ಟಿ, ರಾಜೀವ ಶೆಟ್ಟಿ ಸಹಿತ ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಂಬಳ ಕೋಣಗಳ ಜತೆಗೆ ಓಡುವ ಓಟಗಾರರ ನೈಪುಣ್ಯತೆ ಹೆಚ್ಚಿಸಲು ಕೆಸರುಗದ್ದೆ ಓಟವನ್ನು ಆಯೋಜಿಸಲಾಗಿದ್ದು, ಓಟಗಾರರನ್ನು ಸಿದ್ಧತೆ ಮಾಡುವ ನಿಟ್ಟಿನಲ್ಲಿ ಕೆಸರುಗದ್ದೆ ಓಟ ಸ್ಪರ್ಧೆ ನಡೆಸಿದ್ದೇವೆ.ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಪ್ರಶಸ್ತಿಪತ್ರ ನೀಡುತ್ತಿದ್ದೇವೆ. ಓಟಗಾರರಿಗೆ ಪ್ರತ್ಯೇಕ ಸಂಖ್ಯೆಯನ್ನು ನೀಡಲಾಗಿದೆ.ವಿಜೇತರನ್ನು ಸಂಖ್ಯೆ ಆಧಾರದಲ್ಲಿ ಗುರುತಿಸಲಾಗುತ್ತಿದೆ-
ಚಂದ್ರಹಾಸ ಶೆಟ್ಟಿ,ಅಧ್ಯಕ್ಷರು
ಕೋಟಿಚೆನ್ನಯ ಜೋಡುಕರೆ ಕಂಬಳ ಸಮಿತಿ ಪುತ್ತೂರು

ಕೋಟಿ ಚೆನ್ನಯ ಜೋಡುಕರೆ ಕಂಬಳದಲ್ಲಿ ನಡೆದ ಕೆಸರುಗದ್ದೆ ಓಟದಲ್ಲಿ ಆಯ್ಕೆಗೊಂಡ 10 ಮಂದಿಗೆ ಅಥವಾ ತಾಂತ್ರಿಕ ಸಮಿತಿಗೆ ಸಂಬಂಧಿಸಿ ಆಸಕ್ತಿ ಇದ್ದಲ್ಲಿ ಕಂಬಳ ಸಂರಕ್ಷಣಾ ನಿರ್ವಹಣೆ ಸಮಿತಿ ಅಕಾಡೆಮಿಯಿಂದ ಉಚಿತ ತರಬೇತಿ ನೀಡಲಾಗುವುದು ಎಂದು ಅಕಾಡೆಮಿ ನಿರ್ದೇಶಕ ರವೀಂದ್ರ ಕುಮಾರ್ ತಿಳಿಸಿರುವುದಾಗಿ ಕಂಬಳ ಕ್ರೀಡಾಕೂಟದ ತೀರ್ಪುಗಾರ ಉದ್ಘೋಷಕರು ಘೋಷಣೆ ಮಾಡಿದರು.7 ವರ್ಷದ ತರಬೇತಿ ಶಿಬಿರವು ಬಾರ್ಕೂರು ಶಾಂತಾರಾಮ ಶೆಟ್ಟಿಯವರ ನೇತೃತ್ವದಲ್ಲಿ ನಡೆಯಲಿದೆ ಎಂದು ಉದ್ಘೋಷಕರು ತಿಳಿಸಿದರು.

LEAVE A REPLY

Please enter your comment!
Please enter your name here