ದ.ಕ. ಜಿಲ್ಲಾ ಎಸ್.ಪಿ ಯತೀಶ್., ಇನ್ಸೈಟ್ಸ್ ಐಎಎಸ್ ಸ್ಥಾಪಕ ವಿನಯ್ ಅವರಿಗೆ ಸನ್ಮಾನ | ನೂರಾರು ವಿದ್ಯಾರ್ಥಿಗಳು ಭಾಗಿ
ಪುತ್ತೂರು: ಸುದ್ದಿ ಮಾಹಿತಿ ಟ್ರಸ್ಟ್, ಒಕ್ಕಲಿಗ ಯುವ ಬ್ರಿಗೇಡ್, ಇನ್ಸೈಟ್ಸ್ ಐಎಎಸ್ ಹಾಗೂ ಪುತ್ತೂರಿನ ಎವಿಜಿ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಸಂತ ಫಿಲೋಮಿನ ಕಾಲೇಜಿನಲ್ಲಿ ಮಾ.೧ ರಂದು ಐಎಎಸ್, ಕೆಎಎಸ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಹೇಗೆ ಎಂಬ ಒಂದು ದಿನದ ಉಚಿತ ತರಬೇತಿ ಕಾರ್ಯಗಾರ ನಡೆಯಿತು.

ಕಾರ್ಯಗಾರವನ್ನು ಸುದ್ದಿ ಸಮೂಹ ಸಂಸ್ಥೆಗಳ ಸ್ಥಾಪಕ ಡಾ.ಯು.ಪಿ. ಶಿವಾನಂದ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪುತ್ತೂರು ಭಾಗದಲ್ಲಿ ಎಷ್ಟು ಮಂದಿಗೆ ಐಎಎಸ್, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಆಸಕ್ತಿ ಇದೆ ಎಂಬುದನ್ನು ತಿಳಿಯಲು ಮಾಹಿತಿ ಕಾರ್ಯಗಾರವನ್ನು ನಡೆಸುತ್ತಿದ್ದೇವೆ. ಅವರಿಗೊಂದು ವಿಶೇಷ ವೇದಿಕೆಯನ್ನೂ ಕಲ್ಪಿಸಲಿದ್ದೇವೆ. ಇದಕ್ಕೆ ಡಾ.ಆಂಟೋನಿ ಪ್ರಕಾಶ್ ಮೊಂತೆರೋ ಅವರು ಬೆಂಬಲ ಸೂಚಿಸಿದ್ದಾರೆ ಎಂದರು. ನಮ್ಮ ವಿದ್ಯಾರ್ಥಿಗಳಲ್ಲಿ ಆರ್ಥಿಕತೆ ತೊಂದರೆ ಇದ್ದಲ್ಲಿ, ತರಬೇತಿಗೆ ಶುಲ್ಕ ಪಾವತಿಸಲು ಆಗದೇ ಇದ್ದರೆ ಅಂತಹವರಿಗೆ ನಾವು ಸಮಾಜದಿಂದ ಬೆಂಬಲವನ್ನು ನೀಡಲಿದ್ದೇವೆ. ಹೀಗಾಗಿ ಯಾವುದೇ ಚಿಂತೆ ಮಾಡದೆ ಮುಂದೆ ಬನ್ನಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಒಕ್ಕಲಿಗ ಯುವ ಬ್ರಿಗೇಡ್ ಸಂಸ್ಥಾಪಕ ನಂಜೇಗೌಡ ನಂಜುಂಡ ಅವರು ಮಾತನಾಡಿ, ಒಕ್ಕಲಿಗ ಬ್ರಿಗೇಡ್ ಎಂದಾಕ್ಷಣ ನಾವು ಕೇವಲ ಈ ಸಮಾಜಕ್ಕೆ ಸೀಮಿತವಾಗಿಲ್ಲ. ಎಲ್ಲರ ಏಳಿಗೆಗೆ ಶ್ರಮಿಸುತ್ತಿದ್ದೇವೆ. ಈವರೆಗೆ ಮೂರು ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗ ಸಿಗುವಂತೆ ಮಾಡಿದ್ದೇವೆ. ೩೫೦ ಮಂದಿಗೆ ತರಬೇತಿ ನೀಡಿದ್ದು, ೧೫ ಮಂದಿ ಐಎಎಸ್ ಅಧಿಕಾರಿಗಳಾಗಿದ್ದಾರೆ. ಐದು ಮಂದಿ ಕೆಎಎಸ್ ಮುಖ್ಯ ಪರೀಕ್ಷೆಗೆ ತಯಾರಾಗುತ್ತಿದ್ದಾರೆ ಎಂದರು. ಇಂತಹ ಮಾಹಿತಿ ಕಾರ್ಯಗಾರವನ್ನು ಪ್ರಚಾರಕ್ಕಾಗಿ, ಜಾಗೃತಿ ಮೂಡಿಸಲು ಮಾಡುತ್ತಿದ್ದೇವೆ. ನಿಮಗೆ ನಾವು ಸಹಕಾರವಾಗಿ ನಿಲ್ಲುತ್ತೇವೆ. ಸುದ್ದಿ ಮಾಹಿತಿ ಟ್ರಸ್ಟ್ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ವಿದ್ಯಾರ್ಥಿಗಳಿಗೆ ಇದೊಂದು ಗೋಲ್ಡನ್ ಅಪಾರ್ಚುನಿಟಿ ಎಂದರು.
ಇನ್ಸೈಟ್ಸ್ ಐಎಎಸ್ ಸಂಸ್ಥೆಯ ಸಂಸ್ಥಾಪಕ ವಿನಯ್ ಕುಮಾರ್ ಮಾತನಾಡಿ, ಬೆಂಗಳೂರಿನಲ್ಲಿ ಪ್ರಾರಂಭವಾದ ಇನ್ಸೈಟ್ಸ್ ಸಂಸ್ಥೆ, ದೆಹಲಿ, ಹೈದರಾಬಾದ್, ದಾವಣಗೆರೆಯಲ್ಲಿ ಬ್ರಾಂಚ್ ತೆರೆಯಲಾಗಿದೆ. ಜಮ್ಮು ಕಾಶ್ಮೀರದ ಶ್ರೀನಗರದಲ್ಲೂ ತರಬೇತಿ ಕೇಂದ್ರ ಪ್ರಾರಂಭಿಸಲಾಗಿದೆ. ಇಲ್ಲಿ ಸೈನಿಕರ ಮಕ್ಕಳಿಗೆ ಉಚಿತ ತರಬೇತಿ ನೀಡುತ್ತಿದ್ದೇವೆ ಎಂದರು.
ಬಾಲ್ಯದಲ್ಲಿ ಬಡತನದಲ್ಲಿ ಮಿಂದೆದ್ದು ಸಾಧನೆಗೈದ ಬಗ್ಗೆ ಮಾಹಿತಿ ಹಂಚಿಕೊಂಡ ಅವರು, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು ಹೇಗಿರುತ್ತವೆ ಎಂಬಿತ್ಯಾದಿಗಳ ಬಗ್ಗೆ ಮಾಹಿತಿ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಮಾತನಾಡಿ, ಜಿಲ್ಲೆಯ ಯುವ ಜನರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಆಸಕ್ತಿ ಕಡಿಮೆ. ಸರ್ಕಾರಿ ಸೇವೆ ಮಾಡುವ ಅಪೇಕ್ಷೆ ಇರುವುದು ಕಡಿಮೆ. ಇತ್ತೀಚೆಗೆ ನಡೆದ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಯಲ್ಲಿ ಕೇವಲ ಐದು ಮಂದಿ ಈ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗಬೇಕು. ಖಾಸಗಿ ಕಂಪನಿಯಲ್ಲಿ ಕಡಿಮೆ ವೇತನಕ್ಕೆ ದುಡಿಯುವ ಬದಲು ಸರ್ಕಾರಿ ಕೆಲಸಕ್ಕೆ ಸೇರಿಕೊಂಡು ಉತ್ತಮ ವೇತನ ಪಡೆಯಬಹುದು. ನಿಮಗೆ ಮಾತ್ರವಲ್ಲದೆ ತಂದೆ ತಾಯಂದಿರಿಗೂ ಗೌರವ ಸಿಗುತ್ತದೆ ಎಂದರು.
ಉಪನ್ಯಾಸಕ ದರ್ಶನ್ ಕುಮಾರ್ ಕೆ.ಎಸ್. ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹೇಗೆ ಎದುರಿಸಬೇಕೆಂದು ಮಾಹಿತಿ ನೀಡಿದರು. ಕಾರ್ಯಗಾರದ ಕೇಂದ್ರ ಬಿಂದುವಾಗಿ ಆಗಮಿಸಿದ ವಿನಯ್ ಕುಮಾರ್ ಅವರು ಐಎಎಸ್ ಪರೀಕ್ಷೆ ಕುರಿತ ಸಂಪೂರ್ಣ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವಿನಯ್ ಕುಮಾರ್ ಮತ್ತು ಯತೀಶ್ ಎನ್ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ಲೇಸ್ಮೆಂಟ್ ಆಫಿಸರ್ ಡಾ.ಗೀತಾ ಪೂರ್ಣಿಮಾ ಅವರು ಅತಿಥಿಗಳನ್ನು ಸ್ವಾಗತಿಸಿ, ಎಂ.ಕಾಂ. ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀರಾಗ ಹೆಚ್. ವಂದಿಸಿದರು. ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥ ಡಾ.ರಾಧಕೃಷ್ಣ ಗೌಡ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.