ಪುಣಚ: ಗ್ರಾಮ ಪಂಚಾಯತ್ ಪುಣಚ ಹಾಗೂ ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿ ಪುಣಚ ಇವರ ವತಿಯಿಂದ ಪುಣಚದಲ್ಲಿ ನಿರ್ಮಾಣಗೊಂಡ ಹಿಂದೂ ರುದ್ರಭೂಮಿ ಕಟ್ಟಡ(ಮುಕ್ತಿಧಾಮ)ವು ಮಾ.2ರಂದು ಲೋಕಾರ್ಪಣೆಗೊಂಡಿತು. ಸಂಸದ ಕ್ಯಾ.ಬ್ರಿಜೇಶ್ ಚೌಟ ಹಿಂದೂ ರುದ್ರಭೂಮಿಯ ಕಟ್ಟಡ ಲೋಕಾರ್ಪಣೆಗೊಳಿಸಿದರು. ಗ್ರಾ.ಪಂ.ಅಧ್ಯಕ್ಷೆ ಬೇಬಿ ಪಟಿಕಲ್ಲು ಹಾಗೂ ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಜನಾರ್ದನ ಭಟ್ ಅಮೈ ತೆಂಗಿನಕಾಯಿ ಒಡೆದು ಉದ್ಘಾಟಿಸಿದರು.
ಗ್ರಾಮಸ್ಥರು ಒಂದಾಗಿ, ಒಗ್ಗಟ್ಟಿನಿಂದ ಮುನ್ನಡೆದಾಗ ಅಭಿವೃದ್ಧಿಯನ್ನು ತಡೆಯಲು ಸಾಧ್ಯವಿಲ್ಲ- ಕ್ಯಾ.ಬ್ರಿಜೇಶ್ ಚೌಟ:
ಕಟ್ಟಡ ಲೋಕಾರ್ಪಣೆಯ ಬಳಿಕ ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ಗ್ರಾಮದ ಸರ್ವತೋಮುಖ ಅಭಿವೃದ್ಧಿಗಾಗಿ ಗ್ರಾಮಸ್ಥರೆಲ್ಲರೂ ಒಂದೇ ಮನಸ್ಸಿನಿಂದ ಮುನ್ನಡೆಯಬೇಕು. ಗ್ರಾಮದ ಅಭಿವೃದ್ಧಿಯಲ್ಲಿ ನಾವು ಒಂದಾಗಿ ಒಗ್ಗಟ್ಟಿನಿಂದ ಮುನ್ನಡೆದಾಗ ಯಾರಿಂದಲೂ ಅಭಿವೃದ್ಧಿಯನ್ನು ತಡೆಯಲು ಸಾಧ್ಯವಿಲ್ಲ. ಆಗ ಭಾರತ ದೇಶ ಉನ್ನತ ಸ್ಥಾನವನ್ನು ಏರಲಿದೆ. ಜಾತಿ ಇನ್ನಿತರ ವಿಷಬೀಜ ಬಿತ್ತಿ ಸಮಾಜವನ್ನು ಒಡೆಯುವವರನ್ನು ಅಲ್ಲಿಯೇ ಮೊಟಕುಗೊಳಿಸಬೇಕು. ಸಮಾಜಕ್ಕೆ ಪ್ರಯೋಜನವಾಗುವಂತ ಯೋಜನೆಗೆ ಸದಾ ಸಹಕಾರ ನೀಡಬೇಕು. ಅಶಕ್ತರಿಗೆ ಸೇವೆಯ ಅರ್ಹತೆ ಇರುವವರಿಗೆ ಸಹಕಾರ ನೀಡಬೇಕು. ಪುಣಚದಲ್ಲಿ ಎಲ್ಲರೂ ಒಟ್ಟಾಗಿ, ಒಂದಾಗಿ ಸಮಾಜಕ್ಕಾಗಿ ಹಿಂದೂ ರುದ್ರಭೂಮಿಯನ್ನು ನಿರ್ಮಾಣ ಮಾಡಿದ ಸೇವೆಯು ಶ್ಲಾಘನೀಯವಾದುದು ಎಂದರು.
ಮುಂದಿನ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡಲಾಗುವುದು- ಕಿಶೋರ್ ಬೊಟ್ಯಾಡಿ:
ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿ, ಎಲ್ಲಾ ಧರ್ಮಗಳಲ್ಲಿ ಸಂಸ್ಕಾರಯುತವಾಗಿ ಮೃತ ದೇಹದ ಅಂತ್ಯ ಸಂಸ್ಕಾರ ಮಾಡಲು ರುದ್ರಭೂಮಿಯ ಅವಶ್ಯಕತೆಯಿದೆ. ಪುಣಚದಲ್ಲಿ ಉತ್ತಮ ರೀತಿಯಲ್ಲಿ ಹಿಂದೂ ರುದ್ರಭೂಮಿ ನಿರ್ಮಾಣಗೊಳ್ಳುವ ಮೂಲಕ ಗ್ರಾಮದ ಜನರ ಕೊರತೆ ನೀಗಿಸಿದೆ. ಇದನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಬೇಕು. ರುದ್ರಭೂಮಿಯ ಸುತ್ತ ಇಂಟರ್ಲಾಕ್ ಅಳವಡಿಸುವುದು ಸೇರಿದಂತೆ ಮುಂದಿನ ಅಭಿವೃದ್ಧಿ ಕಾರ್ಯಗಳಿಗೆ ತನ್ನ ವ್ಯಾಪ್ತಿಯಲ್ಲಿ ಅನುದಾನ ನೀಡಲಾಗುವುದು. ಗ್ರಾಮದ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಲಾಗುವುದು, ಗ್ರಾ.ಪಂ ಸದಸ್ಯರ ಧ್ವನಿಯಾಗಿ ಕೆಲಸ ಮಾಡಲಾಗುವುದು ಎಂದರು.
ಗ್ರಾಮದ ಜನತೆಯ ಅವಶ್ಯಕತೆ ಪೂರೈಸಲಾಗಿದೆ- ಬೇಬಿ ಪಟಿಕಲ್ಲು:
ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪುಣಚ ಗ್ರಾ.ಪಂ.ಅಧ್ಯಕ್ಷೆ ಬೇಬಿ ಪಟಿಕಲ್ಲು ಮಾತನಾಡಿ, ಬಡವರಿಗೆ ಅನುಕೂಲವಾಗುವಂತೆ ಗ್ರಾಮ ಪಂಚಾಯತ್ ಮೂಲಕ ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿ ರಚಿಸಿಕೊಂಡು ಹಿಂದೂ ರುದ್ರಭೂಮಿ ನಿರ್ಮಿಸಲಾಗಿದೆ. ಗ್ರಾಮದ ಜನರ ಅವಶ್ಯಕತೆ ಪೂರೈಸಲಾಗಿದೆ ಎಂದರು.
ಸಹಕಾರಿ ಸಂಘದಿಂದ ರೂ.1ಲಕ್ಷ ದೇಣಿಗೆ- ಜನಾರ್ದನ ಭಟ್ ಅಮೈ:
ಅಧ್ಯಕ್ಷತೆ ವಹಿಸಿದ್ದ ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಜನಾರ್ದನ ಭಟ್ ಅಮೈ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ರುದ್ರಭೂಮಿಯ ನಿರ್ಮಾಣವು ಪೂರಕವಾಗಿದೆ. ಇದು ಗ್ರಾಮದ ಜನರಿಗೆ ಉಪಯೋಗವಾಗುವ ಸೌಲಭ್ಯವಾಗಿದೆ. ಸಹಕಾರಿ ಸಂಘದ ಮುಖಾಂತರ ರುದ್ರಭೂಮಿಗೆ ರೂ.1 ಲಕ್ಷದ ದೇಣಿಗೆ ನೀಡಲಾಗಿದೆ. ಮುಂದೆ ಇದನ್ನು ಉತ್ತಮವಾಗಿ ನಿರ್ವಹಣೆ ಮಾಡುವುದು ಮುಖ್ಯವಾಗಿದ್ದು ಗ್ರಾ.ಪಂನ ಜೊತೆಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದರು.
ಉತ್ತಮವಾಗಿ ಮುನ್ನಡೆಯಲಿ- ಡಾ.ರಂಶೀಲಾ:
ಪುಣಚ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಂಶೀಲಾ ಮಾತನಾಡಿ, ಗ್ರಾಮದ ಜನತೆಗೆ ಉಪಯೋಗವಾಗುವಂತೆ ನಿರ್ಮಾಣಗೊಂಡಿರುವ ರುದ್ರಭೂಮಿಯು ಉತ್ತಮ ರೀತಿಯಲ್ಲಿ ಮುನ್ನಡೆಯಲಿ ಎಂದರು.
ಪುಣಚ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮಂಡಳಿ ಉಪಾಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು, ವಿಟ್ಲ ರೋಟರಿ ಕ್ಲಬ್’ನ ನಿಯೋಜಿತ ಅಧ್ಯಕ್ಷ ರವಿ ಬಿ.ಕೆ, ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರೀತಂ ಪೂಂಜ ಅಗ್ರಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗೌರವಾರ್ಪಣೆ:
ಪುಣಚ ಗ್ರಾ.ಪಂ.ಮಾಜಿ ಅಧ್ಯಕ್ಷ ರಾಮಕೃಷ್ಣ ಮೂಡಂಬೈಲು, ಪುಣಚ ಕಲ್ಪವೃಕ್ಷ ಫ್ರೆಂಡ್ಸ್ ತುರ್ತು ವಾಹನ ಚಾಲಕ- ಮಾಲಕರಾದ ಜಗದೀಶ್ ರೈ ಚನಿಲ, ಪ್ರಕಾಶ್ ಪಾಟಾಳಿರವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಶಾಸಕ, ಯೋಜನಾಧಿಕಾರಿ ಭೇಟಿ:
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರು ಕಾರ್ಯಕ್ರಮದ ಬಳಿಕ ಭೇಟಿ ನೀಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಽಕಾರಿ ರಮೇಶ್ ಕಾರ್ಯಕ್ರಮದ ಪ್ರಾರಂಭದಲ್ಲಿ ಭೇಟಿ ನೀಡಿದ್ದರು. ಪುಣಚ ಗ್ರಾ.ಪಂ.ಉಪಾಧ್ಯಕ್ಷ ಮಹೇಶ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸದಸ್ಯರಾದ ಗುರುವಪ್ಪ ಪೂಜಾರಿ ದಲ್ಕಾಜೆಗುತ್ತು, ಹರೀಶ್ ಪೂಜಾರಿ ದಲ್ಕಜೆ, ರವೀಂದ್ರ ಶೆಟ್ಟಿ ದೇವರಗುಂಡಿ, ರೇಷ್ಮಾ ಕೂರೇಲು, ಉದಯಕುಮಾರ್ ದಂಬೆ, ಜಯರಾಮ ಕಾನ, ಮಮತಾ ಕಜೆಮಾರ್, ನಾರಾಯಣ ಪೂಜಾರಿ ಎಚ್, ಅಶೋಕ ಎಂ. ತೀರ್ಥರಾಮ ಎ. ಅತಿಥಿಗಳಿಗೆ ಶಾಲು ಹಾಕಿ ಸ್ವಾಗತಿಸಿದರು. ಜಯಲಕ್ಷ್ಮೀ ಪ್ರಾರ್ಥಿಸಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿ ವಂದಿಸಿದರು. ಜಗನ್ನಾಥ್ ಎಸ್. ಕಾರ್ಯಕ್ರಮ ನಿರೂಪಿಸಿದರು. ಗ್ರಾ.ಪಂ.ಸಿಬ್ಬಂದಿಗಳು ಹಾಗೂ ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಸದಸ್ಯರು ಸಹಕರಿಸಿದರು.