ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉದನೆ ಪೇಟೆಯಲ್ಲಿ ಯು ಟರ್ನ್ ಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ ಘಟನೆ ಶಿರಾಡಿ ಗ್ರಾಮಸಭೆಯಲ್ಲಿ ನಡೆದಿದೆ.
ಸಭೆ ಗ್ರಾ.ಪಂ.ಅಧ್ಯಕ್ಷ ಕಾರ್ತಿಕೇಯನ್ ಕೆ.ಎನ್.ಅವರ ಅಧ್ಯಕ್ಷತೆಯಲ್ಲಿ ಕಳಪ್ಪಾರು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಭರತ್ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾ.ಪಂ.ಮಾಜಿ ಸದಸ್ಯ ಕೆ.ಕೆ.ಸೆಬಾಸ್ಟಿನ್ ಅವರು, ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಉದನೆ ಭಾಗದಲ್ಲಿ ಪೂರ್ಣಗೊಂಡಿದ್ದು ಉದನೆ ಪೇಟೆಯಲ್ಲಿ ಯೂಟರ್ನ್ ಇಲ್ಲ. ಪುತ್ಯೆ ಭಾಗದಿಂದ ಉದನೆ ಹಾಲು ಸೊಸೈಟಿಗೆ ಸಾಕಷ್ಟು ಮಂದಿ ಹೈನುಗಾರರು ಹಾಲು ತೆಗೆದುಕೊಂಡು ಬರುತ್ತಾರೆ. ಅಲ್ಲದೇ ಉದನೆ ಪೇಟೆ ಶಿರಾಡಿ ಗ್ರಾಮದ ಕೇಂದ್ರ ಭಾಗವಾಗಿದೆ. ಕೊಣಾಜೆ ಗ್ರಾಮಸ್ಥರೂ ಉದನೆ ಪೇಟೆಗೆ ಬರುತ್ತಾರೆ. ಇವರೆಲ್ಲರೂ ಪೇಟೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಬರಲು 1 ಕಿ.ಮೀ.ಗೂ ಹೆಚ್ಚು ದೂರ ಕ್ರಮಿಸಿ ಯುಟರ್ನ್ ತೆಗೆದುಕೊಂಡು ಬರಬೇಕಾಗಿದೆ. ಆದ್ದರಿಂದ ಉದನೆ ಪೇಟೆಯಲ್ಲಿ ಯು ಟರ್ನ್ ಕೊಡಬೇಕೆಂದು ಆಗ್ರಹಿಸಿದರು. ಇದಕ್ಕೆ ಇತರೇ ಗ್ರಾಮಸ್ಥರೂ ಧ್ವನಿಗೂಡಿಸಿದರು.
ಸಂಪರ್ಕ ರಸ್ತೆ ಕಿರಿದಾಗಿದೆ:
ಉದನೆ ಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಶಿಬಾಜೆ ಸಂಪರ್ಕಿಸುವ ರಸ್ತೆಯೂ ಅಗಲ ಕಿರಿದಾಗಿದ್ದು ವಾಹನಗಳ ಸಂಚಾರಕ್ಕೆ ತೊಡಕಾಗಿದೆ. ಇಲ್ಲಿ ಸ್ವಲ್ಪ ಕಾಂಕ್ರೀಟೀಕರಣಕ್ಕೂ ಬಾಕಿ ಇದೆ. ಅಲ್ಲದೇ ಉದನೆ ಸೈಂಟ್ ಆಂಟನೀಸ್ ಪ್ರೌಢಶಾಲೆಯ ಆಟದ ಮೈದಾನದ ಪಕ್ಕ ತಡೆಬೇಲಿ ನಿರ್ಮಿಸುವಂತೆ ಮನವಿ ಮಾಡಿದ್ದರೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆದಾರರಿಂದ ಸ್ಪಂದನೆ ಸಿಗುತ್ತಿಲ್ಲ ಎಂದು ಸೆಬಾಸ್ಟಿನ್, ಸಣ್ಣಿ ಕೆ.ಎಸ್. ಹಾಗೂ ಇತರೇ ಗ್ರಾಮಸ್ಥರು ಆರೋಪಿಸಿದರು. ಇದಕ್ಕೆ ಅಧ್ಯಕ್ಷ ಕಾರ್ತಿಕೇಯನ್ ಅವರು ಪ್ರತಿಕ್ರಿಯಿಸಿ, ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದ ಉದನೆ, ಶಿರಾಡಿ, ಅಡ್ಡಹೊಳೆಯಲ್ಲಿ ಜನರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆ, ಜಿಲ್ಲಾಧಿಕಾರಿ, ಸಚಿವರಿಗೆ ಗ್ರಾ.ಪಂ.ನಿಂದ ಪತ್ರ ಸಹ ಬರೆಯಲಾಗಿದೆ ಎಂದರು. ಗ್ರಾ.ಪಂ.ಸದಸ್ಯ ಎಂ.ಕೆ.ಪೌಲೋಸ್ ಅವರು ಪ್ರತಿಕ್ರಿಯಿಸಿ, ರಾ.ಹೆ.ಸಮಸ್ಯೆ ಬಗ್ಗೆ ಮೂರು ವರ್ಷದಿಂದ ಪತ್ರ ಬರೆಯುತ್ತಲೇ ಇದ್ದೇವೆ. ಆದರೆ ಉತ್ತರ ಬರುತ್ತಿಲ್ಲ. ಇನ್ನು ಎರಡು ತಿಂಗಳಲ್ಲಿ ಕಾಮಗಾರಿ ಮುಗಿಸಿ ಹೋಗುತ್ತಾರೆ. ಮತ್ತೆ ಸಮಸ್ಯೆಗೆ ಸ್ಪಂದಿಸುವುದಿಲ್ಲ. ಇದರ ವಿರುದ್ಧ ಪ್ರತಿಭಟನೆ ನಡೆಸುವುದೇ ಸೂಕ್ತ ಎಂದರು. ಈ ಬಗ್ಗೆ ಚರ್ಚೆ ನಡೆದು ಕಾಮಗಾರಿ ನಡೆಸುವ ಸಂಬಂಧ ಶೀಘ್ರದಲ್ಲೇ ಉದನೆಯಲ್ಲಿ ಪ್ರತಿಭಟನೆ ನಡೆಸಲು ಗ್ರಾಮಸ್ಥರು ನಿರ್ಧಾರ ಕೈಗೊಂಡರು.
ವೇಗದೂತ ಬಸ್ಸು ನಿಲ್ಲಿಸಲಿ:
ಉದನೆ, ಶಿರಾಡಿಯಲ್ಲಿ ವೇಗದೂತ ಬಸ್ಸು ನಿಲ್ಲಿಸುತ್ತಿಲ್ಲ. ಇದರಿಂದ ಶಾಲಾ ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಮಂಗಳೂರಿನಿಂದ ವೇಗದೂತ ಬಸ್ಸಿನಲ್ಲಿ ಬರುವ ವಿದ್ಯಾರ್ಥಿಗಳು ಎಂಜಿರ ಮಲ್ನಾಡು ಹೋಟೆಲ್ ಪಕ್ಕ ಇಲ್ಲವೇ ಗುಂಡ್ಯದಲ್ಲಿ ಬಸ್ಸಿನಿಂದ ಇಳಿಯಬೇಕಾಗುತ್ತದೆ. ಅಲ್ಲಿಂದ ಪೋಷಕರು ಕರೆದುಕೊಂಡು ಬರಬೇಕಾಗುತ್ತದೆ. ಉದನೆ, ಶಿರಾಡಿಯಲ್ಲಿ ವೇಗದೂತ ಬಸ್ಸು ನಿಲ್ಲಿಸುವಂತೆ ಹಲವು ಗ್ರಾಮಸಭೆಗಳಲ್ಲಿ ಪ್ರಸ್ತಾಪ ಮಾಡಲಾಗುತ್ತಿದೆ. ಆದರೂ ಇಲಾಖೆಯಿಂದ ಸ್ಪಂದನೆ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಈ ಬಗ್ಗೆ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಪತ್ರ ಬರೆಯಲಾಗಿದೆ ಎಂದು ಅಧ್ಯಕ್ಷ ಕಾರ್ತಿಕೇಯನ್ ತಿಳಿಸಿದರು. ಈ ಬಗ್ಗೆ ಮತ್ತೆ ಪತ್ರ ಬರೆಯಲು ನಿರ್ಣಯಿಸಲಾಯಿತು.
ಸಮರ್ಪಕ ವಿದ್ಯುತ್ ಕೊಡಿ:
ಬೇಸಿಗೆಯ ಆರಂಭದಲ್ಲೇ ವಿದ್ಯುತ್ ಸಮಸ್ಯೆ ಬಹಳಷ್ಟು ಇದೆ. ವಿದ್ಯುತ್ ಕಣ್ಣಮುಚ್ಚಾಳೆಯಿಂದಾಗಿ ಕೃಷಿಗೆ ನೀರು ಸಿಗುತ್ತಿಲ್ಲ. ಲೋ ವೋಲ್ಟೇಜ್ನಿಂದ ಕುಡಿಯುವ ನೀರಿನ ಪಂಪೂ ಚಾಲು ಆಗುತ್ತಿಲ್ಲ ಎಂದು ಆರೋಪಿಸಿದ ಗ್ರಾಮಸ್ಥರು, ಸಮರ್ಪಕ ವಿದ್ಯುತ್ ಪೂರೈಕೆ ಮಾಡಿ ಎಂದು ಒತ್ತಾಯಿಸಿದರು. ಈ ವಿಚಾರವನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಮೆಸ್ಕಾಂ ನೆಲ್ಯಾಡಿ ಶಾಖಾ ಮೇಲ್ವಿಚಾರಕಿ ಶೀಲಾವತಿ ತಿಳಿಸಿದರು.
ಎಲೆಚುಕ್ಕಿ ರೋಗದ ಬಗ್ಗೆ ಮಾಹಿತಿ ಕೊಡಿ:
ಅಡಿಕೆಗೆ ಬಾಧಿಸುತ್ತಿರುವ ಎಲೆಚುಕ್ಕಿ ರೋಗದಿಂದ ಅಡಿಕೆ ಬೆಳೆಗಾರರು ಹೈರಾಣಾಗಿದ್ದಾರೆ. ಇದರ ನಿಯಂತ್ರಣಕ್ಕೆ ಯಾವ ಔಷಧಿ ಸಿಂಪಡಿಸಬೇಕೆಂಬ ಮಾಹಿತಿಯೂ ರೈತರಲ್ಲಿ ಇಲ್ಲ. ಆದ್ದರಿಂದ ತೋಟಗಾರಿಕೆ ಇಲಾಖೆಯವರು ಅಡಿಕೆ ಬೆಳೆಗಾರರಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತೋಟಗಾರಿಕೆ ಇಲಾಖೆಯ ರವಿರಾಜ್ ಅವರು, ಎಲೆಚುಕ್ಕಿ ರೋಗದ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಇದರ ನಿಯಂತ್ರಣಕ್ಕೆ ಯಾವ ಔಷಧಿ ಸಿಂಪಡಿಸಬೇಕೆಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ ಎಂದರು.
ಶಿರಾಡಿ-ಶಿರ್ವತ್ತಡ್ಕ ರಸ್ತೆ ಅಭಿವೃದ್ಧಿಗೊಳಿಸಿ:
ಶಿರಾಡಿ-ಶಿರ್ವತ್ತಡ್ಕ ರಸ್ತೆಯಲ್ಲಿ ದಿನಂಪ್ರತಿ ನೂರಾರು ವಾಹನಗಳು ಓಡಾಟ ನಡೆಸುತ್ತೀವೆ. ಸದ್ರಿ ರಸ್ತೆ ಮರು ಡಾಮರೀಕರಣಕ್ಕೆ ಹಲವು ವರ್ಷಗಳಿಂದ ಒತ್ತಾಯ ಮಾಡುತ್ತಲೇ ಬರುತ್ತಿದ್ದೇವೆ ಎಂದು ಹೇಳಿದ ಗ್ರಾಮಸ್ಥರು ರಸ್ತೆ ಕಾಮಗಾರಿ ಮಾಡದೇ ಇದ್ದಲ್ಲಿ ಮುಂದಿನ ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆಯನ್ನೂ ನೀಡಿದರು. ಪ್ರಧಾನಮಂತ್ರಿ ಗ್ರಾಮ ಸಡಕ್ಗೆ ಸೇರಿಸಿಕೊಂಡು ಸದ್ರಿ ರಸ್ತೆ ಅಭಿವೃದ್ಧಿಗೊಳಿಸಬೇಕೆಂದು ಸದಸ್ಯ ಸಣ್ಣಿಜಾನ್ ಒತ್ತಾಯಿಸಿದರು.
ಉದನೆ-ಶಿಬಾಜೆ ರಸ್ತೆಯಲ್ಲಿ ಗುಂಡಿ ಮುಚ್ಚಿ:
ಡಾಮರೀಕರಣಗೊಂಡಿರುವ ಉದನೆ-ಶಿಬಾಜೆ ಲೋಕೋಪಯೋಗಿ ರಸ್ತೆಯ ಅಲ್ಲಲ್ಲಿ ಡಾಮರು ಎದ್ದು ಹೊಂಡ ನಿರ್ಮಾಣಗೊಂಡಿದೆ. ಆದ್ದರಿಂದ ಈಗಲೇ ಗುಂಡಿ ಮುಚ್ಚುವ ಕಾಮಗಾರಿ ನಡೆಸಬೇಕು. ಇಲ್ಲದೇ ಇದ್ದಲ್ಲಿ ಮುಂದೆ ದೊಡ್ಡ ಹೊಂಡ ನಿರ್ಮಾಣಗೊಂಡು ಸಂಚಾರಕ್ಕೆ ತೊಂದರೆಯಾಗಲಿದೆ ಎಂದರು.
ಆನೆ ಕಂದಕ ನಿರ್ಮಿಸಿ:
ಶಿರಾಡಿ, ಶಿರ್ವತ್ತಡ್ಕ, ದಾನಾಜೆ ಭಾಗದಲ್ಲಿ ಪದೇ ಪದೇ ಕಾಡಾನೆಗಳು ಕೃಷಿ ತೋಟಗಳಿಗೆ ದಾಳಿ ನಡೆಸಿ ಕೃಷಿ ಹಾನಿಗೊಳಿಸುತ್ತಿವೆ. ಇಲ್ಲಿ ಆನೆ ಕಂದಕ ನಿರ್ಮಿಸಬೇಕೆಂದು ಗ್ರಾಮಸ್ಥ ಜಾನ್ಸನ್ ಪಿ.ಸಿ.ಒತ್ತಾಯಿಸಿದರು.
ರಸ್ತೆ ಅಭಿವೃದ್ಧಿಗೊಳಿಸಿ:
ಶಿರಾಡಿ ೨ನೇ ವಾರ್ಡ್ನ ಪುತ್ತನ್ಪುರ, ದಾನಾಜೆ, ಕುನ್ನುಂಪುರಂ, ಪಾದಡ್ಕ ೨ನೇ ಅಡ್ಡರಸ್ತೆ, ಅಪ್ಪಾರ ಹಾಗೂ ಆಲಪ್ಪಾಟ್ ರಸ್ತೆಗಳನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕಾಂಕ್ರಿಟೀಕರಣಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.
ಅಂಗನವಾಡಿಗೆ ಜಾಗ ಕಾದಿರಿಸಿ:
ಶಿರಾಡಿ ಗ್ರಾಮದ ಶಿರಾಡಿ ಮತ್ತು ಪದಂಬಳ ಅಂಗನವಾಡಿಗೆ ಸ್ಥಳ ಕಾದಿರಿಸುವಂತೆ ಕಂದಾಯ ಇಲಾಖೆಗೆ ಮನವಿ ಮಾಡಲು ನಿರ್ಣಯಿಸಲಾಯಿತು. ಶಿರಾಡಿ ಗ್ರಾಮದ ೨ನೇ ವಾರ್ಡ್ನ ಪೇರುಮಜಲು ಮತ್ತು ಮಿತ್ತಮಜಲು ಭೌಗೋಳಿಕವಾಗಿ ೩ನೇ ವಾರ್ಡ್ಗೆ ಹೊಂದಿಕೊಂಡಿರುವುದರಿಂದ ಈ ಪ್ರದೇಶವನ್ನು 3ನೇ ವಾರ್ಡ್ಗೆ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಲಾಗಿದೆ.
ಆರೋಗ್ಯ ಇಲಾಖೆ ಪರವಾಗಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಪುಷ್ಪಾವತಿ, ಮೆಸ್ಕಾಂ ಮೇಲ್ವಿಚಾರಕಿ ಶೀಲಾವತಿ, ಕೃಷಿ ಇಲಾಖೆಯ ಸಾಯಿನಾಥ್, ಕಿರಿಯ ಪಶುವೈದ್ಯ ಪರೀಕ್ಷಕ ವಿರೇಶ್, ಸಮಾಜ ಕಲ್ಯಾಣ ಇಲಾಖೆಯ ಲೋಕೇಶ್, ತೋಟಗಾರಿಕೆ ಇಲಾಖೆಯ ರವಿರಾಜ್ ರೈ, ಸಿಆರ್ಪಿ ಪ್ರಕಾಶ್, ಜಿ.ಪಂ.ಇಂಜಿನಿಯರ್ ಹೊಳೆಬಸಪ್ಪ, ಜೆಜೆಎಂನ ಎಸ್.ಎಸ್.ಹುಕ್ಕೇರಿ, ಗ್ರಾಮ ಆಡಳಿತಾಧಿಕಾರಿ ಸಂತೋಷ್, ಪೊಲೀಸ್ ಹೆಡ್ಕಾನ್ಸ್ಸ್ಟೇಬಲ್ ಪ್ರವೀಣ್ ಅವರು ಇಲಾಖಾವಾರು ಮಾಹಿತಿ ನೀಡಿದರು.
ಉಪಾಧ್ಯಕ್ಷೆ ವಿನೀತಾ ಎಂ.ಬಿ., ಸದಸ್ಯರಾದ ಎಂ.ಕೆ.ಪೌಲೋಸ್, ತೋಮಸ್ ಜೋನ್, ಲಕ್ಷ್ಮಣ ಗೌಡ, ರಾಧಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿಬ್ಬಂದಿ ಸ್ಮಿತಾ ವರದಿ ವಾಚಿಸಿದರು. ಪಿಡಿಒ ಯಶವಂತ ಬೆಳ್ಚಡ ಸ್ವಾಗತಿಸಿದರು. ಕಾರ್ಯದರ್ಶಿ ಶಾರದಾ ಪಿ.ಎ. ವಂದಿಸಿದರು.
ಮಾರ್ಚ್ ಕೊನೆಯೊಳಗೆ ಜೆಜೆಎಂ ಪೂರ್ಣ:
ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ. ಪೈಪು ಅಳವಡಿಕೆಯೂ ಸರಿಯಾಗಿ ನಡೆದಿಲ್ಲ. ರಸ್ತೆ ಕಟ್ ಮಾಡಿ ಪೈಪ್ ಹಾಕಿದ್ದರೂ ಕಟ್ ಮಾಡಿರುವ ರಸ್ತೆಗೆ ಡಾಮರು ಹಾಕಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಅಧ್ಯಕ್ಷ ಕಾರ್ತಿಕೇಯನ್ ಅವರು, ಮೂರು ವರ್ಷದಿಂದ ಜೆಜೆಎಂ ಕಾಮಗಾರಿ ನಡೆಯುತ್ತಿದೆ. ಎಲ್ಲಿಯೂ ಕೆಲಸ ಪೂರ್ಣಗೊಂಡಿಲ್ಲ. ಶಿರಾಡಿ ಗ್ರಾಮದಲ್ಲಿ ಈ ಕಾಮಗಾರಿಗೆ ಸಂಪೂರ್ಣ ಸಹಕಾರ ನೀಡಿದ್ದೇವೆ ಎಂದರು. ಬಳಿಕ ಮಾತನಾಡಿದ ಇಂಜಿನಿಯರ್ ಎಸ್.ಎಸ್.ಹುಕ್ಕೇರಿ ಅವರು, ಶಿರಾಡಿ ಗ್ರಾಮದಲ್ಲಿ ಬೋರ್ವೆಲ್ನಲ್ಲಿ ನೀರು ಸಿಗದೆ ಸಮಸ್ಯೆಯಾಗಿತ್ತು. ಈ ಹಿನ್ನೆಲೆಯಲ್ಲಿ ನದಿಯಿಂದ ನೀರು ಪರಿಷ್ಕರಿಸಿ ಟ್ಯಾಂಕ್ಗಳಿಗೆ ಪೂರೈಸುವ ಸಂಬಂಧ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಮಾರ್ಚ್ ತಿಂಗಳ ಕೊನೆಯೊಳಗೆ ಎಲ್ಲಾ ಕಾಮಗಾರಿ ಪೂರ್ಣಗೊಳಿಸಿ ಗ್ರಾಮ ಪಂಚಾಯತ್ಗೆ ಹಸ್ತಾಂತರ ಮಾಡುತ್ತೇವೆ ಎಂದು ಭರವಸೆ ನೀಡಿದರು. ಶಿರಾಡಿ ಪೇಟೆ, ಆಲಪ್ಪಾಟ್, ಮಿತ್ತನಾಜೆ, ಶಿರ್ವತ್ತಡ್ಕದಲ್ಲಿ ಜೆಜೆಎಂ ಪೈಪ್ಲೈನ್ ಸಂಪರ್ಕಕ್ಕೆ ಬಾಕಿ ಇರುವ ಮನೆಗಳಿಗೆ ಸಂಪರ್ಕ ಕಲ್ಪಿಸುವಂತೆಯೂ ಗ್ರಾಮಸ್ಥರು ಮನವಿ ಮಾಡಿದರು.
ಸದಸ್ಯರ ವಿರುದ್ಧ ಸುಳ್ಳುಕೇಸು;
ಅಡ್ಡಹೊಳೆ ರಸ್ತೆ ವಿವಾದಕ್ಕೆ ಸಂಬಂಧಿಸಿ ಗ್ರಾ.ಪಂ.ಸದಸ್ಯರ ವಿರುದ್ಧ ಸುಳ್ಳು ಜಾತಿನಿಂದನೆ ದೂರು ನೀಡಲಾಗಿದೆ. ಇದರ ಸತ್ಯಾಸತ್ಯತೆ ಅರಿತ ಉಪ್ಪಿನಂಗಡಿ ಪೊಲೀಸರು ಜಾತಿನಿಂದನೆ ದೂರು ಸ್ವೀಕರಿಸಿರಲಿಲ್ಲ. ಆದರೂ ಮಂಗಳೂರಿನ ಎಎಸ್ಪಿಯೊಬ್ಬರು ಒತ್ತಡ ತಂದ ಹಿನ್ನೆಲೆಯಲ್ಲಿ ಗ್ರಾ.ಪಂ.ಸದಸ್ಯರ ವಿರುದ್ಧ ಜಾತಿನಿಂದನೆ ಕೇಸು ಹಾಕಲಾಗಿದೆ. ಬಳಿಕ ಈ ಕೇಸು ಬಿದ್ದು ಹೋಗಿದೆ. ಇಲಾಖೆಯ ಹಿರಿಯ ಅಧಿಕಾರಿಯೇ ಸುಳ್ಳು ಕೇಸು ದಾಖಲಿಸಲು ಒತ್ತಡ ತಂದಿರುವುದರ ಔಚಿತ್ಯವೇನು ? ಎಂದು ಗ್ರಾ.ಪಂ.ಸದಸ್ಯ ಎಂ.ಕೆ.ಪೌಲೋಸ್ ಅವರು ಪೊಲೀಸ್ ಇಲಾಖೆಯನ್ನು ಪ್ರಶ್ನಿಸಿದರು. ಉಪಾಧ್ಯಕ್ಷೆ ವಿನೀತಾ ಅವರು ಮಾತನಾಡಿ, ಡಿಸೆಂಬರ್ ತಿಂಗಳಿನಲ್ಲಿ ನಮ್ಮ ಮನೆಯಲ್ಲಿ ನಡೆದಿರುವ ಕಳ್ಳತನ ವಿಚಾರವನ್ನೂ ಪ್ರಸ್ತಾಪಿಸಿದರು. ನೆಲ್ಯಾಡಿ ಹೊರಠಾಣೆ ಮೇಲ್ದರ್ಜೆಗೇರಿಸಬೇಕು, ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸುವಂತೆಯೂ ಗ್ರಾಮಸ್ಥರು ಆಗ್ರಹಿಸಿದರು.