ಕಡಬ: ಇಲ್ಲಿನ ಅಡ್ಡಗದ್ದೆ ಎಂಬಲ್ಲಿಂದ ಲಾರಿಯಲ್ಲಿ ಮಣ್ಣು ಸಾಗಿಸಿ ದೇವಸ್ಥಾನದ ಬಳಿ ಹಾಕಿ ರಸ್ತೆಯಲ್ಲಿ ಹೋಗುವಾಗ ಗಣೇಶ್ ಇಡಾಳ ಎಂಬವರು ಲಾರಿ ಅಡ್ಡಗಟ್ಟಿ ಜೀವ ಬೆದರಿಕೆ ಒಡ್ಡಿರುವುದಾಗಿ ಆರೋಪಿಸಿ ಕಡಬ ಠಾಣೆಯಲ್ಲಿ ಮಂಗಳವಾರ ರಾತ್ರಿ ಪ್ರಕರಣ ದಾಖಲಾಗಿದೆ.
ಸುಳ್ಯ ತಾಲೂಕಿನ ಕೂತ್ಕುಂಜ ಗ್ರಾಮದ ಚಿದ್ಗಲ್ ನಿವಾಸಿ ಲಾರಿ ಚಾಲಕ ಪ್ರವೀಣ್ ಕುಮಾರ್ ಎಂಬವರು ನೀಡಿ ದೂರಿಂತೆ ಪ್ರಕರಣ ದಾಖಲಾಗಿದೆ. ‘ಮಂಗಳವಾರ ರಾತ್ರಿ ಕಡಬದ ಅಡ್ಡಗದ್ದೆ ಎಂಬಲ್ಲಿರುವ ರಾಮಣ್ಣ ಎಂಬವರ ಸೈಟ್‌ನಲ್ಲಿ ಮಣ್ಣು ತುಂಬಿಸಿ ಅಲ್ಲಿಂದ ದೇವಸ್ಥಾನದ ಬಳಿ ಮಣ್ಣು ಹಾಕಿ ರಸ್ತೆಯಲ್ಲಿ ಹೋಗುವ ಸಂದರ್ಭ ಲಾರಿಯನ್ನು ತಡೆದು ನಿಲ್ಲಿಸಿರುವ ಗಣೇಶ್ ಇಡಾಳ ಎಂಬವರು ನೀವು ಯಾಕೇ ಮಣ್ಣು ತುಂಬಿಸಿ ರಸ್ತೆಯಲ್ಲಿ ಹೋಗುತ್ತೀರಾ ಎಂದು ಪ್ರಶ್ನಿಸಿ ಅಕ್ರಮವಾಗಿ ಲಾರಿ ತಡೆದು ನಿಲ್ಲಿಸಿ, ನಿಮ್ಮ ಲಾರಿಯನ್ನು ಮುಂದೆ ಚಲಾಯಿಸಿದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ ಜೀವ ಬೆದರಿಕೆ ಒಡ್ಡಿರುತ್ತಾರೆ’ ಎಂದು ದೂರಿನಲ್ಲಿ ಪ್ರವೀಣ್ ಕುಮಾರ್ ಆರೋಪಿಸಿದ್ದರು. ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನನ್ನನ್ನು ಕುಗ್ಗಿಸಲು ದೂರು ಕೊಡಿಸಿದ್ದಾರೆ-ಗಣೇಶ್ ಇಡಾಳ ಸ್ಪಷ್ಟನೆ
ಕಡಬದಲ್ಲಿ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಿಂದ ಮಾಡದ ಕಡೆಗೆ ಟಿಪ್ಪರ್‌ಗಳಲ್ಲಿ ಮಣ್ಣು ಸಾಗಿಸುತ್ತಿದ್ದು ಅದರ ಧೂಳಿನಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎನ್ನುವ ಮಾಹಿತಿಗೆ ಸಂಬಂಧಪಟ್ಟು ನಾನು, ಎಲ್ಲಿಂದ ಎಲ್ಲಿಗೆ ಹೇಗೆ ಮಣ್ಣು ಕೊಂಡೊಯ್ಯುತ್ತಿದ್ದಾರೆ ಎನ್ನುವ ಮಾಹಿತಿ ಕಲೆ ಹಾಕಲು ಟಿಪ್ಪರ್ ಲಾರಿಯನ್ನು ಹಿಂಬಾಲಿಸಿಕೊಂಡು ಹೋದಾಗ ಅಡ್ಡ ಗದ್ದೆಯಲ್ಲಿ ಟಿಪ್ಪರ್ ನಿಂತಿತು. ಈ ವೇಳೆ ಟಿಪ್ಪರ್ ಚಾಲಕನ ಬಳಿ, ಮಣ್ಣು ತೆಗೆದುಕೊಂಡು ಹೋಗೋದಾದ್ರೆ ಹೋಗಿ, ಆದರೆ ಸಾರ್ವಜನಿಕರಿಗೆ ತೊಂದರೆ ಕೊಡಬೇಡಿ ಎಂದು ಹೇಳಿದ್ದೆ. ಬಳಿಕ ಅವರು, ಸರಿ ನಾವು ಇವತ್ತು ಕೆಲಸ ಮಾಡಲ್ಲ ನಾಳೆ ಮಾಡುತ್ತೇವೆ ಎಂದು ಎಲ್ಲಾ ಟಿಪ್ಪರ್ ಗಳನ್ನೂ ನಿಲ್ಲಿಸಿ ಹೊರಟಿದ್ದರು. ನಾನು ಅಲ್ಲಿಂದ ಕಡಬ ಪೇಟೆಗೆ ಬಂದು ಪುನಃ ನೋಡಲು ಹೋದಾಗ ಪಿ.ಎಸ್.ಐ. ಅವರು ಜೀಪಿನಲ್ಲಿ ಬಂದು ಟಿಪ್ಪರ್ ಚಾಲಕರ ಜೊತೆ ಹಾಗೂ ಜೆಸಿಬಿ ಮಾಲೀಕರೋರ್ವರ ಜತೆ ಮಾತಾಡುತ್ತಿದ್ದರು. ಈ ವೇಳೆ, ಇವರು ಮಣ್ಣು ತೆಗೆದುಕೊಂಡು ಹೋಗ್ತಾ ಇರೋದ್ರಿಂದ ಜನರಿಗೆ ಸಮಸ್ಯೆ ಆಗ್ತಾ ಇದೆ ಎಂದು ಪಿಎಸ್‌ಐ ಅವರಲ್ಲಿ ಹೇಳಿದ್ದೆ, ಬಳಿಕ ನನ್ನನ್ನು ಠಾಣೆಗೆ ಕರೆದು ಕೊಂಡು ಹೋಗಿ ಟಿಪ್ಪರ್ ಚಾಲಕರ ಬಳಿ ದೂರು ನೀಡಲು ಹೇಳಿ ನನ್ನ ಮೇಲೆ ಸುಮ್ಮನೆ ಕೇಸು ಮಾಡಿದ್ದಾರೆ. ಇಲ್ಲಿ ರಸ್ತೆ ಹಾಳು ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಟ್ಟವರ ಮೇಲೆ ಕೇಸು ದಾಖಲಿಸುವುದು ಬಿಟ್ಟು, ನನ್ನನ್ನು ಕುಗ್ಗಿಸಬೇಕೆಂದು ದೂರು ಕೊಡಿಸಿದ್ದಾರೆ ಎಂದು ಗಣೇಶ್ ಇಡಾಳ ಸ್ಪಷ್ಟನೆ ನೀಡಿದ್ದಾರೆ.