ಕರಾವಳಿ ಜಿಲ್ಲೆಯ ಸಮಸ್ಯೆ, ಬೇಡಿಕೆಗಳ ಪ್ರಸ್ತಾಪಿಸಿದ ಶಾಸಕ ರೈ

0

ಸದನದಲ್ಲಿ ಹತ್ತು ನಿಮಿಷಗಳಲ್ಲಿ ಹತ್ತಾರು ಸಮಸ್ಯೆ, ಬೇಡಿಕೆಗಳ ಅನಾವರಣ

ಪುತ್ತೂರು:ಪುತ್ತೂರು ವಿಧಾನಸಭಾ ಕ್ಷೇತ್ರ ಸೇರಿದಂತೆ ಕರಾವಳಿ ಜಿಲ್ಲೆಯ ಜನತೆ ಎದುರಿಸುತ್ತಿರುವ ವಿವಿಧ ಸಮಸ್ಯೆಗಳು ಮತ್ತು ಜಿಲ್ಲೆಯ ವಿವಿಧ ಬೇಡಿಕೆಗಳ ಕುರಿತು ಶಾಸಕ ಅಶೋಕ್ ಕುಮಾರ್ ರೈ ಅವರು ಮಾ.13ರಂದು ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಸರಕಾರದ ಗಮನ ಸೆಳೆದರು.ನಮೂನೆ 69ರ ಅಡಿಯಲ್ಲಿ ಕರಾವಳಿ ಜಿಲ್ಲೆಗಳ ಅಭಿವೃದ್ದಿ ಮತ್ತು ಸಮಸ್ಯೆಗಳ ಕುರಿತಂತೆ ಅಧಿವೇಶನದಲ್ಲಿ ಚರ್ಚಿಸಲು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಅವರು ಅವಕಾಶ ಕಲ್ಪಿಸಿದ್ದರು.ಕರಾವಳಿಯ ಶಾಸಕರು ಚರ್ಚೆಯಲ್ಲಿ ಭಾಗವಹಿಸಿದ್ದರು.ಹತ್ತು ನಿಮಿಷಗಳ ಕಾಲ ಸದನದಲ್ಲಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈಯವರು ಕರಾವಳಿ ಜಿಲ್ಲೆ ಮತ್ತು ತನ್ನ ಕ್ಷೇತ್ರದ ಸಮಸ್ಯೆಗಳನ್ನು ಸದನದ ಮುಂದಿಟ್ಟರು.


ಪ್ರಾರಂಭದಲ್ಲಿ ಮಾತನಾಡಿದ ಶಾಸಕ ರೈಯವರು, ನಾವು ತೆರಿಗೆ ಪಾವತಿ ಮಾಡುವು ದರಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ, ಪ್ರತೀ ಬಾರಿ ಬಜೆಟ್‌ನಲ್ಲಿ ಕರಾವಳಿಗೆ ಕಡಿಮೆ ಅನುದಾನ ಇಡಲಾ ಗುತ್ತದೆ. ನಮ್ಮ ಜಿಲ್ಲೆಯನ್ನು ಶ್ರೀಮಂತರ ಜಿಲ್ಲೆ,ವಿದ್ಯಾವಂತರ ಜಿಲ್ಲೆ ಎಂದು ಕರೆಯುತ್ತಾರೆ.ಆದರೆ,ನಮ್ಮ ಗ್ರಾಮೀಣ ಪ್ರದೇಶಗಳಿಗೆ ಹೋದರೆ ಎಷ್ಟೋ ಕುಟುಂಬಗಳು ಮನೆ ಇಲ್ಲದೇ ಇದ್ದಾರೆ.ಇಂದಿಗೂ ಗುಡಿಸಲಿನಲ್ಲಿ ವಾಸ ಮಾಡುವವರೂ ಇದ್ದಾರೆ ಎಂದು ಶಾಸಕರು ಸದನದ ಗಮನಸೆಳೆದರು.


ಮಳೆಹಾನಿ ಪರಿಹಾರ ನೀಡಬೇಕು:
ಕಳೆದ ಬಾರಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆ ಬಂದು ಅಪಾರ ಹಾನಿ ಸಂಭವಿಸಿದೆ.ಧರೆ ಕುಸಿದು ಅನೇಕ ಮನೆಗಳಿಗೆ ಹಾನಿಯಾಗಿದೆ.ರಸ್ತೆಗಳು ಮುಚ್ಚಲ್ಪಟ್ಟಿವೆ.ಧರೆ ಕುಸಿತದಿಂದ, ಗುಡ್ಡ ಕುಸಿತದಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರವಾಗಿ ಐದು ಲಕ್ಷ ರೂ.ನೀಡುವುದಾಗಿ ಸರಕಾರ ಘೋಷಣೆ ಮಾಡಿತ್ತು.ಇದರಲ್ಲಿ ಪ್ರತಿಯೊಬ್ಬರಿಗೂ ಒಂದು ಲಕ್ಷ ರೂ.ಅನುದಾನ ಬಂದಿದೆ.ಉಳಿದ ನಾಲ್ಕು ಲಕ್ಷ ರೂ.ಇವತ್ತಿನ ತನಕ ಬಂದಿಲ್ಲ.ಅದನ್ನು ತಕ್ಷಣ ಬಿಡುಗಡೆ ಮಾಡಬೇಕು.ಗುಡ್ಡ ಕುಸಿತದಿಂದ ಸಂಪರ್ಕ ಕಳೆದುಕೊಂಡ ರಸ್ತೆಗಳ ಪುನರ್ ನಿರ್ಮಾಣವಾಗಬೇಕು.ಅಲ್ಲಿನ ಮಣ್ಣು ತೆರವು ಮಾಡುವ ಕೆಲಸ ಕೂಡಾ ಇವತ್ತಿನ ತನಕ ಆಗಿಲ್ಲ.ಸುಮಾರು 300 ಕೋಟಿ ರೂ.ಅನುದಾನ ಕೊಟ್ಟಿದೆ.ಬೇರೆ ಬೇರೆ ಕಡೆ ಸಮಸ್ಯೆಯಾಗಿರುವಲ್ಲಿ ಸರಿಮಾಡುವ ಕೆಲಸವನ್ನು ಮಾಡುವುದಾಗಿ ಕಂದಾಯ ಸಚಿವರು ಹೇಳಿದ್ದರು.ಆದರೆ ಇವತ್ತಿನ ತನಕ ಅಂತಹ ಕೆಲಸ ಆಗಿಲ್ಲ.ರಸ್ತೆ ಸರಿಮಾಡುವಂಥದ್ದು, ಗುಡ್ಡ ಕುಸಿತವಾದ ರಸ್ತೆ ಸರಿ ಮಾಡುವುದು, ಮನೆ ಹಾನಿಯಾದವರಿಗೆ ಪರಿಹಾರಕ್ಕೆ ಅನುದಾನ ನೀಡುವ ಕೆಲಸ ಆಗಲಿಲ್ಲ ಎಂದು ಹೇಳಿದ ಶಾಸಕರು, ಧರೆ ಕುಸಿತದಿಂದ ಹಾನಿಗೊಳಗಾದ ರಸ್ತೆಗಳನ್ನು ದುರಸ್ತಿ ಮಾಡುವ ಕೆಲಸ ಶೀಘ್ರವೇ ಆಗಬೇಕು ಎಂದು ಮನವಿ ಮಾಡಿದರು.


ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ:
ಕುಡಿಯುವ ನೀರಿನ ಬಗ್ಗೆ ಕರಾವಳಿ ಭಾಗದಲ್ಲಿ ಈಗಲೂ ಹಾಹಾಕಾರವಿದೆ.ಎತ್ತಿನಹೊಳೆ ಯೋಜನೆಯಿಂದ ನಮ್ಮ ನದಿಗಳು ಬತ್ತಿ ಹೋಗುವ ಪರಿಸ್ಥಿತಿಯಾಗಿದೆ.ಪಶ್ಚಿಮ ವಾಹಿನಿಯಲ್ಲಿ ನಮಗೆ ಹೆಚ್ಚಿನ ಅನುದಾನವನ್ನು ನೀಡುವುದಾಗಿ ಹೇಳಿದ್ದಾರೆ.ಈ ಹಿಂದೆ ಐದು ವರ್ಷಗಳಿಂದ ಬಜೆಟ್‌ನಲ್ಲಿ ಪಶ್ಚಿಮ ವಾಹಿನಿಗೆ ನಮಗೆ ಯಾವುದೇ ದುಡ್ಡು ಬಂದಿಲ್ಲ.ಮುಂದಿನ ದಿನಗಳಲ್ಲಿ ಎತ್ತಿನಹೊಳೆ ಯೋಜನೆಯಿಂದ ನಮ್ಮ ನದಿಗಳಲ್ಲಿ ನೀರು ಕಡಿಮೆಯಾಗಲಿರುವುದರಿಂದ ಪಶ್ಚಿಮ ವಾಹಿನಿಯಲ್ಲಿ ದುಡ್ಡು ಕೊಡುವ ಕೆಲಸ ಆಗಬೇಕಾಗಿದೆ.ಪಶ್ಚಿಮ ವಾಹಿನಿಯಲ್ಲಿ ನಿಮಗೆ ಕಿಂಡಿ ಅಣೆಕಟ್ಟುಗಳನ್ನು ಕೊಡುವ ಕೆಲಸ ಮಾಡ್ತೇವೆ.ಉಪ್ಪಿನಂಗಡಿಯಲ್ಲಿ ದೊಡ್ಡ ದೊಡ್ಡ ಡ್ಯಾಂಗಳನ್ನು ಮಾಡುವ ಕೆಲಸ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.ಆದಷ್ಟು ಬೇಗ ಅದನ್ನು ಕೊಡುವ ಕೆಲಸವಾಗಬೇಕು ಎಂದು ಶಾಸಕರು ಸರಕಾರವನ್ನು ಒತ್ತಾಯಿಸಿದರು.ಕಿಂಡಿ ಅಣೆಕಟ್ಟು ನಿರ್ಮಾಣ ಮಾಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಬರ ಎದುರಾಗುವ ಸಂಭವ ಇದೆ ಎಂದು ಶಾಸಕರು ಸಭೆಗೆ ತಿಳಿಸಿದರು.


ಮಂಗಳಾ ಕಾರ್ನಿಶ್ ರಸ್ತೆ ನಿರ್ಮಾಣವಾಗಲಿ:
ಮಂಗಳೂರಿನಲ್ಲಿ ಸಮುದ್ರತೀರದಲ್ಲಿ ಮಂಗಳಾ ಕಾರ್ನಿಶ್ ರಸ್ತೆ ನಿರ್ಮಾಣವಾಗಬೇಕಿದೆ.ಇದಕ್ಕೆ ಸುಮಾರು 800 ಕೋಟಿ ರೂ.ಅನುದಾನ ಬೇಕಾಗಿದೆ.ಹಂತಹಂತವಾಗಿ ಇದನ್ನು ನೀಡಿದರೂ ನಮ್ಮ ಸರಕಾರ ಒಂದು ಒಳ್ಳೆಯ ಕೆಲಸ ಮಾಡಿದಂತಾಗುತ್ತದೆ.ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ.ಮಂಗಳಾ ಕಾರ್ನಿಶ್ ರಸ್ತೆ ನಿರ್ಮಾಣವಾದಲ್ಲಿ ಸಮುದ್ರ ತೀರದ ಭಾಗದಲ್ಲಿ ಅಭಿವೃದ್ದಿಯಾಗುತ್ತದೆ.ಈ ಯೋಜನೆ ಅನುಷ್ಠಾನಕ್ಕೆ ಬಂದಲ್ಲಿ ಮಂಗಳೂರಿನಲ್ಲಿ ಟೂರಿಸಂ ಅಭಿವೃದ್ದಿಯಾಗುತ್ತದೆ.ಟೂರಿಸಂ ಕೇಂದ್ರ ಅಭಿವೃದ್ದಿಯಾದಲ್ಲಿ ಒಂದಷ್ಟು ಜನರಿಗೆ ಉದ್ಯೋಗವೂ ದೊರಕಿದಂತಾಗುತ್ತದೆ.ಕರಾವಳಿ ಭಾಗಕ್ಕೆ ಪ್ರವಾಸೋದ್ಯಮಕ್ಕೆ ಸರಕಾರ ಹೆಚ್ಚಿನ ಒತ್ತು ನೀಡಬೇಕು ಎಂದು ಶಾಸಕರು ಮನವಿ ಮಾಡಿದರು.


ದೇವಸ್ಥಾನಗಳ ಅಭಿವೃದ್ದಿಯಾಗಬೇಕು:
ಕರಾವಳಿ ಭಾಗದಲ್ಲಿ ಪ್ರಸಿದ್ಧ ದೇವಸ್ಥಾನಗಳಿವೆ.ಶಾಲಾ ಮಕ್ಕಳಿಂದ ಫಿಲ್ಮ್ ಸ್ಟಾರ್‌ಗಳ ತನಕ,ರಾಜಕೀಯದ ದೊಡ್ಡದೊಡ್ಡ ವ್ಯಕ್ತಿಗಳ ತನಕ ಕರ್ನಾಟಕ ರಾಜ್ಯದಿಂದ ಮಾತ್ರವಲ್ಲ ದೇಶಾದ್ಯಂತದಿಂದ ಯಾತ್ರಾರ್ಥಿಗಳು ಕರಾವಳಿಯ ದೇವಸ್ಥಾನಗಳಿಗೆ ಬರುತ್ತಾರೆ.ಅವರಿಗೆ ಇಲ್ಲಿ ಎಲ್ಲ ಆತಿಥ್ಯವೂ ಸಿಗುತ್ತದೆ.ದೇವಸ್ಥಾನಗಳನ್ನು ಲಿಂಕ್ ಮಾಡುವ ನಿಟ್ಟಿನಲ್ಲಿ ರಸ್ತೆ ನಿರ್ಮಾಣವಾಗಬೇಕಿದೆ.ಸಂಪರ್ಕ ರಸ್ತೆ ನಿರ್ಮಾಣ ಸಹಿತ ದೇವಸ್ಥಾನಗಳ ಅಭಿವೃದ್ದಿ ಬಗ್ಗೆಯೂ ಸರಕಾರ ಗಮನ ಹರಿಸಬೇಕು ಎಂದು ಶಾಸಕರು ಮನವಿ ಮಾಡಿದರು.


ಕಂಬಳ,ಯಕ್ಷಗಾನಕ್ಕೆ ಒತ್ತು:
ಕಂಬಳ,ಯಕ್ಷಗಾನ ಕ್ಷೇತ್ರಕ್ಕೂ ಸರಕಾರ ಆದ್ಯತೆ ನೀಡಬೇಕು ಎಂದು ಹೇಳಿದ ಶಾಸಕರು ಮುಖ್ಯಮಂತ್ರಿ,ಉಪಮುಖ್ಯಮಂತ್ರಿಗಳ ಸಹಕಾರದೊಂದಿಗೆ ನಾವಿಲ್ಲಿ ಬೆಂಗಳೂರು ಅರಮನೆಮೈದಾನದಲ್ಲಿಯೂ ಕಂಬಳ ಮಾಡಿದ್ದು ಸುಮಾರು 20ರಿಂದ 25 ಲಕ್ಷ ಜನ ಕಂಬಳ ವೀಕ್ಷಣೆ ಮಾಡಿದ್ದಾರೆ ಎಂದು ಸದನದ ಗಮನ ಸೆಳೆದರು.


ಕೊಯಿಲದಲ್ಲಿ ಪಶುವೈದ್ಯಕೀಯ ಕಾಲೇಜು ಆರಂಭವಾಗಲಿ:
ಉಪ್ಪಿನಂಗಡಿಯ ಕೊಯಿಲದಲ್ಲಿ ಪಶು ವೈದ್ಯಕೀಯ ಕಾಲೇಜಿಗೆ ಕಳೆದ ಐದು ವರ್ಷಗಳಲ್ಲಿ ಒಂದು ರೂಪಾಯಿಯನ್ನೂ ನೀಡಲಾಗಿಲ್ಲ.ಈ ವರ್ಷದ ಬಜೆಟ್‌ನಲ್ಲಿ 24 ಕೋಟಿ ರೂ.ಅನುದಾನ ಮೀಸಲಿಟ್ಟಿರುವ ಮುಖ್ಯಮಂತ್ರಿಗಳು ಪ್ರಸ್ತುತ ಅಕಾಡೆಮಿಕ್ ವರ್ಷದಲ್ಲಿಯೇ ಕಾಲೇಜು ಓಪನ್ ಮಾಡುವುದಾಗಿ ಹೇಳಿದ್ದಾರೆ.ಸರಕಾರ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಅಶೋಕ್ ಕುಮಾರ್ ರೈ ಆಗ್ರಹಿಸಿದರು.


ಎಸ್‌ಪಿ ಕಚೇರಿ ಸ್ಥಳಾಂತರಿಸಿ:
ಎಸ್.ಪಿ.ಕಚೇರಿಯನ್ನು ಮಂಗಳೂರುನಿಂದ ಪುತ್ತೂರಿಗೆ ಸ್ಥಳಾಂತರ ಮಾಡುವ ಮೂಲಕ ಪುತ್ತೂರು, ಸುಳ್ಯ, ಬೆಳ್ತಂಗಡಿ ಭಾಗದ ಜನರ ಬಹುಕಾಲದ ಬೇಡಿಕೆಯನ್ನು ಈಡೇರಿಸುವಂತೆ ಶಾಸಕರು ಆಗ್ರಹಿಸಿದರು.


ಏರ್‌ಪೋರ್ಟ್ ರನ್‌ವೇ ವಿಸ್ತರಿಸಿ:
ಮಂಗಳೂರಿನ ವಿಮಾನ ನಿಲ್ದಾಣದ ರನ್‌ವೇ ಚಿಕ್ಕದಾಗಿದ್ದು ದೊಡ್ಡ ವಿಮಾನಗಳು ಲ್ಯಾಂಡ್ ಆಗಲು ಸಾಧ್ಯವಾಗುತ್ತಿಲ್ಲ.ರನ್‌ವೇ ಅಪಾಯಕಾರಿ ಎಂಬ ವಿಚಾರ ಎಲ್ಲರಿಗೂ ಗೊತ್ತಿದೆ.ಏರ್‌ಪೋರ್ಟನ್ನು ಅದಾನಿ ಸಂಸ್ಥೆಗೆ ಕೇಂದ್ರ ಸರಕಾರ ಗುತ್ತಿಗೆ ನೀಡಿದ್ದು, ರಾಜ್ಯ ಸರಕಾರ ಕೇಂದ್ರ ಸರಕಾರದ ಮೂಲಕ ಮಾತುಕತೆ ನಡೆಸಿ ಅಥವಾ ಕಾನೂನು ರೂಪಿಸಿ ಗುತ್ತಿಗೆ ಪಡೆದ ಅದಾನಿ ಸಂಸ್ಥೆಗೆ ರನ್‌ವೇ ವಿಸ್ತರಿಸುವಂತೆ ಸೂಚನೆಯನ್ನು ನೀಡಬೇಕು ಎಂದು ಶಾಸಕರು ಮನವಿ ಮಾಡಿದರು.


ಸರೋಜಿನಿಮಹಿಷಿ ವರದಿ ಜಾರಿಯಾಗಲಿ:
ರಾಜ್ಯದಲ್ಲಿ ಸರೋಜಿನಿಮಹಿಷಿ ವರದಿಯನ್ನು ಜಾರಿ ಮಾಡಬೇಕು.ಸ್ಥಳೀಯ ಸರಕಾರಿ ಮತ್ತು ಸರಕಾರೇತರ ಸಂಸ್ಥೆಗಳಲ್ಲಿ ಸ್ಥಳೀಯ ಜನರಿಗೆ ಉದ್ಯೋಗವನ್ನು ಕಲ್ಪಿಸಬೇಕು.ಜಿಲ್ಲೆಯಲ್ಲಿ ಆರಂಭವಾಗುವ ಉದ್ಯಮದಲ್ಲಿ ಇಲ್ಲಿನವರಿಗೇ ಉದ್ಯೋಗ ಕೊಡಿಸುವಲ್ಲಿ ಈ ವರದಿಯು ನೆರವಾಗುತ್ತದೆ.ಸರಕಾರ ಕೂಡಲೇ ಈ ವರದಿಯನ್ನು ಜಾರಿಮಾಡಬೇಕು ಎಂದು ಶಾಸಕ ರೈ ಆಗ್ರಹಿಸಿದರು.ಮಂಗಳೂರಿನಲ್ಲಿ ಐಟಿ ಪಾರ್ಕ್ ಸ್ಥಾಪನೆ ಮಾಡುವ ಮೂಲಕ ಜಿಲ್ಲೆಯಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿ ಮಾಡಬೇಕು ಎಂದೂ ಶಾಸಕರು ಆಗ್ರಹಿಸಿದರು.


ಬಂಟ, ಬಿಲ್ಲವ, ಬ್ಯಾರಿ ನಿಗಮ ಸ್ಥಾಪನೆಯಾಗಲಿ:
ಜಿಲ್ಲೆಯ ಪ್ರಮುಖ ಸಮುದಾಯವಾದ ಬಂಟ, ಬಿಲ್ಲವ ಮತ್ತು ಬ್ಯಾರಿ ಸಮುದಾಯದ ನಿಗಮವನ್ನು ಸರಕಾರ ಸ್ಥಾಪನೆ ಮಾಡಬೇಕು ಎಂದು ಶಾಸಕರು ಅಽವೇಶನದಲ್ಲಿ ಪ್ರಸ್ತಾಪ ಮಾಡಿದರು.


ಹಳದಿ ಎಲೆ ಚುಕ್ಕೆ ರೋಗಕ್ಕೆ ಪರಿಹಾರ ಒದಗಿಸಬೇಕು:
ಅಡಿಕೆಗೆ ಹಳದಿ ಎಲೆಚುಕ್ಕಿ ರೋಗದಿಂದ ಅರ್ಧದಷ್ಟು ಕೃಷಿ ಹಾಳಾಗ್ತಾ ಹೋಗುತ್ತಿದೆ.ಇಷ್ಟರವರೆಗೆ ಅದಕ್ಕೆ ಯಾರೂ ದುಡ್ಡುಕೊಟ್ಟಿಲ್ಲ.ಈ ಸಲದ ಬಜೆಟ್‌ನಲ್ಲಿ ಅದಕ್ಕೆ 62 ಕೋಟಿ ರೂ.ನಿಗದಿ ಮಾಡಿದ್ದಾರೆ.ಅದರಲ್ಲಿ ಹೆಚ್ಚಿನ ಅನುದಾನವನ್ನು ಹಳದಿ ರೋಗ, ಎಲೆಚುಕ್ಕೆ ರೋಗದಿಂದ ಕೃಷಿ ಹಾನಿಯಾದವರಿಗೆ ಕೊಡುವಂತಹ ವ್ಯವಸ್ಥೆಯಾಗಬೇಕು ಎಂದು ಶಾಸಕರು ಆಗ್ರಹಿಸಿದರು.
ತನ್ನ ಕ್ಷೇತ್ರ ಸೇರಿದಂತೆ ಕರಾವಳಿ ಜಿಲ್ಲೆಯಲ್ಲಿ ಆಗಬೇಕಾದ ಅಭಿವೃದ್ದಿ ಕಾರ್ಯಗಳ ಬಗ್ಗೆ ಶಾಸಕ ಅಶೋಕ್ ಕುಮಾರ್ ರೈ ಅವರು ಸುಮಾರು ಹತ್ತು ನಿಮಿಷಗಳ ಕಾಲ ಮಾತನಾಡಿ ಸದನದ ಗಮನ ಸೆಳೆದರು.ಆಡಳಿತ ಪಕ್ಷದ ಶಾಸಕರಾದರೂ,ಸರಕಾರ ಘೋಷಣೆ ಮಾಡಿದ್ದ ಅನುದಾನ ಬಾರದೇ ಇರುವ ಕುರಿತು ಮತ್ತು ಸಚಿವರು ಭರವಸೆ ನೀಡಿದ್ದರೂ ಆಗಬೇಕಾದ ಅಗತ್ಯ ಕೆಲಸಗಳೂ ಆಗದೇ ಇರುವ ಕುರಿತು ಅಶೋಕ್ ಕುಮಾರ್ ರೈ ಅವರು ಸದನದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಕುಮ್ಕಿಯನ್ನು ಅಕ್ರಮ ಸಕ್ರಮದಲ್ಲಿ ಸೇರಿಸಿ
ಕುಮ್ಕಿ ಭೂಮಿ ಎಂಬ ವಿಚಾರವೇ ಇಲ್ಲ.ಆರ್‌ಟಿಸಿಯಲ್ಲಿ ಕುಮ್ಕಿ ಎಂದು ನಮೂದು ಮಾಡುವ ಮೂಲಕ ಕೃಷಿಕರ ಭೂಮಿಯನ್ನು ಕಸಿಯುವ ಕೆಲಸವಾಗಿದೆ.ಸರಕಾರ ಪ್ರತ್ಯೇಕ ಕಾನೂನು ಜಾರಿ ಮಾಡಿ ಕುಮ್ಕಿ ಭೂಮಿಯನ್ನು ಅಕ್ರಮ ಸಕ್ರಮದಲ್ಲಿ ಕೃಷಿಕರಿಗೆ ಅಥವಾ ರೈತರಿಗೆ ಮಂಜೂರು ಮಾಡಿಸುವಲ್ಲಿ ಸಹಕಾರ ನೀಡಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಆಗ್ರಹಿಸಿದರು.

ಆಪುಂಡು..ಡೋಂಟ್ ವರಿ ಗಡಿಬಿಡಿ ಮಲ್ಪೊರ್ಚಿ
ತುಳುವನ್ನು ರಾಜ್ಯದ ಎರಡನೇ ಹೆಚ್ಚುವರಿ ಭಾಷೆಯನ್ನಾಗಿ ಮಾಡಬೇಕು ಎಂದು ಈ ಹಿಂದೆ ನಾನು ಸತತ ನಾಲ್ಕು ಬಾರಿ ಸದನದಲ್ಲಿ ವಿನಂತಿ ಮಾಡಿದ್ದೇನೆ.ಇದಕ್ಕೆ ಯಾವುದೇ ಖರ್ಚುಗಳಿಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಅವರು ಹೇಳಿದಾಗ, ಆಯ್ತು ಏನಾಗ್ಬೇಕು ಹೇಳೀಗ ಎಂದು ಸಭಾಧ್ಯಕ್ಷ ಯು.ಟಿ.ಖಾದರ್ ಕೇಳಿದರು.‘ಅಯಿನೊಂಜಿ ಮಲ್ಪುಲೆಂದ್ ಪನ್ಪುನೆ,ಬೊಕ್ಕ ದಾದ ಪನ್ಪುನೆ’(ಅದನ್ನೊಂದು ಮಾಡಿ ಎಂದು ಹೇಳುವುದು,ಬೇರೇನು ಹೇಳುವುದು)ಎಂದು ರೈ ಹೇಳಿದರು.‘ಅಂಚತ್ತ್ ಮಾರ್ರೆ ಏಪೊಲಾ ಪಾತೆರ್ಂಡ ಮರ್ಯಾದಿ ಪೋವು’(ಹಾಗಲ್ಲ.ಯಾವಾಗಲೂ ಮಾತನಾಡಿದರೆ ಮರ್ಯಾದೆ ಹೋಗಬಹುದು)ಎಂದು ಸಭಾಧ್ಯಕ್ಷರು ಹೇಳಿದಾಗ,ಅದನ್ನು ಮಾಡಬೇಕಲ್ಲ ಅಧ್ಯಕ್ಷರೇ,ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಯಾಗಿದೆ ಎಂದು ಶಾಸಕರು ಹೇಳಿದರು.‘ಆಪುಂಡು ಡೋಂಟ್ ವರಿ,ಗಡಿಬಿಡಿ ಮಲ್ಪೊಡ್ಚಿ’(ಆಗ್ತದೆ ಡೋಂಟ್ ವರಿ,ಗಡಿಬಿಡಿ ಮಾಡಬೇಡಿ)ಎಂದು ಸಭಾಧ್ಯಕ್ಷರು ಪ್ರತಿಕ್ರಿಯಿಸಿದರು.

LEAVE A REPLY

Please enter your comment!
Please enter your name here