ಪುತ್ತೂರು:ನೆಟ್ಟಣಿಗೆಮುಡ್ನೂರು ಗ್ರಾಮದ ಸರ್ವೆ ನಂಬ್ರ 313/2 ರಲ್ಲಿನ ಕೃಷಿ ಜಮೀನಿಗೆ ಸುಮಾರು 10 ಮಂದಿ ಅಕ್ರಮ ಪ್ರವೇಶ ಮಾಡಿ ಸೊತ್ತುಗಳನ್ನು ಕಳವು ಮಾಡಿದ್ದಲ್ಲದೆ ಕೃಷಿಗೆ ಹಾನಿ ಮಾಡಿರುವ ಕುರಿತ ಆರೋಪಕ್ಕೆ ಸಂಬಂಧಿಸಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಟ್ಟಣಿಗೆಮುಡ್ನೂರು ಕುಕ್ಕುಡೆಲು ನಿವಾಸಿ ತೇಜಸ್ವಿನಿ ಅವರು ಈ ಕುರಿತು ದೂರು ನೀಡಿದ್ದಾರೆ.‘ನೆಟ್ಟಣಿಗೆಮುಡ್ನೂರಿನಲ್ಲಿ ನಮಗೆ 3.60 ಎಕ್ರೆ ಅಡಿಕೆ ತೋಟವಿದ್ದು, ಮಾ.12ರಂದು ಆರೋಪಿಗಳಾದ ಶಶಿಧರ ಪೂಜಾರಿ, ಅಶೋಕ್ ಪೂಜಾರಿ, ಕೃಷ್ಣಪ್ಪ ಪೂಜಾರಿ, ಪ್ರವೀಣ್ ಪೂಜಾರಿ, ಪುಷ್ಪರಾಜ್, ಸಾವಿತ್ರಿ, ಉಷಾ, ಚಂದ್ರಾವತಿ ಬಾಬು ಪೂಜಾರಿ, ಕೆ.ರಾಧಾಕೃಷ್ಣ ಭಂಡಾರಿ ಮತ್ತು ಇತರರು ಸೇರಿಕೊಂಡು ನಮ್ಮ ಜಮೀನಿಗೆ ಅಕ್ರಮ ಪ್ರವೇಶ ಮಾಡಿ, ಜಮೀನಿಗೆ ಅಳವಡಿಸಿದ್ದ ಗೇಟ್ ಬದಿಯ ಪಿಲ್ಲರ್‌ಗಳನ್ನು ಧ್ವಂಸಗೊಳಿಸಿ, ಗೇಟನ್ನು ಕಳವು ಮಾಡಿದ್ದಾರೆ.ಕೃಷಿಯನ್ನು ನಾಶ ಮಾಡಿದ್ದಾರೆ.ಶೆಡ್‌ನಲ್ಲಿದ್ದ ಪಂಪ್, ಕಳೆಕೊಚ್ಚುವ ಯಂತ್ರ, ಪಿವಿಸಿ ಪೈಪ್, ಡ್ರಿಪ್ ಪೈಪ್, ಹಾರೆ, ಪಿಕ್ಕಾಸು, ಕತ್ತಿ, ಮದ್ದು ಸಿಂಪಡಿಸುವ ಯಂತ್ರ ಮತ್ತು 100 ಮೀಟರ್ ಪೈಪ್ ಹಾಗು 25 ಕೆ.ಜಿ ಸಿಮೆಂಟ್, ನೀರಿನ ಸ್ಟೀಲ್ ಕ್ಯಾನ್ ಕಳವು ಮಾಡಿದ್ದಾರೆ.ವಿಷಯ ತಿಳಿದು ನಾನು ಗಂಡನೊಂದಿಗೆ ಅಲ್ಲಿಗೆ ಜೀಪಿನಲ್ಲಿ ಬಂದಾಗ ಆರೋಪಿಗಳು ಎರಡು ಆಟೋ ರಿಕ್ಷಾ, ಮೂರು ಬೈಕ್ ಮತ್ತು ಇತರ ವಾಹನಗಳಲ್ಲಿ ಪರಾರಿಯಾಗಿದ್ದಾರೆ.ಆರೋಪಿಗಳ ಪೈಕಿ ಶಶಿಧರ ಪೂಜಾರಿ ನಮಗೆ ಜೀವ ಬೆದರಿಕೆಯೊಡ್ಡಿರುವುದಾಗಿ ಮತ್ತು ಒಟ್ಟು ಘಟನೆಯಿಂದಾಗಿ ನಮಗೆ ಸುಮಾರು ರೂ.1 ಲಕ್ಷ ನಷ್ಟವಾಗಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.