ಪುಣಚ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕರ್ನಾಟಕ ಸರ್ಕಾರ, ರಾಷ್ಟ್ರೀಯ ಸೇವಾ ಯೋಜನೆ ಕೋಶ, ಯೆನಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ) ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ದಕ್ಷಿಣ ಕನ್ನಡ ಕೊರಗ ಜಿಲ್ಲಾ ಸಂಘ ಹಾಗೂ ಮಲೆ ಕುಡಿಯರ ಸಂಘ, ಶ್ರೀ ಮಹಮ್ಮಾಯಿ ಜೈ ಭಾರತಿ ಮರಾಟಿ ಸಂಘ ದೇವಿನಗರ-ಪುಣಚ ಮತ್ತು ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಸಂಘ ಪುಣಚ ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವು ಪುಣಚ ದೇವಿನಗರ ಶ್ರೀ ಮಹಮ್ಮಾಯಿ ಜೈಭಾರತಿ ಮರಾಟಿ ಸಂಘದಲ್ಲಿ ಮಾ.16ರಂದು ಬೆಳಿಗ್ಗೆ 9.೦೦ರಿಂದ ಸಂಜೆ 4.೦೦ರವರೆಗೆ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಪುಣಚ ಗ್ರಾ.ಪಂ ಅಧ್ಯಕ್ಷೆ ಬೇಬಿ ಯಾನೆ ಯಶೋದ ಪಟಿಕಲ್ಲು ನೆರವೇರಿಸಲಿದ್ದಾರೆ. ಪುಣಚ ಶ್ರೀ ಮಹಮ್ಮಾಯಿ ಜೈ ಭಾರತಿ ಮರಾಟಿ ಸಂಘದ ಅಧ್ಯಕ್ಷ ಐತ್ತಪ್ಪ ನಾಯ್ಕ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಪುಣಚ ಗ್ರಾ.ಪಂ ಉಪಾಧ್ಯಕ್ಷ ಮಹೇಶ್ ಶೆಟ್ಟಿ ಬೈಲುಗುತ್ತು, ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜನಾರ್ಧನ ಭಟ್ ಅಮೈ, ಪುಣಚ ದೇವಿನಗರ ಶ್ರೀದೇವಿ ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕ ಶ್ರೀರಾಮಚಂದ್ರ ಭಟ್ ಕೆ, ಯೇನಪೋಯ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶನಾಲಯ ಮತ್ತು ಔಟ್ರೀಚ್ ಚಟುವಟಿಕೆಗಳ ನಿರ್ದೇಶಕರು ಡಾ| ಅಶ್ವಿನಿ ಎಸ್. ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಶಿಬಿರದಲ್ಲಿ ಸಾಮಾನ್ಯ ವೈದ್ಯಕೀಯ ಪರೀಕ್ಷೆ, ರಕ್ತದೊತ್ತಡ ಪರೀಕ್ಷೆ, ರಕ್ತಹೀನತೆ ಪರೀಕ್ಷೆ, ಮಧುಮೇಹ ಪರೀಕ್ಷೆ, ಬಾಯಿ ಮತ್ತು ದಂತ ಪರೀಕ್ಷೆ, ಗರ್ಭಕಂಠದ ಪರೀಕ್ಷೆ, ಮಕ್ಕಳ ಆರೋಗ್ಯ ತಪಾಸಣೆ, ಸ್ತನದ ಪರೀಕ್ಷೆ (ಮೇಮೋಗ್ರಾಫಿ), ಸಾಮಾನ್ಯ ಸ್ತ್ರೀರೋಗ ಪರೀಕ್ಷೆ, ಕಣ್ಣಿನ ತಪಾಸಣೆ ಹಾಗೂ ಉಚಿತ ಚಿಕಿತ್ಸೆ, ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ನಡೆಯಲಿದೆ.
ಆರೋಗ್ಯ ಶಿಬಿರವು ಸಂಪೂರ್ಣ ಉಚಿತವಾಗಿದ್ದು ತಜ್ಞ ವೈದ್ಯರು ತಪಾಸಣೆ ಮಾಡಿ ಆರೋಗ್ಯದ ಬಗ್ಗೆ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ. ಮಹಿಳೆಯರಿಗಾಗಿ ಅತ್ಯಾಧುನಿಕ ತಂತ್ರಜ್ಞಾನದ ಮೊಬೈಲ್ ಕ್ಲಿನಿಕ್ ಬಸ್‌ನಲ್ಲಿ ತಪಾಸಣಾ ವ್ಯವಸ್ಥೆ ಇದೆ. ಸಮಸ್ತ ಪರಿಶಿಷ್ಟ ವರ್ಗದ ಬುಡಕಟ್ಟು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆರೋಗ್ಯ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.