ಕಬಕ ಗ್ರಾ.ಪಂನಿಂದ 24 ಫಲಾನುಭವಿಗಳಿಗೆ ಮನೆ ನಿವೇಶನ ಮಂಜೂರು

0

ಶಾಸಕರಿಂದ ಹಕ್ಕು ಪತ್ರ ವಿತರಣೆ, ಫಲಾನುಭವಿಗಳಿಗೆ ನಿವೇಶನ ಹಸ್ತಾಂತರ

ಪುತ್ತೂರು:ಪಂಚಾಯತ್ ವ್ಯಾಪ್ತಿಯಲ್ಲಿರುವ ನಿವೇಶನ ರಹಿತರಿಗೆ ನಿವೇಶನ ನೀಡುವ ಕಬಕ ಗ್ರಾ.ಪಂನ ಕನಸಿನ ಯೋಜನೆಯು ಕೈಗೂಡಿದ್ದು ಸುಮಾರು ೨೪ ಫಲಾನುಭವಿಗಳಿಗೆ ನಿವೇಶನ ಮಂಜೂರುಗೊಳಿಸಲಾಗಿದ್ದು ಮಾ.14ರಂದು ನಿವೇಶನವನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ.


ಪಂಚಾಯತ್ ಹಿಂದಿನ ಅವಧಿಯಲ್ಲಿಯೇ ನಿವೇಶನ ರಹಿತರಿಗೆ ನಿವೇಶನ ನೀಡುವ ಮಹತ್ತರ ಯೋಜನೆ ಹಾಕಿಕೊಂಡಿದ್ದರು. ಇದಕ್ಕಾಗಿ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿದಂತೆ ವಿದ್ಯಾಪುರ ಪರನೀರುಕಟ್ಟೆಯಲ್ಲಿರುವ 99 ಸೆಂಟ್ಸ್ ಡಿಸಿ ಮನ್ನಾ ಭೂಮಿಯಲ್ಲಿ ಪ.ಜಾತಿ. ಪ.ಪಂಗಡದವರಿಗೆ ಹಾಗೂ ಮುಂಗ್ಲಿಮನೆ ಎಂಬಲ್ಲಿ 1.12 ಸೆಂಟ್ಸ್ ಜಾಗವನ್ನು ಗುರುತಿಸಿ, ನಿವೇಶನ ವಿತರಣೆಗಾಗಿ ಕಾದಿರಿಸಲಾಗಿತ್ತು. ಈಗಿನ ಅಡಳಿತ ಮಂಡಳಿಯ ಪ್ರಥಮ ಅವಧಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಇದೀಗ ಎರಡನೇ ಅವಧಿಯಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಗಿದೆ.


ನಿವೇಶನಕ್ಕಾಗಿ ಕಾದಿರಿಸಿದ ಜಾಗ ಗುಡ್ಡ ಪ್ರದೇಶದಿಂದ ಕೂಡಿತ್ತು. ಸದರಿ ಜಾಗವನ್ನು ಸಮತಟ್ಟು ಮಾಡಿ ನಿವೇಶನ ಹಸ್ತಾಂತರ ಮಾಡಲಾಗಿದೆ. ಮಳೆಗಾಲ ಸಮಯದಲ್ಲಿ ಜಾಗ ಸಮತಟ್ಟು ಕೆಲಸ ಅಸಾಧ್ಯವಾಗ ಕಾರಣ ಸ್ವಲ್ಪ ಕಾಲವಕಾಶ ಬೇಕಾಯಿತು. ಮನೆ ನಿವೇಶನ ಹಸ್ತಾಂತರಿಸಿದ ಜಾಗದಲ್ಲಿ ಮುಂದೆ ವಿದ್ಯುತ್, ಕುಡಿಯುವ ನೀರು, ರಸ್ತೆಕಾಂಕ್ರಿಟೀಕರಣ ಸೇರಿದಂತೆ ಮೂಲಭೂತ ಸೌಲಭ್ಯಗಳ ಪೂರೈಸಲು ಅನುದಾನಕ್ಕಾಗಿ ಶಾಸಕರ ಸೂಚನೆಯಂತೆ ಅಂದಾಜು ಪಟ್ಟಿ ತಯಾರಿಸಿ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ ಎನ್ನುತ್ತಾರೆ ಪಂಚಾಯತ್ ಅಧಿಕಾರಿಗಳು.


24 ಫಲಾನುಭವಿಗಳು:
ಮನೆ ನಿವೇಶನಕ್ಕಾಗಿ ಕಾದಿರಿಸಿದ ವಿದ್ಯಾಪುರ ಪರನೀರುಕಟ್ಟೆಯ 99 ಸೆಂಟ್ಸ್ ಡಿಸಿ ಮನ್ನಾ ಭೂಮಿಯಲ್ಲಿ ಪ.ಜಾತಿ ಮತ್ತು ಪ.ಪಂಗಡದ 7 ಮಂದಿ ಹಾಗೂ ಮುಂಗ್ಲಿಮನೆಯಲ್ಲಿರುವ 1.12 ಎಕರೆ ಜಾಗದಲ್ಲಿ ಇತರ ವರ್ಗದ 17 ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ನಿವೇಶನ ಹಸ್ತಾಂತರಿಸಲಾಗಿದೆ.


ಶಾಸಕರಿಂದ ಹಕ್ಕು ಪತ್ರ ವಿತರಣೆ:
ಪಂಚಾಯತ್‌ನಿಂದ ಕಾದಿರಿಸಿದ ಭೂಮಿಯಲ್ಲಿ ಆಯ್ಕೆ ಮಾಡಿದ 24 ಫಲಾನುಭವಿಗಳಿಗೆ ಶಾಸಕ ಅಶೋಕ್ ಕುಮಾರ್ ರೈಯವರು ಕಳೆದ ಮಾರ್ಚ್ ತಿಂಗಳಲ್ಲಿ ಕಬಕ ಗ್ರಾ.ಪಂನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈಗಾಗಲೇ ಹಕ್ಕು ಪತ್ರ ವಿತರಿಸಿರುತ್ತಾರೆ.


ನಿವೇಶನ ಹಸ್ತಾಂತರ:
ಪಂಚಾಯತ್‌ನಿಂದ ಹಕ್ಕುಪತ್ರ ವಿತರಿಸಿದ ಎರಡೂ ನಿವೇಶನಗಳಿರುವ ಜಾಗವನ್ನು ಇದೀಗ ಪಂಚಾಯತ್‌ನಿಂದ ಜೆಸಿಬಿ ಮೂಲಕ ಸಮತಟ್ಟುಗೊಳಿಸಲಾಗಿದೆ. ಮಾ.14ರಂದು ಸ್ಥಳಕ್ಕೆ ಭೇಟಿ ನೀಡಿ ಹಕ್ಕುಪತ್ರ ವಿತರಿಸಿದ ನಿವೇಶನ ರಹಿತ ಫಲಾನುಭವಿಗಳಿಗೆ ನೀಡಿದ ನಿವೇಶನದ ಜಾಗ ತೋರಿಸಿ, ಹಸ್ತಾಂತರಿಸಲಾಗಿದೆ. ತಾ.ಪಂ.ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ, ಕಬಕ ಗ್ರಾ.ಪಂ.ಅಧ್ಯಕ್ಷೆ ಸುಶೀಲ ಉಪಾಧ್ಯಕ್ಷೆ ಗೀತಾ, ಸದಸ್ಯರಾದ ಶಾಬಾ ಕೆ, ನಜೀರ್, ಉಮರ್ ಫಾರೂಕ್, ರುಕ್ಮಯ್ಯ ಗೌಡ, ವಾರಿಜ, ಪುಷ್ಪಾ, ವಿನಯ ಕುಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಆಶಾ ಇ, ಲೆಕ್ಕ ಸಹಾಯಕ ಸುರೇಶ್, ತಾಲೂಕು ವಸತಿ ವಿಷಯ ನಿರ್ವಾಹಕರಾದ ಮೊಹಮ್ಮದ್ ಸಿರಾಜ್, ಗ್ರಾಮ ಆಡಳಿತ ಅಧಿಕಾರಿ ಜಂಗಪ್ಪ, ಗ್ರಾಮ ಸಹಾಯಕ ಮನೋಹರ್, ಸ್ಥಳೀಯರಾದ ರವಿ ಮುಂಗ್ಲಿಮನೆ ಗುತ್ತಿಗೆದಾರ ರಾಜಕುಮಾರ್ ರೈ, ಪಂಚಾಯತ್ ಸಿಬ್ಬಂದಿಗಳು ಹಾಗೂ ನಿವೇಶನ ರಹಿತ ಫಲಾನುಭವಿಗಳು ಮತ್ತಿತರರು ಉಪಸ್ಥಿತರಿದ್ದರು.

ಖಾಸಗಿ ನಿವೇಶನದ ಮಾದರಿಯಲ್ಲಿ ಜಾಗ ಸಮತಟ್ಟುಗೊಳಿಸಿ ಕಬಕ ಗ್ರಾ.ಪಂನಿಂದ ಮನೆ ನಿವೇಶನ ನೀಡಲಾಗಿದೆ. ಮಾದರಿಯಾಗಿ ಮನೆ ನಿವೇಶನ ವಿತರಿಸಿದ್ದು ಎರಡೂ ಜಿಲ್ಲೆಗಳಲ್ಲಿಯೂ ಇಂತಹ ನಿವೇಶನ ಕಾಣಲು ಸಾಧ್ಯವಿಲ್ಲ. ಮನೆ ನಿವೇಶನ ಮಂಜೂರುಗೊಳಿಸುವಲ್ಲಿ ಮಾಜಿ ಅಧ್ಯಕ್ಷರ ಸತತ ಪ್ರಯತ್ನವಿದೆ. ಮಾದರಿಯಾಗಿ ಮನೆ ನಿವೇಶನ ವಿತರಣೆಗೆ ಕಾರಣೀಕರ್ತರಾದ ಗ್ರಾ.ಪಂ, ಜನಪ್ರತಿನಿಧಿಗಳು, ಅಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳು ಅಭಿನಂದನೀಯರು. ಮುಂದೆ ಪಂಚಾಯತ್‌ನಿಂದ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು.
-ನವೀನ್ ಭಂಡಾರಿ, ಕಾರ್ಯನಿರ್ವಹಣಾಧಿಕಾರಿ ತಾ.ಪಂ

ನಾವು ಕಳೆದ 27 ವರ್ಷಗಳಿಂದ ಕಬಕ ಗ್ರಾ.ಪಂ ವ್ಯಾಪ್ತಿಯ ಮುರದಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದೇವೆ. ಬಾಡಿಗೆ ಕಟ್ಟಿ ಕಟ್ಟಿ ಸಾಕಾಗಿದೆ. ನಾವು ಮನೆ ನಿವೇಶಕ್ಕಾಗಿ ಹಲವು ಬಾರಿ ಅರ್ಜಿ ಸಲ್ಲಿಸಿದದ್ದೇವೆ. ಈಗ ಪಂಚಾಯತ್‌ನಿಂದ ಮನೆ ನಿವೇಶನ ದೊರೆತಿದ್ದು ಬಹಳಷ್ಟು ಸಂತಸ ತಂದಿದೆ. ನಮ್ಮಂತ ಹಲವು ಮಂದಿಗೆ ಕಬಕ ಗ್ರಾ.ಪಂನಿಂದ ನಿವೇಶನ ದೊರೆತಿದೆ. ನಿವೇಶನ ನೀಡಿದ ಕಬಕ ಗ್ರಾ.ಪಂನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.
-ಪ್ರೇಮ ಭಾಸ್ಕರ, ಫಲಾನುಭವಿ

LEAVE A REPLY

Please enter your comment!
Please enter your name here