ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸಂಚಾಲಕ ರಘು ಬೆಳ್ಳಿಪ್ಪಾಡಿ, ಕೋಶಾಧಿಕಾರಿ ಕರುಣಾಕರ ಪಲ್ಲತ್ತಡ್ಕ

ಪುತ್ತೂರು: ತುಳುನಾಡಿನ ಮೂಲ ದೇವರಾದ ಕೆಂಪು ಕೇಪುಲಾಜೆ ನಾಗಬಿರ್ಮೆರ್(ನಾಗಬ್ರಹ್ಮರ) ದೇವಸ್ಥಾನವೊಂದು ನಿಡ್ಪಳ್ಳಿ ಗ್ರಾಮದ ಬ್ರಹ್ಮರಗುಂಡ ಎಂಬಲ್ಲಿ ನಿರ್ಮಾಣವಾಗಲಿದೆ. ಕ್ಷೇತ್ರದ ಪುನರ್ ನಿರ್ಮಾಣದ ಕಾರ್ಯಗಳಿಗೆ ಪೂರಕವಾಗಿ ಜೀರ್ಣೋದ್ಧಾರ ಸಮಿತಿಯನ್ನು ರಚಿಸಲಾಗಿದೆ.
ದಕ್ಷಿಣ ಕನ್ನಡ, ಉಡುಪಿ, ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಕಾಸರಗೋಡು ಸೇರಿದಂತೆ ಆರು ಜಿಲ್ಲೆಗಳನ್ನು ಒಳಗೊಂಡಂತೆ ರಚಿತವಾಗಿರುವ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಸಾಂಸ್ಕೃತಿಕ ಅಧ್ಯಯನ ಟ್ರಸ್ಟ್ ಆಲಂಕಾರು ಇದರ ನೇತೃತ್ವದಲ್ಲಿ ಈ ಹಿಂದೆ ನಿಡ್ಪಳ್ಳಿ ಗ್ರಾಮದ ಬ್ರಹ್ಮರಗುಂಡ ಎಂಬಲ್ಲಿ ಸ್ವರ್ಣ ಪ್ರಶ್ನಾ ಚಿಂತನೆಯನ್ನು ನಡೆಸಲಾಗಿತ್ತು. ಇಲ್ಲಿ ತುಳುನಾಡಿನ ಮೂಲ ದೇವರಾದ ಕೆಂಪು ಕೇಪುಲಾಜೆ ನಾಗಬ್ರಹ್ಮರ(ನಾಗಬಿರ್ಮೆರ್) ಗುಂಡ ಇತ್ತು ಎಂದು ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಿದೆ. ದೈವಜ್ಞರು ಸೂಚಿಸಿರುವಂತೆ ಪರಿಹಾರ ಕಾರ್ಯಗಳು ನಡೆಸಲಾಗಿದೆ. ಮುಂದೆ ನಿಡ್ಪಳ್ಳಿಯ ಬ್ರಹ್ಮರಗುಂಡದಲ್ಲಿಯೇ ನಾಗಬ್ರಹ್ಮರ ಗುಂಡ ಮತ್ತು ಮೊಗೇರ್ಕಳ ದೈವಸ್ಥಾನದ ಪುನರ್ ನಿರ್ಮಾಣ ಕಾರ್ಯಗಳು ನಡೆಯಲಿದೆ.
ಜೀರ್ಣೋದ್ಧಾರ ಸಮಿತಿ ರಚನೆ:
ನಿಡ್ಪಳ್ಳಿಯ ಬ್ರಹ್ಮರಗುಂಡದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ನಾಗಬ್ರಹ್ಮರ ಗುಂಡ ಮತ್ತು ಮೊಗೇರ್ಕಳ ದೈವಸ್ಥಾನದ ಪುನರ್ ನಿರ್ಮಾಣ ಕಾರ್ಯಗಳಿಗೆ ಸಂಬಂಧಿಸಿದಂತೆ ಮಾ.2ರಂದು ನಿಡ್ಪಳ್ಳಿ ಶ್ರೀಶಾಂತಾದುರ್ಗಾ ದೇವಸ್ಥಾನದಲ್ಲಿ ಆದಿನಾಗಬ್ರಹ್ಮ ಮೊಗೇರ್ಕಳ ಸಾಂಸ್ಕೃತಿಕ ಅಧ್ಯಯನ ಟ್ರಸ್ಟ್‌ನ ಅಧ್ಯಕ್ಷ ಡಾ. ರಘು ಬೆಳ್ಳಿಪ್ಪಾಡಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜೀರ್ಣೋದ್ಧಾರ ಸಮಿತಿಯನ್ನು ರಚಿಸಲಾಯಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪ್ರಧಾನ ಕಾರ್ಯದರ್ಶಿಯಾಗಿ ವಿಜಯ್ ವಿಕ್ರಂ ಗಾಂಧಿ ಪೇಟೆ, ಕೋಶಾಧಿಕಾರಿಯಾಗಿ ಕರುಣಾಕರ ಪಲ್ಲತಡ್ಕ, ಜೊತೆ ಕಾರ್ಯದರ್ಶಿಯಾಗಿ ಬಾಲಕೃಷ್ಣ ಕೇಪುಳು, ಸಂಚಾಲಕರನ್ನಾಗಿ ಡಾ. ರಘು ಬೆಳ್ಳಿಪ್ಪಾಡಿ, ಉಪಾಧ್ಯಕ್ಷರಾಗಿ ನಂದರಾಜ್ ಸಂಕೇಶ, ವೆಂಕಟ್ರಮಣ ಬೋರ್ಕರ್‌ರವರನ್ನು ಆಯ್ಕೆ ಮಾಡಲಾಯಿತು. ಅಲ್ಲದೆ 6 ಜಿಲ್ಲೆಗಳ 50 ಮಂದಿ ಪ್ರಮುಖರನ್ನು ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಮೇ.1 ಶಿಲಾನ್ಯಾಸ:
ಬ್ರಹ್ಮರಗುಂಡದಲ್ಲಿ ನೂತನ ಗುಡಿ, ದೈವಸ್ಥಾನದ ನಿರ್ಮಾಣ ಕಾರ್ಯಗಳಿಗೆ ಮೇ.1ರಂದು ಶಿಲಾನ್ಯಾಸ ಕಾರ್ಯಕ್ರಮವು ಕನ್ಯಾಡಿ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮತ್ತು ವಿವಿಧ ರಾಜಕೀಯ, ಧಾರ್ಮಿಕ ಪ್ರಮುಖರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿಯ ಪ್ರಕಟಣೆ ತಿಳಿಸಿದೆ.