ವಿಶೇಷಚೇತನೆಯ ಬಾಳಿಗೆ ಬೆಳಕಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ : ಕೆಯ್ಯೂರಿನ ಬೇಬಿಯವರಿಗೆ ವಾತ್ಸಲ್ಯ ಮನೆ ಹಸ್ತಾಂತರ

0

ಪುತ್ತೂರು: ಕಳೆದ ಹಲವು ವರ್ಷಗಳಿಂದ ತನ್ನ ತಾಯಿಯೊಂದಿಗೆ ಗ್ರಾಮ ಪಂಚಾಯತ್‌ಗೆ ಸೇರಿದ ಬಾಡಿಗೆ ಕೊಠಡಿಯೊಂದರಲ್ಲಿ ವಾಸ್ತವ್ಯವಿದ್ದ ವಿಶೇಷಚೇತನೆಯ ಬಾಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳಕಾಗಿದೆ. ಕೆಯ್ಯೂರು ಗ್ರಾಮದ ಮಾಡಾವು ನಿವಾಸಿ ವಿಶೇಷ ಚೇತನೆ ಬೇಬಿ ಎಂಬವರಿಗೆ ಶ್ರೀ ಕ್ಷೇತ್ರದ ವತಿಯಿಂದ ವಾತ್ಸಲ್ಯ ಮನೆಯನ್ನು ಕಟ್ಟಿಕೊಟ್ಟು ಅದರ ಹಸ್ತಾಂತರ ಕಾರ್ಯಕ್ರಮ ಮಾ.17 ರಂದು ಕೆಯ್ಯೂರು ಗ್ರಾಪಂ ವ್ಯಾಪ್ತಿಯ ಬೊಳಿಕ್ಕಲದಲ್ಲಿ ನಡೆಯಿತು. ಬೆಳಿಗ್ಗೆ ಅರ್ಚಕ ಮಹಾಬಲೇಶ್ವರ ಭಟ್ ನೇತೃತ್ವದಲ್ಲಿ ಗಣಹೋಮ ನಡೆಯಿತು. ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ, ಹಿರಿಯರಾದ ಶಶಿಧರ ರಾವ್ ಬೊಳಿಕ್ಕಲರವರು ರಿಬ್ಬನ್ ತುಂಡರಿಸುವ ಮೂಲಕ ಚಾಲನೆ ನೀಡಿದರು.

ಕೆಯ್ಯೂರು ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರು ದೀಪ ಬೆಳಗಿಸಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿಯವರು ವಾತ್ಸಲ್ಯ ಮನೆಯ ನಾಮಫಲಕ ಅನಾವರಣ ಮಾಡಿದರು.ಅಖಿಲ ಕರ್ನಾಟಕ ಜನಜಾಗೃತಿ ತಾಲೂಕು ಅಧ್ಯಕ್ಷ ಲೋಕೇಶ್ ಹೆಗ್ಡೆಯವರು ಬೇಬಿಯವರಿಗೆ ಫಲಪುಷ್ಪದೊಂದಿಗೆ ಕ್ಷೇತ್ರದ ಪ್ರಸಾದ ನೀಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯರಾದ ಶಶಿಧರ ರಾವ್ ಬೊಳಿಕ್ಕಲರವರು, ಬಡವರ ಕಣ್ಣೊರೆಸುವ ಕೆಲಸವನ್ನು ಮಾಡುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೊಡಮಾಡಿದ ಈ ಮನೆಯಲ್ಲಿ ಸುಖಶಾಂತಿ ನೆಮ್ಮದಿ ತುಂಬಲಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹೇಳಿ ಶುಭ ಹಾರೈಸಿದರು. ಪದ್ಮನಾಭ ಶೆಟ್ಟಿಯವರು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬಹಳಷ್ಟು ಸಮಾಜಮುಖಿ ಕೆಲಸಗಳು ನಡೆಯುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ ಈಗಾಗಲೇ ಸಂಪೂರ್ಣ ನಿರ್ಗತಿಕರಾಗಿರುವವರಿಗೆ ವಾತ್ಸಲ್ಯ ಮನೆಯನ್ನು ಕಟ್ಟಿಕೊಡುವ ಕೆಲಸವನ್ನು ಯೋಜನೆಯ ವತಿಯಿಂದ ಮಾಡಲಾಗುತ್ತಿದೆ. ತಾಲೂಕಿನಲ್ಲಿ ಈಗಾಗಲೇ 3 ಮನೆಗಳನ್ನು ಕಟ್ಟಿಕೊಡಲಾಗಿದೆ ಎಂದು ತಿಳಿಸಿದರು. ವಿಶೇಷ ಚೇತನೆಯಾಗಿರುವ ಬೇಬಿಯವರ ಬದುಕು ಬಂಗಾರವಾಗಲಿ, ಈ ಮನೆಯಲ್ಲಿ ಸುಖ, ಶಾಂತಿ ನೆಮ್ಮದಿ ತುಂಬಲಿ ಎಂದು ಹೇಳಿ ಶುಭ ಹಾರೈಸಿದರು.

ಗ್ರಾ.ಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಬಹಳಷ್ಟು ಅಭಿವೃದ್ಧಿ ಕೆಲಸಗಳು ಆಗುತ್ತಿದ್ದು ಈ ವಾತ್ಸಲ್ಯ ಮನೆಯ ಹಿಂದೆ ಈ ಗ್ರಾಮದ ಬಹಳಷ್ಟು ಮಂದಿ ಶ್ರಮ ವಹಿಸಿದ್ದಾರೆ.ಎಲ್ಲರಿಗೂ ಕೃತಜ್ಞತೆಗಳೊಂದಿಗೆ ಶ್ರೀ ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಹೇಳಿದರು. 2019 ರಲ್ಲಿ ಸಂಜೀವ ಮಠಂದೂರು ಶಾಸಕರಾಗಿದ್ದಾಗ ಈ ಜಾಗವು ಮನೆ ನಿವೇಶನಕ್ಕಾಗಿ ಮಂಜೂರಾಗಿದ್ದು ಪ್ರಸ್ತುತ ಶಾಸಕರು ನಿವೇಶನ ಸಮತಟ್ಟು ಮಾಡಲು ಅನುದಾನ ಇಟ್ಟಿದ್ದಾರೆ ಇದು ಒಳ್ಳೆಯ ಕೆಲಸವಾಗಿದೆ ಎಂದು ಹೇಳಿ ಶುಭ ಹಾರೈಸಿದರು.

ಜನಜಾಗೃತಿ ಗ್ರಾಮ ಸಮಿತಿ ಅಧ್ಯಕ್ಷ, ಕೆಯ್ಯೂರು ಗ್ರಾಪಂ ಸದಸ್ಯ ಅಬ್ದುಲ್ ಖಾದರ್ ಮೇರ್ಲರವರು ಮಾತನಾಡಿ, ಒಂದು ಒಳ್ಳೆಯ ಕಾರ್ಯದಲ್ಲಿ ಭಾಗವಹಿಸಿದ್ದು ಖುಷಿ ತಂದಿದೆ. ಈ ಮನೆ ನಿರ್ಮಾಣಕ್ಕೆ ಸ್ಥಳದಾನ ಮಾಡಿಕೊಟ್ಟ ಶಶಿಧರ ರಾವ್‌ರವರಿಗೆ ಹಾಗೇ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಅಭಿನಂದನೆಗಳನ್ನು ಸಲ್ಲಿಸಬೇಕಾಗಿದೆ ಎಂದು ಹೇಳಿ ಶುಭ ಹಾರೈಸಿದರು.

ಕನ್ನಡ ಸಾಹಿತ್ಯ ಪರಿಷತ್ತುಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಪುತ್ತೂರುರವರು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬಹಳಷ್ಟು ಉತ್ತಮ ಕೆಲಸಗಳು ನಡೆಯುತ್ತಿದ್ದು ಸಂಪೂರ್ಣ ನಿರ್ಗತಿಕರಿಗೆ ನೀಡುವ ವಾಸ್ತಲ್ಯ ಮನೆಯಲ್ಲಿ ಸುಖ, ಶಾಂತಿ ನೆಮ್ಮದಿ ತುಂಬಲಿ ಎಂದು ಹೇಳಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ತಾಲೂಕು ಅಧ್ಯಕ್ಷ ಲೋಕೇಶ್ ಹೆಗ್ಡೆ, ಜನಜಾಗೃತಿ ತಾಲೂಕು ಮಾಜಿ ಅಧ್ಯಕ್ಷ ಮಹಾಬಲ ರೈ ಒಲತ್ತಡ್ಕ, ಜನಜಾಗೃತಿ ಒಳಮೊಗ್ರು ವಲಯ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಕೆದಂಬಾಡಿ ವಲಯದ ಅಧ್ಯಕ್ಷ ಹಾಗೂ ಕೇಂದ್ರ ಒಕ್ಕೂಟದ ಅಧ್ಯಕ್ಷ ಉದಯ ಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಒಕ್ಕೂಟದ ಕುಂಬ್ರ ವಲಯ ಅಧ್ಯಕ್ಷ ಎಸ್.ಮಾಧವ ರೈ ಕುಂಬ್ರ, ಜನಜಾಗೃತಿ ಒಳಮೊಗ್ರು ಗ್ರಾಮ ಸಮಿತಿ ಸದಸ್ಯ ರಾಜೇಶ್ ರೈ ಪರ್ಪುಂಜ, ಮಾಡಾವು ಅಭಿನವ ಕೇಸರಿಯ ಅಧ್ಯಕ್ಷ ಶಶಿಧರ ಆಚಾರ್ಯ, ದೇರ್ಲ ಒಕ್ಕೂಟದ ಅಧ್ಯಕ್ಷ ಬೇಬಿ ಪೂಜಾರಿ ದೇರ್ಲ, ಕೆಯ್ಯೂರು ಗ್ರಾಪಂ ಸದಸ್ಯರಾದ ಜಯಂತ ಪೂಜಾರಿ ಕೆಂಗುಡೇಲು ಮತ್ತು ಮೀನಾಕ್ಷಿ ವಿ.ರೈ, ತ್ಯಾಗರಾಜ ಒಕ್ಕೂಟದ ಅಧ್ಯಕ್ಷೆ ಚಂದ್ರಾವತಿ ರೈ ಚಾವಡಿ, ಚಂದ್ರಶೇಖರ ರೈ ಸಣಂಗಳ, ಸತೀಶ್ ಪಾಂಬಾರು, ಸುಂದರ ಪೂಜಾರಿ ಇಳಂತಾಜೆ ಸೇರಿದಂತೆ ಕೆದಂಬಾಡಿ ವಲಯದ ಒಕ್ಕೂಟದ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರುಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.


ಮನೆ ನಿರ್ಮಾಣದ ಹಿಂದೆ ಶ್ರಮವಹಿಸಿದವರಿಗೆ ಗೌರವಾರ್ಪಣೆ
ವಾತ್ಸಲ್ಯ ಮನೆ ನಿರ್ಮಾಣದ ಹಿಂದೆ ಶ್ರಮ ವಹಿಸಿದವರನ್ನು ಈ ಸಂದರ್ಭದಲ್ಲಿ ಶಾಲು,ಹೂ ನೀಡಿ ಗೌರವಿಸಲಾಯಿತು.ಲಲಿತಾ ರೈ, ಚಂದ್ರಾವತಿ, ಮಂಜುಳಾ ರೈ, ಮೀನಾಕ್ಷಿ ವಿ.ರೈ, ಸರಸ್ವತಿ, ಹರೀಶ್ ಮಾಡಾವು, ಸತ್ಯವತಿ, ಗೀತಾ ರೈ, ಸುಭಾಷಿಣಿ, ಹರೀಶ್ ಪಾಟಾಳಿ, ಇಂದಿರಾ ಬಿ.ಬಿ, ಬಾಬು ಪಾಟಾಳಿ, ಬೇಬಿ ಪೂಜಾರಿ, ದಿನೇಶ್, ಗಣೇಶ್ ಗೌಡ, ರಾಜೇಶ್ ಮೇಸ್ತ್ರೀ, ಸತೀಶ್ ಅಚಾರ್ಯ, ಶೌರ್ಯ ತಂಡದ ಕ್ಯಾಪ್ಟನ್ ಸುರೇಶ್, ರಾಕೇಶ್ ಬಲ್ಲಾಳ್, ತುಳಸಿ ಕಟ್ಟೆ ನೀಡಿದ ಚಂದ್ರಶೇಖರ್ ರೈ, ಒಂದು ತಿಂಗಳ ಜಿನಸು ಸಾಮಾಗ್ರಿ ಕೊಡುಗೆಯಾಗಿ ನೀಡಿದ ಪುತ್ತೂರು ಉಮೇಶ್ ನಾಯಕ್, ಮನೆಯ ಕಾಮಗಾರಿ ನಿರ್ವಹಣೆ ಮಾಡಿದ ಎಸ್.ಮಾಧವ ರೈ ಕುಂಬ್ರ, ದೇವರ ಮಂಟಪ ನೀಡಿದ ನಾರಾಯಣ ಆಚಾರ್ಯ ಕೊಲತ್ತಡ್ಕ, ನೀರಿನ ಟ್ಯಾಂಕ್ ನೀಡಿದ ಕಿರಣ್ ಎಂಟರ್‌ಪ್ರೈಸಸ್ ಪುತ್ತೂರು ಇದರ ಕೇಶವ, ವಯರಿಂಗ್ ವ್ಯವಸ್ಥೆ ಮಾಡಿಕೊಟ್ಟ ರವಿಕುಮಾರ್ ಕೈತಡ್ಕರವರುಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಶಶಿಧರ ಎಂ. ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ವಲಯ ಮೇಲ್ವಿಚಾರಕರಾದ ಶುಭಾವತಿ ಸ್ವಾಗತಿಸಿದರು. ಜ್ಞಾನ ವಿಕಾಸ ತಾಲೂಕು ಸಮನ್ವಯಾಧಿಕಾರಿ ಕಾವ್ಯಶ್ರೀ ವಂದಿಸಿದರು. ಸೇವಾ ಪ್ರತಿನಿಧಿಗಳಾದ ಶಾರದಾ, ಅರುಣಾ, ದಿವ್ಯ, ವಾರಿಜಾ, ಲತಾ, ರಜನಿ, ಶ್ರೀಮತಿರವರುಗಳು ಸಹಕರಿಸಿದ್ದರು. ಕೆದಂಬಾಡಿ ವಲಯದ ಒಕ್ಕೂಟದ ಅಧ್ಯಕ್ಷರುಗಳು, ಪದಾಧಿಕಾರಿಗಳು ಸಹಕರಿಸಿದ್ದರು.

LEAVE A REPLY

Please enter your comment!
Please enter your name here