ಇತರ ಗ್ರಾಮ ಪಂಚಾಯತ್‌ಗಳಿಗೂ ಉತ್ತೇಜನ ಸಿಗಲಿದೆ : ನವೀನ್ ಕುಮಾರ್ ಭಂಡಾರಿ
ರಾಮಕುಂಜ: ರಾಮಕುಂಜ ಗ್ರಾಮ ಪಂಚಾಯತ್ ವತಿಯಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ 28 ಲಕ್ಷ ರೂ. ಹಾಗೂ ಪಶುಸಂಗೋಪನಾ ಇಲಾಖೆಯ 7 ಲಕ್ಷ ರೂ.ಸೇರಿ ಒಟ್ಟು 35 ಲಕ್ಷ ರೂ.ವೆಚ್ಚದಲ್ಲಿ ರಾಮಕುಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೋಕುಲನಗರದಲ್ಲಿ ನಿರ್ಮಾಣಗೊಂಡ ಸಮುದಾಯ ಗೋ ಶಾಲೆಯ ಉದ್ಘಾಟನೆ ಮಾ.18ರಂದು ಬೆಳಿಗ್ಗೆ ನಡೆಯಿತು. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗೋ ಶಾಲೆ ನಿರ್ಮಾಣಗೊಂಡಿರುವುದು ರಾಜ್ಯದಲ್ಲೇ ಇದು ಪ್ರಥಮ ಎನ್ನಲಾಗಿದೆ.
ಗೋ ಪೂಜೆ, ಗೋಶಾಲೆ ಉದ್ಘಾಟನೆ ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಕಡಬ ತಾ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಅವರು, ಮಾಜಿ ಪಶುಸಂಗೋಪನೆ ಸಚಿವರಾದ ಪ್ರಭು ಚೌಹಾಣ್ ಅವರಿಂದ ಶಿಲಾನ್ಯಾಸಗೊಂಡು ಉದ್ಯೋಗ ಖಾತ್ರಿ ಯೋಜನೆಯಡಿ ಈ ಗೋ ಶಾಲೆ ಕಾಮಗಾರಿ ನಡೆದಿದೆ. ಇಲ್ಲಿಗೆ ಗೋ ಶಾಲೆ ಮಂಜೂರು ಆಗಿರುವುದು ಪುಣ್ಯದ ಕಾರ್ಯ ಆಗಿದೆ. ಔಷಧೀಯ ಗುಣವುಳ್ಳ ಗೋವುಗಳಿಂದಾಗಿ ನಾವಿದ್ದೇವೆ. ನರೇಗಾ ಯೋಜನೆಯಡಿ ಗೋ ಶಾಲೆ ನಿರ್ಮಾಣ ಆಗಿರುವುದು ಇದೇ ಪ್ರಥಮವಾಗಿದೆ. ಕಾಮಗಾರಿ ಅನುಷ್ಠಾನದಲ್ಲಿ ನೂರಾರು ಸವಾಲುಗಳಿದ್ದರೂ ಈ ದೊಡ್ಡ ಮಟ್ಟದ ಕಾಮಗಾರಿಯನ್ನು ಗ್ರಾಮ ಪಂಚಾಯತ್ ಯಶಸ್ವಿಯಾಗಿ ನಿಭಾಯಿಸಿದೆ. ಗುಣಮಟ್ಟದ ಕಾಮಗಾರಿಯೂ ನಡೆದಿದ್ದು ಇತರರಿಗೂ ಉತ್ತೇಜನ ನೀಡುವಂತೆ ಆಗಿದೆ ಎಂದರು.

ಗೋ ಶಾಲೆ ಉದ್ಘಾಟಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಚೇತಾ ಬಿ., ಮಾತನಾಡಿ, ಗೋವುಗಳನ್ನು ನಾವು ದೇವರೆಂದು ಪೂಜಿಸುತ್ತೇವೆ. ಅಶಕ್ತ ಗೋವುಗಳ ಸೇವೆ ಪುಣ್ಯದ ಕೆಲಸ ಎಂದ ಅವರು, 5 ವರ್ಷಕ್ಕೊಮ್ಮೆ ಚುನಾಯಿತರಾಗಿ ಬರುವ ಸದಸ್ಯರಿಗೆ ಅನುಭವದ ಕೊರತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಪಿಡಿಒ, ಕಾರ್ಯದರ್ಶಿ ಹಾಗೂ ಸಿಬ್ಬಂದಿಗಳು ಮುತುವರ್ಜಿ ಕೆಲಸ ನಿರ್ವಹಿಸಿದಾಗ ಗ್ರಾಮದ ಅಭಿವೃದ್ಧಿ ಸಾಧ್ಯವಿದೆ. ಅಭಿವೃದ್ಧಿ ಕೆಲಸಗಳಿಗೆ ಆಡಳಿತ ಮಂಡಳಿಯ ಸಹಕಾರವೂ ಇರುತ್ತದೆ. ಉದ್ಯೋಗ ಖಾತ್ರಿ ಯೋಜನೆಯಡಿ ಮುಂದೆಯೂ ಇಂತಹ ಸಮುದಾಯ ಆಧಾರಿತ ಅಭಿವೃದ್ಧಿ ಕೆಲಸ ಆಗಬೇಕು ಎಂದರು.

ಕಡಬ ತಾ.ಪಂ. ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಸಂದೇಶ್ ಎಂ. ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ ಮೇವಿನ ಬೆಳೆ ಬೆಳೆಯಲು ಅವಕಾಶ ಇದೆ. ಇಲ್ಲಿ ಗೋವುಗಳಿಗೆ ಮೇವಿನ ಅಗತ್ಯವೂ ಇರುವುದರಿಂದ ಗ್ರಾಮ ಪಂಚಾಯಿತಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕಡಬ ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಅಜಿತ್ ಕುಮಾರ್ ಮಾತನಾಡಿ, ಇಲ್ಲಿ ಗೋ ಶಾಲೆ ಆರಂಭಗೊಂಡು ಎರಡು ವರ್ಷ ಆಗಿದೆ. ಈಗ ಉದ್ಘಾಟನೆಗೊಂಡಿರುವುದು ೨ನೇ ಕಟ್ಟಡ. ಇದರಲ್ಲಿ 60 ಜಾನುವಾರು ಕಟ್ಟಲು ಅವಕಾಶವಿದೆ. ಈ ಹಿಂದೆ ರಾಜ್ಯ ಸರ್ಕಾರ ಜಿಲ್ಲೆಗೊಂದು ಗೋ ಶಾಲೆ ಮಂಜೂರು ಮಾಡಿತ್ತು. ಆದರೆ ಉದ್ಯೋಗ ಖಾತ್ರಿ ಯೋಜನೆಯಡಿ ರಾಜ್ಯದ ಎಲ್ಲಿಯೂ ಗೋ ಶಾಲೆ ಆಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ರಾಮಕುಂಜದಲ್ಲೇ ಪ್ರಥಮವಾಗಿದೆ. ಇದು ಹೆಮ್ಮೆಯ ವಿಚಾರ ಎಂದರು.

ರಾಮಕುಂಜ ಗ್ರಾ.ಪಂ. ನಿವೃತ್ತ ಪಿಡಿಒ ಜೆರಾಲ್ಡ್ ಮಸ್ಕರೇನಸ್ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ ಇಲ್ಲಿ ಗೋ ಶಾಲೆ ನಿರ್ಮಾಣಕ್ಕೆ ನಾನು ಪಿಡಿಒ ಆಗಿದ್ದಾಗ ಸೂಚನೆ ಬಂತು. ಅದರಂತೆ ಕಾಮಗಾರಿ ಅನುಷ್ಠಾನ ಮಾಡಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಸಾರ್ವಜನಿಕ ಕಾಮಗಾರಿ ನಿರ್ವಹಣೆ ಮಾಡುವುದು ತುಂಬಾ ಕಷ್ಟ. ಆದರೂ ಯೋಗೀಶ್ ಕುಮಾರ್ ಅವರು ಟೆಂಡರ್ ವಹಿಸಿಕೊಂಡು ಕಾಮಗಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇದಕ್ಕೆ ಸಿಬ್ಬಂದಿಗಳ, ಆಡಳಿತ ಮಂಡಳಿಯವರ, ಊರಿನವರ ಸಹಕಾರ ದೊರೆತಿದೆ ಎಂದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕೇಶವ್ ಗಾಂಧಿ ಪೇಟೆ, ಇಂಜಿನಿಯರ್ ಮನೋಜ್ ಕುಮಾರ್, ಗುತ್ತಿಗೆದಾರ ಯೋಗೀಶ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಸದಸ್ಯರಾದ ಯತೀಶ್ ಬಾನಡ್ಕ, ಅಬ್ದುಲ್ ರಹಿಮಾನ್ ಹಲ್ಯಾರ, ರೋಹಿಣಿ ಆನ, ಮಾಲತಿ ಎನ್.ಕೆ.ಕದ್ರ, ಭವಾನಿ ಸಂಪ್ಯಾಡಿ, ಸುಜಾತ ಕಾಪಿಕಾಡು, ಭಾರತಿ ಆರಿಂಜ, ಆಯಿಷಾ ಆತೂರು ಹಾಗೂ ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಲಲಿತಾ ಜಿ.ಡಿ.ಸ್ವಾಗತಿಸಿ, ನಿರೂಪಿಸಿದರು. ಪಿಡಿಒ ಮೋಹನ್ ಕುಮಾರ್ ವಂದಿಸಿದರು. ಸಿಬ್ಬಂದಿಗಳಾದ ದುರ್ಗಾಪ್ರಸಾದ್, ಮಾಧವ ಖಂಡಿಗ, ನಾರಾಯಣ ಸಾಂತ್ಯ, ದೀಕ್ಷಿತಾ, ಜಾನಕಿ ಸಹಕರಿಸಿದರು.

ಸನ್ಮಾನ: ಸಮುದಾಯ ಗೋ ಶಾಲೆ ಅನುಷ್ಠಾನಕ್ಕೆ ಸಹಕಾರ ನೀಡಿದ ತಾ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ, ನಿವೃತ್ತ ಪಿಡಿಒ ಜೆರಾಲ್ಡ್ ಮಸ್ಕರೇನಸ್, ಇಂಜಿನಿಯರ್ ಮನೋಜ್ ಕುಮಾರ್, ಗುತ್ತಿಗೆದಾರ ಯೋಗೀಶ್ ಕುಮಾರ್ ಅಜ್ಜಿಕುಮೇರು, ಗ್ರಾಮ ಪಂಚಾಯತ್ ಡಾಟಾ ಎಂಟ್ರಿ ಆಪರೇಟರ್ ವನಿತಾ, ಕಡಬ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಅಜಿತ್ ಕುಮಾರ್, ಗೋ ಶಾಲೆ ಸಿಬ್ಬಂದಿಗಳಾದ ನಿತಿನ್ ರಾಮಕುಂಜ, ನಿತಿನ್ ಬಾಜಳ್ಳಿ, ನವೀನ್ ರಾಮಕುಂಜ, ಜನಾರ್ದನ ಆಚಾರ್ಯ ಕೊಯಿಲ, ರಮೇಶ್ ಕೊಯಿಲ ಅವರನ್ನು ರಾಮಕುಂಜ ಗ್ರಾಮ ಪಂಚಾಯತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಗೋ ಪೂಜೆ:
ಗೋ ಶಾಲೆ ಉದ್ಘಾಟನೆಗೂ ಮೊದಲು ಗೋ ಶಾಲೆಯಲ್ಲಿ ಗೋ ಪೂಜೆ ನಡೆಯಿತು. ಶ್ರೀ ರಾಮಕುಂಜೇಶ್ವರ ದೇವಸ್ಥಾನದ ಸಹಾಯಕ ಅರ್ಚಕರಾದ ಶ್ರೀನಿಧಿ ಭಟ್ ಅವರು ಗೋ ಪೂಜೆ ನೆರವೇರಿಸಿ, ಪ್ರಾರ್ಥನೆ ಸಲ್ಲಿಸಿದರು.