
ನೆಲ್ಯಾಡಿ: ಗೋ ಸೇವಾ ಗತಿ ವಿಧಿ ಕರ್ನಾಟಕ, ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್ ಬಂಟ್ವಾಳ ಇದರ ವತಿಯಿಂದ ಆರಂಭಗೊಂಡ ನಂದಿ ರಥಯಾತ್ರೆ ಮಾ.18ರಂದು ಬೆಳಿಗ್ಗೆ ನೆಲ್ಯಾಡಿ ಸೂರ್ಯನಗರ ಶ್ರೀರಾಮ ವಿದ್ಯಾಲಯಕ್ಕೆ ಆಗಮಿಸಿತು.

ಶಾಲಾ ಘೋಷ್ ತಂಡ, ಮಾತೃ ಮಂಡಳಿ ಹಾಗೂ ವರಮಹಾಲಕ್ಷ್ಮಿ ಸಮಿತಿಯ ಮಾತೆಯರ ಮತ್ತು ವಿದ್ಯಾರ್ಥಿನಿಯರ ಪೂರ್ಣ ಕುಂಭ ಹಾಗೂ ಕುಣಿತ ಭಜನೆಯ ಮೂಲಕ ನಂದಿ ರಥಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಸಾಮಾಜಿಕ ಕಾರ್ಯಕರ್ತ ಹರಿರಾಮಚಂದ್ರ ಉಪ್ಪಿನಂಗಡಿ ಅವರು, ನಂದಿ ರಥಯಾತ್ರೆಯ ಉದ್ದೇಶ ಹಾಗೂ ಗೋ ಸಂರಕ್ಷಣೆಯ ಜೊತೆಗೆ ನಂದಿ ಸಂರಕ್ಷಣೆ, ಸಹಜ ಕೃಷಿ ವಿಸ್ತರಣೆ, ಮಣ್ಣು ಉಳಿಸುವ ಕೃಷಿಯ ಬಗ್ಗೆ ಮಾಹಿತಿ ನೀಡಿದರು. ನಂತರ ನಂದಿಗೆ ಮಾಲಾರ್ಪಣೆ, ಗೋಗ್ರಾಸ, ನಂದಿಗೆ ಪೂಜೆಯನ್ನು ನಡೆಸಲಾಯಿತು. ವಿದ್ಯಾರ್ಥಿಗಳು, ಪೋಷಕರು, ಮಾತೆಯರು, ಶಿಕ್ಷಕವರ್ಗ ಹಾಗೂ ಆಡಳಿತ ಮಂಡಳಿಯವರಿಂದ ನಂದಿಗೆ ಪುಷ್ಪಾರ್ಚನೆ ಮಾಡಲಾಯಿತು.

ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು, ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು, ಉಪ್ಪಿನಂಗಡಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುನಿಲ್ ಕುಮಾರ್, ಶಾಲಾ ಆಡಳಿತ ಮಂಡಳಿ ಸದಸ್ಯರಾದ ಸುಬ್ರಾಯ ಪುಣಚ, ಜಿನ್ನಪ್ಪ ಪೂವಾಜೆ, ಹಾರ್ಪಳ ಶ್ರೀ ಶಾಸ್ತಾರೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸುಂದರ ಗೌಡ ಅತ್ರಿಜಾಲು, ಗ್ರಾಮ ವಿಕಾಸ ಸಮಿತಿಯ ಸದಸ್ಯರು, ಪೋಷಕರು ಉಪಸ್ಥಿತರಿದ್ದರು. ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಮೂಲಚಂದ್ರ ಕಾಂಚನ ಸ್ವಾಗತಿಸಿ, ಶಾಲಾ ಮುಖ್ಯಗುರು ಗಣೇಶ್ ವಾಗ್ಲೆ ವಂದಿಸಿದರು. ಶುಭಾರಾಣಿ ಮಾತಾಜಿ ನಿರೂಪಿಸಿದರು.
