ಪುತ್ತೂರು: ಬಿಜೆಪಿ ಸರಕಾರ ಇರುವ ಸಂದರ್ಭ ಆಗಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿ ಅದನ್ನು ನಾನು ಮಾಡಿದ್ದು ಎಂದು ಪತ್ರಿಕೆಯಲ್ಲಿ ಹೇಳಿಕೆ ನೀಡುತ್ತಿರುವ ಪುತ್ತೂರಿನ ಹಾಲಿ ಶಾಸಕರು ಅನುದಾನ ತಂದ ದಾಖಲೆ ಇದ್ದರೆ ದಾಖಲೆ ಸಮೇತ ಮಾಧ್ಯಮಗಳ ಮೂಲಕ ಬಹಿರಂಗಪಡಿಸಲಿ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಸವಾಲು ಹಾಕಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಬಿಜೆಪಿ ಸರಕಾರ ಇದ್ದಾಗ ಕೇಂದ್ರ ಸರಕಾರದ ಸುರಕ್ಷಿತ ಕುಡಿಯುವ ನೀರಿನ ವ್ಯವಸ್ಥೆಗೆ ಸಂಬಂಧಿಸಿ 2022ರ ಮಾ.28ಕ್ಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ರೂ. 780 ಕೋಟಿ ಮತ್ತು ಕಡಬಕ್ಕೆ ರೂ.230 ಕೋಟಿ ಅನುದಾನ ಬಿಡುಗಡೆಗೆ ಆದೇಶವಾಗಿತ್ತು. 2023ರ ಮಾ.15ಕ್ಕೆ ಅದು ಟೆಂಡರೂ ಕೂಡಾ ಆಗಿತ್ತು. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಶೇ.50 ಅನುದಾನದಲ್ಲಿ ನಡೆಯುತ್ತಿರುವ ಈ ಯೋಜನೆ ಬಿಜೆಪಿ ಸರಕಾರದ ಅವಧಿಯಲ್ಲಿ ಅನುಷ್ಠಾನಗೊಂಡಿದೆ. ಆದರೆ ಪುತ್ತೂರಿನ ಈಗಿನ ಶಾಸಕರು ಮಾರ್ಚ್ 2023ರಂದು ಮಂಜೂರುಗೊಂಡ ಯೋಜನೆಯ ರೂ. 780 ಕೋಟಿ ಅನುದಾನದ ಬದಲು ರೂ. 1000 ಕೋಟಿಯ ಅನುದಾನಕ್ಕೆ ಸಂಬಂಧಿಸಿ ಪ್ಲೆಕ್ಸ್ ಹಾಕಿ ಪತ್ರಿಕೆಯಲ್ಲಿ ನಾನು ಮಾಡಿದ್ದು ಎಂದು ಹೇಳಿಕೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಸರಕಾರ ಬಂದದ್ದು ಮೇ 2023ಕ್ಕೆ. ಅಲ್ಲಿಂದಲೆ ಅಶೋಕ್ ರೈ ಅವರ ಅವಧಿ ಆರಂಭ ಆಗಿರುವುದು. ಆದರೆ ಮಾ.2023ಕ್ಕೆ ಕಾಮಗಾರಿ ಅನುಷ್ಠಾನ ಆಗಿದೆ. ಈ ವಿಚಾರವನ್ನು ಮರೆಮಾಚುವ ಕೆಲಸ ಶಾಸಕರು ಮಾಡುತ್ತಿದ್ದಾರೆ. ನಾನು ಮಾಧ್ಯಮದ ಮೂಲಕ ಸತ್ಯ ಸಂಗತಿ ತಿಳಿಸಬೇಕೆಂದು ಆಧಾರ ಸಹಿತವಾಗಿ ಮುಂದಿಟ್ಟಿದ್ದೆನೆ ಎಂದ ಅವರು ಶಾಸಕ ಅಶೋಕ್ ಕುಮಾರ್ ರೈ ಅವರಲ್ಲಿ ಅನುದಾನ ತಂದ ದಾಖಲೆ ಇದ್ದರೆ ದಾಖಲೆ ಸಮೇತ ಮಾಧ್ಯಮಗಳ ಮೂಲಕ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ವೈದ್ಯಕೀಯ ಕಾಲೇಜಿಗೆ ಈ ವರ್ಷವೇ ಶಿಲಾನ್ಯಾಸ ಮಾಡಿ ಸಾಧನೆ ತೋರಿಸಲಿ:
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು 2025-26ನೆ ಸಾಲಿನ ಅಯವ್ಯಯದಲ್ಲಿ ಪುತ್ತೂರಿನಲ್ಲಿ ಹೊಸ ಮೆಡಿಕಲ್ ಕಾಲೇಜನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಇದಕ್ಕಾಗಿ 100 ಹಾಸಿಗೆಯ ಸಾಮರ್ಥ್ಯದ ತಾಲೂಕು ಆಸ್ಪತ್ರೆಯನ್ನು ಉನ್ನತೀಕರಿಸಲು ಪ್ರಸಕ್ತ ವರ್ಷದಲ್ಲಿ ಕ್ರಮ ವಹಿಸಲಾಗುವುದು ಎಂದು ಉಲ್ಲೇಖಿಸಿರುವುದು ಸಂತೋಷಕರ ವಿಚಾರ. ಈ ಕುರಿತು ಅದನ್ನು ಕಾರ್ಯರೂಪಕ್ಕೆ ತಂದು ಮತ್ತೆ ವೈದ್ಯಕೀಯ ಕಾಲೇಜಿಗೆ ಈ ವರ್ಷವೇ ಶಿಲಾನ್ಯಾಸ ಮಾಡಿ ಸಾಧನೆ ತೋರಿಸಲಿ ಎಂದ ಅವರು ಇಂಡಿಯನ್ ಮೆಡಿಕಲ್ ಕೌನ್ಸಿಲ್‌ನ ಗೈಡ್‌ಲೈನ್ ಪ್ರಕಾರ ಆಸ್ಪತ್ರೆಗೆ ಅವರ ಅನುಮತಿ ಬೇಕು. ರಾಜ್ಯ ಸರಕಾರ, ಯುನಿರ್ವಸಿಟಿ, ಟ್ರಸ್ಟ್, ಕಂಪೆನಿಗೆ ಅರ್ಜಿ ಹಾಕಬೇಕು. ಅದರ ಪ್ರಕಾರ 300 ಬೆಡ್‌ನ ಆಸ್ಪತ್ರೆ ಆಗಬೇಕು. ಅದರಲ್ಲಿ ಟೀಚಿಂಗ್ ಪ್ಯಾಕಲ್ಟಿ ಬೇಕು. ಅದರಲ್ಲೂ ಮೊದಲ ಪ್ರಾಧನ್ಯತೆ ಜಿಲ್ಲೆಗೆ. ಅಲ್ಲಿಂದ ನಂತರ ತಾಲೂಕಿಗೆ ಬರುತ್ತದೆ. ಎಲ್ಲವೂ ಅದ ಬಳಿಕ ಮೆಡಿಕಲ್ ಕಾಲೇಜಿಗೆ ಅನುಮತಿ ಸಿಕ್ಕ ಬಳಿಕವೇ ಸರಕಾರ ಕಾಲೇಜಿನ ಕೆಲಸ ಪ್ರಾರಂಭಿಸಬೇಕಾಗುತದೆ. ರಾಜ್ಯದ 31 ಜಿಲ್ಲೆಗಳ ಪೈಕಿ 15 ಕಡೆ ಮಾತ್ರ ಸರಕಾರಿ ಮೆಡಿಕಲ್ ಕಾಲೇಜು ಇದೆ. ಇದನ್ನೆಲ್ಲವನ್ನು ಗಮನದಲ್ಲಿಟ್ಟುಕೊಂಡು ಹಿಂದೆ ನಾನು ಶಾಸಕನಾಗಿದ್ದ ಸಂದರ್ಭ ಪುತ್ತೂರಿನಲ್ಲಿ 300 ಬೆಡ್ ಆಸ್ಪತ್ರೆ ಮಾಡಲು ಒಂದಷ್ಟು ನೀಲ ನಕಾಶೆಯನ್ನು ಸರಕಾರದ ಹಂತದಲ್ಲೇ ಮಾಡಿದ್ದೇವೆ. ಈ ವಿಚಾರ ಪತ್ರಿಕೆಯಲ್ಲೂ ಬಂದಿದೆ. ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಮೆಡಿಕಲ್ ಕಾಲೇಜಿಗಾಗಿ ಜಾಗ ಕಾಯ್ದಿರಿಸಿದ ಬಳಿಕ ಅದನ್ನು ಮುಂದುವರಿಸಿ ಜನರ ಬೇಡಿಕೆಯಂತೆ ಮೆಡಿಕಲ್ ಕಾಲೇಜಿಗಾಗಿ ಒಂದು ಹಂತದ ಪ್ರಯತ್ನ ನಾನು ಮಾಡಿ ಅಗಿದೆ. ಆದರೆ ಮೊನ್ನೆ ಹಾಲಿ ಶಾಸಕರು ಹಿಂದಿನ ಶಾಸಕರು ಮೆಡಿಕಲ್ ಕಾಲೇಜಿಗಾಗಿ ಏನು ಮಾಡಿಲ್ಲ. ಅದರ ಪೈಲ್ ಎ.ಸಿ.ಕಚೇರಿಯಲ್ಲೇ ಇತ್ತು. ನಾನು ಬಂದ ಬಳಿಕ ಅದನ್ನು ಮುಂದುವರಿಸಿದ್ದೇನೆ ಎಂದು ಹೇಳಿಕೆ ನೀಡಿದ್ದರು. ಈ ಕುರಿತು ಬಿಜೆಪಿ ಸರಕಾರದ ಶಾಸಕನಾಗಿ ನಾನಿರುವಾಗ ಏನೆನು ಮಾಡಿದ್ದೇವೆ ಎಂದು ದಾಖಲೆ ಸಹಿತ ಜನರಿಗೆ ಸತ್ಯ ತಿಳಿಸಬೇಕೆಂದು ಪತ್ರಿಕಾಗೋಷ್ಟಿ ಮಾಡಿದ್ದೇನೆ ಎಂದು ಹೇಳಿದ ಅವರು ಮೆಡಿಕಲ್ ಕಾಲೇಜು ಆಗುವುದಾದರೆ ನಾನು ಸಂತೋಷ ಪಡುತ್ತೇನೆ. ನಾವು ಅಭಿವೃದ್ಧಿಗೆ ಕಂಡಿತಾ ಸಹಕಾರ ನೀಡುತ್ತೇವೆ. ಅಭಿವೃದ್ಧಿಯ ಜೊತೆ ಇದ್ದೇವೆ. ಆದರೆ ಯಾವುದೇ ಪ್ರಚಾರದ ದೃಷ್ಟಿಯಿಂದು ಸುಳ್ಳು ಹೇಳುವುದಕ್ಕೆ ನಾವು ವಿರೋಧಿಸುತ್ತೇವೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಬಿಜೆಪಿ ನಗರ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ, ವಿಶ್ವನಾಥ ಕುಲಾಲ್ ಉಪಸ್ಥಿತರಿದ್ದರು.