VCET : ಕೌಶಲಾಭಿವೃದ್ಧಿ ಕೇಂದ್ರಕ್ಕೆ ಚಾಲನೆ

0


ಪುತ್ತೂರು: ಉತ್ಪಾದನೆ ಮತ್ತು ನಿರ್ಮಾಣ ಕ್ಷೇತ್ರಗಳು ಸಾಕಷ್ಟು ಚೇತರಿಸಿಕೊಂಡಿದ್ದು, ಈ ವಿಭಾಗಗಳಲ್ಲಿ ನುರಿತ ತಂತ್ರಜ್ಞರ ಕೊರತೆ ಕಾಡುತ್ತಿದೆ ಎಂದು ಮೇದಿನಿ ಟೆಕ್ನಾಲಜೀಸ್ ಬೆಂಗಳೂರು ಇದರ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಕಲ್ಲೂರ್ ಹೇಳಿದರು.


ಇವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಸಿವಿಲ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮತ್ತು ಬೆಂಗಳೂರಿನ ಮೇದಿನಿ ಟೆಕ್ನಾಲಜೀಸ್ ಲಿಮಿಟೆಡ್ ಇದರ ಸಂಯುಕ್ತ ಆಶ್ರಯದಲ್ಲಿ ನಿರ್ಮಿಸಲಾದ ಕೌಶಲಾಭಿವೃದ್ಧಿ ಕೇಂದ್ರಕ್ಕೆ ಚಾಲನೆ ನೀಡಿ ಮಾತಾಡಿದರು.

ಇಂಜಿನಿಯರಿಂಗ್ ಕೋರ್ಸನ್ನು ಮುಗಿಸಿ ಹೊರಬರುವ ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ಮತ್ತು ಉದ್ಯಮಕ್ಕೆ ಸಿದ್ದರಾಗುವಂತೆ ಮಾಡುವ ಮಹತ್ವಾಕಾಂಕ್ಷಿ ಯೋಜನೆಯೊಂದಿಗೆ ಇದನ್ನು ನಿರ್ಮಿಸಲಾಗಿದ್ದು, ಸುಧಾರಿತ ತಾಂತ್ರಿಕ ಕೌಶಲಗಳ ತರಬೇತಿ, ವಿನ್ಯಾಸ ತಂತ್ರಜ್ಞಾನದಲ್ಲಿ ಪರಿಣತಿಯನ್ನು ಪಡೆಯುವುದಕ್ಕಾಗಿ ಬೇಕಾದ ತರಬೇತಿಗಳು, ಸಿವಿಲ್ ಮತ್ತು ಮೆಕ್ಯಾನಿಕಲ್ ವಿಭಾಗಕ್ಕೆ ಸಂಬಂಧಿಸಿದಂತೆ ನೂತನ ಸಾಫ್ಟ್‌ವೇರ್‌ಗಳ ತರಬೇತಿಯನ್ನು ಇಲ್ಲಿ ನೀಡಲಾಗುತ್ತದೆ ಎಂದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್ ಮಾತನಾಡಿ ವಿದ್ಯಾರ್ಥಿಗಳು ಉದ್ಯೋಗವನ್ನೇ ಅರಸಿ ಹೋಗುವ ಬದಲು ತಮ್ಮದೇ ಆದ ಉದ್ಯಮವನ್ನು ಬೆಳೆಸಿಕೊಂಡು ಇತರರಿಗೆ ಉದ್ಯೋಗ ನೀಡುವ ಕಾಯಕದಲ್ಲಿ ನಿರತರಾಗಬೇಕು ಎಂದರು. ಶಿಕ್ಷಣದ ಜತೆಗೆ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಮತ್ತು ಸಮಾಜದ ಒಳಿತಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಬೇಕು ಎಂದು ಹೇಳಿದರು.


ಸಾಂಪ್ರದಾಯಿಕ ಕಟ್ಟಗಳ ಮೂಲಕ ಪುತ್ತೂರಿನಲ್ಲಿ ಮಳೆ ಕೊಯಿಲು ಈ ವಿಷಯದ ಬಗ್ಗೆ ತಯಾರಿಸಲಾದ ತಾಂತ್ರಿಕ ವರದಿಯನ್ನು ಈ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು.
ಮೆಕ್ಯಾನಿಕಲ್‌ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ.ಮನುಜೇಶ್.ಬಿ.ಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ ಸ್ವಾಗತಿಸಿ ಪ್ರಾಸ್ತಾವನೆಗೈದರು, ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಪ್ರೊ.ಪ್ರಶಾಂತ ವಂದಿಸಿದರು. ಪ್ರೊ.ಸುರೇಖ.ಟಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here