ಸಂತ ಫಿಲೋಮಿನಾ ಕಾಲೇಜಿನಲ್ಲಿ ಸ್ವಾಯತ್ತ ಸ್ಥಾನಮಾನದ ಉದ್ಘಾಟನೆ

0

ವಿಮರ್ಶಾತ್ಮಕ ಚಿಂತನೆ, ನಿರಂತರ ಕಲಿಕೆ, ಸಂವಹನ, ಅನ್ವೇಷಣೆಯ ಶಿಕ್ಷಣ ಬೇಕು- ಡಾ| ಪೀಟರ್ ಮಚಾದೋ

ಪುತ್ತೂರು: ವಿಮರ್ಶಾತ್ಮಕ ಚಿಂತನೆ, ಜೀವನ ಪರ್ಯಂತ ಕಲಿಕೆಯ ಬಗ್ಗೆ ಒಲವು, ಸಮರ್ಪಕ ಸಂವಹನ ಹಾಗೂ ಅವಿಷ್ಕಾರಕ್ಕೆ ಕಾರಣವಾಗುವಂತಹ ಶಿಕ್ಷಣ ದೊರೆತಲ್ಲಿ ಇತಿಹಾಸ ಸೃಷ್ಠಿಸಬಹುದು. ಇಂತಹ ಶಿಕ್ಷಣವನ್ನು ಫಿಲೋಮಿನಾ ವಿದ್ಯಾಸಂಸ್ಥೆ ನೀಡಲು ಮುಂದಾಗಬೇಕು ಎಂದು ಬೆಂಗಳೂರು ಮಹಾನಗರ ಮೆಟ್ರೊಪೊಲಿಟನ್ ಧರ್ಮಪ್ರಾಂತ್ಯದ ಆರ್ಚ್ ಬಿಷಪ್ ಡಾ| ಪೀಟರ್ ಮಚಾದೋರವರು ಕರೆ ನೀಡಿದರು. ಮಂಗಳೂರಿನ ಕ್ಯಾಥೊಲಿಕ್ ಶಿಕ್ಷಣ ಮಂಡಳಿಯ ಅಧಿನಕ್ಕೊಳಪಟ್ಟ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು ಕರ್ನಾಟಕ ಸರ್ಕಾರದ ಅನುಮೋದನೆಯೊಂದಿಗೆ, ಮಂಗಳೂರು ವಿಶ್ವವಿದ್ಯಾಲಯ ಮತ್ತು ಯುಜಿಸಿಯಿಂದ ಮಂಗಳೂರು ವಿಶ್ವವಿದ್ಯಾನಿಲಯದ ಅಧಿನಕ್ಕೊಳಪಟ್ಟ ಸ್ವಾಯತ್ತ ಕಾಲೇಜು ಎಂದು ಘೋಷಣೆಯಾದ ಹಿನ್ನೆಲೆಯಲ್ಲಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಸ್ವಾಯತ್ತ ಸ್ಥಾನಮಾನದ ಉದ್ಘಾಟನಾ ಸಮಾರಂಭವನ್ನು ದೀಪ ಬೆಳಗಿಸಿ ಅವರು ಉದ್ಘಾಟಿಸಿ ಆಶೀರ್ವಚನ ನೀಡಿ ಹೇಳಿದರು.

ಫಿಲೋಮಿನ ಎಂದರೆ ಶಕ್ತಿಯಾಗಿದೆ. ಇಲ್ಲಿ ಪುರುಷರು ಮತ್ತು ಮಹಿಳೆಯರು ಸೇರಿ ಶಕ್ತಿಯ ಸಂಚಯವಾಗಿದೆ. ಅಟೊ ಎಂದರೆ ತನ್ನಷ್ಟಕ್ಕೆ ಚಲಿಸುವುದು. ಫಿಲೋಮಿನಾ ಕಾಲೇಜು ಅಟೋನೊಮಸ್ ಪಡೆದುಕೊಂಡು ಸ್ವತಂತ್ರವಾಗಿ ಚಲಿಸಲು ಆರಂಭವಾಗಿದೆ ಎಂದ ಅವರು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಇಲ್ಲಿನ ಕಲಿಕೆ ಉಪಯೋಗವಾಗಲಿ. ಕಾಲೇಜಿಗೆ ಸಂಬಂಽಸಿದ ಎಲ್ಲರ ಮೇಲೂ ದೇವರ ಕೃಪೆಯಿರಲಿ ಎಂದು ಶುಭಹಾರೈಸಿದರು.


ಸಂಸ್ಕಾರ, ಸಜ್ಜನಿಕೆಯ ಬದುಕನ್ನು ನೀಡಿದ ಸಂಸ್ಥೆಯಾಗಿದೆ-ನಳಿನ್ ಕುಮಾರ್ ಕಟೀಲು:
ಸ್ವಾಯತ್ತ ಕಾಲೇಜಿನ ನೂತನ ಲಾಂಛನವನ್ನು ಹಾಗೂ ಪರಿಷ್ಕರಿಸಲಾದ ಕಾಲೇಜು ವೆಬ್‌ಸೈಟ್ ಅನಾವರಣಗೊಳಿಸಿದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ಇವತ್ತು ಐತಿಹಾಸಿಕ ದಿನವಾಗಿದ್ದು ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ದಿನವಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿಕ ಶಿಕ್ಷಣವನ್ನು ನೀಡಿದ ಕರಾವಳಿಯ ಹೆಮ್ಮೆಯ ಸಂಸ್ಥೆ ಸಂತ ಫಿಲೋಮಿನಾ. ಕಲಿಕೆಯಲ್ಲಿ ಮಾತ್ರವಲ್ಲದೆ ರಾಷ್ಟ್ರಕ್ಕೆ ಹಲವಾರು ಪ್ರಜ್ಞಾವಂತ ನಾಗರಿಕರನ್ನು, ಪ್ರತಿಭೆಗಳನ್ನು ನೀಡಿದ ಹೆಮ್ಮೆಯ ಸಂಸ್ಥೆಯಾಗಿದೆ. ಈ ಸಂಸ್ಥೆಯಲ್ಲಿ ಕಲಿತವರು ಇಂದು ಚಲನಚಿತ್ರ, ಇಂಜಿನಿಯರಿಂಗ್, ವೈದ್ಯಕೀಯ, ರಾಜಕೀಯ, ಸಚಿವರು, ಮುಖ್ಯಮಂತ್ರಿಗಳಾಗಿದ್ದಾರೆ ಇದು ಸಂಸ್ಥೆಯ ಕೊಡುಗೆಯಾಗಿದೆ. ನನಗೆ ವಿದ್ಯೆ ಅಲ್ಲದೆ ಸಂಸ್ಕಾರ, ಸ್ವಾಭಿಮಾನ, ಸಜ್ಜನಿಕೆಯ ಬದುಕನ್ನು ನೀಡಿದೆ. ನಾನೂ ಫಿಲೋಮಿನಾ ಕಾಲೇಜಿನ ಉತ್ಪನ್ನವಾಗಿದ್ದೇನೆ ಎಂದರು. ಬಿಷಪ್‌ರವರ ನೇತೃತ್ವದ ಕ್ರೈಸ್ತ ಸಂಸ್ಥೆಗಳು ವೈದ್ಯಕೀಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಕೊಡುಗೆಗಳನ್ನು ನೀಡುತ್ತಿವೆ. ಮುಂದಿನ ದಿನಗಳಲ್ಲಿ ಈ ಸ್ವಾಯತ್ತ ಸಂಸ್ಥೆಯು ವಿಶ್ವವಿದ್ಯಾನಿಲಯವಾಗಿ ಬೆಳೆಯಲಿ ಎಂದು ಹೇಳಿದ ಅವರು ಯಾವುದೇ ಫಲಾಪೇಕ್ಷೆಯಿಲ್ಲದೆ ಕರ್ತವ್ಯ ನಿರ್ವಹಿಸಲು ಸಂತ ಫಿಲೋಮಿನಾ ವಿದ್ಯಾಸಂಸ್ಥೆಯು ತಮಗೆ ಕಲಿಸಿದ ಜೀವನ ಪಾಠವನ್ನು ಸ್ಮರಿಸಿ ಸ್ವಾಯತ್ತ ಸ್ಥಾನಮಾನ ಗಳಿಸಿದುದಕ್ಕಾಗಿ ಅಭಿನಂದಿಸಿದರು.


ಉತ್ತಮ ನಾಗರಿಕರನ್ನಾಗಿಸುವ ಪಠ್ಯಕ್ರಮವನ್ನು ಅನುಷ್ಠಾನ ಮಾಡಬೇಕು- ಪ್ರೊ| ಪಿ.ಎಲ್ ಧರ್ಮ:
ಸ್ವಾಯತ್ತ ಕಾಲೇಜಿನಲ್ಲಿ ನೂತನವಾಗಿ ನಿರ್ಮಿಸಲಾದ ಬೋರ್ಡ್ ರೂಮ್, ಪರೀಕ್ಷಾಂಗ ವಿಭಾಗ, ಶೈಕ್ಷಣಿಕ ವಿಭಾಗ, ಹಣಕಾಸು ವಿಭಾಗ, ನವೀಕರಿಸಿದ ಫುಡ್ ಕೋರ್ಟ್ ಮತ್ತು ಎಂಸಿಎ ಪ್ರಯೋಗಾಲಯ ಸೌಲಭ್ಯಗಳನ್ನು ಉದ್ಘಾಟಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ| ಪಿ.ಎಲ್ ಧರ್ಮ ಮಾತನಾಡಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಹಾಗೂ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವ ನಂಬಿಕೆಯೊಂದಿಗೆ ಸ್ವಾಯತ್ತ ಸ್ಥಾನಮಾನಕ್ಕೆ ಸಮ್ಮತಿ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಜವಾಬ್ದಾರಿ ಸ್ವಾಯತ್ತ ಸಂಸ್ಥೆಗಳಿಗಿದೆ. ಫಿಲೋಮಿನಾ ಕಾಲೇಜು ಇನ್ನು ಮುಂದೆ ಸ್ವಾತಂತ್ರ್ಯ ಪಡೆದ ಹಕ್ಕಿಯಾಗಿದೆ. ನಿಮ್ಮನ್ನು ಬಾಹ್ಯವಾಗಿ ನಿಯಂತ್ರಿಸದ, ಪ್ರಶ್ನೆ ಮಾಡದ ಸ್ಥಿತಿಗೆ ಬಂದಿದ್ದೀರಿ. ಶಿಕ್ಷಕರನ್ನು ಉತ್ತಮವಾಗಿ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ವಿಮರ್ಶಾತ್ಮಕ ಚಿಂತನೆಯ ಶಿಕ್ಷಣ ನೀಡಬೇಕು ಎಂದರು. ಉದ್ಯೋಗಕ್ಷೇತ್ರದ ಬೇಡಿಕೆಗಳಿಗೆ ಅನುಗುಣವಾದ ಪಠ್ಯಕ್ರಮವನ್ನು ರಚಿಸುವುದು ಮಾತ್ರ ಸ್ವಾಯತ್ತ ಸಂಸ್ಥೆಯ ಜವಾಬ್ದಾರಿಯಲ್ಲ. ವಿದ್ಯಾರ್ಥಿಗಳಲ್ಲಿ ಕುತೂಹಲ ಸೃಷ್ಟಿಸಿ ಅವರನ್ನು ಉತ್ತಮ ನಾಗರಿಕರನ್ನಾಗಿಸುವ ಪಠ್ಯಕ್ರಮದ ಜವಾಬ್ದಾರಿ ಸ್ವಾಯತ್ತ ಸಂಸ್ಥೆಗಿದೆ. ನಮ್ಮ ಭಾಷೆಯನ್ನು ಪರಿಗಣಿಸುವ ಮೂಲಕ ಈ ದೇಶದ ವ್ಯವಸ್ಥೆಗೆ ಹೊಂದಿಕೊಳ್ಳುವ ಜವಾಬ್ದಾರಿಯನ್ನು ಕೊಡಬೇಕು. ಇಲ್ಲಿಯವರೆಗೆ ಸಂಸ್ಥೆ ಮಾಡಿಕೊಂಡು ಬಂದಿರುವ ಕೆಲಸಗಳನ್ನು ಮುಂದುವರೆಸಬೇಕು ಎಂದು ಹೇಳಿದರು.


ಫಿಲೋಮಿನಾ ಕಾಲೇಜು ವಿಶ್ವವಿದ್ಯಾನಿಲಯವಾಗಿ ಮೂಡಿಬರಲಿ -ಐವಾನ್ ಡಿಸೋಜ:
ಸಂಸ್ಥೆಗೆ ಸ್ವಾಯತ್ತ ಸ್ಥಾನಮಾನ ದೊರೆತ ಸಂದರ್ಭದ ಸವಿ ನೆನಪಿಗಾಗಿ ಸಿದ್ಧಪಡಿಸಿದ ಸ್ಮರಣ ಸಂಚಿಕೆ “ಫಿಲೋ ಜೆನೆಸಿಸ್”ನ್ನು ಬಿಡುಗಡೆಗೊಳಿಸಿದ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಮಾತನಾಡಿ ಹಳ್ಳಿಯಲ್ಲಿ ಸರಕಾರಿ ಶಾಲೆಯಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳು ದೇಶದ ಉನ್ನತ ಹುದ್ದೆಗಳನ್ನು ಅಲಂಕರಿಸಿರುವ ಹಲವಾರು ನಿದರ್ಶನಗಳಿವೆ. ಆದರೆ ಇಂದು ಆಂಗ್ಲ ಮಾಧ್ಯಮದ ವ್ಯಾಮೋಹದಿಂದ ಸರಕಾರಿ ಶಾಲೆಯಲ್ಲಿ ಶಿಕ್ಷಕರೂ ಇಲ್ಲ, ವಿದ್ಯಾರ್ಥಿಗಳೂ ಇಲ್ಲ. ಡೆಸ್ಕ್ ಬೆಂಚು ಮಾತ್ರ ಇದೆ. ಕ್ರೈಸ್ತ ಸಮುದಾಯದಿಂದ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸಮಾಜಕ್ಕೆ ನೀಡಲಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಕ್ರೈಸ್ತ ವಿದ್ಯಾಸಂಸ್ಥೆಗಳು ನೀಡಿದ ಕೊಡುಗೆ ಅಪಾರವಿದೆ. ಧರ್ಮಗುರುಗಳು ಒಂದು ಚರ್ಚ್ ನಿರ್ಮಿಸಿದರೆಂದಾದಲ್ಲಿ ಅದರ ಬಳಿಯಲ್ಲೊಂದು ಶಾಲೆಯನ್ನು ನಿರ್ಮಿಸಿ ಸಮಾಜದ ಎಲ್ಲಾ ವರ್ಗದ ಜನರಿಗೂ ಮೌಲ್ಯಾಧಾರಿತ ಶಿಕ್ಷಣಕ್ಕೆ ಅನುವು ಮಾಡಿಕೊಡುವುದು ಅವರ ಹಿರಿಮೆಯಾಗಿದೆ ಎಂದರು. ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಕಾರಣದಿಂದ ಹಾಗೂ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಸದಾ ಶ್ರಮಿಸುತ್ತಿರುವ ಸಂತ ಫಿಲೋಮಿನಾ ಕಾಲೇಜು ತನ್ನ ಅರ್ಹತೆಯ ಆಧಾರದ ಮೇಲೆಯೇ ಸ್ವಾಯತ್ತತೆಯನ್ನು ಪಡೆದಿದೆ. ವಿದ್ಯಾರ್ಥಿಗಳಿಗೆ ಸಮಾಜದ ಅವಶ್ಯಕತೆಗಳಿಗನುಗುಣವಾದ ಶಿಕ್ಷಣವನ್ನು ನೀಡುವ ಈ ಸ್ವಾಯತ್ತ ಸಂಸ್ಥೆಯು ನಂಬರ್ ವನ್ ಕಾಲೇಜು ಆಗಲಿ ಎಂದು ಹೇಳಿದ ಅವರು ಮುಂದಿನ ದಿನಗಳಲ್ಲಿ ಫಿಲೋಮಿನಾ ಕಾಲೇಜು ವಿಶ್ವವಿದ್ಯಾನಿಲಯವಾಗಲಿ ಎಂದರು.


ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ ದೊರಕಿರುವುದು ಸಂತಸವಾಗಿದೆ -ಕ್ಯಾ|ಬ್ರಿಜೇಶ್ ಚೌಟ:
ದ.ಕ. ಸಂಸದ ಕ್ಯಾ|ಬ್ರಿಜೇಶ್ ಚೌಟ ಮಾತನಾಡಿ‌, ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ಸಂತಸವಾಗುತ್ತಿದೆ. ಶೈಕ್ಷಣಿಕ ಶ್ರೇಷ್ಠತೆ, ಕ್ರೀಡೆ ಮತ್ತು ಸಾಂಸ್ಕೃತಿಕ ಸಾಧನೆಗಳ ಸಂಕೇತವಾಗಿರುವ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ ದೊರಕಿರುವುದು ಸಂತಸದ ಸಂಗತಿಯಾಗಿದೆ. ಹಲವು ದಶಕಗಳಿಂದ ಸಾವಿರಾರು ಯುವ ಮನಸ್ಸುಗಳಲ್ಲಿ ಜ್ಞಾನದ ಬೀಜ ಬಿತ್ತುತ್ತಿರುವ ಸಂತ ಫಿಲೋಮಿನಾ ಕಾಲೇಜು ಸ್ವಾಯತ್ತ ಸ್ಥಾನಮಾನ ಪಡೆದುದರೊಂದಿಗೆ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ, ಸೃಜನಶೀಲ ಚಿಂತನೆ, ಉದ್ಯಮಶೀಲತೆ, ನಾಯಕತ್ವ ಮತ್ತು ಸಂಶೋಧನೆ ಮಾಡಲು ದಾರಿದೀಪವಾಗಲಿ ಎಂದು ಹಾರೈಸಿದರು.


ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ನೀಡಿದ ಪುಣ್ಯಕ್ಷೇತ್ರವಾಗಿದೆ-ಅಶೋಕ್ ಕುಮಾರ್ ರೈ:
ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಇದು ನನ್ನ ಕ್ಷೇತ್ರದ ವಿದ್ಯಾಸಂಸ್ಥೆ ಹಾಗೂ ಪುತ್ತೂರಿನ ಶಿಕ್ಷಣ ಕ್ಷೇತ್ರದ ಹೆಮ್ಮೆಯಾಗಿದೆ. ಇಲ್ಲಿ ವಿದ್ಯಾಭ್ಯಾಸ ಮಾಡಿದವರು ಸಮಾಜದ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಎಷ್ಟೋ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ನೀಡಿದ ಪುಣ್ಯಕ್ಷೇತ್ರವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆಗಳನ್ನು ನೀಡಿದ ಈ ಶಿಕ್ಷಣಸಂಸ್ಥೆ ಇನ್ನಷ್ಟು ಎತ್ತರಕ್ಕೇರಲಿ ಎಂದರು. ಹೆತ್ತವರು ನಿಮ್ಮನ್ನು ಕಷ್ಟಪಟ್ಟು ಓದಿಸುತ್ತಾರೆ. ಅವರ ಸೇವೆಯನ್ನೂ ನೀವು ಮಾಡಬೇಕು. ಕಲಿತು ಉತ್ತಮ ಉದ್ಯೋಗವನ್ನು ಪಡೆದು ಆರ್ಥಿಕವಾಗಿ ಮುಂದೆ ಬರಬೇಕು. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡಿದರೆ ಮಾತ್ರ ಸಾಲದು ಅವರಿಗೆ ಉದ್ಯೋಗಾವಕಾಶಗಳನ್ನು ನೀಡುವ ಕೆಲಸಗಳಾಗಬೇಕು ಎಂದು ಹೇಳಿ ಸ್ವಾಯತ್ತ ಸಂಸ್ಥೆಯ ಕೆಲಸಕಾರ್ಯಗಳಿಗೆ ಶುಭಹಾರೈಸಿದರು.


ಉದ್ಯಮಿ, ಸಂಶೋಧಕರನ್ನು ಸಮಾಜಕ್ಕೆ ನೀಡಲಿ-ಡಾ| ಕವಿತಾ ಕೆ.ಆರ್:
ಮಂಗಳೂರು ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕಿ ಡಾ| ಕವಿತಾ ಕೆ.ಆರ್ ಮಾತನಾಡಿ, ಕೇವಲ ಉದ್ಯೋಗಕ್ಷೇತ್ರದಲ್ಲಿ ಯಶಸ್ಸು ಗಳಿಸುವಂತಹ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುವುದು ಮಾತ್ರವಲ್ಲ. ಯುವ ಉದ್ಯಮಿಗಳನ್ನು ಹಾಗೂ ಸಂಶೋಧಕರನ್ನು ನೀಡುವ ಕಾರ್ಯವನ್ನು ಪೀಲೋಮಿನಾ ವಿದ್ಯಾಸಂಸ್ಥೆ ಮಾಡಲಿ ಎಂದು ಹೇಳಿ ಸ್ವಾಯತ್ತ ಸ್ಥಾನಮಾನ ಪಡೆದುದಕ್ಕಾಗಿ ಶುಭ ಹಾರೈಸಿದರು.


ಗುರಿಯನ್ನು ಸಾಽಸಲು ನಿರಂತರ ಪರಿಶ್ರಮ ಪಡಬೇಕು-ಸ್ಟೆಲ್ಲಾ ವರ್ಗೀಸ್:
ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಮಾತನಾಡಿ, ವಿದ್ಯಾರ್ಥಿಗಳು ಸ್ಪಷ್ಟವಾದ ಗುರಿ, ಕನಸನ್ನು ಇಟ್ಟುಕೊಳ್ಳಬೇಕು. ತಮ್ಮ ಗುರಿ ಕನಸುಗಳಲ್ಲಿ ನಂಬಿಕೆ ಹೊಂದಿರಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಧಿಸಬಹುದಾದಂತಹ ಗುರಿಯನ್ನು ಹೊಂದಲು ನಿರಂತರ ಪರಿಶ್ರಮ ಪಡಬೇಕು. ನಿಂದಕರನ್ನು ನಿರ್ಲಕ್ಷಿಸಿ ಪ್ರೇರಕರನ್ನು ಅನುಸರಿಸಬೇಕು. ದೇವರಲ್ಲಿ ಅಚಲವಾದ ನಂಬಿಕೆ ಇಟ್ಟುಕೊಳ್ಳಿ. ಉತ್ತಮ ಜೀವನ ಮೌಲ್ಯಗಳು, ಭಾವನೆಗಳಲ್ಲಿ ಸಮತೋಲನವನ್ನು ಸಾಧಿಸಿ, ಹೆತ್ತವರ ತ್ಯಾಗವನ್ನು ಕಡೆಗಣಿಸದೆ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡುವಂತಾಗಬೇಕು ಎಂದು ಹೇಳಿದರು.


ಫಿಲೋಮಿನಾ ಸಂಸ್ಥೆ ಉಜ್ವಲವಾಗಿ ಪ್ರಕಾಶಿಸಲಿ-ವಂ| ಆಂಟನಿ ಮೈಕೆಲ್ ಶೆರಾ:
ಕಾಲೇಜು ಸ್ವಾಯತ್ತತೆಯೆಡೆಗೆ ಮುನ್ನಡೆಯುವ ಕಾರ್ಯಕ್ಕೆ ಚಾಲನೆ ನೀಡಿದ್ದ ಕ್ಯಾಥೊಲಿಕ್ ಶಿಕ್ಷಣಮಂಡಳಿಯ ನಿಕಟಪೂರ್ವ ಕಾರ್ಯದರ್ಶಿ ವಂ| ಆಂಟನಿ ಮೈಕೆಲ್ ಶೆರಾ ಮಾತನಾಡಿ ಕನಸು ನನಸಾದ ಸಾರ್ಥಕಭಾವದಿಂದ ಇಲ್ಲಿ ನಿಂತಿದ್ದೇನೆ. ಫಿಲೋಮಿನಾ ಸಂಸ್ಥೆಯು ಈ ಸ್ಥಾನಮಾನ ಗಳಿಸಲು ಹಗಲಿರುಳು ಶ್ರಮಿಸಿದ ಮಹನೀಯರಿದ್ದಾರೆ, ಅವರೆಲ್ಲರಿಗೂ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದರು. ಹಿಂದೆಯೂ ಸಂತ ಫಿಲೋಮಿನಾ ಪ್ರಕಾಶಿಸುತ್ತಿತ್ತು. ಮುಂದೆ ಇನ್ನಷ್ಟು ಉಜ್ವಲವಾಗಿ ಪ್ರಕಾಶಿಸಲಿ ಎಂದು ಹೇಳಿದರು.


ಸ್ವಾಯತ್ತ ಸಂಸ್ಥೆಯಲ್ಲಿ ಪ್ರತಿಯೋರ್ವರೂ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕು-ಡಾ|ಪೀಟರ್ ಪಾವ್ಲ್ ಸಲ್ದಾನ :
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ|ಪೀಟರ್ ಪಾವ್ಲ್ ಸಲ್ದಾನ ಮಾತನಾಡಿ ವಿದ್ಯೆ ಇದ್ದರೆ ಮಾತ್ರ ಸಾಲದು ವಿನಯವೂ ಇರಬೇಕು. ನೀವು ಜೀವನದಲ್ಲಿ ಉನ್ನತ ಹುದೆಯನ್ನು ಅಲಂಕರಿಸಿದ್ದರೂ ಮಾನವೀಯ ಮೌಲ್ಯಗಳನ್ನು ಮರೆಯಬಾರದು. ಎಲ್ಲಾ ರೀತಿಯ ಜನರನ್ನೂ ಪ್ರೀತಿಸುವ ಹೃದಯ ವೈಶಾಲ್ಯವಿರಬೇಕು. ನಿಮ್ಮೊಂದಿಗೆ ಇತರರನ್ನೂ ಬೆಳೆಸುವ ಒಳ್ಳೆಯ ಗುಣವಿರಬೇಕು ಎಂದರು. ಸ್ವಾಯತ್ತ ಸಂಸ್ಥೆಯಲ್ಲಿ ಪ್ರತಿಯೋರ್ವನೂ ತನ್ನ ಜವಾಬ್ದಾರಿಯನ್ನು ಅರಿತು ಕರ್ತವ್ಯ ನಿರ್ವಹಿಸಬೇಕು. ಸ್ವಾಯತ್ತ ಸ್ಥಾನಮಾನವು ಸಂಸ್ಥೆಗೆ ಸೇರಿದ ಹಲವರ ಕನಸು. ಇದನ್ನು ನನಸಾಗಿಸಲು ಶ್ರಮಿಸಿದ ಪ್ರತಿಯೋರ್ವರಿಗೂ ಅಭಿನಂದಿಸುತ್ತಿದ್ದೇನೆ ಎಂದು ಹೇಳಿದ ಅವರು ಸ್ವಾಯತ್ತ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳಿಗೂ ವಿದ್ಯಾರ್ಥಿಗಳಿಗೂ ಆಶೀರ್ವದಿಸಿದರು.


ಗೌರವಾರ್ಪಣೆ:
ಸಂಸ್ಥೆಯು ಸ್ವಾಯತ್ತ ಸ್ಥಾನಮಾನ ಗಳಿಸುವ ಸಂದರ್ಭದಲ್ಲಿ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡಿದ ಭಾನು ಪ್ರಕಾಶ್ ಹಾಗೂ ಅಪೇಕ್ಷಾರವರುಗಳ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಸಂಸ್ಥೆಯ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕ್ಯಾಥೊಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಹಾಗೂ ಕಾಲೇಜಿನ ಸಂಚಾಲಕರಾಗಿದ್ದ ವಂ| ಜೆರಾಲ್ಡ್ ಡಿಸೋಜ, ಪ್ರಾಂಶುಪಾಲರುಗಳಾಗಿದ್ದ ವಂ| ಫ್ರಾನ್ಸಿಸ್ ಕ್ಸೇವಿಯರ್ ಗೋಮ್ಸ್, ಮತ್ತು ಪ್ರೊ| ಲೊಯೋ ನೊರೋನ್ಹಾರವರನ್ನು ಶಾಲು, ಹೂಗುಚ್ಚ, ಸ್ಮರಣಿಕೆ ನೀಡಿ ಗೌರವಿಸಲಾಯಿತು.


ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರುಗಳಾದ ಮೊನ್ಸಿಂಞೋರ್ ಮ್ಯಾಕ್ಸಿಮ್ ನೊರೊನ್ಹಾ, ಮಂಗಳೂರು ಕೆಥೋಲಿಕ್ ಬೋರ್ಡ್ ಆಫ್ ಎಜುಕೇಶನ್ ಕಾರ್ಯದರ್ಶಿ ಡಾ|ಪ್ರವೀಣ್ ಲಿಯೋ ಲಸ್ರಾದೋ, ಮಾಯ್ ದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಪ್ರತಿಮಾ ಹೆಗ್ಡೆ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಎ.ಎಂ ಅಬ್ದುಲ್ ಕುಂಞಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಅತಿಥಿ ಗಣ್ಯರಿಗೆ ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆಂಟನಿ ಪ್ರಕಾಶ್ ಮೊಂತೇರೊರವರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಕಾಲೇಜಿನ ಪ್ರದರ್ಶನಕಲಾ ಘಟಕದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮಾಯ್ ದೆ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ| ಲಾರೆನ್ಸ್ ಮಸ್ಕರೇನಸ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆಂಟನಿ ಪ್ರಕಾಶ್ ಮೊಂತೇರೊ ವಂದಿಸಿದರು. ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಭಾರತಿ ಎಸ್. ರೈ ಹಾಗೂ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ| ಮೈತ್ರಿ ಭಟ್ ಕಾರ್ಯಕ್ರಮ ನಿರೂಪಿಸಿದರು.


ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು, ಧರ್ಮಗುರುಗಳು, ಧರ್ಮಭಗಿನಿಯರು, ಉಪನ್ಯಾಸಕರುಗಳು, ಸಿಬ್ದಂದಿ ವರ್ಗ, ಹೆತ್ತವರು, ಪೋಷಕರು, ಹಿರಿಯ ವಿದ್ಯಾರ್ಥಿಗಳು, ವಿಶ್ರಾಂತ ಸಿಬ್ಬಂದಿಗಳು, ವಿದ್ಯಾಭಿಮಾನಿಗಳು, ಹಿತೈಷಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮಧ್ಯಾಹ್ನ ಭೋಜನ ವ್ಯವಸ್ಥೆ ಏರ್ಪಡಿಸಲಾಗಿತ್ತು.
ಅಪರಾಹ್ನ ವಿದ್ಯಾರ್ಥಿಗಳಿಂದ, ಉಪನ್ಯಾಸಕರಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು. ಸಂಜೆ 6ರಿಂದ ಝೀ ಸರಿಗಮಪಾ, ವಾಯ್ಸ್ ಆಫ್ ಇಂಡಿಯಾ ಖ್ಯಾತಿಯ ಹಿನ್ನೆಲೆ ಗಾಯಕ ಜಸ್ಕರಣ್ ಸಿಂಗ್, ಝೀ ಸರಿಗಮಪಾ ಖ್ಯಾತಿಯ ಸಮನ್ವಿ ರೈ, ಕಲರ್ಸ್ ಕನ್ನಡ ಎದೆತುಂಬಿ ಹಾಡಿದೆನು ಖ್ಯಾತಿಯ ನಾದಿರಾ ಬಾನು ಹಾಗೂ ಕಲಾವಿದರಾದ ಸುಪ್ರೀತ್ ಸಪಲಿಗ ಮತ್ತು ಮಲ್ಲಿಕಾ ಮಟ್ಟಿ ಜೋಗಿ ಇವರುಗಳಿಂದ ವಿಶೇಷ ಕಾರ್ಯಕ್ರಮ “ಅಟಾನಮಿ ಇವ್ ಗಾಲಾ” ನಡೆಯಿತು.

ಕಾರ್ಯಕ್ರಮದ ವಿಶೇಷತೆಗಳು
ಎನ್‌ಸಿಸಿ ಕೆಡೆಟ್‌ಗಳಿಂದ ಅತಿಥಿ ಗಣ್ಯರಿಗೆ ಗೌರವ ರಕ್ಷೆ
ಚೆಂಡೆ ವಾದ್ಯಗಳ ಮೂಲಕ
ಮೆರವಣಿಗೆಯಲ್ಲಿ ಅತಿಥಿ ಗಣ್ಯರ ಆಗಮನ
ಪೂರ್ಣಕುಂಭ ಕಲಶದೊಂದಿಗೆ
ಅತಿಥಿ ಗಣ್ಯರಿಗೆ ಸಾಂಪ್ರದಾಯಿಕ ಸ್ವಾಗತ
ಕಾಲೇಜಿನ ಯಕ್ಷಕಲಾ ಕೇಂದ್ರದ
ವಿದ್ಯಾರ್ಥಿಗಳಿಂದ ಯಕ್ಷನೃತ್ಯದಿಂದ ಸ್ವಾಗತ
ರಿಮೋಟ್ ಮೂಲಕ ಲಾಂಛನ, ವೆಬ್‌ಸೈಟ್,
ವಿವಿಧ ಸೌಲಭ್ಯಗಳ ಉದ್ಘಾಟನೆ
ಸ್ಮರಣ ಸಂಚಿಕೆ “ಫಿಲೋ ಜೆನೆಸಿಸ್” ಬಿಡುಗಡೆ

LEAVE A REPLY

Please enter your comment!
Please enter your name here