*ರಾಷ್ಟ್ರೀಯತೆ, ಯುವ ಸಮೂಹ, ನಾಯಕತ್ವ ರಾಷ್ಟ್ರದ ಶಕ್ತಿ -ಕ್ಯಾ| ಬ್ರಿಜೇಶ್ ಚೌಟ
*ಪ್ರಜಾಪ್ರಭುತ್ವ ರೀತಿಯಲ್ಲಿ ಕೆಲಸ ಮಾಡುವ ಸಂಸ್ಥೆ -ಡಾ.ಪ್ರಭಾಕರ್ ಭಟ್ ಕಲ್ಲಡ್ಕ
ಪುತ್ತೂರು:ಈ ರಾಷ್ಟ್ರದ ಸ್ಥಾನ-ಮಾನ ಅನಾವರಣವಾಗಬೇಕಾದರೆ ಈ ರಾಷ್ಟ್ರ ಯಾವ ಸ್ಥಾನಮಾನದಲ್ಲಿ ನಿಲ್ಲಬೇಕು ಎಂಬುದರಲ್ಲಿ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯ.ಹಾಗಾಗಿ ರಾಷ್ಟ್ರೀಯತೆ ಮತ್ತು ನಮ್ಮ ಯುವ ಸಮೂಹವನ್ನು ಸರಿಯಾಗಿ ಬಳಸಿಕೊಳ್ಳಬೇಕು.ಯುವ ಸಮೂಹ ಕೀಳರಿಮೆ ಮನೋಭಾವದಿಂದ ಹೊರಬರಬೇಕು ಮತ್ತು ನಾಯಕತ್ವ ಬೆಳೆಸಿಕೊಳ್ಳಬೇಕೆಂದು ದ.ಕ. ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು ಹೇಳಿದರು.
ವಿವೇಕಾನಂದ ಕಾಲೇಜಿನ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ(ಸ್ವಾಯತ್ತ)ದಲ್ಲಿ ಮಾ.22ರಂದು ನಡೆದ ಸ್ನಾತಕೋತ್ತರ ವಿಭಾಗದ ದಶಮಾನೋತ್ಸವದ ಸಂಭ್ರಮಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.ಕೀರ್ತಿಶೇಷ ಉರಿಮಜಲು ರಾಮ ಭಟ್ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಿತು.ರಾಷ್ಟ್ರೀಯತೆ ಮತ್ತು ನಮ್ಮ ಯುವ ಸಮೂಹವನ್ನು ನಾವು ಸರಿಯಾಗಿ ಬಳಸಿಕೊಳ್ಳದಿದ್ದರೆ, ಶೆ.60 ಯುವ ಜನತೆ ಇರುವ ನಮ್ಮ ದೇಶವನ್ನು ಅಮೃತ ಕಾಲ ಎಂದು ಕರೆಯುವುದು ವಿಫಲವಾಗಲಿದೆ.ಪ್ರಧಾನ ಮಂತ್ರಿಗಳು ಮುಂದಿನ 25 ವರ್ಷ ಭಾರತದ ಅಮೃತ ಕಾಲ ಎಂದು ಕರೆಯುತ್ತಾರೆ.ನಮ್ಮಲ್ಲಿ ಶೇ.65 ಮಂದಿ 35 ವರ್ಷದ ತರುಣರು ಇದ್ದಾರೆ ಮತ್ತು ಭಾರತದ ಸಾಂಸ್ಕೃತಿಕ ಪರಂಪರೆ ಭಾರತದ ಅಮೃತಕಾಲವಾಗಿದೆ.ಆದರೆ ಭಾರತದಲ್ಲಿ ಇನ್ನೂ ಕೂಡಾ ಕೀಳರಿಮೆಯ ಸಮಸ್ಯೆ ಬಿಟ್ಟಿಲ್ಲ.ಮೊದಲು ಯುವ ಸಮೂಹ ಕೀಳರಿಮೆಯ ಮನೋಭಾವ ಬದಲಾಯಿಸಬೇಕು ಮತ್ತು ನಾಯಕತ್ವ ಬೆಳೆಸಿಕೊಳ್ಳಬೇಕು ಎಂದು ಹೇಳಿದ ಸಂಸದರು, ನಾನು ಕಾರ್ಯನಿರ್ವಹಿಸುತ್ತಿದ್ದ ಸೇನೆಯ ಕ್ಷೇತ್ರದಲ್ಲಿ ನಮಗೆ ಮುಖ್ಯಸ್ಥರಾಗಿದ್ದ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್‌ಶಾ ಅವರು ಕೂಡಾ ದೇಶದ ಸಾಮರ್ಥ್ಯವನ್ನು ನಾಯಕತ್ವದ ಮೂಲಕ ತಿಳಿಸಬೇಕೆಂದು ಹೇಳುತ್ತಿದ್ದರು.ಇದನ್ನು ನಾವು ಅರ್ಥ ಮಾಡಿಕೊಂಡರೆ ವಿಶ್ವದ ಯಾವುದೇ ಶಕ್ತಿಗೂ ಭಾರತವನ್ನು ತಡೆಯಲು ಸಾಧ್ಯವಿಲ್ಲ.ಹಾಗಾಗಿ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಅರ್ಥ ಮಾಡಿ.ಅದಕ್ಕೆ ಅನುಗುಣವಾಗಿ ಕೆಲಸ ಮಾಡಿ, ನಾವು ಕೀಳು ಎಂಬ ಮನೋಭಾವನೆ ಬಿಟ್ಟು ಬಿಡಿ ಎಂದು ಕರೆ ನೀಡಿ,ಶುಭಹಾರೈಸಿದರು.
ಪ್ರಜಾಪ್ರಭುತ್ವ ರೀತಿಯಲ್ಲಿ ಕೆಲಸ ಮಾಡುವ ಸಂಸ್ಥೆ:
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಷ್ಟ್ರತ್ವದ ಹಿತ ಚಿಂತನೆಯ ಪರಿಕಲ್ಪನೆಯನ್ನು ಇಟ್ಟುಕೊಂಡು ವಿವೇಕಾನಂದ ವಿದ್ಯಾಸಂಸ್ಥೆಯು ಪ್ರಾರಂಭವಾಯಿತು.ಸಂಸ್ಥೆ 60 ವರ್ಷದ ಯಾತ್ರೆಯಲ್ಲಿ ರಾಷ್ಟ್ರೀಯ ಚಿಂತನೆಯನ್ನು ಮುಂದಿಟ್ಟು ಬೆಳೆದಿದೆ.ಆದರೆ ಸುಮ್ಮನೆ 60 ವರ್ಷ ದಾಟಿಲ್ಲ.ಇದರ ಬೀಜ ಬಿತ್ತಿದ್ದೇ ದೊಡ್ಡ ಸಾಧನೆ.ಅನೇಕ ಶಿಕ್ಷಣ ಸಂಸ್ಥೆಗಳು ವರ್ಷವರ್ಷ ಪ್ರಾರಂಭ ಆಗುತ್ತಿವೆ.ಆದರೆ ಈ ಶಿಕ್ಷಣ ಸಂಸ್ಥೆ ಒಂದು ನಿರ್ದಿಷ್ಟವಾದ ಉದ್ದೇಶ, ಗುರಿಯನ್ನು ಇಟ್ಟುಕೊಂಡು ಆರಂಭ ಆಗಿರುವುದು ಎಂದರು.ಹಿಂದೆ ಇಲ್ಲಿನ ಕಾಲೇಜೊಂದರಲ್ಲಿ ಹಿಂದು ಹುಡುಗಿಯರು ತಿಲಕ ಧರಿಸಬಾರದು, ಬಳೆ ಹಾಕಬಾರದು, ಹೂ ಮುಡಿಯಬಾರದು ಎಂದು ಹೇಳಿ, ನಮ್ಮ ಸಂಸ್ಕೃತಿಯನ್ನು ವಿರೋಧಿಸುತ್ತಿದ್ದ ಹಿನ್ನೆಲೆಯಲ್ಲಿ ಅಲ್ಲಿದ್ದ ವಿದ್ಯಾರ್ಥಿಗಳು, ಊರಿನವರು ದೊಡ್ಡ ಹೋರಾಟ ಮಾಡಿದ್ದ ಸಂದರ್ಭದಲ್ಲಿ ಇಲ್ಲಿನ ಹಿರಿಯರಿಗೆ ಅನಿಸಿದಂತೆ, ನಮ್ಮ ಚಿಂತನೆಯಂತೆ ಈ ದೇಶದ ಮೂಲ ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ದಾಟಿಸುವ ಕೆಲಸ ಮಾಡುವ ಉದ್ದೇಶದಿಂದ ಸಂಸ್ಥೆ ಪ್ರಾರಂಭ ಆಯಿತು.ಆದಾದ ಕಳೆದ 60 ವರ್ಷಗಳಲ್ಲಿ ಆ ದಿಕ್ಕಿನಲ್ಲೇ ಕೆಲಸ ಮಾಡುತ್ತಾ ಇದೆ. ಇಂದಿರಾಗಾಂಧಿ ಇರುವ ಸಂದರ್ಭ ಆಗಿರುವ ತುರ್ತುಪರಿಸ್ಥಿತಿಯ ಹೋರಾಟ, ಅದಾದ ಬಳಿಕ ರಾಮಜನ್ಮ ಭೂಮಿಯ ಹೋರಾಟದಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಲಕ ಅನೇಕ ರಾಷ್ಟ್ರೀಯ ಚಿಂತನೆಯ ಹೋರಾಟ ಮಾಡಲಾಗುತ್ತಿದೆ.ಇದಲ್ಲದೆ ಇವತ್ತು ಗ್ರಾಮ ವಿಕಾಸ ಮಾಡುವ ಉದ್ದೇಶದಿಂದ 33 ಗ್ರಾಮಗಳಲ್ಲಿ ಗ್ರಾಮ ವಿಕಾಸ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ.ಕೊರೋನಾ ಬಂದ ಸಂದರ್ಭ ಉದ್ಯೋಗ ಮಾಹಿತಿ ಶಿಬಿರ ಮಾಡಲಾಯಿತು,ಹೀಗೆ ನಮ್ಮ ಸಂಸ್ಥೆ ಪ್ರಜಾಪ್ರಭುತ್ವ ರೀತಿಯಲ್ಲಿ ಕೆಲಸ ಮಾಡುತ್ತಿದೆ.ಇದು ಜಾತಿ ಕುಟುಂಬ ಆಧಾರಿತ ಸಂಸ್ಥೆಯಲ್ಲ ಎಂದರು.

ಮುಂದಿನ ದಿನಗಳಲ್ಲಿ ನಾಲ್ಕೈದು ಸ್ನಾತಕೋತ್ತರ ಕೋರ್ಸ್ ಆರಂಭ:
ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್ ಅವರು ಮಾತನಾಡಿ ಕಳೆದ ಒಂದು ವರ್ಷದಿಂದ ಸಂಸ್ಥೆಯ ದಶಮಾನೋತ್ಸವ ಕಾರ್ಯಕ್ರಮ ಬೇರೆ ಬೇರೆ ರೀತಿಯಲ್ಲಿ ಮಾಡಿಕೊಂಡು ವಿವೇಕ ಸ್ಮತಿ ಮಾಡಿಕೊಂಡಿದ್ದೇವೆ.ಸ್ನಾತಕೋತ್ತರ ಅಧ್ಯಯನ ಕೇಂದ್ರ ಮೊದಲು ಎಂ.ಕಾಂ.ನಿಂದ ಆರಂಭಗೊಂಡಿತು.ಮುಂದಿನ ದಿನ ಇನ್ನೂ ನಾಲ್ಕೈದು ಸ್ನಾತಕೋತ್ತರ ಕೋರ್ಸ್ ಆರಂಭಗೊಳ್ಳಲಿದೆ ಎಂದರು.
ಸಾಧಕರಿಗೆ ಸನ್ಮಾನ:
ಹಿರಿಯ ನ್ಯಾಯವಾದಿ ಎಂ.ರಾಮಮೋಹನ್ ರಾವ್, ಸಾಮಾಜಿಕ ಸೇವೆಯಲ್ಲಿ ಪಾಲ್ಗೊಳ್ಳುತ್ತಿರುವ ಡಾ.ಮೋಹನ್ ಕುಮಾರ್ ವೈ, ಶಿಕ್ಷಣ ಕ್ಷೇತ್ರದಲ್ಲಿ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಡಾ.ಚಂದ್ರಶೇಖರ್ ದಾಮ್ಲೆ, ಉದ್ಯಮ ಮತ್ತು ವ್ಯವಹಾರದಲ್ಲಿ ಪ್ರಸಿದ್ದಿ ಪಡೆದಿರುವ ಶಂಕರ್ ಗ್ರೂಪ್ಸ್‌ನ ಎಂ.ಡಿ.ಸತ್ಯಶಂಕರ್, ಜನಪದ ವಿಭಾಗದಲ್ಲಿ ಹೆಚ್ಚು ಸೇವೆ ಮಾಡುತ್ತಿರುವ ಡಾ|ರವೀಶ್ ಪಡುಮಲೆ, ಕೃಷಿ ವಿಭಾಗದಲ್ಲಿ ದೇವಿಪ್ರಸಾದ್ ಕಡಮಜೆ, ಮಳೆ ದಾಖಲೀಕರಣ ಮಾಡುತ್ತಿರುವ ಪಿ.ಜಿಎಸ್.ಎನ್ ಪ್ರಸಾದ್, ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆಗೈದ ಗೋವಿಂದ ನಾಯಕ್ ಪಾಲೆಚ್ಚಾರು ಅವರನ್ನು ಸನ್ಮಾನಿಸಲಾಯಿತು.ವೈದ್ಯಕೀಯ ಮತ್ತು ಸಮಾಜ ಸೆವೆಯಲ್ಲಿ ತೊಡಗಿಸಿಕೊಂಡಿರುವ ಡಾ.ಗೌರಿ ಪೈ ಅವರು ಅನಾರೋಗ್ಯದ ಕಾರಣದಿಂದ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ಮಾ.23ರಂದು ಅವರನ್ನು ಅವರ ಮನೆಯಲ್ಲಿ ಸನ್ಮಾನಿಸುವ ಕುರಿತು ಸಭೆಯಲ್ಲಿ ತಿಳಿಸಲಾಯಿತು.ಧಾರ್ಮಿಕ ಮತ್ತು ಸಮಾಜ ಸೇವೆಗಾಗಿ ಸನ್ಮಾನಿತರಾಗಬೇಕಿದ್ದ ವೇ.ಮೂ ಕಶೆಕೋಡಿ ಸೂರ್ಯನಾರಾಯಣ ಭಟ್ ಅವರು ಕೂಡಾ ಅನ್ಯ ಕಾರ್ಯದ ನಿಮಿತ್ತ ಗೈರಾಗಿದ್ದರು.ಕಾಲೇಜಿನ ಪರೀಕ್ಷಾಂಗ ಕುಲಸಚಿವ ಮತ್ತು ಸ್ನಾತಕೋತ್ತರ ವಿಭಾಗದ ನಿರ್ದೇಶಕ ಡಾ| ಶ್ರೀಧರ್ ಹೆಚ್.ಜಿ ಮತ್ತು ಮನಮೋಹನ್ ಅವರು ಸನ್ಮಾನಿತರನ್ನು ಪರಿಚಯಿಸಿದರು.
ಸನ್ಮಾನಿತ ಹಿರಿಯ ನ್ಯಾಯವಾದಿ ರಾಮ್‌ಮೋಹನ್ ರಾವ್ ಅವರು ಮಾತನಾಡಿ, ಹಲವಾರು ಸಮಸ್ಯೆ ಬಂದಾಗ ಜನಸಾಮಾನ್ಯರಿಗೆ ವಕೀಲರ ನೆರವು ಬೇಕಾಗುತ್ತದೆ.ವಕೀಲರು ಜನಸಾಮಾನ್ಯರಿಗೆ ಸರಿಯಾದ ಮಾರ್ಗದರ್ಶನ ಕೊಟ್ಟಲ್ಲಿ ನನ್ನ ಪ್ರಕಾರ ಕೋರ್ಟ್‌ನ ಅರ್ಧಕ್ಕರ್ಧ ವ್ಯಾಜ್ಯಗಳು ಕಡಿಮೆ ಆಗಬಹುದು ಎಂದರು.ಸನ್ಮಾನಿತರಾದ ಖ್ಯಾತ ಉದ್ಯಮಿ ಸತ್ಯಶಂಕರ್ ಅವರು ಮಾತನಾಡಿ ವ್ಯವಹಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ತಾಳ್ಮೆ ಇರಬೇಕು.ಸೋಲನ್ನು ಸರಿಪಡಿಸುವುದು ಯಶಸ್ವಿಗೆ ಕಾರಣವಾಗಬಹುದು.ಅದೇ ರೀತಿ ವ್ಯವಹಾರ ಉದ್ದಿಮೆ ಕಾಲಕ್ಕೆ ತಕ್ಕಂತೆ ಬದಲಾವಣೆ ಆಗುತ್ತಿರಬೇಕೆಂದರು.
‘ವಿವೇಕ ಸ್ಮೃತಿ-ದಕ್ಷ ದೀಪಿಕ’ ಸ್ಮರಣ ಸಂಚಿಕೆ ಬಿಡುಗಡೆ:
ಕಾಲೇಜಿನ ದಶಮಾನೋತ್ಸವದ ಅಂಗವಾಗಿ ನಡೆದ ವಿವೇಕ ಸ್ಮೃತಿ ಕಾರ್ಯಕ್ರಮದ ಕುರಿತ ಸ್ಮರಣ ಸಂಚಿಕೆ ವಿವೇಕ ಸ್ಮೃತಿ-ದಕ್ಷ ದೀಪಿಕ ಪುಸ್ತಕವನ್ನು ಸಂಸದ ಕ್ಯಾ| ಬ್ರಿಜೇಶ್ ಚೌಟ ಬಿಡುಗಡೆಗೊಳಿಸಿದರು.ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ|ಕೆ.ಎಂ.ಕೃಷ್ಣ ಭಟ್, ಸ್ನಾತಕೋತ್ತರ ವಿಭಾಗದ ಡಾ|ವಿಜಯ ಸರಸ್ವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶ್ರೀಲಕ್ಷ್ಮೀ ಮತ್ತು ಬಳಗ ಪ್ರಾರ್ಥಿಸಿದರು.ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಶ್ರೀಪತಿ ಕಲ್ಲೂರಾಯ ಸ್ವಾಗತಿಸಿ, ಕಾಲೇಜಿನ ಪ್ರಾಂಶುಪಾಲ ಪ್ರೊ|ವಿಷ್ಣು ಗಣಪತಿ ಭಟ್ ವಂದಿಸಿ, ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕಿ ಪ್ರೊ|ಲಕ್ಷ್ಮೀ ಭಟ್ ಕಾರ್ಯಕ್ರಮ ನಿರೂಪಿಸಿದರು.
ವಿಚಾರಗೋಷ್ಠಿ:
ಸಭಾ ಕಾರ್ಯಕ್ರಮದ ಬಳಿಕ, ‘ಭಾರತೀಯ ಶ್ರೀಮಂತ ಜ್ಞಾನ ಸಂಪತ್ತಿನ ಅನಾವರಣ’ ಕಾರ್ಯಕ್ರಮದಲ್ಲಿ ‘ಶಿಕ್ಷಣದ ಕುರಿತು ಹೊಸ ದೃಷ್ಟಿಕೋನ’ ಎನ್ನುವ ವಿಷಯಾಧರಿಸಿ ವಿಚಾರಗೋಷ್ಟಿ ನಡೆಯಿತು.ವಿವೇಕಾನಂದ ಆಸ್ಪತ್ರೆ ಮೈಸೂರು ಇಲ್ಲಿನ ಮೂಳೆ ಶಸ್ತ್ರ ಚಿಕಿತ್ಸಾ ತಜ್ಞ ಮತ್ತು ಸ್ವಾಮಿ ವಿವೇಕಾನಂದ ಯುವಜನ ವಿಭಾಗದ ಮಾರ್ಗದರ್ಶಕ ಡಾ.ಸೀತಾರಾಮ್ ಎಂ.ಆರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.