ದ.ಕ ಗ್ಯಾರೇಜ್ ಮಾಲಕರ ಸಂಘದ ಪುತ್ತೂರು ವಲಯದ ವಾರ್ಷಿಕ ಮಹಾಸಭೆ, ಪದಪ್ರದಾನ, ಜಿಲ್ಲಾಧ್ಯಕ್ಷರ ಭೇಟಿ

0

ಮಾನವನ ಸುಗಮ ಸಂಚಾರದಲ್ಲಿ ಗ್ಯಾರೇಜ್ ಪ್ರಮುಖ ಪಾತ್ರ-ಅರುಣ್ ಪುತ್ತಿಲ

ಪುತ್ತೂರು: ಹೇಗೆ ವೈದ್ಯರು ಮಾನವನ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೋ ಹಾಗೆಯೇ ವಾಹನಗಳನ್ನು ಸುಸ್ಥಿತಿಗೆ ತಂದು ಮಾನವನ ಜೀವ ಕಾಪಾಡುವಲ್ಲಿ ಗ್ಯಾರೇಜ್ ಮಾಲಕರು ಹಾಗೂ ಕಾರ್ಮಿಕರು ಕೂಡ ಪ್ರಮುಖ ಪಾತ್ರ ವಹಿಸುತ್ತಾರೆ ನಾನೂ ಕೂಡ ಗ್ಯಾರೇಜ್ ಶ್ರಮಿಕರೊಂದಿಗೆ ಸದಾ ಬೆನ್ನೆಲುಬಾಗಿ ಇರುತ್ತೇನೆ ಎಂದು ಪುತ್ತಿಲ ಪರಿವಾರ ಟ್ರಸ್ಟ್ ಸ್ಥಾಪಕರಾದ ಅರುಣ್ ಕುಮಾರ್ ಪುತ್ತಿಲರವರು ಹೇಳಿದರು.


ಮಾ.23 ರಂದು ಬೆಳಿಗ್ಗೆ ಮಿನಿ ವಿಧಾನಸೌಧದ ಬಳಿಯ ರೋಟರಿ ಮನೀಷಾ ಸಭಾಂಗಣದಲ್ಲಿ ಜರಗಿದ ದ.ಕ ಗ್ಯಾರೇಜ್ ಮಾಲಕರ ಸಂಘ(ದ.ಕ ಮತ್ತು ಉಡುಪಿ ಜಿಲ್ಲೆ)ದ ಪುತ್ತೂರು ವಲಯದ ವಾರ್ಷಿಕ ಮಹಾಸಭೆ, ಪದಪ್ರದಾನ ಹಾಗೂ ನೂತನ ಜಿಲ್ಲಾಧ್ಯಕ್ಷರ ಭೇಟಿ ಕಾರ್ಯಕ್ರಮದಲ್ಲಿ ಅವರು ಕಾರ್ಯಕ್ರಮದ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.


ನಮ್ಮದು ವೈಟ್ ಕಾಲರ್ ಕೆಲಸವಲ್ಲ, ಮಡ್‌ನಿಂದ ತುಂಬಿದ ಕೆಲಸವಾಗಿದೆ-ಕಿಶೋರ್ ಕುಮಾರ್:
ಅಧ್ಯಕ್ಷತೆಯನ್ನು ದ.ಕ ಗ್ಯಾರೇಜ್ ಮಾಲಕರ ಸಂಘದ ಪುತ್ತೂರು ವಲಯದ ಅಧ್ಯಕ್ಷ ಕಿಶೋರ್ ಕುಮಾರ್ ಬಿ. ಮಾತನಾಡಿ, ಪುತ್ತೂರು ವಲಯದ ಸದಸ್ಯರ ಸಂಪೂರ್ಣ ಸಹಕಾರದಿಂದ ಸಂಘವನ್ನು ಮುನ್ನೆಡೆಸಲು ಸಾಧ್ಯವಾಗಿದೆ. ನಮ್ಮದು ವೈಟ್ ಕಾಲರ್ ಕೆಲಸವಲ್ಲ, ದಿನವಿಡೀ ಮಡ್‌ನಿಂದ ತುಂಬಿದ ಕೆಲಸವಾಗಿದೆ. ಕೈ ಕೆಸರಾದರೆ ಬಾಯಿ ಮೊಸರು ಎಂಬಂತೆ ನಮ್ಮ ದೈನಂದಿನ ಜೀವನವಾಗಿದೆ. ನಾವು ಎಷ್ಟೇ ಎತ್ತರಕ್ಕೇರಿದರೂ ನಮ್ಮ ಕೆಲಸದ ಬಗ್ಗೆ ಗೌರವವನ್ನು ಕಳೆದುಕೊಳ್ಳಬಾರದು ಎಂದರು.


ಸಂಘಟನೆಯಲ್ಲಿ ಹಿರಿಯರ ಸ್ಥಾನಮಾನವನ್ನು ಗೌರವಿಸುವಂತಾಗಬೇಕು-ದಿವಾಕರ್ ಎಂ:
ದ.ಕ ಮತ್ತು ಉಡುಪಿ ಜಿಲ್ಲೆಯ ದ.ಕ ಗ್ಯಾರೇಜ್ ಮಾಲಕರ ಸಂಘ ಮಂಗಳೂರು ಇದರ ಚೇರ್ಮನ್ ದಿವಾಕರ್ ಎಂ. ಮಾತನಾಡಿ, ಹಿರಿಯರ ವಿಶಾಲ ಮನೋಭಾವನೆಯಿಂದ ಕಟ್ಟಿ ಬೆಳೆಸಿದ ಈ ಸಂಘವನ್ನು ಮೇಲೆತ್ತುವ ಕೈಂಕರ್ಯ ನಮ್ಮದಾಗಲಿ ಜೊತೆಗೆ ಹಿರಿಯರ ಸ್ಥಾನಮಾನವನ್ನು ಗೌರವಿಸುವಂತಾಗಬೇಕು. ಸಂಘಟನೆಯ ಸದಸ್ಯತ್ವ ಹೊಂದಿ ಸಂಘದ ಬೆಳವಣಿಗೆಯಲ್ಲಿ ಭಾಗಿಗಳಾಗುತ್ತಾ ಸಂಘಟನೆಯಲ್ಲಿ ಸಿಗುವ ಸವಲತ್ತುಗಳನ್ನು ಪಡೆಯುವವರಾಗಿ ಎಂದರು.


ಅಂಚೆ ಇಲಾಖೆಯಲ್ಲಿ ಅಪಘಾತ, ಆರೋಗ್ಯ ವಿಮೆ ಮಾಡಿಸಿಕೊಳ್ಳಿ-ಗುರುಪ್ರಸಾದ್ ಕೆ.ಎಸ್:
ಪುತ್ತೂರು ಅಂಚೆ ವಿಭಾಗದ ಮಾರ್ಕೆಟಿಂಗ್ ಮ್ಯಾನೇಜರ್ ಗುರುಪ್ರಸಾದ್ ಕೆ.ಎಸ್ ಮಾತನಾಡಿ, ಯಾವುದೇ ಸಂಘಟನೆಯಾಗಲಿ, ಸದಸ್ಯರ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ವಿಮೆ ಅಗತ್ಯ. ಪ್ರಸ್ತುತ ಭಾರತ ಸರಕಾರದ ಅಂಚೆ ಇಲಾಖೆಯಲ್ಲಿ ಸಮಗ್ರ ರಕ್ಷಣಾ ವಿಮೆದಡಿಯಲ್ಲಿ ಕೈಗೆಟಕುವ ರೀತಿಯಲ್ಲಿ ಅಪಘಾತ ಹಾಗೂ ಆರೋಗ್ಯದ ಬಗ್ಗೆ ವಿಮೆಯನ್ನು ಜಾರಿಗೆ ತಂದಿದೆ. ಯಾವುದೇ ಸಂದರ್ಭದಲ್ಲಾಗಲಿ ಅಪಘಾತ ಸಂಭವಿಸಿದಾಗ ರೂ.557 ವಾರ್ಷಿಕ ಮೊತ್ತವನ್ನು ಕಟ್ಟಿದರೆ ರೂ.10 ಲಕ್ಷ, ಆರೋಗ್ಯದಲ್ಲಿ ಏನಾದರೂ ಏರುಪೇರು ಕಂಡಾಗ ರೂ.899 ವಾರ್ಷಿಕ ಮೊತ್ತವನ್ನು ಕಟ್ಟಿದರೆ ರೂ.15 ಲಕ್ಷ ಕುಟುಂಬಕ್ಕೆ ಸಿಗುತ್ತದೆ ಎಂದು ಹೇಳಿ ವಿಮೆಯ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.


ಸಂಘಟನೆ ಬಲಯುತವಾಗಲು ನಾವೆಲ್ಲ ಕೈಜೋಡಿಸಿ ಕೆಲಸ ಮಾಡಬೇಕು-ಪುಂಡಲೀಕ ಸುವರ್ಣ:
ದ.ಕ ಮತ್ತು ಉಡುಪಿ ಜಿಲ್ಲೆಯ ದ.ಕ ಗ್ಯಾರೇಜ್ ಮಾಲಕರ ಸಂಘ ಮಂಗಳೂರು ಇದರ ಮಾಜಿ ಚೇರ್‌ಮ್ಯಾನ್ ಜಿ.ಪುಂಡಲೀಕ ಸುವರ್ಣ ಮಾತನಾಡಿ, 1985ರಲ್ಲಿ ಸ್ಥಾಪನೆಯಾದ ನಮ್ಮ ಸಂಘಟನೆಯು 12 ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಒಂದು ಕಾಲದಲ್ಲಿ ಮಡ್ಡಿಯಲ್ಲಿ ಮುಳುಗುತ್ತಿದ್ದ ಗ್ಯಾರೇಜ್ ವಿಭಾಗವನ್ನು ತಿರಸ್ಕಾರ ಭಾವದಿಂದ ನೋಡುತ್ತಿದ್ದ ಕಾಲಘಟ್ಟವಿತ್ತು. ಆದರೆ ಈಗ ಕಾಲ ಬದಲಾಗಿದ್ದು ಸಮಾಜ ನಮ್ಮನ್ನು ಗೌರವದಿಂದ ಕಾಣುತ್ತಿದೆ. ಸಂಘಟನೆ ಬಲಯುತವಾಗಲು ನಾವೆಲ್ಲ ಕೈಜೋಡಿಸಿ ಕೆಲಸ ಮಾಡಬೇಕು ಎಂದರು.


ಸಂಘವು ಇಂದು ಕಲ್ಪವೃಕ್ಷವಾಗಿ ಗೋಚರಿಸುತ್ತಿದೆ-ಶರತ್ ಕುಮಾರ್ ರೈ:
ಪದಪ್ರದಾನ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಶರತ್ ಕುಮಾರ್ ರೈಯವರು, ಹೆತ್ತವರ ಆಶೀರ್ವಾದ, ಹಿರಿಯರ ಹಾಗೂ ಸ್ನೇಹಿತರ ಮಾರ್ಗದರ್ಶನದಲ್ಲಿ ಮತ್ತು ನನ್ನ ಗ್ಯಾರೇಜು ಪಾಲುದಾರ ಸುಜಿತ್ ರೈಯವರ ಪ್ರೋತ್ಸಾಹದಿಂದ ನಾನು ಇಲ್ಲಿವರೆಗೆ ಬೆಳೆದು ಬಂದಿದ್ದೇನೆ. ವೃತ್ತಿ ಬಾಂಧವರ ಯಾವುದೇ ಕುಂದು ಕೊರತೆ, ಕಷ್ಟ-ಸುಖದಲ್ಲಿ ನಾವು ಭಾಗಿಯಾಗುತ್ತೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸದಸ್ಯರ ಸೇರ್ಪಡೆ, ವಿನೂತನ ಕಾರ್ಯಕ್ರಮಗಳ ಹಮ್ಮಿಕೊಳ್ಳುವಿಕೆ ಜೊತೆಗೆ ಜಿಲ್ಲಾ ಕೇಂದ್ರದ ಕೊಂಡಿಯಾಗಿ ಕಾರ್ಯನಿರ್ವಹಿಸಲಿದ್ದೇವೆ. ನಡೆದುಕೊಂಡು ಹೋಗುವಾಗ ಭೀಜವನ್ನು ಭಿತ್ತುತ್ತಾ ಹೋಗು, ಹಿಂದುರುಗಿ ಬರುವಾಗ ಅದು ಹೆಮ್ಮರವಾಗಿ ಕಾಣುತ್ತಿದೆ ಎಂಬುದಂತೆ ಇಂದು ನಮ್ಮ ಸಂಘವು ಹಿರಿಯರು ಭಿತ್ತಿದ ಭೀಜವು ಇಂದು ಕಲ್ಪವೃಕ್ಷವಾಗಿ ಗೋಚರಿಸುತ್ತಿದೆ ಎಂದರು.


ಗ್ಯಾರೇಜ್ ಬಾಂಧವರ ವೈರತ್ವ ಮಿತೃತ್ವದತ್ತ ಬದಲಾಗಿದೆ-ಎ.ಜನಾರ್ದನ:
ದ.ಕ ಜಿಲ್ಲಾ ಗ್ಯಾರೇಜ್ ಮಾಲಕರ ಸೌಹಾರ್ದ ಸಹಕಾರಿ ಸಂಘ ಮಂಗಳೂರು ಇದರ ಅಧ್ಯಕ್ಷ ಎ.ಜನಾರ್ದನ ಮಾತನಾಡಿ, ಒಂದು ಕಾಲದಲ್ಲಿ ನಮ್ಮ ಗ್ಯಾರೇಜ್ ಬಾಂಧವರ ನಡುವೆ ವೈರತ್ವವಿತ್ತು ಆದರೆ ಇಂದು ಅದು ಮಿತೃತ್ವದತ್ತ ಬದಲಾಗಿದೆ. ಸಂಘಟನೆ ಆರಂಭಿಸುವುದು ಸುಲಭ ಆದರೆ ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದು ಬಹಳ ಮುಖ್ಯ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದಾಗ ಸಂಘಟನೆಯು ಹುರುಪನ್ನು ಪಡೆಯುತ್ತದೆ. ಶೀಘ್ರದಲ್ಲೇ ನಮ್ಮ ಸಂಘವು ಬ್ಯಾಂಕ್ ಸ್ಥಾಪನೆ ಮಾಡುವ ಉದ್ಧೇಶ ಹೊಂದಲಾಗಿದ್ದು ಈ ಮುಖೇನ ಗ್ಯಾರೇಜ್ ಮಾಲಕರಿಗೆ, ಕಾರ್ಮಿಕರಿಗೆ ಪ್ರಯೋಜನ ಸಿಗುವಂತೆ ಮಾಡುವುದಾಗಿದೆ ಎಂದರು.


ದ.ಕ ಮತ್ತು ಉಡುಪಿ ಜಿಲ್ಲೆಯ ದ.ಕ ಗ್ಯಾರೇಜ್ ಮಾಲಕರ ಸಂಘ ಮಂಗಳೂರು ಇದರ ಕಾರ್ಯದರ್ಶಿ ಕೆ.ಎ ರಾಜ್‌ಗೋಪಾಲ, ಕೋಶಾಧಿಕಾರಿ ಕಿರಣ್‌ರಾಜ್, ಪುತ್ತೂರು ವಲಯದ ಗೌರವಾಧ್ಯಕ್ಷ ಸುರೇಶ್ ಸಾಲ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಪ್ತಿ ಹಾಗೂ ಲಿಖಿತಾ ಪ್ರಾರ್ಥಿಸಿದರು. ನಿಯೋಜಿತ ಅಧ್ಯಕ್ಷ ಶರತ್ ಕುಮಾರ್ ರೈಯವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ದಿನೇಶ್ ಕಬಕ, ಅರುಣ್ ಕುಮಾರ್, ಸುಜಿತ್ ರೈ, ದಿವಾಕರ್, ದಿನೇಶ್ ಪುತ್ತೂರು, ಫ್ರಾನ್ಸಿಸ್ ಡಿ’ಸೋಜ, ಜಯಚಂದ್ರ, ಹರ್ಷ, ನಾಗೇಶ್, ದಿವಾಕರ್, ಜೀವನ್ ರವರು ಅತಿಥಿಗಳಿಗೆ ಶಾಲು ಹೊದಿಸಿ ಸ್ವಾಗತಿಸಿದರು. ಸನ್ಮಾನಿತರ ಸನ್ಮಾನ ಪತ್ರವನ್ನು ಸುಜಿತ್ ಡಿ.ರೈ ವಾಚಿಸಿದರು. ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿರವರು ಜಿಲ್ಲಾ ಕ್ರೀಡೋತ್ಸವದ ಬಗ್ಗೆ ಮಾಹಿತಿ ನೀಡಿದರು. ವಲಯದ ಕಾರ್ಯದರ್ಶಿ ಸುನಿಲ್ ಡಿ.ರವರು ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ನೂತನ ಕೋಶಾಧಿಕಾರಿ ಪ್ರಕಾಶ್ ರೈ ಮನವಳಿಕೆ ವಂದಿಸಿದರು. ಕ್ರೀಡಾ ಕಾರ್ಯದರ್ಶಿ ಪುರುಷೋತ್ತಮ ಕೋಲ್ಫೆ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ..
ತನ್ನ ಹದಿನಾರನೇ ವಯಸ್ಸಿನಲ್ಲಿ ವೃತ್ತಿ ಜೀವನಕ್ಕೆ ಪಾದಾರ್ಪಣೆ ಮಾಡಿ ಪ್ರಥಮವಾಗಿ ಮೋಹನ್ ಗ್ಯಾರೇಜ್ ಪುತ್ತೂರು ಆರಂಭಿಸಿ ಬಳಿಕ ಸುಬ್ರಹ್ಮಣ್ಯ ಮೋಟಾರು ವರ್ಕ್ಸ್ ದರ್ಬೆ, ಭಗವತಿ ಮೋಟಾರ್ ವರ್ಕ್ಸ್ ಬೊಳ್ವಾರು ಅಲ್ಲದೆ ಮಡಿಕೇರಿ, ಮುಂಬಯಿ ಹೀಗೆ ಹಲವಾರು ಕಡೆ ಕೆಲಸ ನಿರ್ವಹಿಸಿ 1998ರಲ್ಲಿ ಕಬಕದಲ್ಲಿ ಶ್ರೀ ಮಹಾದೇವಿ ಮೋಟಾರ್ ವರ್ಕ್ಸ್, 2021ರಲ್ಲಿ ಶ್ರೀ ಮಹಾದೇವಿ ಇಂಜಿನಿಯರಿಂಗ್ ಮತ್ತು ಮೋಟಾರ್ ವರ್ಕ್ಸ್, 2025ರಲ್ಲಿ ಶ್ರೀ ಮಹಾದೇವಿ ಸರ್ವಿಸ್ ಸ್ಟೇಷನ್ ಎಂಬ ಸ್ವಂತ ಉದ್ಯಮವನ್ನು ಆರಂಭಿಸಿದ ಜಯರಾಮ್ ನಾಯ್ಕ್ ಅರ್ಕರವರನ್ನು, ಕಳೆದ 45 ವರ್ಷಗಳಿಂದ ಮೆಕ್ಯಾನಿಕ್ ಆಗಿ ಪುತ್ತೂರು ಬಜಾಜ್ ಶೋರೂಂ, ಎನ್.ಟಿ ಆಟೋಮೊಬೈಲ್ಸ್ ಬಳಿಕ 1996ರಲ್ಲಿ ಸ್ವಂತ ದ್ವಿಚಕ್ರ ವಾಹನ ದುರಸ್ತಿ ಗ್ಯಾರೇಜು ಸ್ಥಾಪನೆ ಮಾಡಿರುವ ಸುರೇಶ್ ಸಾಲಿಯಾನ್ ಸಾಮೆತ್ತಡ್ಕರವರನ್ನು ಹಾಗೂ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿ ಪುತ್ತೂರು ವಲಯಕ್ಕೆ ಪ್ರಥಮವಾಗಿ ಭೇಟಿಯಿತ್ತ ದ.ಕ ಮತ್ತು ಉಡುಪಿ ಜಿಲ್ಲೆಯ ದ.ಕ ಗ್ಯಾರೇಜ್ ಮಾಲಕರ ಸಂಘ ಮಂಗಳೂರು ಇದರ ಅಧ್ಯಕ್ಷ ದಿನಕರ್ ಕುಲಾಲ್‌ರವರನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಜಿಲ್ಲಾಧ್ಯಕ್ಷರ ಭೇಟಿ..
ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿ ಪುತ್ತೂರು ವಲಯಕ್ಕೆ ಪ್ರಥಮ ಬಾರಿ ಭೇಟಿಯಿತ್ತ ದ.ಕ ಮತ್ತು ಉಡುಪಿ ಜಿಲ್ಲೆಯ ದ.ಕ ಗ್ಯಾರೇಜ್ ಮಾಲಕರ ಸಂಘ ಮಂಗಳೂರು ಇದರ ಅಧ್ಯಕ್ಷ ದಿನಕರ್ ಕುಲಾಲ್‌ರವರು ಮಾತನಾಡಿ, ನಿರ್ಗಮನ ಅಧ್ಯಕ್ಷ ಕಿಶೋರ್ ಕುಮಾರ್‌ರವರ ಕಾರ್ಯಗಳನ್ನು ಶ್ಲಾಘಿಸಿ, ನೂತನ ಅಧ್ಯಕ್ಷ ಶರತ್ ಕುಮಾರ್ ರೈಯವರ ತಂಡಕ್ಕೆ ಶುಭ ಹಾರೈಸಿ, ಪುತ್ತೂರು ವಲಯದ ಪ್ರತಿಯೊಂದು ಚಟುವಟಿಕೆಗಳಿಗೆ ಕೇಂದ್ರ ತಂಡದ ಸಹಕಾರ ಖಂಡಿತಾ ಇದೆ ಎಂದರು.

ಪದಪ್ರದಾನ..
ದ.ಕ ಗ್ಯಾರೇಜ್ ಮಾಲಕರ ಸಂಘ, ಪುತ್ತೂರು ವಲಯದ 2025-27ರ ಎರಡು ವರ್ಷದ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಶರತ್ ಕುಮಾರ್ ರೈ, ಕಾರ್ಯದರ್ಶಿ ದಿನೇಶ್ ಕಬಕ, ಕೋಶಾಧಿಕಾರಿ ಪ್ರಕಾಶ್ ರೈ ಮನವಳಿಕೆ, ಗೌರವಾಧ್ಯಕ್ಷ ನಿರ್ಗಮನ ಅಧ್ಯಕ್ಷ ಕಿಶೋರ್ ಕುಮಾರ್, ಉಪಾಧ್ಯಕ್ಷರಾಗಿ ಅಶೋಕ್ ಉರ್ಲಾಂಡಿ, ಪದ್ಮನಾಭ ಪಡೀಲು, ಮೋಹನ್ ಸಂಪ್ಯ, ದಿವಾಕರ ಕೆ.ಕೌಡಿಚ್ಚಾರ್, ಜಯಚಂದ್ರ ಸೇರಾಜೆ, ರೋಹಿತ್ ಮುಕ್ರಂಪಾಡಿ, ಜೊತೆ ಕಾರ್ಯದರ್ಶಿಯಾಗಿ ಫ್ರಾನ್ಸಿಸ್ ಡಿ’ಸೋಜ, ಕ್ರೀಡಾ ಕಾರ್ಯದರ್ಶಿಯಾಗಿ ಪುರುಷೋತ್ತಮ ಕೋಲ್ಫೆ, ಧಾರ್ಮಿಕ ಸಂಚಾಲಕರಾಗಿ ಗಣೇಶ್ ರೈ(ರೇಡಿಯೇಟರ್), ಸದಸ್ಯತ್ವ ಅಭಿಯಾನ ಸಂಘಟಕರಾಗಿ ಸುನಿಲ್ ಪಡೀಲ್, ಗೌರವ ಸಲಹೆಗಾರರಾಗಿ ಸುರೇಶ್ ಸಾಲಿಯಾನ್, ದಿನಕರ್ ಪಡೀಲು, ಶಂಕರ್ ಭಟ್, ಮೋನಪ್ಪರವರು ಜಿಲ್ಲಾಧ್ಯಕ್ಷರಿಂದ ಪದಪ್ರದಾನವನ್ನು ಸ್ವೀಕರಿಸಿದರು.

LEAVE A REPLY

Please enter your comment!
Please enter your name here