ಆನ್‌ಲೈನ್ ವಂಚನಾ ಜಾಲಕ್ಕೆ ಸಿಲುಕಿದ ಶಾಂತಿಗೋಡಿನ ವ್ಯಕ್ತಿ : ಪ್ರಕರಣ ಬೇಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ ದ.ಕ.ಜಿಲ್ಲಾ ಸೆನ್ ಪೊಲೀಸರು

0

ಹಣ ಪಡೆಯಲು ಮುಗ್ದ ಜನರ ಬ್ಯಾಂಕ್ ಖಾತೆ ಬಳಕೆ
ಹಣದ ಆಸೆಗಾಗಿ ಬ್ಯಾಂಕ್ ಖಾತೆಗಳನ್ನು ಮಾಡಿ ಮಾರಾಟ

ಪುತ್ತೂರು: ಆನ್‌ಲೈನ್ ವಂಚನೆಯ ಮೂಲಕ ಬಡ ಜನರ ಬ್ಯಾಂಕ್ ಖಾತೆಗಳನ್ನು ದುರುಪಯೋಗಿಸುತ್ತಿದ್ದ ಪ್ರಕರಣವನ್ನು ಪುತ್ತೂರಿನ ಶಾಂತಿಗೋಡಿನ ವ್ಯಕ್ತಿಯೊಬ್ಬರ ದೂರಿಗೆ ಸಂಬಂಧಿಸಿ ತನಿಖೆ ನಡೆಸಿದ ದಕ್ಷಿಣ ಕನ್ನಡ ಜಿಲ್ಲೆ ಸೆನ್ ಪೊಲೀಸರು ಬ್ಯಾಂಕ್ ಖಾತೆಗಳನ್ನು ಸಂಗ್ರಹಿಸಿ ದೊಡ್ಡ ಮಟ್ಟದ ವಂಚನಾ ಚಾಲಕ್ಕೆ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಬೆಳಗಾವಿಯ ತಹಸೀಲ್ದಾರ್ ಗಲ್ಲಿಯ ಅವಿನಾಶ್ ಸುತಾರ್ (28ವ), ರಾಮದೇವ ಗಲ್ಲಿಯ ಅನೂಪ್ ಕಾರೇಕರ್ (42ವ) ಬಂಧಿತ ಆರೋಪಿಗಳು.


ಪುತ್ತೂರಿನ ಶಾಂತಿಗೋಡು ನಿವಾಸಿ ರಾಧಾಕೃಷ್ಣ ನಾಯಕ್ ಎಂಬುವವರಿಗೆ ಸೈಬರ್ ವಂಚಕರು ವಿಡಿಯೊ ಕಾಲ್ ಮಾಡಿ ಮನಿ ಲಾಂಡರಿಂಗ್ ಪ್ರಕರಣದಲ್ಲಿ ನಿಮ್ಮನ್ನ ಡಿಜಿಟಲ್ ಅರೆಸ್ಟ್ ಮಾಡುತ್ತೇವೆ ಎಂದು ಹೆದರಿಸಿದ್ದರು. ಬಳಿಕ ಅವರಿಂದ 40 ಲಕ್ಷ ರೂಪಾಯಿ ಹಣವನ್ನ ಆರ್ ಟಿಜಿಎಸ್ ಮೂಲಕ ಪಡೆದಿದ್ದಾರೆ. ಕೆಲವು ದಿನಗಳ ಬಳಿಕ ಅನುಮಾನಗೊಂಡ ರಾಧಾಕೃಷ್ಣರವರು ಮಾ.3ಕ್ಕೆ ಸೆನ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ವೇಳೆ ರಾಧಾಕೃಷ್ಣ ನಾಯಕ್ ಅವರು ವರ್ಗಾಯಿಸಿದ ಹಣವು ಬೆಳಗಾವಿಯ ಯಾರದ್ದೋ ಖಾತೆಗೆ ಹಣ ವರ್ಗಾವಣೆಗೊಂಡಿರುವುದು ತಿಳಿದಿದೆ. ತನಿಖೆ ಮುಂದುವರಿಸಿದ ಪೊಲೀಸರು ಬೆಳಗಾವಿಗೆ ತೆರಳಿ ಅಕೌಂಟ್ ಹೊಲ್ಡರ್ ಅನೂಪ್ ಎಂಬವನನ್ನು ಬಂಧಿಸಿ ವಿಚಾರಿಸಿದಾಗ ಆತ ಅವಿನಾಶ್ ಎಂಬವನಿಗೆ ಖಾತೆಯನ್ನು ಮಾಡಿಕೊಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದರು. ಅವಿನಾಶ್ ಬ್ಯಾಂಕ್ ಖಾತೆಗಳನ್ನು ಉತ್ತರ ಪ್ರದೇಶದವರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸದ್ಯ ಆರೋಪಿ ಅನೂಪ್ ನಿಂದ 8 ಇತರ ಹೆಸರಿನ ಖಾತೆಗಳು, ಎಟಿಎಮ್ ಕಾರ್ಡ್, ಪಾಸ್ ಬುಕ್ ಮತ್ತು ಸಿಮ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಗಳನ್ನು ಇನ್ನಷ್ಟು ತನಿಖೆಗೊಳಪಡಿಸಿದಾಗ ಇನ್ನಷ್ಟು ದೊಡ್ಡ ವಂಚನಾ ಜಾಲ ಬಯಲಿಗೆ ಬರುವ ಸಾಧ್ಯತೆ ಇದೆ.

ಮುಗ್ಧ ಜನರ ಬ್ಯಾಂಕ್ ಖಾತೆಯೇ ಗುರಿ:
ಮುಗ್ಧ ಜನರ ಬ್ಯಾಂಕ್ ಖಾತೆಯೇ ಇವರ ಗುರಿಯಾಗಿತ್ತು. ಆರೋಪಿಗಳು ಅಮಾಯಕರಿಗೆ ಚಿಲ್ಲರೆ ಹಣ ನೀಡಿ ಬ್ಯಾಂಕ್ ಖಾತೆ ತೆರೆಯಲು ಹೇಳುತ್ತಾರೆ. ಬಳಿಕ, ಆರೋಪಿಗಳು ಆ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಪಡೆದುಕೊಂಡು, ಆನ್ ಲೈನ್ ಬ್ಯುಸಿನೆಸ್ ಮಾಡುವುದಾಗಿ ಹೇಳುತ್ತಿದ್ದರು. ಬಳಿಕ ಬ್ಯಾಂಕ್ ಖಾತೆ ಮಾಹಿತಿಯನ್ನು ಸೈಬರ್ ವಂಚಕರ ಕೈಗಿಡುತ್ತಿದ್ದರು. ನಂತರ, ಸೈಬರ್ ವಂಚಕರು ಈ ಬ್ಯಾಂಕ್ ಖಾತೆಗಳನ್ನು ಇಟ್ಟುಕೊಂಡು, ಶ್ರೀಮಂತ ಜನರಿಗೆ ವಿಡಿಯೊ ಕಾಲ್, ಡಿಜಿಟೆಲ್ ಅರೆಸ್ಟ್ ಸೇರಿದಂತೆ ಹಲವು ವಿಧಾನಗಳಲ್ಲಿ ಬ್ಲ್ಯಾಕ್ ಮೇಲ್ ಮಾಡುತ್ತಾರೆ. ಬಳಿಕ, ವಂಚಕರ ಜಾಲಕ್ಕೆ ಸಿಲುಕಿದವರ ಕಡೆಯಿಂದ ಮುಗ್ದ ಜನರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿಸುತ್ತಾರೆ. ಸೈಬರ್ ವಂಚನೆ ಪ್ರಕರಣಕ್ಕೆ ಜಾರ್ಖಂಡ್ ‘ಜಾಮತಾರಾ’ವರೆಗೂ ನಂಟು ಇದೆ ಎಂಬ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ.

LEAVE A REPLY

Please enter your comment!
Please enter your name here