ಕಿಂಡಿ ಅಣೆಕಟ್ಟು ನಿರ್ವಹಣೆಗೆ ಬೇಕಿದೆ ಸರಕಾರದ ಪ್ರೋತ್ಸಾಹ ಧನ….!
ಪುತ್ತೂರು: ಓಡುವ ನೀರನ್ನು ತಡೆದು ನಿಲ್ಲಿಸಿ ಭೂಮಿಗೆ ಇಂಗಿಸುವ ಕೆಲಸ ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರ ಕರ್ತವ್ಯವಾಗಬೇಕಿದೆ. ಬಿರುಬೇಸಿಗೆಯಲ್ಲಿ ಭೂಮಿಯಲ್ಲಿ ನೀರಿನ ಸೆಲೆ ನಿಲ್ಲುವಂತೆ ಮಾಡುವಲ್ಲಿ ಕಿಂಡಿ ಅಣೆಕಟ್ಟಿನ ದೊಡ್ಡ ಕೊಡುಗೆ ಇದೆ. ಹಿಂದಿನ ಕಾಲದಲ್ಲಿ ಬೇಸಿಗೆಯಲ್ಲಿ ಹರಿಯುವ ನದಿ, ತೋಡು, ಹೊಳೆಗೆ ಸಣ್ಣ ಒಡ್ಡುಗಳನ್ನು ನಿರ್ಮಿಸುವ ಮೂಲಕ ನೀರನ್ನು ತಡೆಗೆ ನಿಲ್ಲಿಸುವ ಕೆಲಸವನ್ನು ರೈತರು ಮಾಡುತ್ತಿದ್ದರು. ಹೀಗೆ ತಡೆದು ನಿಲ್ಲಿಸಿದ ನೀರು ಕೃಷಿಕರ ಪಾಲಿಗೆ ವರದಾನವೇ ಆಗಿತ್ತು. ಆಧುನಿಕ ಕಾಲದಲ್ಲಿ ಇಂತಹ ಒಡ್ಡುಗಳ ಬದಲಾಗಿ ಸರಕಾರ ಕಿಂಡಿ ಅಣೆಕಟ್ಟುಗಳನ್ನು ಕಟ್ಟುವ ಮೂಲಕ ನೀರನ್ನು ನಿಲ್ಲಿಸಿ ಭೂಮಿಗೆ ಇಂಗಿಸುವ ಕೆಲಸವನ್ನು ಮಾಡಿತ್ತು. ಆದರೆ ಒಮ್ಮೆ ಕಿಂಡಿ ಅಣೆಕಟ್ಟು ನಿರ್ಮಿಸಿದರೆ ಕೆಲಸ ಮುಗಿಯುವುದಿಲ್ಲ ಅದರ ನಿರ್ವಹಣೆಯೂ ಅಷ್ಟೇ ಮುಖ್ಯ ಹಾಗೂ ದೊಡ್ಡ ಸವಾಲು ಕೂಡ ಆಗಿದೆ.

ಒಳಮೊಗ್ರು ಗ್ರಾಮದ ಎರ್ಮೆಟ್ಟಿ ಕಿಂಡಿ ಅಣೆಕಟ್ಟು
1976 ರಲ್ಲಿ ಜಿಲ್ಲಾ ಪಂಚಾಯತ್ ಅನುದಾನದಲ್ಲಿ ಒಳಮೊಗ್ರು ಗ್ರಾಮದ ಕೈಕಾರ ನೀರ್ಪಾಡಿ ಸಂಪರ್ಕ ರಸ್ತೆಯ ಎರ್ಮೆಟ್ಟಿ ಎಂಬಲ್ಲಿ ನಿರ್ಮಾಣಗೊಂಡ ಕಿಂಡಿ ಅಣೆಕಟ್ಟಿನ ನಿರ್ವಹಣೆಯನ್ನು ಆ ಭಾಗದ ಗ್ರಾಮಸ್ಥರೇ ಮಾಡಿಕೊಂಡು ಬರುವ ಮೂಲಕ ಗಮನ ಸೆಳೆದಿದ್ದಾರೆ. ಸುಮಾರು ೨೦ ಅಡಿ ಎತ್ತರ ಹಾಗೇ ೪೨ ಅಡಿ ಉದ್ದವಿರುವ ಈ ಕಿಂಡಿ ಅಣೆಕಟ್ಟು ಇಂದಿಗೂ ಈ ಭಾಗದ ಕೃಷಿಕರಿಗೆ ನೀರುಣಿಸುತ್ತಿದೆ. ಸರಕಾರದಿಂದ ಸರಿಯಾದ ಪ್ರೋತ್ಸಾಹಧನ ಬರದೇ ಇರುವುದರಿಂದ ಕಿಂಡಿ ಅಣೆಕಟ್ಟುಗಳ ನಿರ್ವಹಣೆ ರೈತರಿಗೆ ಒಂದು ಸವಾಲು ಆಗಿದೆ.

ಗ್ರಾಮಸ್ಥರಿಂದಲೇ ನಿರ್ವಹಣೆ
ಎರ್ಮೆಟ್ಟಿಯಲ್ಲಿರುವ ಕಿಂಡಿ ಅಣೆಕಟ್ಟನ್ನು ಪ್ರತಿ ವರ್ಷವೂ ಈ ಭಾಗದ ಗ್ರಾಮಸ್ಥರೇ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದಾರೆ. ೧೫ ಕ್ಕೂ ಹೆಚ್ಚು ಕೃಷಿಕರಿಗೆ ಈ ಅಣೆಕಟ್ಟು ವರದಾನವಾಗಿದ್ದು ಒಂದಷ್ಟು ರೈತರು ಸೇರಿಕೊಂಡುಪ್ರತಿ ವರ್ಷ ರೂ.೧ ಲಕ್ಷಕ್ಕೂ ಅಧಿಕ ಖರ್ಚು ಮಾಡಿ ಅಣೆಕಟ್ಟನ್ನು ನಿರ್ವಹಣೆ ಮಾಡಿಕೊಂಡು ಬರುತ್ತಿದ್ದಾರೆ. ದಶಂಬರ್ ತಿಂಗಳಾಂತ್ಯಕ್ಕೆ ಕಿಂಡಿ ಅಣೆಕಟ್ಟಿನಲ್ಲಿ ನೀರು ನಿಲ್ಲಿಸುವ ಕೆಲಸ ಮಾಡಲಾಗುತ್ತಿದ್ದು ಮುಂದಿನ ಮಳೆಗಾಲದ ಆರಂಭದ ತನಕವೂ ಈ ಅಣೆಕಟ್ಟಿನಲ್ಲಿ ನೀರು ನಿಂತಿರುತ್ತದೆ.
ರೂ.೧ ಲಕ್ಷಕ್ಕೂ ಅಧಿಕ ಖರ್ಚು..!
ಈ ಕಿಂಡಿ ಅಣೆಟ್ಟಿನ ನಿರ್ವಹಣೆಗೆ ಪ್ರತಿ ವರ್ಷ ರೂ.೧ ಲಕ್ಷಕ್ಕೂ ಅಧಿಕ ಖರ್ಚು ಬೀಳುತ್ತದೆ ಎನ್ನುತ್ತಾರೆ ಕೃಷಿಕರಾದ ಸತೀಶ್ ರೈ ನೀರ್ಪಾಡಿಯವರು. ದಶಂಬರ್ ತಿಂಗಳಾಂತ್ಯಕ್ಕೆ ಅಣೆಕಟ್ಟಿಗೆ ಹಲಗೆ ಜೋಡಣೆ ಕೆಲಸ ಆರಂಭಿಸಲಾಗುತ್ತಿದೆ. ಆದರೆ ಇಲ್ಲಿ ಹಲಗೆಯ ಬದಲು ಅಡಿಕೆ ಮರದ ಸಲಾಕೆಯನ್ನು ಬಳಸಲಾಗುತ್ತದೆ. ಅಡಿಕೆ ಮರವನ್ನು ಕಡಿದು ಅದರಿಂದ ಸಲಾಕೆಗಳನ್ನು ಮಾಡಿ ಅಣೆಕಟ್ಟಿನ ಎರಡೂ ಭಾಗಗಳಿಗೂ ಜೋಡಿಸಲಾಗುತ್ತದೆ. ಇದಲ್ಲದೆ ಎರಡೂ ಬದಿಗಳಲ್ಲಿ ಗೋಣೆ ಚೀಲದಲ್ಲಿ ಮರಳು ತುಂಬಿಸಿ ಇಟ್ಟು ಮಧ್ಯ ಭಾಗಕ್ಕೆ ಮಣ್ಣು ತುಂಬಿಸಿ ಅದರ ನೀರು ಹಾಕಿ ಗಟ್ಟಿಗೊಳಿಸುವ ಕೆಲಸ ಮಾಡಲಾಗುತ್ತದೆ. ಈ ರೀತಿ ಮಾಡುವ ಮೂಲಕ ನೀರು ಸೋರಿಕೆಯಾಗದಂತೆ ನೋಡಿಕೊಳ್ಳಲಾಗುತ್ತದೆ.
ಗ್ರಾಪಂನಿಂದ ಪ್ರೋತ್ಸಾಹ ಧನ
ಕಿಂಡಿ ಅಣೆಕಟ್ಟುಗಳಿಂದ ಅಂತರ್ಜಲ ಹೆಚ್ಚುವುದು ಹಾಗೂ ಇದರಿಂದ ಕೃಷಿಕರಿಗೆ ಬಹಳಷ್ಟು ಅನುಕೂಲವಿದೆ. ಇಂತಹ ಕಿಂಡಿ ಅಣೆಕಟ್ಟುಗಳ ನಿರ್ವಹಣೆಗೆ ಗ್ರಾಮ ಪಂಚಾಯತ್‌ನಿಂದ ಪ್ರೋತ್ಸಾಹಧನ ನೀಡಲಾಗುತ್ತಿದೆ. ಈ ಪ್ರೋತ್ಸಾಹ ಧನ ಪಡೆಯಲು ಗ್ರಾಪಂಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಒಳಮೊಗ್ರು ಗ್ರಾಪಂನಿಂದ ಗ್ರಾಮದ ೩ ಕಿಂಡಿ ಅಣೆಕಟ್ಟುಗಳ ನಿರ್ವಹಣೆಗೆ ಈ ವರ್ಷ ಪ್ರೋತ್ಸಾಹ ಧನ ನೀಡುತ್ತಿದ್ದೇವೆ. ಅಣೆಕಟ್ಟುಗಳ ರಕ್ಷಣೆ ಪ್ರತಿಯೊಬ್ಬರ ಜವಬ್ದಾರಿಯಾಗಬೇಕಿದೆ ಎಂದು ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಪ್ರತಿಕ್ರಿಯೆ ನೀಡಿದ್ದಾರೆ.
ಸರಕಾರದ ಅನುದಾನ ಬೇಕಿದೆ..
ಕಿಂಡಿ ಅಣೆಕಟ್ಟುಗಳು ಕೃಷಿಕರಿಗೆ ವರದಾನವಾಗಿದ್ದು ಆದರೆ ಇದರ ನಿರ್ವಹಣೆಗೆ ಸರಕಾರದ ಸರಿಯಾದ ಅನುದಾನ ಬಿಡುಗಡೆ ಮಾಡಬೇಕು ಎನ್ನುವುದು ರೈತರ ಆಗ್ರಹವಾಗಿದೆ. ಎಷ್ಟೋ ಕಡೆಗಳಲ್ಲಿ ಅನುದಾನವಿಲ್ಲದೆ ಕಿಂಡಿ ಅಣೆಕಟ್ಟುಗಳು ಪಾಲು ಬಿದ್ದಿವೆ. ಹಲಗೆ ಇದ್ದರೂ ಅದನ್ನು ಜೋಡಿಸಲು ಅನುದಾನದ ಕೊರತೆ ಇದೆ. ಆದರೆ ಎರ್ಮೆಟ್ಟಿಯಲ್ಲಿ ಮಾತ್ರ ರೈತರೇ ಸೇರಿಕೊಂಡು ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡು ಈ ಕೆಲಸ ಮಾಡುತ್ತಿರುವುದು ಶ್ಲಾಘನೀಯ.
ಒಳಮೊಗ್ರು ಗ್ರಾಮದಲ್ಲಿದೆ ೧೦ ಕಿಂಡಿ ಅಣೆಕಟ್ಟು
ಎರ್ಮೆಟ್ಟಿ, ನೀರ್ಪಾಡಿ, ಬಿಜತ್ರೆ, ಉಜಿರೋಡಿ, ಮುಳಿಯಡ್ಕ, ಮೊಡಪ್ಪಾಡಿ, ಕೊಡೆಂಚಾರು ಸೇರಿದಂತೆ ಒಳಮೊಗ್ರು ಗ್ರಾಮದಲ್ಲಿ ಸುಮಾರು ೧೦ ಕಿಂಡಿ ಅಣೆಕಟ್ಟುಗಳಿವೆ. ಇದರಲ್ಲಿ ಬಹುತೇಕ ಕಿಂಡಿ ಅಣೆಕಟ್ಟುಗಳಲ್ಲಿ ನೀರು ಇದ್ದು ಕೃಷಿಕರಿಗೆ ಉಪಯೋಗವಾಗುತ್ತಿದೆ.
ಎರ್ಮೆಟ್ಟಿಯಲ್ಲಿರುವ ಕಿಂಡಿ ಅಣೆಕಟ್ಟಿನ ನಿರ್ವಹಣೆಯನ್ನು ನಾವೇ ಮಾಡುತ್ತಿದ್ದೇವೆ. ಪ್ರತಿ ವರ್ಷ ರೂ.೧ಲಕ್ಷಕ್ಕೂ ಅಧಿಕ ಖರ್ಚು ಆಗುತ್ತಿದೆ. ಇದರಿಂದ ಅದೆಷ್ಟೋ ಕೃಷಿಕರಿಗೆ ಉಪಯೋಗವಿದೆ. ಕೃಷಿಕರು ಹಾಗೇ ಸರಕಾರದ ಸರಿಯಾದ ಅನುದಾನ ಕೊಟ್ಟರೆ ಕಿಂಡಿ ಅಣೆಕಟ್ಟುಗಳ ನಿರ್ವಹಣೆ ಸಾಧ್ಯ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕಾಗಿದೆ.
- ಸತೀಶ್ ರೈ ನೀರ್ಪಾಡಿ, ಉದ್ಯಮಿ, ಕೃಷಿಕರು
ಶಾಸಕರಿಂದ ಸ್ಪಂದನೆ
ಎರ್ಮೆಟ್ಟಿಯಲ್ಲಿರುವ ಕಿಂಡಿ ಅಣೆಕಟ್ಟು ಬಹಳ ಹಳೆಯ ಕಾಲದ್ದು ಆಗಿರುವುದರಿಂದ ಈ ಅಣೆಕಟ್ಟನ್ನು ದುರಸ್ತಿ ಮಾಡಿಕೊಡುವಂತೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರಿಗೆ ಈ ಭಾಗದ ಕೃಷಿಕರು ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದನೆ ನೀಡಿದ ಶಾಸಕರು ಅಣೆಕಟ್ಟಿನ ಸ್ಥಿತಿಗತಿ ನೋಡಿಕೊಂಡು ದುರಸ್ತಿ ಪಡಿಸಲು ಸಾಧ್ಯವಿರುವುದಾದರೆ ದುರಸ್ತಿ ಇಲ್ಲದಿದ್ದರೆ ಹೊಸ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಅನುದಾನ ಕೊಡುವ ಭರವಸೆಯನ್ನು ನೀಡಿದ್ದಾರೆ ಎಂದು ಸತೀಶ್ ರೈ ನೀರ್ಪಾಡಿ ತಿಳಿಸಿದ್ದಾರೆ.