ಪುತ್ತೂರು: ಪುತ್ತೂರು ನಗರಸಭೆಯ ಸಮುದಾಯ ಭವನದಲ್ಲಿ ಕಾರ್ಯಾಚರಿಸುತ್ತಿರುವ ಹಿರಿಯ ನಾಗರಿಕರ ಹಿತರಕ್ಷಣಾ ಸಂಘದ ವಾರ್ಷಿಕ ಮಹಾಸಭೆಯು ಮಾ.24 ರಂದು ನಗರಸಭಾ ಸಮುದಾಯ ಭವನದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ವಹಿಸಿದ ಹಿರಿಯ ನಾಗರಿಕರ ಹಿತರಕ್ಷಣಾ ಸಂಘದ ಅಧ್ಯಕ್ಷ ಝೇವಿಯರ್ ಡಿ’ಸೋಜರವರು ಸ್ವಾಗತಿಸಿ, ಮಾತನಾಡಿ, ಪುತ್ತೂರಿನಲ್ಲಿ ಮುಕ್ತವಾದ, ಹಣ ಪಾವತಿಯಿಲ್ಲದ ವೃದ್ಧಾಶ್ರಮದ ಅವಶ್ಯಕತೆ ಇದೆ. ದಾನಿಗಳು ಯಾರಾದರೂ ಅರ್ಧ ಎಕರೆಯಷ್ಟು ಜಾಗವನ್ನು ಕೊಟ್ಟರೆ ಅಲ್ಲಿ ಸಂಘದ ವತಿಯಿಂದ ಶಾಶ್ವತ ಕಟ್ಟಡವನ್ನು ಕಟ್ಟಿ ವಯೋವೃದ್ಧರಿಗೆ ಸೂರನ್ನು ಕಲ್ಪಿಸುವ ವ್ಯವಸ್ಥೆಯನ್ನು ಮಾಡಬಹುದು. ಈಗಾಗಲೇ ಇದೇ ಕಟ್ಟಡದಲ್ಲಿ ರಾತ್ರಿ ಹೊತ್ತು ಮೂವರು ವೃದ್ಧರು ಉಳಿದುಕೊಳ್ಳುತ್ತಾರೆ, ಆದರೆ ಪುತ್ತೂರಿನ ಸರಕಾರಿ ಕಟ್ಟಡದಲ್ಲಿ ಅದೆಷ್ಟು ವೃದ್ಧರು ಉಳಿದುಕೊಳ್ಳುತ್ತಾರೋ ತಿಳಿಯದು. ಹಿರಿಯ ಸದಸ್ಯೆ ಜಯಂತಿರವರ ಈರ್ವರು ಅಕ್ಕಂದಿರು ನಿಧನರಾಗಿರುವ ಹಿನ್ನೆಲೆಯಲ್ಲಿ ಅವರ ಪೋಷಣಾ ಜವಾಬ್ದಾರಿಯನ್ನು ಸಂಘವು ನೋಡಿಕೊಳ್ಳುತ್ತಿದೆ. ರೈಲ್ವೆ ಇಲಾಖೆಯಲ್ಲಿ ಹಿರಿಯರಿಗೆ ಲೋವರ್ ಬರ್ಥ್ ಮಾತ್ರ ದೊರೆಯುವುದೇ ವಿನಹ ಯಾವುದೇ ಹಣಕಾಸಿನ ರಿಯಾಯಿತಿ ಇಲ್ಲ. ಯಾಕೆಂದರೆ ಕೇಂದ್ರ ಸರಕಾರ ಈ ವ್ಯವಸ್ಥೆಯನ್ನು ಮೂರು ವರ್ಷದ ಹಿಂದೆಯೇ ರದ್ದು ಮಾಡಿದೆ. ಆದರೆ ಸರಕಾರಿ ಬಸ್‌ನಲ್ಲಿ ಪ್ರಯಾಣಿಸುವ ಹಿರಿಯ ನಾಗರಿಕರಿಗೆ ಸೂಕ್ತ ದಾಖಲೆ ತೋರಿಸಿದ್ದಲ್ಲಿ ರಿಯಾಯಿತಿ ಇದೆ ಎಂದು ಸಂಘದ ಸದಸ್ಯರಲ್ಲಿನ ಮನವಿಗೆ ಉತ್ತರಿಸಿದರು. ಕಳೆದ ವರ್ಷ ಸಂಘದ ಸದಸ್ಯರು ಪ್ರವಾಸ ಹೊರಟಿದ್ದೆವು, ಈ ಬಾರಿಯೂ ಉತ್ತರ ಕರ್ನಾಟಕದ ಭಾಗಕ್ಕೆ ಪ್ರವಾಸ ಹೊರಡಲಿದ್ದೇವೆ. ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಸಂಘದ ಸದಸ್ಯರು ಸಂಘದ ಬೆಳವಣಿಗೆಯಲ್ಲಿ ಬಹಳ ಪ್ರೋತ್ಸಾಹ ನೀಡುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದು ಅವರು ಹೇಳಿದರು.
ಮೌನ ಪ್ರಾರ್ಥನೆ:
ಪ್ರಸ್ತುತ ವರ್ಷದಲ್ಲಿ ನಿಧನರಾದ ಸಂಘದ ಸದಸ್ಯರಾದ ನಂದಕುಮಾರ್, ಯಶೋಧ, ಗುಲಾಬಿ, ಶಂಕರ್ ನಾಯ್ಕ್, ಅಲೆಕ್ಸ್ ಮಿನೇಜಸ್, ಅಕ್ಬರ್ ಆಲಿರವರಿಗೆ ಚಿರಶಾಂತಿಯನ್ನು ಕೋರುತ್ತಾ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಸಂಘದ ಕಾರ್ಯದರ್ಶಿ ಯಶೋಧ ಪಿ ಪ್ರಾರ್ಥಿಸಿ, ವರದಿ ವಾಚಿಸಿದರು. ಕೋಶಾಧಿಕಾರಿ ಜಯಂತಿ ನಾಯ್ಕರವರು ಲೆಕ್ಕಪತ್ರ ಮಂಡಿಸಿದರು. ಸಂಘದ ಉಪಾಧ್ಯಕ್ಷರಾದ ಚಂಚಲಾಕ್ಷಿ, ಸಂಘಟನಾ ಕಾರ್ಯದರ್ಶಿ ಟಿ.ಗಣೇಶ್ ರೈ, ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ಐತ್ತಪ್ಪ ನಾೖಕ್, ರೊಸಾರಿಯೋ ಓಸ್ವಾಲ್ಡ್ ಸಲ್ದಾನ್ಹಾ, ಪ್ಯಾಟ್ರಿಕ್ ಲೋಬೊ, ನಿರ್ಮಲ, ಅಬೂಬಕ್ಕರ್ ಎಂ, ಶರತ್ ಕುಮಾರ್ ರಾವ್ ಸಹಿತ ಸದಸ್ಯರು ಉಪಸ್ಥಿತರಿದ್ದರು. ಉಪಾಧ್ಯಕ್ಷ ರಾಮ್ ಮೋಹನ್ ರೈ ಎಂ.ಕೆ ವಂದಿಸಿದರು.
1300 ಸದಸ್ಯರಿದ್ದು ಕೆಲವರು ಸಂಪರ್ಕಕ್ಕೆ ಸಿಗುತ್ತಿಲ್ಲ..
ಸುಮಾರು 1300 ಮಂದಿ ಸದಸ್ಯರಿದ್ದಾರೆ. ಆದರೆ ಅವರನ್ನು ಸಂಪರ್ಕಿಸಲು ಸಾಧ್ಯವಾಗ್ತಿಲ್ಲ. ಯಾಕೆಂದರೆ ಹಿಂದೆ ಇದ್ದದ್ದು ಲ್ಯಾಂಡ್ ಫೋನ್ ಆಗಿದ್ದರಿಂದ ಅನೇಕ ನಂಬ್ರಗಳು ಈಗ ಚಾಲ್ತಿಯಲ್ಲಿಲ್ಲ. ಲಭ್ಯವಿದ್ದ ವಿಳಾಸಕ್ಕೆ ಮಹಾಸಭೆಯ ನೋಟೀಸ್ ಕಳುಹಿಸಿದ್ದು ಸಂಬಂಧಪಟ್ಟವರಿಗೆ ಸಿಗದೆ ಬಹಳಷ್ಟು ನೋಟೀಸ್ ಹಿಂದೆ ಬಂದಿತ್ತು. ಆದ್ದರಿಂದ ಸುದ್ದಿ ಪತ್ರಿಕೆಯಲ್ಲಿ ಜಾಹೀರಾತು ಮತ್ತು ವಾಟ್ಸಪ್ ಮೂಲಕ ಸಂಪರ್ಕಿಸುತ್ತಿದ್ದೇವೆ ಎಂದು ಅಧ್ಯಕ್ಷ ಝೇವಿಯರ್ ಡಿ’ಸೋಜರವರು ಮಾಹಿತಿ ನೀಡಿದರು.
ಸನ್ಮಾನ..
ಸಂಘದಲ್ಲಿನ 80 ವರ್ಷ ಮೇಲ್ಪಟ್ಟ ಸಂಘದ ಸ್ಥಾಪಕಾಧ್ಯಕ್ಷ ಬಿ.ಎಸ್ ಕುಲಾಲ್(99 ವರ್ಷ), ರಂಗನಾಥ್ ರಾವ್, ವಿ.ಬಿ ಆರ್ತಿಕಜೆ, ಜೋಸ್ಫಿನ್ ಗೊನ್ಸಾಲ್ವಿಸ್, ಶ್ರೀಮತಿ ಜಯಂತಿ, ವೆಂಕಟ್ರಮಣ ಭಟ್‌ರವರನ್ನು ಸದಸ್ಯರ ಹಿರಿತನಕ್ಕೆ ಗೌರವ ಕೊಡುವ ನಿಟ್ಟಿನಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮುಂದಿನ ವರ್ಷ 100 ಸಂವತ್ಸರಗಳನ್ನು ಪೂರೈಸುವ ಸ್ಥಾಪಕಾಧ್ಯಕ್ಷ ಬಿ.ಎಸ್ ಕುಲಾಲ್‌ರವರ ಜನ್ಮದಿನವನ್ನು ಸಂಘದಲ್ಲಿ ಆಚರಿಸಲು ಅನುವು ಮಾಡಿಕೊಡಬೇಕು ಎಂದು ಅಧ್ಯಕ್ಷ ಝೇವಿಯರ್ ಡಿ’ಸೋಜರವರು ಸಭೆಯಲ್ಲಿ ಮನವಿ ಮಾಡಿದರು.