ತಾಲೂಕು ಸವಿತಾ ಸಮಾಜದ ಮಹಾಸಭೆ, ಸತ್ಯನಾರಾಯಣ ಪೂಜೆ, ಸನ್ಮಾನ

0

ಪುತ್ತೂರು: ತಾಲೂಕು ಸವಿತಾ ಸಮಾಜದ ವಾರ್ಷಿಕ ಮಹಾಸಭೆ, ಶ್ರೀಸತ್ಯನಾರಾಯಣ ಪೂಜೆ ಹಾಗೂ ಸನ್ಮಾನ ಕಾರ್ಯಕ್ರಮಗಳು ಮಾ.25ರಂದು ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.


ವಾರ್ಷಿಕ ಮಹಾಸಭೆಯ ಅಂಗವಾಗಿ ಬೆಳಿಗ್ಗೆ ಗಣಹೋಮ, ಸತ್ಯನಾರಾಯಣ ಪೂಜೆ ನೆರವೇರಿತು.


ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ, ಸನ್ಮಾನ ಸ್ವೀಕರಿಸಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿ, ಭಂಡಾರಿ ಸಮಾಜ ಸಣ್ಣ ಸಮಾಜ ಎಂಬ ಕೀಲರಿಮೆ ಬೇಡ. ಸಮಾಜದಲ್ಲಿ ನಾವು ಹೆಮ್ಮೆಯಿಂದ ಬದುಕಬೇಕು. ನನ್ನನ್ನು ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆ ಮಾಡುವ ಮೂಲಕ ಇಡೀ ನಮ್ಮ ಸಮಾಜಕ್ಕೆ ಗೌರವ ನೀಡುವ ಕೆಲಸವಾಗಿದೆ. ಮುಂದೆ ಇಡೀ ಹಿಂದೂ ಸಮಾಜದ ಆಸ್ತಿಯಾಗುವ ರೀತಿಯಲ್ಲಿ ಕೆಲಸ ಮಾಡಲಾಗುವುದು ಎಂದರು.

ಯಾವುದೇ ಸಮಾಜದ ವ್ಯಕ್ತಿ ಮೃತಪಟ್ಟಾಗ ಭಂಡಾರಿ ಸಮಾಜದವರು ಶುದ್ದ ಮಾಡಿದಾಗ ಮಾತ್ರ ಮೃತಪಟ್ಟವರಿಗೆ ಆತ್ಮ ಸದ್ಗತಿ ದೊರೆಯಲಿದೆ. ಅಲ್ಲದೇ ಯಾವುದೇ ವ್ಯಕ್ತಿಯನ್ನು ಅಂದಗೊಳಿಸಲು ಭಂಡಾರಿ ಸಮಾಜ ಮುಖ್ಯವಾಗಿದೆ. ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ತಲೆ ತಗ್ಗಿಸುವುದು ನಮ್ಮ ಸೆಲೂನ್‌ಗೆ ಬಂದಾಗ ಮಾತ್ರ. ಹೀಗಾಗಿ ನಮ್ಮ ಸಮಾಜದ ಬಗ್ಗೆ ನಮಗೆ ಹೆಮ್ಮೆಯಿರಬೇಕು ಎಂದರು.


ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಆನಂದ ಭಂಡಾರಿ, ರಾಜಕೀಯ, ಸಾಮಾಜಿಕವಾಗಿ ಭಲಾಡ್ಯವಾಗಲು ಸಂಘಟನೆ ಆವಶ್ಯಕ. ಸಮುದಾಯದ ಮಹತ್ವವನ್ನು ಇತರ ಸಂಘಟನೆಗಳನ್ನು ನೋಡಿಕಲಿಯಬೇಕು. ಸಣ್ಣ ಸಮಾಜವಾಗಿರುವ ಭಂಡಾರಿ ಸಮಾಜದಲ್ಲಿ ನಮ್ಮಲ್ಲಿ ಓಟ್ ಬ್ಯಾಂಕ್ ಇಲ್ಲದೇ ಇದ್ದು ನಾವು ಹೋರಾಟ ಮಾಡಿದಾಗ ಸರಕಾರ ಕೇಳದೇ ಇರಬಹುದು. ಹೀಗಾಗಿ ಸಾಮಾಜಿಕ ಚಿಂತನೆಯೊಂದಿಗೆ ಒಗ್ಗಟ್ಟಿನಿಂದ ಸಂಘಟಿತರಾಗಬೇಕು. ಸಂಘಟನೆ ನಮ್ಮ ವೈಯಕ್ತಿಕ ಸಾಧನೆಗಾಗಿ ಅಲ್ಲ. ನಮಗೂ ಒಂದು ಸಂಘಟನೆ ಬೇಕು, ಸಮಾಜದ ಎಳಿಗೆಗೆ ಬದ್ದವಾಗಿ ಸಂಘಟನೆ ಮಾಡಲಾಗುತ್ತಿದೆ. ಇದಕ್ಕಾಗಿ ಸಹಕಾರಿ ಸಂಘ ಸ್ಥಾಪಿಸಲಾಗಿದೆ. ಸಹಕಾರಿ ಸಂಘದ ಲಾಭಾಂಶ ಸಮಾಜದ ವಿವಿಧ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತಿದ್ದು ಸಮಾಜ ಬಾಂಧವರು ಸಂಘದಲ್ಲಿ ವ್ಯವಹರಿಸಿ, ಸಹಕರಿಸುವಂತೆ ವಿನಂತಿಸಿದರು.


ಪುತ್ತೂರು ಭಂಡಾರಿ ಸಮಾಜದ ಅಧ್ಯಕ್ಷ ಬೆಳ್ಳಿಪ್ಪಾಡಿ ಕೇಶವ ಭಂಡಾರಿ ಕೈಪ ಮಾತನಾಡಿ, ಭಂಡಾರಿ ಸಮಾಜಕ್ಕೆ ಸ್ವಂತ ಕಟ್ಟಡವಿಲ್ಲ. ಹಲವು ಮಂದಿಯಲ್ಲಿ ಜಾಗ ನೀಡುವಂತೆ ಮನವಿ ಮಾಡಿದ್ದರೂ ಯಾರೂ ನೀಡಿಲ್ಲ. ನಿವೇಶನಕ್ಕಾಗಿ ಕಳೆದ ೮ ವರ್ಷಗಳಿಂದ ಪ್ರಯತ್ನಿಸಿದ್ದು ಊಗ ಕಾಲ ಕೂಡಿ ಬಂದಿದೆ. ಸರಕಾರದಿಂದ ಮುಖ್ಯರಸ್ತೆ ಬದಿಯಲ್ಲಿ ೧೦ ಸೆಂಟ್ಸ್ ಜಾಗ ಮಂಜೂರಾಗಿದ್ದು ಜಿಲ್ಲಾಧಿಕಾರಿಗಳ ಹಂತದಲ್ಲಿದೆ ಎಂದರು. ಭಂಡಾರಿ ಸಮಾಜದಲ್ಲಿ ಜನಸಂಖ್ಯೆ ಕಡಿಮೆಯಿರುವುದರಿಂದ ಯಾರೂ ನಮ್ಮ ಸಮಾಜವನ್ನು ಗುರುತಿಸುವುದಿಲ್ಲ್ಲ. ಹೀಗಾಗಿ ಸಂಘಟನೆ ಬಲಿಷ್ಠ ಗೊಳಿಸಬೇಕು. ಸಂಘದ ಭೇಳವಣಿಗೆಗೆ ಸಮಾಜ ಬಾಂಧವರು ಸಹಕರಿಸುವಂತೆ ವಿನಂತಿಸಿದರು.


ನೂತನ ಅಧ್ಯಕ್ಷ ಪ್ರವೀಣ್ ಸಂಪ್ಯ ಮಾತನಾಡಿ, ಮುಂದಿನ ಅವಧಿಯಲ್ಲಿ ಸಂಘದ ಎಲ್ಲಾ ಕಾರ್ಯಕ್ರಮಗಳಲ್ಲಿ ಸಮಾಜ ಬಾಂಧವರು ಸಹಕರಿಸುವಂತೆ ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಮೇಶ್ ಭಂಡಾರಿ ಮುರ ಮಾತನಾಡಿ, ಕಳೆದ ಮೂವತ್ತು ವರ್ಷಗಳಿಂದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಕೆಲ ಸಮಯಗಳಿಂದ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದು ತನ್ನ ಅವಧಿಯಲ್ಲಿ ಸಂಘದ ಕಾರ್ಯಕ್ರಮ, ಸಂಘದ ಬೆಳವಣಿಗೆಯಲ್ಲಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.


ಸವಿತಾ ಸಮಾಜದ ಜಿಲ್ಲಾ ಕಾರ್ಯದರ್ಶಿ, ರಾಜ್ಯಪ್ರತಿನಿಧಿಯಾಗಿರುವ ವಸಂತ ಬೆಳ್ಳೂರು, ಜಿಲ್ಲಾ ಕೋಶಾಧಿಕಾರಿ ಭುಜಂಗ ಸಾಲ್ಯಾನ್, ಸವಿತಾ ಸಮಾಜದ ಮಾಜಿ ಜಿಲ್ಲಾಧ್ಯಕ್ಷ ದಿನೇಶ್ ಎಲ್ ಬಂಗೇರ, ಬಂಟ್ವಾಳ ಸವಿತಾ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷ ಸುರೇಶ್ ನಂದೊಟ್ಟು, ಸವಿತಾ ಸಮಾಜದ ಬಂಟ್ವಾಳ ತಾಲೂಕು ಅಧ್ಯಕ್ಷ ವಿಶ್ವನಾಥ ಸಾಲ್ಯಾನ್, ಕಡಬ ತಾಲೂಕು ಅಧ್ಯಕ್ಷ ವಸಂತ ಭಂಡಾರಿ, ಸವಿತಾ ಸೌಹಾರ್ದ ಸಹಕಾರಿಯ ನಿರ್ದೇಶಕಿ ಸುಮಲತಾ ಭಂಡಾರಿ, ಜಿಲ್ಲಾ ಪ್ರತಿನಿಧಿ ಜಿ.ಬಿ ವೆಂಕಟೇಶ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸನ್ಮಾನ:
ವಿಧಾನ ಪರಿಷತ್ ಸದಸ್ಯರಾಗಿ ಚುನಾಯಿತರಾದ ಕಿಶೋರ್ ಕುಮಾರ್ ಬೊಟ್ಯಾಡಿ, ಕ್ಷೌರಿಕ ವೃತ್ತಿ ಸಾಧನೆ ನರಸಿಂಹ ಭಂಡಾರಿ ಬೆಟ್ಟಂಪಾಡಿ, ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಗೀತಾ, ಕೊಳ್ರಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಚುನಾಯಿತರಾದ ಪ್ರವೀಣ್ ಜಿ.ಕೆ., ಬಾಯಂಬಾಡಿ ಷಣ್ಮುಖದೇವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆಯಾಗಿ ನೇಮಕಗೊಂಡಿರುವ ವಿಶಾಲಾಕ್ಷಿ, ಸಂಘದ ನಿಕಟಪೂರ್ವ ಅಧ್ಯಕ್ಷ ರಮೇಶ್ ಮುರ ಹಾಗೂ ಕಾರ್ಯದರ್ಶಿ ಶರತ್ ಪುರುಷರಕಟ್ಟೆಯವರನ್ನು ಸನ್ಮಾನಿಸಲಾಯಿತು.


ನೂತನ ಪದಾಧಿಕಾರಿಗಳ ಪದಗ್ರಹಣ:
ಸವಿತಾ ಸಮಾಜದ ಮುಂದಿನ ಮೂರು ವರ್ಷಗಳ ಅವಧಿಯ ನೂತನ ಪದಾಧಿಕಾರಿಗಳ ಪದಗ್ರಹಣವು ಇದೇ ಸಂದರ್ಭದಲ್ಲಿ ನೆರವೇರಿತು. ನಿಕಟಪೂರ್ವ ಅಧ್ಯಕ್ಷ ರಮೇಶ್ ಭಂಡಾರಿಯವರು ನೂತನ ಅಧ್ಯಕ್ಷ ಪ್ರವೀಣ್ ಭಂಡಾರಿ ಸಂಪ್ಯ ಇವರಿಗೆ ದಾಖಲೆಪತ್ರ ಹಸ್ತಾಂತರಿಸುವ ಮೂಲಕ ಪದಗ್ರಹಣ ನೆರವೇರಿತು.


ತೃಪ್ತಿ ಭಂಡಾರಿ ಪ್ರಾರ್ಥಿಸಿದರು. ಶೋಭಿತಾ ಭಂಡಾರಿ ಸ್ವಾಗತಿಸಿದರು. ಕಾರ್ಯದರ್ಶಿ ಶರತ್ ಪುರುಷರಕಟ್ಟೆ ವರದಿ, ಲೆಕ್ಕಪತ್ರ ಮಂಡಿಸಿದರು. ಅನುಷಾ ವಿಟ್ಲ ಕಾರ್ಯಕ್ರಮ ನಿರೂಪಿಸಿ, ಪ್ರವೀಣ್ ಜಿ.ಕೆ ವಂದಿಸಿದರು. ಪ್ರವೀಣ್ ಭಂಡಾರಿ ಸಂಪ್ಯ, ಹರೀಶ್ ಕುಂಜೂರುಪಂಜ, ಪ್ರಕಾಶ್ ತಿಂಗಳಾಡಿ, ಅನೀಶ್, ಜಿ.ವಿ ವೆಂಕಟೇಶ್ ಭಂಡಾರಿ, ಶೋಭಾ ರಮೇಶ್ ಭಂಡಾರಿ, ಬಾಲಕೃಷ್ಣ ಭಂಡಾರಿ ಹಾರಾಡಿ ಅತಿಥಿಳನ್ನು ಹೂ ನೀಡಿ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ನೆರವೇರಿತು.

LEAVE A REPLY

Please enter your comment!
Please enter your name here