ನೆಲ್ಯಾಡಿ: ಕಡಬ ತಾಲೂಕಿನ ಕೊಣಾಜೆಯಲ್ಲಿ ತೋಟದ ಕೆಲಸ ಮಾಡುತ್ತಿದ್ದ ಉತ್ತರಪ್ರದೇಶ ಮೂಲದ ದಂಪತಿಯ ಎರಡೂವರೇ ವರ್ಷದ ಮಗುವೊಂದು ಗಂಟಲಲ್ಲಿ ಆಹಾರ ಸಿಲುಕಿಕೊಂಡು ಮೃತಪಟ್ಟ ಘಟನೆ ಮಾ.25ರಂದು ನಡೆದಿರುವ ಬಗ್ಗೆ ವರದಿಯಾಗಿದೆ.
ಉತ್ತರ ಪ್ರದೇಶ ಮೂಲದ ರಾಜಾಸಿಂಗ್ ಹಾಗೂ ದಿವ್ಯಾಂಶಿ ಸಿಂಗ್ ದಂಪತಿ ಪುತ್ರ, ಎರಡೂವರೇ ವರ್ಷದ ರುದ್ರಪ್ರತಾಪ್ ಸಿಂಗ್ ಮೃತಪಟ್ಟ ದುರ್ದೈವಿ ಮಗುವಾಗಿದೆ. ರಾಜಾಸಿಂಗ್ ಹಾಗೂ ದಿವ್ಯಾಂಶಿ ಸಿಂಗ್ ದಂಪತಿ ಕೊಣಾಜೆ ಗ್ರಾಮದ ಮಾಲ ಎಂಬಲ್ಲಿ ಲಿಂಡೋರಾಜ್ ಎಂಬವರ ಜಾಗದಲ್ಲಿನ ತೋಟದ ಕೆಲಸ ಮಾಡಿಕೊಂಡಿದ್ದು, ಮಾ.25ರಂದು ಬೆಳಿಗ್ಗೆ 11 ಗಂಟೆ ವೇಳೆಗೆ ದಿವ್ಯಾಂಶಿ ಅವರು ಮಗುವಿಗೆ ಊಟ ಕೊಟ್ಟು ಬಳಿಕ ಮಗುವಿಗೆ ನಿದ್ದೆ ಬಂದ ಕಾರಣ ಮಗುವನ್ನು ಮಲಗಿಸಿದ್ದು, ಮಧ್ಯಾಹ್ನ 1 ಗಂಟೆಗೆ ಹೋಗಿ ಮಗುವನ್ನು ಎಬ್ಬಿಸಿದಾಗ ಮಗು ಏಳದೇ ಇದ್ದು ಪುನಃ ಪುನಃ ಎಬ್ಬಿಸಿದರೂ ಏಳದೇ ಇದ್ದುದರಿಂದ ತೋಟದ ಮಾಲಕ ಲಿಂಡೋರಾಜ್ರವರಿಗೆ ಫೋನ್ ಮಾಡಿ ವಿಚಾರ ತಿಳಿಸಿದ್ದು, ಬಳಿಕ ಲಿಂಡೋರಾಜ್ ಅವರ ಕಾರಿನಲ್ಲಿ ಮಗುವನ್ನು ಕಡಬ ಜೆ.ಎಂ.ಜೆ ಆಸ್ಪತ್ರೆಗೆ ಮಧ್ಯಾಹ್ನ 1.30 ಗಂಟೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿ, ಅಲ್ಲಿಂದ ಕಡಬ ಆಸ್ಪತ್ರೆಗೆ ಕೊಂಡುಹೋಗುವಂತೆ ತಿಳಿಸಿದ್ದಾರೆ. ಕೂಡಲೇ ಕಡಬ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿಯ ವೈದ್ಯರು ಮಗುವನ್ನು ಪರೀಕ್ಷಿಸಿ ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮಗು ರುದ್ರಪ್ರತಾಪ್ ಸಿಂಗ್ ಆಹಾರ ಸಿಕ್ಕಿಕೊಂಡು ಅಥವಾ ಬೇರೆ ಯಾವುದೋ ಖಾಯಿಲೆಯು ಉಲ್ಬಣಗೊಂಡು ಮೃತಪಟ್ಟಿರುವುದಾಗಿದೆ ಎಂದು ಮಗುವಿನ ತಾಯಿ ದಿವ್ಯಾಂಶಿ ಸಿಂಗ್ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.