ಪುತ್ತೂರು: ಯುವತಿಯೋರ್ವರನ್ನು ಅಪಹರಣಗೈದು ಮುಂಬೈಗೆ ಕರೆದೊಯ್ದು ಬೆದರಿಸಿ ಒತ್ತಾಯಪೂರ್ವಕ ದೈಹಿಕ ಸಂಪರ್ಕ ಬೆಳೆಸಿದ್ದ ಆರೋಪಿಯನ್ನು ನ್ಯಾಯಾಲಯ ನಿರ್ದೋಷಿ ಎಂದು ಬಿಡುಗಡೆ ಮಾಡಿದೆ.
ಸವಣೂರು ಗ್ರಾಮದ ಇಡ್ಯಾಡಿ ನಿವಾಸಿ ಬಾಲಕೃಷ್ಣ ಗೌಡ ಎಂಬಾತ ಮನೀಶಾ ರೈ ಎಂಬವರನ್ನು ೦8.10.2020ರಂದು ಪುತ್ತೂರಿನ ಕಲ್ಲಾರೆಯಿಂದ ತನ್ನ ರಿಕ್ಷಾದಲ್ಲಿ ಹತ್ತಿಸಿಕೊಂಡು, ಸವಣೂರು ಕಡೆಗೆ ಹೋಗುವುದಾಗಿ ಹೇಳಿ ಕರೆದೊಯ್ದಿದ್ದರು. ಸರ್ವೆ ಎಂಬಲ್ಲಿಗೆ ಮುಟ್ಟಿದಾಗ ಮನೀಶಾ ಅವರ ಮೊಬೈಲನ್ನು ಆತ ಗೌರಿ ಹೊಳೆಗೆ ಬಿಸಾಡಿದ್ದಲ್ಲದೆ ಆಕೆಗೆ ಜೀವ ಬೆದರಿಕೆ ಒಡ್ಡಿ ರಿಕ್ಷಾವನ್ನು ವಾಪಸ್ ಪುತ್ತೂರು ಕಡೆಗೆ ತಿರುಗಿಸಿ ಸಂಬಂಧಿಕರ ಮನೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ವಿಚಾರ ಯಾರಿಗೂ ತಿಳಿಸದಂತೆ ಆಕೆಗೆ ಬೆದರಿಸಿದ್ದಲ್ಲದೆ 9.10.2೦2೦ರಂದು ಬೆದರಿಸಿ ಬೊಂಬಾಯಿಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ತನ್ನ ಅಕ್ಕನ ಮನೆಗೆ ಮನೀಶಾರನ್ನು ಕರೆದುಕೊಂಡು ಹೋಗಿ, ನಿನ್ನನ್ನು ಮದುವೆಯಾಗುತ್ತೇನೆ. ಇನ್ನು ನನ್ನನ್ನು ಯಾರೂ ಏನು ಮಾಡಲೂ ಆಗುವುದಿಲ್ಲ ಎಂದು ಬೆದರಿಸಿ 11.10.2೦2೦ ರಂದು ಮುಂಬೈನ ನಿರ್ಮಲ ನಗರದ ಶ್ರೀ ರಾಮ ಮಂದಿರದಲ್ಲಿ ಮೋಸದ ಮದುವೆಯ ನಾಟಕವಾಡಿ ದಿನಾಂಕ 12.10.2೦2೦ರಂದು ವಕೀಲರ ಬಳಿ ಹೋಗಿ ಮ್ಯಾರೇಜ್ ಡಿಕ್ಲೆರೇಶನ್ ಮಾಡಿಕೊಂಡಿದ್ದರು. ಬಳಿಕ ಮನೀಶಾರನ್ನು ಬೆದರಿಸಿ, ಒತ್ತಾಯ ಪೂರ್ವಕವಾಗಿ ದೈಹಿಕ ಸಂಪರ್ಕ ಮಾಡಿದ್ದಾಗಿ ಆರೋಪಿಸಿ ಬಾಲಕೃಷ್ಣ ಗೌಡರ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್ ನಿರೀಕ್ಷಕರಾದ ಕುಸುಮಾಧರ ಕೆ ಮತ್ತು ತಿಮ್ಮಪ್ಪ ನಾಯ್ಕ ಅವರು ತನಿಖೆ ನಡೆಸಿ ಆರೋಪಿ ಬಾಲಕೃಷ್ಣ ಗೌಡ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಽಶರಾದ ಕಾಂತರಾಜುರವರು 21 ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಿ,ಆರೋಪಿಯ ಮೇಲೆ ಮಾಡಲಾದ ಆರೋಪವನ್ನು ರುಜುವಾತು ಪಡಿಸಿಲ್ಲ ಎಂಬ ಕಾರಣಕ್ಕಾಗಿ ಆರೋಪಿಯನ್ನು ನಿರ್ದೋಷಿ ಎಂದು ಪರಿಗಣಿಸಿ ಬಿಡುಗಡೆಗೊಳಿಸಿರುತ್ತಾರೆ. ಆರೋಪಿಯ ಪರವಾಗಿ ವಕೀಲರಾದ ದೇವಾನಂದ ಕೆ, ವಿಜಯ ಕುಮಾರ್ ಮತ್ತು ಹರಿಣಿ ವಾದಿಸಿದ್ದರು.