ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಜೊತೆ ಜಲೀಲ್ ಕರೋಪಾಡಿ ಕೊಲೆ ಆರೋಪಿ ಪ್ರಜ್ವಲ್ ರೈ
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ಚಿತ್ರನಟ ದರ್ಶನ್ ಕೇರಳದ ಕಣ್ಣೂರಿನ ಮಡಾಯಿಕಾವು ಭಗವತಿ ದೇವಾಲಯದಲ್ಲಿ ಶತ್ರು ಸಂಹಾರ ಹೋಮ ಮಾಡಿಸಿದ ಸಂದರ್ಭ ಅವರೊಂದಿಗೆ, ಬೇರೊಂದು ಕೊಲೆ ಪ್ರಕರಣದ ಆರೋಪಿಯಾಗಿರುವ ಪುತ್ತೂರಿನ ಪ್ರಜ್ವಲ್ ರೈ ಪಾತಾಜೆ ಇರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿ ಬಳಿಕ ನ್ಯಾಯಾಲಯದಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ದರ್ಶನ್, ತನ್ನ ನಟನೆಯ ‘ಡೆವಿಲ್’ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದು ಮತ್ತೊಂದೆಡೆ ಕುಟುಂಬದವರೊಂದಿಗೆ ದೇವಾಲಯಗಳಿಗೆ ಭೇಟಿ ನೀಡಿ ಪೂಜಾ ಕಾರ್ಯಗಳನ್ನೂ ನೆರವೇರಿಸುತ್ತಿದ್ದಾರೆ. ಈ ಮಧ್ಯೆ, ಕೇರಳದ ಕಣ್ಣೂರಿನ ಮಡಾಯಿಕಾವು ಭಗವತಿ ದೇವಾಲಯಕ್ಕೆ ದರ್ಶನ್ ಭೇಟಿ ನೀಡಿ ಪೂಜೆ ಮಾಡಿಸಿಕೊಂಡಿದ್ದರು.ಅವರೊಟ್ಟಿಗೆ ಅವರ ಪತ್ನಿ ವಿಜಯಲಕ್ಷ್ಮೀ, ಪುತ್ರ ವಿನೇಶ್, ಧನ್ವೀರ್ ಗೌಡ ಸಹ ಇದ್ದರು. ಜೊತೆಗೆ ಪ್ರಜ್ವಲ್ ರೈ ಪಾತಾಜೆ ದರ್ಶನ್ ಅವರೊಂದಿಗೆ ಇದ್ದ ಫೊಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶತ್ರು ಸಂಹಾರ ಹೋಮಕ್ಕೆ ಪ್ರಸಿದ್ಧಿಯಾಗಿರುವ ಕಣ್ಣೂರಿನ ಮಡಾಯಿಕಾವು ಭಗವತಿ ದೇವಸ್ಥಾನಕ್ಕೆ ದರ್ಶನ್ ಅವರನ್ನು ಪ್ರಜ್ವಲ್ ಅವರೇ ಕರೆದುಕೊಂಡು ಹೋಗಿದ್ದರು ಎನ್ನಲಾಗುತ್ತಿದೆ. ಪುತ್ತೂರಿನಲ್ಲಿಯೂ ಗೆಳೆಯರನ್ನು ಹೊಂದಿರುವ ನಟ ದರ್ಶನ್, ಅವರ ಮಾರ್ಗದರ್ಶನದಂತೆಯೇ ಕಣ್ಣೂರಿನ ಮಡಾಯಿಕಾವು ಭದ್ರಕಾಳಿ ದೇವಾಲಯಕ್ಕೆ ಭೇಟಿ ನೀಡಿ ಅಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಅವರ ಜೊತೆ ಪ್ರಜ್ವಲ್ ರೈ ಪಾತಾಜೆ ಇದ್ದ ಫೊಟೋಗಳು ವೈರಲ್ ಆಗಿದ್ದು, ಇಬ್ಬರು ಕೊಲೆ ಆರೋಪಿಗಳು ಒಟ್ಟಿಗೆ ಹೋಗಿ ಶತ್ರು ಸಂಹಾರಕ್ಕಾಗಿ ಪೂಜೆ ಮಾಡಿಸಿದ್ದಾರೆ ಎಂಬ ಒಕ್ಕಣೆಯೊಂದಿಗೆ, ದರ್ಶನ್ ಅವರೊಂದಿಗೆ ಪ್ರಜ್ವಲ್ ರೈ ಪಾತಾಜೆ ಇರುವ ಫೊಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಜ್ಯ ಮಟ್ಟದ ಟಿ.ವಿ. ವಾಹಿನಿ ಮತ್ತು ಪತ್ರಿಕೆಗಳಲ್ಲಿ ವರದಿ ಪ್ರಸಾರವಾಗಿದೆ.
ಪ್ರಜ್ವಲ್ ರೈ 2017ರಲ್ಲಿ ನಡೆದಿದ್ದ ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ, ಕಾಂಗ್ರೆಸ್ ಮುಖಂಡ ಜಲೀಲ್ ಕೊಲೆ ಪ್ರಕರಣದ ಆರೋಪಿಯಾಗಿದ್ದು ನ್ಯಾಯಾಲಯದಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡು ವಿಚಾರಣೆ ಎದುರಿಸುತ್ತಿದ್ದಾರೆ. 2017ರ ಏಪ್ರಿಲ್ 20ರಂದು ಹಾಡಹಗಲೇ ಕರೋಪಾಡಿ ಗ್ರಾಮ ಪಂಚಾಯತ್ ಬಳಿಯೇ ಜಲೀಲ್ ಅವರನ್ನು ಕೊಲೆ ಮಾಡಲಾಗಿತ್ತು. ಮುಸುಕುಧಾರಿಗಳ ತಂಡವೊಂದು ಗ್ರಾಮ ಪಂಚಾಯತ್‌ಗೆ ನುಗ್ಗಿ ಜಲೀಲ್ ಅವರ ಕಣ್ಣಿಗೆ ಮೆಣಸಿನ ಪುಡಿ ಎರಚಿ ಬಳಿಕ ಮಚ್ಚಿನಿಂದ ಕಡಿದು ಕೊಲೆ ಮಾಡಿದ್ದರು. ಆರೋಪಿಗಳ ಪತ್ತೆಗಾಗಿ ಪೊಲೀಸರು ವಿಶೇಷ ತಂಡಗಳ ರಚನೆ ಮಾಡಿದ್ದರು.ಕೊನೆಗೂ ಹನ್ನೊಂದು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ನ್ಯಾಯಾಲಯದಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಪ್ರಜ್ವಲ್ ರೈ ಇದೀಗ ದರ್ಶನ್ ಅವರೊಂದಿಗೆ ಇರುವ ಫೊಟೋಗಳುಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.