ಪುತ್ತೂರು: ಬೆಂಕಿ ನಮ್ಮ ಮಿತ್ರನೂ ಹೌದು ಶತ್ರುವೂ ಹೌದು. ಆದರೆ ಅದನ್ನು ಬಳಸುವಲ್ಲಿ ವ್ಯತ್ಯಯ ಉಂಟಾದರೆ ಅದರಿಂದ ಸಾವು ನೋವುಗಳು, ಕಷ್ಟ ನಷ್ಟಗಳು ಉಂಟಾಗಬಹುದು. ಹಾಗಾಗಿ ಇದರ ಬಗ್ಗೆ ಸೂಕ್ತ ಮುನ್ನೆಚ್ಚರಿಕೆಯ ಜತೆಗೆ ಅಗ್ನಿ ಅವಘಡಗಳ ನಿಯಂತ್ರಣದ ಬಗ್ಗೆಯೂ ನಾವು ಜಾಗೃತರಾಗಿರಬೇಕು ಎಂದು ಪುತ್ತೂರು ಅಗ್ನಿಶಾಮಕ ಮತ್ತು ತುರ್ತುಸೇವಾ ಠಾಣೆಯ ಪ್ರಮುಖ ಅಗ್ನಿಶಾಮಕ ರುಕ್ಮಯ ಗೌಡ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಎಂಬಿಎ ಮತ್ತು ಎನ್ಎಸ್ಎಸ್ ವಿಭಾಗದ ವತಿಯಿಂದ ಏರ್ಪಡಿಸಲಾದ ಅಗ್ನಿ ಸುರಕ್ಷತೆಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತಾಡಿದರು. ಬೆಂಕಿಯ ತೀವ್ರತೆಗಳಿಗೆ ಅನುಗುಣವಾಗಿ ಅದನ್ನು ಅನೇಕ ವಿಭಾಗಗಳಾಗಿ ವಿಂಗಡಿಸಿದ್ದಾರೆ. ಎಲ್ಲಾ ಬಗೆಯ ಬೆಂಕಿ ಅನಾಹುತಗಳಿಗೆ ನೀರು ಹಾಯಿಸುವುದೇ ಪರಿಹಾರವಲ್ಲ ಬದಲಿಗೆ ವಿವಿಧ ರೀತಿಯ ನಿವಾರಕ ವಿಧಾನಗಳನ್ನು ಅನುಸರಿಸಬೇಕು. ಬೆಂಕಿ ಉರಿಯುವುದಕ್ಕೆ ದಹ್ಯ ವಸ್ತು, ಶಾಖ ಮತ್ತು ಗಾಳಿಯ ಅಗತ್ಯವಿದೆ. ಇದರಲ್ಲಿ ಒಂದನ್ನು ನಿವಾರಿಸಿದರೆ ಬೆಂಕಿಯನ್ನು ನಂದಿಸಬಹುದು ಎಂದರು. ಸಂದರ್ಭಕ್ಕೆ ತಕ್ಕಂತೆ ಅದರ ನಿವಾರಣೆಗೆ ನೀರು, ಫೋಮ್ ಮಿಶ್ರಿತ ನೀರು ಹಾಗೂ ಇನ್ನಿತರ ಅಗ್ನಿ ಶಾಮಕಗಳನ್ನು ಬಳಸಬೇಕು, ಬೆಂಕಿಯ ತೀವ್ರತೆ ಕಡಿಮೆ ಇದ್ದಾಗ ಸಾಂಪ್ರದಾಯಿಕ ವಿಧಾನಗಳೂ ಕೂಡ ಬಳಕೆಗೆ ಬರುತ್ತವೆ ಎಂದರು. ಅಗ್ನಿ ಆಕಸ್ಮಿಕಗಳು ಸಂಭವಿಸಿದಾಗ ಧೃತಿಗೆಡತೆ ತಕ್ಷಣವೇ ಅದರ ನಿವಾರಣೆಗೆ ಸನ್ನದ್ಧರಾಗಬೇಕು ಎಂದು ಹೇಳಿದರು.
ಬೆಂಕಿ ನಂದಿಸುವ ವಿವಿಧ ವಿಧಾನಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ಅವರು ತೋರಿಸಿಕೊಟ್ಟರು. ವಿದ್ಯಾರ್ಥಿಗಳೂ ಕೂಡಾ ಇದರ ವಿಧಾನಗಳನ್ನು ತಾವೇ ಮಾಡುವುದರ ಮೂಲಕ ಕಲಿತುಕೊಂಡರು.
ಪುತ್ತೂರು ಅಗ್ನಿಶಾಮಕ ಮತ್ತು ತುರ್ತುಸೇವಾ ಠಾಣೆಯ ಪ್ರಮುಖ ಅಗ್ನಿಶಾಮಕ ರುಕ್ಮಯ ಗೌಡ ಅವರ ನೇತೃತ್ವದಲ್ಲಿ ಪ್ರಮುಖ ಅಗ್ನಿ ಶಾಮಕ ಕೃಷ್ಣಪ್ಪ, ಅಗ್ನಿಶಾಮಕರಾದ ಕುಶಾಲಪ್ಪ, ಮಂಜುನಾಥ ಅಗ್ನಿಶಾಮಕ ಚಾಲಕರಾದ ಸಚಿನ್.ಕೆ.ವಿ ಮತ್ತು ಕಾಂತರಾಜು ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಟ್ಟರು.
ಕಾರ್ಯಕ್ರಮ ಸಂಯೋಜಕ ಮತ್ತು ಎಂಬಿಎ ವಿಭಾಗದ ನಿರ್ದೇಶಕ ಡಾ.ರೋಬಿನ್ ಶಿಂಧೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು., ವಿಬಾಗ ಮುಖ್ಯಸ್ಥರು, ಉಪನ್ಯಾಸಕರು, ಸಿಬ್ಬಂದಿಗಳು, ಎಂಬಿಎ, ಎಂಸಿಎ ಮತ್ತು ಎನ್ಎಸ್ಎಸ್ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಂಡರು. ಎಲೆಕ್ಟ್ರಾನಿಕ್ಸ್ ವಿಭಾಗದ ಪ್ರಯೋಗಾಲಯ ಮೇಲ್ವಿಚಾರಕ ಹರಿಪ್ರಸಾದ್.ಡಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.
Home ಇತ್ತೀಚಿನ ಸುದ್ದಿಗಳು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಅಗ್ನಿ ಸುರಕ್ಷತೆಯ ಜಾಗೃತಿ ಕಾರ್ಯಕ್ರಮ