ʼತಪ್ಪು ನಡೆದಾಗ ಕಠಿಣ ಕ್ರಮ ಕೈಗೊಳ್ಳಿ ನಾವು ನಿಮ್ಮ ಜೊತೆಗೆ ಇದ್ದೇವೆʼ-ಶಾಂತಿ ಸಭೆಯಲ್ಲಿ ಪೊಲೀಸರಿಗೆ ಧೈರ್ಯ ತುಂಬಿದ ಮುಖಂಡರು

0

ಪುತ್ತೂರು:ಇವತ್ತು ಪೊಲೀಸರ ಬಗ್ಗೆ ಜನರಲ್ಲಿ ಭಯವಿಲ್ಲ.ನಿಷೇಧಿತ ಅಮಲು ಪದಾರ್ಥ ಸೇವನೆ ಮಾಡಿದಾತನನ್ನು ವಿಚಾರಿಸಿದರೆ ಆತನೇ ಪೊಲೀಸರ ಹೆಸರನ್ನು ಉಲ್ಲೇಖಿಸುತ್ತಾನೆ.ಇಂತಹ ಸಂದರ್ಭದಲ್ಲಿ ಪೊಲೀಸರು ಸ್ವಲ್ಪ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.ನೀವು ತೆಗೆದುಕೊಳ್ಳುವ ಕ್ರಮಗಳು ಕಠಿಣವಾದಾಗ ಯಾವ ಸಮಸ್ಯೆಯೂ ಇರುವುದಿಲ್ಲ.ನಿಮ್ಮ ಜೊತೆ ನಾವಿದ್ದೇವೆ ಎಂದು ಹೇಳಿ,ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಪಾಲ್ಗೊಂಡ ಮುಖಂಡರು ಪೊಲೀಸರಿಗೇ ಧೈರ್ಯ ತುಂಬಿದ ಘಟನೆ ನಡೆದಿದೆ.


ಮುಂಬರುವ ರಮ್ಝಾನ್ ಮತ್ತು ಚಾಂದ್ರಮಾನ ಯುಗಾದಿಯ ಹಿನ್ನೆಲೆಯಲ್ಲಿ ಮಾ.27ರಂದು ಸಂಜೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಡೆಯಿತು.ಇನ್‌ಸ್ಪೆಕ್ಟರ್ ಜಾನ್ಸನ್ ಕಿರಣ್ ಡಿ’ಸೋಜ ಅವರು ಅಧ್ಯಕ್ಷತೆ ವಹಿಸಿದ್ದರು.ಸಮಾಜದ ತಪ್ಪನ್ನು ತಿದ್ದುವ ಮತ್ತು ತಪ್ಪಿತಸ್ಥರ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳುವ ಅಧಿಕಾರವಿರುವ ಪೊಲೀಸರಿಗೇ ಶಾಂತಿ ಸಭೆಯಲ್ಲಿದ್ದ ಮುಖಂಡರು ಧೈರ್ಯ ತುಂಬುವ ಮಾತುಗಳನ್ನಾಡಿದ್ದು ವಿಶೇಷವಾಗಿತ್ತು.


ಮಾದಕ ವಸ್ತುಗಳ ವಿಚಾರದಲ್ಲಿ ಹಸ್ತಕ್ಷೇಪವಿಲ್ಲ-ಕ್ರಮಕೈಗೊಳ್ಳಿ:
ಇವತ್ತು ಸಮಾಜದಲ್ಲಿ ಡ್ರಗ್ಸ್ ಹಾವಳಿ ವ್ಯಾಪಕವಾಗಿದ್ದು ಇದೊಂದು ಅತ್ಯಂತ ಗಂಭೀರ ವಿಚಾರವಾಗಿದೆ.ಇದರಲ್ಲಿ ಆ ಸಮುದಾಯ ಈ ಸಮುದಾಯ ಎಂದಿಲ್ಲ.ಎಲ್ಲಾ ಸಮುದಾಯದವರು ಇದ್ದಾರೆ.ಡ್ರಗ್ಸ್ ಪಡೆಯುವವರು ವಾಟ್ಸ್‌ಆಪ್ ಗ್ರೂಪ್ ಮಾಡಿಕೊಂಡಿದ್ದಾರೆ.ಅದರಲ್ಲಿ ಎಲ್ಲಾ ಸಮುದಾಯದವರೂ ಇದ್ದಾರೆ.ಈ ನಿಟ್ಟಿನಲ್ಲಿ ಇಲಾಖೆ ಎಷ್ಟು ಕೆಲಸ ಮಾಡುತ್ತದೆ ಎಂಬುದು ಗೊತ್ತಿಲ್ಲ ಎಂದು ಬಿಜೆಪಿ ಮುಖಂಡ ಮುರಳಿಕೃಷ್ಣ ಹಸಂತಡ್ಕ ಅವರು ಪ್ರಸ್ತಾಪಿಸಿದರು.ಕೆಪಿಸಿಸಿ ಸಂಯೋಜಕ, ನ್ಯಾಯವಾದಿ ನೂರುದ್ದೀನ್ ಸಾಲ್ಮರ ಅವರು ಧ್ವನಿಗೂಡಿಸಿ, ನಾವು ಎಲ್ಲರೂ ಸೇರಿ ಇದನ್ನು ತಡೆಯಬೇಕು ಎಂದರು.ಈ ನಡುವೆ ಗಾಂಜಾ ಸೇವನೆಯ ಕುರಿತು ಮಾಹಿತಿ ನೀಡಿದವರಿಗೆ ಬೆದರಿಕೆ ಕರೆ ಬರುತ್ತದೆ ಮಾತ್ರವಲ್ಲದೆ,ನಮ್ಮ ಬಗ್ಗೆ ಪೊಲೀಸರಲ್ಲಿ ಕೇಳಿ ಎಂದು ಅವರೇ ಬಹಳ ಸಲೀಸಾಗಿ ಹೇಳುತ್ತಾರೆ ಎಂದವರು ತಿಳಿಸಿದರು.‌

ಡಾ.ಕೃಷ್ಣಪ್ರಸನ್ನ ಅವರು ಮಾತನಾಡಿ ಡ್ರಗ್ಸ್ ವಿಚಾರದಲ್ಲಿ ಪಕ್ಷ, ಧರ್ಮ ನೋಡದೆ ಎಲ್ಲರೂ ಅದರ ವಿರುದ್ಧ ಹೋರಾಟ ಮಾಡಬೇಕೆಂದರು.ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ ಡ್ರಗ್ಸ್ ವಿಚಾರದಲ್ಲಿ ನಮ್ಮ ನಿರೀಕ್ಷೆ ಇರುವುದು ಪೊಲೀಸರ ಮೇಲೆ ಮಾತ್ರ.ಇದರಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ.ಪೊಲೀಸರು ಸ್ಟ್ರಿಕ್ಟ್ ಆಗಿದ್ದರೆ ಸಮಾಜ ಸರಿಯಾಗುತ್ತದೆ.ಇದರಲ್ಲಿ ಯಾವುದೇ ಗುಂಪುಗಳು ಬರದ ಹಾಗೆ ಮಾಡುವ ಕೆಲಸವೂ ಪೊಲೀಸರದ್ದಾಗಿದೆ.ಮಹಾಲಿಂಗೇಶ್ವರನ ಕ್ಷೇತ್ರದಲ್ಲಿ ಅತಿರೇಕ ಮಾಡಿದವನಿಗೆ ಇಲ್ಲಿ ಅವಕಾಶ ಕಡಿಮೆ.ಇವತ್ತು ಯಾರೋ ತಪ್ಪು ಮಾಡಿ ಅದರ ಹೊಣೆಗಾರಿಕೆ ಪೊಲೀಸರ ಮೇಲೆ ಹಾಕುವುದು ಸರಿಯಲ್ಲ.ಹಾಗಾಗಿ ನೀವು ಕೈಗೊಳ್ಳುವ ಕ್ರಮವನ್ನು ಕಠಿಣವಾಗಿ ಮಾಡಿದರೆ ಎಲ್ಲಾ ಸಮಸ್ಯೆ ಪರಿಹಾರ ಆಗುತ್ತದೆ.ಈಗ ಪೊಲೀಸರು ಅನ್ನುವ ಭಯವೇ ಇಲ್ಲ.ನಿಮಗೆ ಯಾವ ಧರ್ಮ, ಪಕ್ಷ ಇರುವುದಿಲ್ಲ.ಕಠಿಣವಾದ ಕ್ರಮ ಕೈಗೊಳ್ಳಿ,ನಾವು ನಿಮ್ಮ ಜೊತೆ ಇದ್ದೇವೆ ಎಂದು ಹೇಳಿದರು.ಇನ್‌ಸ್ಪೆಕ್ಟರ್ ಜಾನ್ಸನ್ ಕಿರಣ್ ಡಿ’ಸೋಜ ಅವರು ಮಾತನಾಡಿ ಮಾದಕ ವಸ್ತುಗಳ ಸೇವನೆ ವಿಚಾರದಲ್ಲಿ ಪೋಷಕರ ಹೊಣೆ ಅತಿ ಹೆಚ್ಚಿದೆ.ಜೊತೆಗೆ ಮಾದಕ ವಸ್ತು ಸೇವನೆ ವಿಚಾರದಲ್ಲಿ ಮಾಹಿತಿ ನೀಡಿದಲ್ಲಿ ನಾವು ಮಾಹಿತಿದಾರರ ಹೆಸರನ್ನು ಗೌಪ್ಯವಾಗಿ ಇಡುತ್ತೇವೆ ಎಂದರಲ್ಲದೆ,ನಾವೆಲ್ಲ ಒಟ್ಟು ಸೇರಿ ಟೀಮ್ ವರ್ಕ್ ಮಾಡಬೇಕು ಎಂದರು.


ಮನಪರಿವರ್ತನೆ ಕಾರ್ಯಕ್ರಮ ಮಾಡಿ:
ಎಸ್.ಐ ಆಂಜನೇಯ ರೆಡ್ಡಿಯವರು ಮಾತನಾಡಿ, ಮಾದಕ ವಸ್ತುಗಳ ಚಟಕ್ಕೆ ಬಲಿಯಾದವರನ್ನು ಸರಿ ದಾರಿಗೆ ತರಬೇಕು.ಈ ನಿಟ್ಟಿನಲ್ಲಿ ಅನೇಕ ಸಾಮಾಜಿಕ ಸೇವಾ ಸಂಸ್ಥೆಗಳು, ಸಂಘ ಸಂಸ್ಥೆಗಳ ಸಹಕಾರ ಬೇಕು.ಯುವಕರಿಗೊಂದು ಮನಪರಿವರ್ತನೆಯ ಕಾರ್ಯಕ್ರಮ ಮಾಡಬೇಕು.ಏನೇನೋ ಆಟೋಟ, ವಿವಿಧ ಕಾರ್ಯಕ್ರಮಗಳನ್ನು ಸಂಘ ಸಂಸ್ಥೆಗಳು ಮಾಡುತ್ತಾರೆ.ಅಂತಹ ಸಂದರ್ಭದಲ್ಲಿ ಯುವಕರ ಮನಪರಿವರ್ತನೆ ಕಾರ್ಯಕ್ರಮವನ್ನೂ ಆಯೋಜಿಸುವುದು ಉತ್ತಮ.ಇವತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟೋ ಮಂದಿ ವಿದ್ಯಾವಂತರು, ಉತ್ತಮ ಅಂಕ ಪಡೆದವರು ಇದ್ದಾರೆ.ಅವರನ್ನು ಸರಕಾರಿ ಉದ್ಯೋಗಕ್ಕೆ ಸೇರುವಂತೆ ಪ್ರೋತ್ಸಾಹ, ತರಬೇತಿ ನೀಡುವ ಕೆಲಸ ಮಾಡಬೇಕು.ಪೊಲೀಸ್ ಕೆಲಸಕ್ಕೇ ದಕ್ಷಿಣ ಕನ್ನಡ ಜಿಲ್ಲೆಯ ಯುವಕರು ಬರುತ್ತಿಲ್ಲ.ಆದಷ್ಟು ಯುವಕರಿಗೆ ಇಂತಹ ಮಾರ್ಗದರ್ಶನ ನೀಡಿದರೆ ಉತ್ತಮ ಸಮಾಜಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳಿದರು.ಅಬ್ದುಲ್ ರಹಿಮಾನ್ ಅವರು ಮಾತನಾಡಿ ರಾಜಕೀಯ ವ್ಯಕ್ತಿಗಳು ಪೊಲೀಸರ ಕೈಯನ್ನು ಕಟ್ಟಬಾರದು.ಈ ಕುರಿತು ರಾಜಕೀಯ ಮುಖಂಡರು ಅವರವರ ಪಕ್ಷದ ಮುಖಂಡರಿಗೆ ತಿಳಿಸಲಿ ಎಂದರು.


ವಾಟ್ಸಪ್‌ನಲ್ಲಿ ಸುಳ್ಳು ಮಾಹಿತಿ ನೀಡದಂತೆ ಎಚ್ಚರಿಕೆ ವಹಿಸಿ:
ಏನೋ ಸಣ್ಣ ಗಲಾಟೆ ಆದರೂ ಅದನ್ನು ದೊಡ್ಡದಾಗಿ ಬಿಂಬಿಸಿ ವಾಟ್ಸಪ್‌ನಲ್ಲಿ ಸುಳ್ಳು ಮಾಹಿತಿ ರವಾನೆ ಮಾಡುವುದು ಸರಿಯಲ್ಲ.ಅದು ತಪ್ಪು. ಇತ್ತೀಚೆಗೆ ಕಾಸರಗೋಡಿನ ಮಲಪ್ಪುರಂನ ಯಾರೋ ಹೆಣ್ಣು ಮಗಳ ದೂರಿಗೆ ಸಂಬಂಽಸಿ ಕೇರಳದ ಪೊಲೀಸರು ಇಲ್ಲಿಗೆ ಬಂದಾಗ ಅಲ್ಲಿ ಗೊಂದಲ ನಿರ್ಮಾಣವಾಗಿತ್ತು.ಈ ರೀತಿ ಮಾಡುವುದು ಸರಿಯಲ್ಲ.ಕೂರ್ನಡ್ಕದಲ್ಲಿ ಮಾಹಿತಿ ಪಡೆದು ಜನತೆ ಸಹಕಾರ ನೀಡಬೇಕಿತ್ತು ಎಂದು ಇನ್‌ಸ್ಪೆಕ್ಟರ್ ಜಾನ್ಸನ್ ಡಿ’ಸೋಜ ಹೇಳಿದರು.


ನೈತಿಕ ಪೊಲೀಸ್‌ಗಿರಿ ಆಗಿಲ್ಲ:
ಅಕ್ರಮ ಗೋ ಸಾಗಾಟದ ವಿಚಾರದಲ್ಲಿ ಜಾಸ್ತಿ ಸಮಸ್ಯೆ ಆಗುತ್ತಿದೆ.ಅದನ್ನು ಆದಷ್ಟು ತಡೆಯಬೇಕೆಂದು ಮುರಳಿಕೃಷ್ಣ ಹಸಂತಡ್ಕ ಹೇಳಿದರು.ಎಸ್‌ಡಿಪಿಐ ಪಕ್ಷದ ಮುಖಂಡ ಹಮೀದ್ ಸಾಲ್ಮರ ಅವರು ಮಾತನಾಡಿ ಅಕ್ರಮ ಗೋ ಸಾಗಾಟ ಎಂದು ನೈತಿಕ ಪೊಲೀಸ್‌ಗಿರಿ ನಿಮ್ಮ ಕಡೆಯಿಂದ ಮಾಡಬಾರದು ಎಂದು ಹೇಳಿದರು.ಉತ್ತರಿಸಿದ ಇನ್‌ಸ್ಪೆಕ್ಟರ್ ಜಾನ್ಸ್‌ನ್ ಡಿಸೋಜ ಅವರು, ಇತ್ತೀಚೆಗೆ ಹೈವೆಯಲ್ಲಿ ಆಟೋ ರಿಕ್ಷಾದಲ್ಲಿ ಹಸುವನ್ನು ಸಾಗಾಟ ಮಾಡಿದಾಗ ಅದನ್ನು ತಡೆದು ಪೊಲೀಸರಿಗೆ ಕರೆ ಮಾಡಿದ್ದಾರೆ.ಅಲ್ಲಿ ಸಹಿತ, ಇತ್ತೀಚೆಗೆ ಪತ್ತೆಯಾದ ಎರಡು ಮೂರು ಕೇಸ್‌ಗಳಲ್ಲಿಯೂ ಯಾರೂ ನೈತಿಕ ಪೊಲೀಸ್‌ಗಿರಿ ಮಾಡಿಲ್ಲ ಎಂದು ತಿಳಿಸಿದರು.


ಹುಡುಗಿ ವಿಚಾರದಲ್ಲಿ ಸಂಘಟನೆ ಠಾಣೆಗೆ ಬರಬಾರದು:
ಹುಡುಗಿಯ ವಿಚಾರದಲ್ಲಿ ಸಂಘಟನೆ ಠಾಣೆಗೆ ಬರಬಾರದು.ಇತ್ತೀಚೆಗೆ ಬಸ್ ನಿಲ್ದಾಣದಲ್ಲಿ ನಡೆದ ಹುಡುಗಿ ಪ್ರಕರಣದಲ್ಲಿ ಪೊಲೀಸರು ಅವರನ್ನು ಠಾಣೆಗೆ ಕರೆದುಕೊಂಡು ಬಂದಿದ್ದಾರೆ.ಆಗ, ಪೊಲೀಸರೇ ಅದನ್ನು ಸರಿ ಮಾಡಲಿ ಎಂದು ನಾವು ಬಂದಿಲ್ಲ.ಆದರೆ ಬಿಜೆಪಿ ಮತ್ತು ಸಂಘಟನೆಯವರು ಬಂದಿದ್ದಾರೆ.ಇದಕ್ಕೆ ಅವಕಾಶ ಮಾಡಿಕೊಡಬಾರದು. ಜಾತ್ಯಾತೀತ ವ್ಯವಸ್ಥೆಯಲ್ಲಿ ಎಲ್ಲರೂ ಅಣ್ಣತಮ್ಮಂದಿರಂತೆ ಇರಬೇಕೆಂದು ಹಮೀದ್ ಸಾಲ್ಮರ ಹೇಳಿದರು.


ದರ್ಬೆಯ ಪ್ರಕರಣದಲ್ಲಿ ಸ್ವಾಯತ್ತತೆ ಎಲ್ಲಿ ಹೋಯಿತು:
ಪೊಲೀಸರು ತಮ್ಮ ಸ್ವಾಯತ್ತತೆಯನ್ನು ಬಳಸಿಕೊಳ್ಳಬೇಕು.ಮೊನ್ನೆ ದರ್ಬೆಯಲ್ಲಿ ನಡೆದ ಪ್ರಕರಣದಲ್ಲಿ ನಿಮ್ಮ ಸ್ವಾಯತ್ತತೆ ಎಲ್ಲಿ ಹೋಯಿತು?.ಅದೇ ಬೇರೆ ವಿಚಾರ ಬಂದಾಗ ಸ್ವಯಂಪ್ರಕರಣ ದಾಖಲಿಸುತ್ತೀರಿ.ಇದಕ್ಕೆ ಬಹಳ ಬೇಸರ ಇದೆ ಎಂದು ಹಮೀದ್ ಸಾಲ್ಮರ ಹೇಳಿದರು.


ಏ.18ಕ್ಕೆ ಗುಡ್ ಫ್ರೈಡೇ:
ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರೀಸ್ ಮಸ್ಕರೇನ್ಹಸ್ ಅವರು ಮಾತನಾಡಿ ಏಪ್ರಿಲ್ ತಿಂಗಳಲ್ಲಿ ಪುತ್ತೂರು ಜಾತ್ರೆ ನಡೆಯುತ್ತದೆ.ಏ.18ಕ್ಕೆ ಗುಡ್ ಫ್ರೈಡೇ ಕೂಡಾ ಇದೆ ಎಂದಾಗ ಇನ್‌ಸ್ಪೆಕ್ಟರ್ ಅವರು, ಜಾತ್ರೆಯ ಕುರಿತು ಮುಂದೆ ಪ್ರತ್ಯೇಕ ಸಭೆ ಕರೆಯೋಣ ಎಂದರು.

ಪುತ್ತೂರು ಶಾರದಾ ಭಜನಾ ಮಂದಿರದ ಗೌರವಾಧ್ಯಕ್ಷ ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ಪುತ್ತೂರು ಸಂಯುಕ್ತ ಜಮಾತ್‌ನ ಪ್ರಧಾನ ಕಾರ್ಯದರ್ಶಿ ಎಲ್.ಟಿ.ಅಬ್ದುಲ್ ರಝಾಕ್,ವಿಶ್ವಹಿಂದು ಪರಿಷತ್ ಪ್ರಖಂಡ ಅಧ್ಯಕ್ಷ ದಾಮೋದರ್ ಪಾಟಾಳಿ,ಅಬೂಬಕ್ಕರ್ ಮುಲಾರ್,ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಅಝಾದ್,ವಿ.ಕೆ.ಶರೀಫ್ ಬಪ್ಪಳಿಗೆ,ಖಾದರ್,ಶಿರಾಜುದ್ದೀನ್,ರವಿಪ್ರಸಾದ್ ಶೆಟ್ಟಿ ಬನ್ನೂರು,ಅಬ್ದುಲ್ ರಹಿಮಾನ್ ಕೊಡಿಪ್ಪಾಡಿ, ಯುಸೂಫ್, ಇಲ್ಯಾಸ್, ಜಮೀರ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.ಪುತ್ತೂರು ನಗರ ಪೊಲೀಸ್ ಠಾಣೆಯ ಎ.ಎಸ್.ಐ ಕೃಷ್ಣಪ್ಪ ಮತ್ತು ಹೆಚ್‌ಸಿ ಸ್ಕರಿಯ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here