ನರಿಮೊಗರು ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ, ಅಹವಾಲು ಸ್ವೀಕಾರ

0

ಪಕ್ಷದ ಪ್ರತಿಯೊಬ್ಬ ನಾಯಕನೂ ಕಾರ್ಯಕರ್ತರಿಗೆ ಗೌರವ ಕೊಡಲೇಬೇಕು: ಅಶೋಕ್ ರೈ


ಪುತ್ತೂರು: ಕಾರ್ಯಕರ್ತರ ಶ್ರಮದ ಕಾರಣಕ್ಕೆ ನಾವಿಂದು ನಾಯಕರಾಗಿದ್ದೇವೆ, ನಾವು ಇಂದು ಪಕ್ಷದಲ್ಲಿ ಒಂದು ಹುದ್ದೆ, ಸ್ಥಾನ ಮಾನದಲ್ಲಿದ್ದರೆ ಅದಕ್ಕೆ ಕಾರ್ಯಕರ್ತರೇ ಕಾರಣ, ಈ ವಿಚಾರವನ್ನು ನಾವು ಎಂದೂ ಮರೆಯಬಾರದು, ಕಾರ್ಯಕರ್ತರಿಗೆ ಗೌರವ ನೀಡುವ ಮೂಲಕ ಅವರ ಸಮಸ್ಯೆಗೂ ಸ್ಪಂದಿಸುವ ಕೆಲಸವನ್ನು ಮಾಡಬೇಕು ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.


ಅವರು ನರಿಮೊಗರು ಸಿ ಎ ಬ್ಯಾಂಕ್ ಸಭಾಂಗಣದಲ್ಲಿ ಮಾ.೨೯ರಂದು ನಡೆದ ನರಿಮೊಗರು ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಪ್ರತೀ ವಲಯ ಮಟ್ಟದಲ್ಲೂ ಕಾರ್ಯಕರ್ತರ ಸಭೆಯನ್ನು ನಡೆಸಲಾಗುತ್ತಿದೆ, ಈ ಸಭೆಯಲ್ಲಿ ವಲಯ ಹಾಗೂ ಬೂತ್ ಮಟ್ಟದ ಪದಾಧಿಕಾರಿಗಳು ಭಾಗವಹಿಸುವ ಮೂಲಕ ಕಾಂಗ್ರೆಸ್ ಸರಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಮಾಡಬೇಕು. ಸರಕಾರದ ಯಾವುದೇ ಯೋಜನೆ ಗ್ರಾಮದ ಕಟ್ಟಕಡೇಯ ವ್ಯಕ್ತಿಗೆ ತಲುಪಿಸುವಲ್ಲಿ ಕಾರ್ಯಕರ್ತರ ಶ್ರಮ ಅಗತ್ಯವಿದೆ. ಇಂದು ಪುತ್ತೂರು ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ, ಕಾಂಗ್ರೆಸ್ ಶಾಸಕರು ಇರಬೇಕಾದಲ್ಲಿ ಅದಕ್ಕೆ ಕಾರ್ಯಕರ್ತರ ಬೆವರಿನ ಫಲವಾಗಿದೆ ಎಂದು ಹೇಳಿದರು.

ಪ್ರತೀ ವಲಯಕ್ಕೂ ಕರೆ ಮಾಡುತ್ತೇನೆ:
ತನ್ನ ಕಚೇರಿಗೆ ಅಥವಾ ನನ್ನ ಬಳಿ ನೇರವಾಗಿ ಯಾರೇ ಬಂದರೂ ಅವರ ಗ್ರಾಮವನ್ನು ತಿಳಿದು ಆ ಗ್ರಾಮದ ವಲಯ ಅಥವಾ ಬೂತ್ ಅಧ್ಯಕ್ಷರನ್ನು ಸಂಪರ್ಕಿಸದೆ ನನ್ನ ಬಳಿ ಬಂದ ವ್ಯಕ್ತಿಯ ಅರ್ಜಿಯನ್ನು ಮಾನ್ಯ ಮಾಡುವುದೇ ಇಲ್ಲ. ತಾನು ಪಕ್ಷಾತೀತವಾಗಿ ಕೆಲಸ ಮಾಡುತ್ತೇನೆ ಅದರ ಜೊತೆಗೆ ವಲಯ ಮತ್ತು ಬೂತ್ ಅಧ್ಯಕ್ಷರಿಗೆ ಗೌರವ ಕೊಡುವ ಕೆಲಸವನ್ನು ಮಾಡುತ್ತೇನೆ ಎಂದು ಶಾಸಕರು ಹೇಳಿದರು. ಅಕ್ರಮ ಸಕ್ರಮ, ೯೪ ಸಿ ಅರ್ಜಿ ಅಥವಾ ಇನ್ಯಾವುದೇ ಸಹಾಯ ಕೇಳಿ ಬಂದರೂ ನಮ್ಮ ವಲಯ ಅಥವಾ ಬೂತ್ ಅಧ್ಯಕ್ಷರ ಗಮನಕ್ಕೆ ತಂದೇ ಸಹಾಯ ಮಾಡುವುದು ಎಂದು ಶಾಸಕರು ಹೇಳಿದರು. ತನ್ನ ಕ್ಷೇತ್ರದ ಯಾವುದೇ ಕಾರ್ಯಕರ್ತರಿಗೆ ನೋವಾದರೆ ಅದು ನಮ್ಮ ನೋವು ಎಂದು ತಿಳಿದು ನಾಯಕರೆನಿಸಿಕೊಂಡವರು ಅವರಿಗೆ ಕಾರ್ಯಕರ್ತರಿಗೆ ನೆರವಾಗುವ ಕೆಲಸ ಮಾಡಬೇಕು ಎಂದು ಹೇಳಿದರು.

ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಿ
ಪುತ್ತೂರಿನಲ್ಲಿ ಹಿಂದೆಂದೂ ಆಗದ ಕಾಮಗಾರಿ, ಯೋಜನೆಗಳು ಈ ಬಾರಿ ಪುತ್ತೂರಿನಲ್ಲಿ ಆಗುತ್ತಿದೆ. ಮೆಡಿಕಲ್ ಕಾಲೇಜು ಮಂಜೂರಾಗಿದೆ, ಪ್ರತೀ ಮನೆಗೂ ಕುಡಿಯುವ ನೀರಿಗಾಗಿ ಬಹುಗ್ರಾಮದ ಕುಡಿಯುವ ನೀರಿನ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ, ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಳದ ಅಭಿವೃದ್ದಿಯಾಗುತ್ತಿದೆ, ಮುಂಡೂರಿನಲ್ಲಿ ತಾಲೂಕು ಕ್ರೀಡಾಂಗಣ, ಆರ್‌ಟಿಒ ಕೇಂದ್ರ, ಸೇರಿದಂತೆ ಬೃಹತ್ ಯೋಜನೆಗಳು ನಮ್ಮ ಕ್ಷೇತ್ರಕ್ಕೆ ಬಂದಿದೆ, ಇವೆಲ್ಲವನ್ನೂ ನಾವು ಜನರಿಗೆ ತಿಳಿಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.

ಗ್ರಾಮಸ್ಥರಿಂದ ಶಾಸಕರಿಗೆ ಸನ್ಮಾನ
ಪುತ್ತೂರಿಗೆ ಮೆಡಿಕಲ್ ಕಾಲೇಜು ಮಂಜೂರುಗೊಳಿಸಿರುವ ಮತ್ತು ಮುಂಡೂರು ಗ್ರಾಮದಲ್ಲಿ ತಾಲೂಕು ಕ್ರೀಡಾಂಗಣ ಮತ್ತು ಅರ್‌ಟಿಒ ಕೇಂದ್ರವನ್ನು ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿರುವ ಶಾಸಕ ಅಶೋಕ್ ರೈ ಅವರನ್ನು ಗ್ರಾಮಸ್ಥರ ಪರವಾಗಿ ವಲಯ ಕಾಂಗ್ರೆಸ್ ವತಿಯಿಂದ ಶಾಲು ಹೊದಿಸಿ, ಫಲಪುಷ್ಪ, ಫಲಕ ನೀಡಿ ಸನ್ಮಾನಿಸಲಾಯಿತು.

ಕಾರ್ಯಕರ್ತರ ಸಮಸ್ಯೆಗೆ ತುರ್ತು ಸ್ಪಂದನೆ: ಆಳ್ವ
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣಪ್ರಸಾದ್ ಆಳ್ವ ಮಾತನಾಡಿ ಬ್ಲಾಕ್ ವ್ಯಾಪ್ತಿಯಲ್ಲಿ ಪ್ರತೀ ವಲಯ ಹಾಗೂ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಸಭೆಯನ್ನು ಶಾಸಕರ ಸೂಚನೆ ಮೇರೆಗೆ ಆಯೋಜನೆ ಮಾಡಲಾಗುತ್ತಿದೆ. ಇದು ಗ್ರಾಮ ಮಟ್ಟಕ್ಕೆ ಬಂದು ಕಾರ್ಯಕರ್ತರ ಸಮಸ್ಯೆ ಅಥವಾ ನೋವು ಆಲಿಸುವ ಕಾರ್ಯಕ್ರಮವೂ ಆಗಿದೆ. ಗ್ರಾಮಕ್ಕೆ ಬಂದು ಪಕ್ಷದ ಅಭಿವೃದ್ದಿಗಾಗಿ ಕೆಲಸ ಮಾಡಿದ ಕಾರ್ಯಕರ್ತರ ಅಹವಾಲನ್ನು ಸ್ವೀಕಾರ ಮಾಡಿ ಅದಕ್ಕೆ ಸ್ಪಂದಿಸುವ ಕೆಲಸವನ್ನು ಮಾಡಲಿದ್ದು ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ಹೇಳಿದರು.

ಪುತ್ತೂರಿಗೆ ಬೇಕಾದುದನ್ನು ಶಾಸಕರು ಮಾಡುತ್ತಿದ್ದಾರೆ-ಬಾಬು ಶೆಟ್ಟಿ
ಕಾಂಗ್ರೆಸ್ ಮುಖಂಡ ಬಾಬು ಶೆಟ್ಟಿ ಮಾತನಾಡಿ ನರಿಮೊಗರು ವಲಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಶಕ್ತಿಯುತವಾಗಿ ಕಟ್ಟಬೇಕಿದೆ. ಶಾಸಕರ ಅಶೋಕ್ ರೈ ಅವರ ಕಾರ್ಯವೈಖರಿಯಿಂದ ಜನ ಇಂದು ಪಕ್ಷದ ಕಡೆ ಒಲವು ವ್ಯಕ್ತಪಡಿಸಿ ಪಕ್ಷಕ್ಕೆ ಸೇರಿಕೊಳ್ಳುತ್ತಿದ್ದಾರೆ. ಪುತ್ತೂರಿಗೆ ಏನೆಲ್ಲಾ ಬೇಕೋ ಅದೆಲ್ಲವನ್ನೂ ಶಾಸಕರು ತಂದಿದ್ದಾರೆ, ಮುಂದೆಯೂ ತರಲಿದ್ದಾರೆ. ಇಷ್ಟು ವರ್ಷದಲ್ಲಿ ಆಗದ ಅಭಿವೃದ್ದಿ ಕಾರ್ಯಗಳು ಕೇವಲ ಒಂದೂವರೆ ವರ್ಷದಲ್ಲಿ ಆಗಿರುವುದು ಶಾಸಕರ ಅಭಿವೃದ್ದಿ ಇಚ್ಚಾಶಕ್ತಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ-ಹೊನ್ನಪ್ಪ ಪೂಜಾರಿ
ಸ್ವಾಗತಿಸಿದ ನರಿಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ಪೂಜಾರಿ ಕೈಂದಾಡಿ ಮಾತನಾಡಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿದಾಗ ಪಕ್ಷ ಬಲಿಷ್ಠಗೊಳ್ಳುತ್ತದೆ, ನರಿಮೊಗರು ವಲಯ ಕಾಂಗ್ರೆಸ್ ಪಕ್ಷ ಸಂಘಟನೆಗೆ ವಿಶೇಷ ಆದ್ಯತೆ ನೀಡುತ್ತಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿಗಳಾದ ರವಿಪ್ರಸಾದ್ ಶೆಟ್ಟಿ, ಪೂರ್ಣೇಶ್ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ವೇದನಾಥ ಸುವರ್ಣ ನರಿಮೊಗರು, ಬ್ಲಾಕ್ ಸಾಮಾಜಿಕ ಜಾಲತಾಣದ ಸಂಚಾಲಕ ಸುಪ್ರೀತ್ ಕಣ್ಣಾರಾಯ, ತಾ.ಪಂ ಮಾಜಿ ಸದಸ್ಯ ಪರಮೇಶ್ವರ್ ಭಂಡಾರಿ, ಗ್ಯಾರಂಟಿ ಸಮಿತಿ ಸದಸ್ಯ ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಮಾಧ್ಯಮ ವಕ್ತಾರ ರವೀಂದ್ರ ರೈ ನೆಕ್ಕಿಲು, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ನರಿಮೊಗರು ವಲಯಾಧ್ಯಕ್ಷೆ ಹರಿಣಾಕ್ಷಿ ಬೊಳ್ಳಡ್ಕ, ನರಿಮೊಗರು ವಲಯ ಕಾಂಗ್ರೆಸ್ ಉಪಾಧ್ಯಕ್ಷ ಇಲಿಯಾಸ್ ಮುಕ್ವೆ ಉಪಸ್ಥಿತರಿದ್ದರು. ಸುಮಾ ಶಿವರಾಮ್ ಪಜಿರೋಡಿ ಪ್ರಾರ್ಥಿಸಿದರು. ನರಿಮೊಗರು ವಲಯ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಅಝೀಝ್ ನೆರಿಗೇರಿ ವಂದಿಸಿದರು. ರಫೀಕ್ ಮಣಿಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here