ಸೌಹಾರ್ದತೆಯ ಸಂದೇಶ ಸಾರಿದ ವೇದನಾಥ ಸುವರ್ಣ ನಡೆಗೆ ವ್ಯಾಪಕ ಮೆಚ್ಚುಗೆ
ಪುತ್ತೂರು: ಕೈಪಂಗಳಬಾರಿಕೆ ಶ್ರೀ ಬ್ರಹ್ಮ ಬೈದರ್ಕಳ ನೇಮೋತ್ಸವ ಸಮಿತಿಯ ಅಧ್ಯಕ್ಷರಾದ ವೇದನಾಥ ಸುವರ್ಣ ನರಿಮೊಗರು ಅವರು ಮಸೀದಿಯೊಂದರಲ್ಲಿ ಸೌಹಾರ್ದ ಇಫ್ತಾರ್ ಕೂಟ ಏರ್ಪಡಿಸುವ ಮೂಲಕ ಸಮಾಜಕ್ಕೆ ಸೌಹಾರ್ದತೆಯ ಸಂದೇಶ ಸಾರಿ ಸುದ್ದಿಯಾಗಿದ್ದಾರೆ. ಪುರುಷರಕಟ್ಟೆಯ ಹಿಮಾಯತುಲ್ ಇಸ್ಲಾಂ ಮದ್ರಸ ವಠಾರದಲ್ಲಿ ಮಾ.೨೯ರಂದು ಇಫ್ತಾರ್ ಏರ್ಪಡಿಸಿದ್ದ ಅವರು ಮುಸಲ್ಮಾನ ಬಾಂಧವರ ಜೊತೆ ಇಫ್ತಾರ್ ತೊರೆಯುವ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದರು.
ಮುಸ್ಲಿಂ ಸೌಹಾರ್ದ ವೇದಿಕೆಯವರು ಇಫ್ತಾರ್ ಆಯೋಜನೆಗೆ ಸಹಕಾರ ನೀಡಿದರು. ಇಫ್ತಾರ್ ಕೂಟದಲ್ಲಿ ೨೫೦ಕ್ಕೂ ಅಧಿಕ ಮಂದಿ ಭಾಗಿಯಾಗಿದ್ದರು. ಸೌಹಾರ್ದತೆಯ ಸಂದೇಶ ಸಾರಿದ ವೇದನಾಥ ಸುವರ್ಣರ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ರಾಜಕೀಯ ನಾಯಕರೂ ಆಗಿರುವ ವೇದನಾಥ ಸುವರ್ಣ ಅವರು ದ.ಕ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವೇದನಾಥ ಸುವರ್ಣ ಅವರು ಜಾತಿ, ಮತ, ಧರ್ಮ ನೋಡದೇ ಎಲ್ಲರೊಂದಿಗೆ ಬೆರೆಯುವ ನಾಯಕರಾಗಿದ್ದು ಅವರು ನಮ್ಮ ಮದ್ರಸದಲ್ಲಿ ಇಫ್ತಾರ್ ಕೂಟ ಆಯೋಜಿಸುವ ಮೂಲಕ ಸಮಾಜಕ್ಕೆ ಸೌಹಾರ್ದತೆಯ ಸಂದೇಶ ಸಾರಿದ್ದಾರೆ ಎಂದು ಇಫ್ತಾರ್ ಕೂಟದಲ್ಲಿ ಭಾಗವಹಿಸಿದವರು ತಿಳಿಸಿದ್ದಾರೆ. ನರಿಮೊಗರು-ಪುರುಷರಕಟ್ಟೆ ಪ್ರದೇಶ ನಮ್ಮ ಹಿರಿಯರ ಕಾಲದಿಂದಲೂ ಶಾಂತಿ, ಸೌಹಾರ್ದತೆ, ಸಹೋದರತೆಗೆ ಹೆಸರುವಾಸಿಯಾಗಿದ್ದು ಅದೇ ಪರಂಪರೆ ಮುಂದುವರೆದು ನಾವೆಲ್ಲಾ ಈಗಲೂ ಪರಸ್ಪರ ಅನ್ಯೋನ್ಯತೆಯಿಂದ ಜೀವನ ನಡೆಸುತ್ತಿದ್ದೇವೆ, ಪರಸ್ಪರ ಸೌಹಾರ್ದ ಮನೋಭಾವ ನಮ್ಮಲ್ಲಿದ್ದಾಗ ಸಮಾಜ ಕೂಡಾ ನೆಮ್ಮದಿಯನ್ನು ಕಾಣುತ್ತದೆ, ಸೌಹಾರ್ದತೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಪುರುಷರಕಟ್ಟೆ ಮಸೀದಿಯಲ್ಲಿ ಇಫ್ತಾರ್ ಕೂಟ ಏರ್ಪಡಿಸಿದ್ದೇನೆ ಎಂದು ವೇದನಾಥ ಸುವರ್ಣ ತಿಳಿಸಿದ್ದಾರೆ. ನನ್ನ ಹುಟ್ಟು ಹಬ್ಬವನ್ನು ಪುರುಷರಕಟ್ಟೆಯ ಮುಸ್ಲಿಂ ಯುವಕರು ಮುಂದಾಳತ್ವ ವಹಿಸಿಕೊಂಡು ಎಲ್ಲರನ್ನು ಸೇರಿಸಿಕೊಂಡು ಆಚರಿಸುತ್ತಾರೆ, ಇದೆಲ್ಲವೂ ಸೌಹಾರ್ದತೆ ಮತ್ತು ಪರಸ್ಪರ ಪ್ರೀತಿ ವಿಶ್ವಾಸ ಗಟ್ಟಿಗೊಳ್ಳಲು ಕಾರಣವಾಗುತ್ತದೆ ಎಂದು ವೇದನಾಥ ಸುವರ್ಣ ತಿಳಿಸಿದ್ದಾರೆ.
ಪುರುಷರಕಟ್ಟೆ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಮಾಯಂಗಳ ಮಾತನಾಡಿ ನಮ್ಮ ಊರಿನಲ್ಲಿ ಸೌಹಾರ್ದತೆಗಾಗಿ ಹೆಚ್ಚು ಒತ್ತು ಕೊಡುತ್ತಿರುವ ವೇದನಾಥ ಸುವರ್ಣರು ನಮ್ಮ ಮಸೀದಿಯಲ್ಲಿ ಇಫ್ತಾರ್ ಕೂಟ ಏರ್ಪಡಿಸಿರುವುದು ನಮಗೆಲ್ಲಾ ಬಹಳ ಖುಷಿ ನೀಡಿದೆ, ಎಲ್ಲರೊಂದಿಗೆ ಸೌಹಾರ್ದತೆಯಿಂದ ಇರುವ ಅವರಿಗೆ ದೇವರು ಆಯುರಾರೋಗ್ಯ ನೀಡುವ ಮೂಲಕ ಇನ್ನಷ್ಟು ಸೌಹಾರ್ದ ಸಮಾಜಕ್ಕೆ ಕೆಲಸ ಮಾಡಲು ಶಕ್ತಿ ನೀಡಲಿ ಎಂದು ತಿಳಿಸಿದರು.