ಕುಡಿಯುವ ನೀರು ತಲುಪಿಸಲು ಗರಿಷ್ಟ ಪ್ರಯತ್ನ ಮಾಡಲಾಗುತ್ತಿದೆ – ಎಲ್ಲರ ಸಹಕಾರ ಅಗತ್ಯ: ಪುನೀತ್ ಮಾಡ್ತಾರ್
ವಿಟ್ಲ: ಗ್ರಾಮದ ಕುಂಡಡ್ಕ ನಾಟೆಕಲ್ಲು ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತಿದ್ದು ಈ ಭಾಗದಲ್ಲಿ ಅಂತರ್ಜಲ ಮಟ್ಟ ತುಂಬಾ ಕುಸಿದಿದ್ದರು ಗ್ರಾಮಸ್ಥರಿಗೆ ಕುಡಿಯುವ ನೀರು ತಲುಪಿಸಲು ಗರಿಷ್ಟ ಪ್ರಯತ್ನ ಮಾಡಲಾಗುತ್ತಿದೆ. ಜನಪ್ರತಿನಿದಿಗಳು ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳ ಜೊತೆಗೆ ಗ್ರಾಮಸ್ಥರು ಕೈ ಜೋಡಿಸಿ ಸಹಕಾರ ನೀಡಬೇಕೆಂದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುನೀತ್ ಮಾಡ್ತಾರ್ ರವರು ಹೇಳಿದರು.
ಅವರು ವಿಟ್ಲಮುಡ್ನೂರು ಗ್ರಾಮ ಪಂಚಾಯತ್ ನ ಸಭಾಂಗಣದಲ್ಲಿ ನಡೆದ ಗ್ರಾ.ಪಂ. ನ ದ್ವಿತೀಯ ಹಂತದ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಾಟೆಕಲ್ಲು ಪ್ರದೇಶದ ನೀರಿನ ಸಮಸ್ಯೆ ಇವತ್ತು ನಿನ್ನೆಯದಲ್ಲ ಇದಕ್ಕೊಂದು ಪೂರ್ಣ ವಿರಾಮ ಹಾಕುವ ಕೆಲಸ ಗ್ರಾಮ ಪಂಚಾಯತ್ ನಿಂದ ಆಗಬೇಕಿದೆ ಎಂದು ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಿಸಾನ್ ಘಟಕದ ಅಧ್ಯಕ್ಷರಾದ ಎಲ್ಯಣ್ಣ ಪೂಜಾರಿ ಮೈರುಂಡ ಹೇಳಿದರು.

ಇದಕ್ಕೆ ಧ್ವನಿಗೂಡಿಸಿ ಅಕ್ರಮ – ಅಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜರವರು ಮಾತನಾಡಿ ನೀವುಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ, ಈ ವಿಚಾರವನ್ನು ಮಾನ್ಯ ಶಾಸಕರ ಗಮನಕ್ಕೆ ತಂದು ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮವಹಿಸುವ ಕೆಲಸ ಮಾಡಲಾಗುವುದು ಎಂದರು.
ಪ್ರತೀ ವರ್ಷ ಬೇಸಿಗೆ ಕಾಲ ಬರುವ ಸಂದರ್ಭದಲ್ಲಿ ಮಾತ್ರ ಗ್ರಾ.ಪಂ. ಈ ಬಗ್ಗೆ ಎಚ್ಚೆತ್ತುಕೊಳ್ಳುತ್ತದೆ. ಬಳಿಕ ಅದರ ಗೋಜಿಗೆ ಹೋಗುವುದಿಲ್ಲ ಎಂದು ಕೆಲ ಗ್ರಾಮಸ್ಥರು ಆರೋಪಿಸಿದರು. ಈ ವೇಳೆ ಗ್ರಾ.ಪಂ. ಅಧ್ಯಕ್ಷರಾದ ಪುನೀತ್ ಮಾಡ್ತಾರ್ ರವರು ಮಾತನಾಡಿ ಆ ಭಾಗದಲ್ಲಿ ನೀರಿನ ಮಟ್ಟ ಬಹಳಷ್ಟು ಕಡಿಮೆಯಾಗಿದ್ದು, ಬೋರ್ ವೆಲ್ ಕೊರೆಸಿದರು ನೀರು ಸಿಗುತ್ತಿಲ್ಲ. ಎಲ್ಲವನ್ನು ಪರಿಹರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಗ್ರಾ.ಪಂ. ಸಮೀಪದಲ್ಲಿರುವ ಬಸ್ ನಿಲ್ದಾಣದ ಪಕ್ಕದಲ್ಲಿರುವ ಮರವನ್ನು ಕಡಿದು ನೂತನ ಬಸ್ಸು ನಿಲ್ದಾಣ ನಿರ್ಮಾಣ ಮಾಡಲಾಗಿದೆ ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಿತ್ತಿದೆ. ಇಲ್ಲಿ ಬಸ್ಸು ನಿಲ್ದಾಣ ನಿರ್ಮಾಣಕ್ಕೆ ಅಧ್ಯಕ್ಷರ ಅನುಮತಿ ಇತ್ತಾ ಎಂದು ಗ್ರಾಮಸ್ಥರೋರ್ವರು ಪ್ರಶ್ನಿಸಿದರು.
ಈ ವೇಳೆ ಅಧ್ಯಕ್ಷರು ಮಾತನಾಡಿ ಗ್ರಾ.ಪಂ. ಸದಸ್ಯರೋರ್ವರು ಮೃತಪಟ್ಟ ಕಾರಣ ಅವರ ನೆನಪಿಗಾಗಿ ಬಸ್ಸುನಿಲ್ದಾಣ ನಿರ್ಮಿಸಲು ಯುವಕ ಮಂಡಲ ಮುಂದಾದಾಗ ಅವರಿಗೆ ಕಟ್ಟಲು ಅನುಮತಿ ನೀಡಲಾಗಿತ್ತು. ಅಲ್ಲಿದ್ದ ಮರ ಬಹಳ ಹಳೆಯದಾಗಿದ್ದು, ಮತ್ತೆ ಆ ಮರದಲ್ಲಿ ಇರುವೆಯ ಕಾಟ ವಿಪರೀತ ಇರುವುದರಿಂದ ಅದರ ಅಡಿಯಲ್ಲಿ ನಿಂತುಕೊಳ್ಳಲು ಆಗುವುದಿಲ್ಲ ಎಂದು ಮಹಿಳೆಯರಿಂದ ಒತ್ತಡ ಬಂದಿತ್ತು. ಅಭಿವೃದ್ದಿಯ ದೃಷ್ಠಿಯಿಂದ ಆ ಮರವನ್ನು ಕಡಿಯಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ನ ಸ್ವಂತ ನಿಧಿಯ ಅನುದಾನದಲ್ಲಿ ಪ.ಜಾತಿ & ಪ.ಪಂಗಡದ 28 ಫಲಾನುಭವಿಗಳಿಗೆ ರೂ.84000 ಮೌಲ್ಯದ ನೀರಿನ ಟ್ಯಾಂಕ್ ಹಾಗೂ 82 ಫಲಾನುಭವಿಗಳಿಗೆ ರೂ. 82೦೦೦ ಮೌಲ್ಯದ ಚಯರ್ ವಿತರಣೆ ಮಾಡಲಾಯಿತು. ವಿವಿಧ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
ಬಂಟ್ವಾಳ ತಾಲೂಕು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಜಿ ಎಸ್ ನಟೇಶ್ ಕುಮಾರ್ ನೋಡೆಲ್ ಅಧಿಕಾರಿಯಾಗಿ ಆಗಮಿಸಿ ಸಭೆ ನಡೆಸಿಕೊಟ್ಟರು.
ಸಭೆಯಲ್ಲಿ ಉಪಾಧ್ಯಕ್ಷರಾದ ರೋಹಿಣಿ ಡಿ, ಸದಸ್ಯರಾದ ಮಹಾಭಲೇಶ್ವರ ಭಟ್ , ಪ್ರಕಾಶ್ ನಾಯಕ್ , ಲೋಕೇಶ್ , ಪ್ರೇಮಲತಾ ಪಟ್ಲ , ಚಂದ್ರಾವತಿ , ಭಾರತಿ , ಮರಿಯಮ್ಮ ಉಪಸ್ಥಿತರಿದ್ದರು
ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸುಜಯ ಕೆ. ಸ್ವಾಗತಿಸಿದರು. ಸಿಬ್ಬಂದಿಗಳು ಸಹಕರಿಸಿದರು.