ಎ.7 ಭಜನಾ ಮಂಗಲೋತ್ಸವ, ಪಾರ್ವತಿ ಸ್ವಯಂವರ ಪೂಜೆ
ಎ.8 ಆಶ್ಲೇಷ ಬಲಿ, ಪುಷ್ಪರಥೋತ್ಸವ, ಬೆಡಿಪ್ರದರ್ಶನ
ಎ.9 ದೇವರ ದರ್ಶನ ಬಲಿ, ದೈವಗಳ ನೇಮ
ಪುತ್ತೂರು:ಮಾಂಗಲ್ಯವರಪ್ರದಾಯಕ ಕ್ಷೇತ್ರ ಎಂದೇ ಪ್ರಸಿದ್ದಿ ಪಡೆದಿರುವ ನರಿಮೊಗರು ಗ್ರಾಮದ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವವು ಏ.7ರಂದು ಪ್ರಾರಂಭಗೊಂಡು ಏ.9ರ ತನಕ ವಿವಿಧ ವೈದಿಕ, ತಾಂತ್ರಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮಿಸಲಿದೆ.
ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯುವ ಜಾತ್ರೋತ್ಸವದಲ್ಲಿ ಏ.7ರಂದು ನಗರ ಭಜನಾ ಸಂಕೀರ್ತನೆಯ ಮಂಗಲೋತ್ಸವವು ನಡೆಯಲಿದೆ. ಸಂಜೆ ಬ್ರಹ್ಮಶ್ರೀ ಕೆಮ್ಮಿಂಜೆ ಉಪ್ಪಳ ಲಕ್ಷ್ಮೀಶ ತಂತ್ರಿಯವರ ನಿವಾಸದಿಂದ ಪ್ರಾರಂಭಗೊಳ್ಳಲಿರುವ ಭಜನಾ ಮಂಗಲೋತ್ಸವದ ಮೆರವಣಿಗೆಯು ದೇವಸ್ಥಾನಕ್ಕೆ ಆಗಮಿಸಿದ ಬಳಿಕ ಮಂಗಲೋತ್ಸವ ನಡೆಯಲಿದೆ. ನಂತರ ಪಾರ್ವತಿ ಸ್ವಯಂವರ ಪೂಜೆ, ಸಭಾ ಕಾರ್ಯಕ್ರಮದ ಶ್ರೀದೇವರಿಗೆ ರಂಗಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ಏ.8ರಂದು ಬೆಳಿಗ್ಗೆ ಏಕಾದಶ ರುದ್ರಾಭಿಷೇಕ, ನಾಗ ಸನ್ನಿಧಿಯಲ್ಲಿ ಆಶ್ಲೇಷ ಬಲಿ, ಪಂಚಾಮೃತ ಅಭಿಷೇಕ, ತಂಬಿಲ ಸೇವೆ, ಮಧ್ಯಾಹ್ನ ದೇವರಿಗೆ ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ ಮಹಾಪೂಜೆ, ಶ್ರೀದೇವರ ಬಲಿ ಹೊರಟು ಶ್ರೀ ಭೂತ ಬಲಿ ಉತ್ಸವ, ಪುಷ್ಪ ರಥೋತ್ಸವ, ವಸಂತಕಟ್ಟೆಪೂಜೆ, ಬೆಡಿಕಟ್ಟೆಗೆ ದೇವರ ಸವಾರಿ, ಬೆಡಿ ಪ್ರದರ್ಶನ, ಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಏ.9ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಪಂಚವಿಂಶತಿ ಕಲಶಪೂಜೆ, ಶ್ರೀದೇವರ ಬಲಿ ಹೊರಟು ಉತ್ಸವ ಪಲ್ಲಕ್ಕಿ ಉತ್ಸವ, ದೇವರ ದರ್ಶನ ಬಲಿ, ರಾಜಾಂಗಣದಲ್ಲಿ ಬಟ್ಟಲು ಕಾಣಿಕೆ, ಮಧ್ಯಾಹ್ನ ಶ್ರೀದೇವರಿಗೆ ಪಂಚಾಮೃತ ಅಭಿಷೇಕ, ಪಂಚವಿಂಶತಿ ಸಾನಿಧ್ಯ ಕಲಶಾಭಿಷೇಕ, ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ, ಸಂಜೆ ಕ್ಷೇತ್ರದ ದೈವಗಳ ನೇಮ ನಡಾವಳಿಗಳು ನಡೆಯಲಿದೆ ಎಂದು ದೇವಸ್ಥಾನದ ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಪ್ರಕಟಣೆ ತಿಳಿಸಿದೆ.
ಎ.7 : ಸಂಜೆ ಭಜನಾ ತಂಡಗಳ ಸಮ್ಮಿಲನ:
ಎ.7ರಂದು ಸಂಜೆ ನಡೆಯುವ ಭಜನಾ ಸಂಕೀರ್ತನೆಯ ಮಂಗಳೋತ್ಸವ ಮೆರವಣಿಗೆಯಲ್ಲಿ ಕೆಮ್ಮಿಂಜೆ ವಲಯದ ಸುಮಾರು 25 ತಂಡಗಳ 250ಕ್ಕೂ ಅಧಿಕ ಮಂದಿ ಭಜಕರು ಭಜನೆಯೊಂದಿಗೆ ಮೆರವಣಿಗೆಯಲ್ಲಿ ಸಾಗಿ ಬರಲಿದ್ದಾರೆ. ಮೆರವಣಿಗೆ ಕ್ಷೇತ್ರಕ್ಕೆ ಆಗಮಿಸಿದ ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಭಜನಾ ಪರಿಷತ್‌ನ ಕೆಮ್ಮಿಂಜೆ ವಲಯದ ಭಜನಾ ತಂಡಗಳ ಸಮ್ಮಿಲನವೂ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ತಾಲೂಕು ಭಜನಾ ಪರಿಷತ್‌ನ ಅಧ್ಯಕ್ಷರು ಸಹಿತ ಹಲವು ಮಂದಿ ಗಣ್ಯರು ಆಗಮಿಸಲಿದ್ದಾರೆ.
ಭಜನೆ ಮೂಲಕ ಮನೆ ಮನೆಗೆ ಆಮಂತ್ರಣ:
ಭಜನೆ ಸಂಕೀರ್ತನೆಯ ಮೂಲಕ ಪ್ರತಿ ಮನೆಗಳಿಗೆ ಜಾತ್ರೋತ್ಸವದ ಆಮಂತ್ರಣ ತಲುಪಿಸುವುದೇ ಈ ಕ್ಷೇತ್ರದ ಇನ್ನೊಂದು ವಿಶೇಷತೆ. ಕಳೆದ ಹಲವು ವರ್ಷಗಳಿಂದ ಕ್ಷೇತ್ರದ ಶ್ರೀ ಉಮಾಮಹೇಶ್ವರ ಭಜನಾ ಮಂಡಳಿಯ ನೇತೃತ್ವದಲ್ಲಿ ಭಜನಾ ಸಂಕೀರ್ತನೆಯ ಮೂಲಕ ಪ್ರತಿ ಮನೆಗಳನ್ನು ಸಂದರ್ಶಿಸಿ, ಮನೆಯಲ್ಲಿ ಭಜನೆ ನಡೆಸಿ ಮನೆಯರಿಂದಲೇ ಆರತಿ ಬೆಳಗಿಸಿ, ಪ್ರಾರ್ಥನೆಯೊಂದಿಗೆ ಆಮಂತ್ರಣ ನೀಡಿ ಆಹ್ವಾನಿಸಲಾಗುತ್ತಿದೆ. ಈ ವರ್ಷ ಜ.1ರಿಂದ ಪ್ರಾರಂಭಗೊಂಡ ಭಜನೆ ಸಂಕೀರ್ತನೆಯು ದೇವಸ್ಥಾನದಿಂದ ಹೊರಟು ನಿರಂತರ 96 ದಿನಗಳಲ್ಲಿ ಗ್ರಾಮದಲ್ಲಿರುವ ಸುಮಾರು 1518 ಹಿಂದುಗಳ ಮನೆಗಳಲ್ಲಿ ಭಜನೆ ನಡೆಸಿ ಆಮಂತ್ರಣ ನೀಡಿ ಜಾತ್ರೆಗೆ ಆಹ್ವಾನಿಸಲಾಗಿದೆ. 97ನೇ ದಿನವಾದ ಎ.7ರಂದು ಮಂಗಲೋತ್ಸವದ ಮೆರವಣಿಗೆಯು ದೇವಸ್ಥಾನಕ್ಕೆ ಆಗಮಿಸಿ, ಮಂಗಲೋತ್ಸವ ನಡೆಯುತ್ತಿರುವುದು ಇಲ್ಲಿನ ವಿಶೇಷತೆಯಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು:
ಜಾತ್ರೋತ್ಸವದ ಪ್ರಥಮ ದಿನವಾದ ಎ.7ರಂದು ಬಂಗಾರ್ ಕಲಾವಿದರು ಪುತ್ತೂರು ಇವರಿಂದ ‘ಕುಡ ಒಂಜಾಕ’ ಎಂಬ ತುಳು ನಾಟಕ, ಎರಡನೇ ದಿನವಾದ ಎ.8ರಂದು ವಿದುಷಿ ಅಪರ್ಣ ಕೊಡಂಕಿರಿ ಮತ್ತು ಆಶಾ ರಾಧಾಕೃಷ್ಣ ಇವರಿಂದ ಯುಗಳ ನೃತ್ಯ, ಕೊನೆಯ ದಿನವಾದ ಎ.9ರಂದು ಬೆಳಿಗ್ಗೆ 9 ಗಂಟೆಯಿಂದ ವಿದುಷಿ ಪಾರ್ವತಿ ಗಣೇಶ್ ಹೊಸಮನೆ ಬಟ್ಯಮೂಲೆ ಇವರಿಂದ ಶಾಸ್ತ್ರೀಯ ಸಂಗೀತ ಹಾಗೂ ಸಂಜೆ 5.30ರಿಂದ ಡಾ.ನಿಶಿತಾ ಪತ್ತೂರು ನೃತ್ಯ ನಿರತ ಪುತ್ತೂರು ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಪ್ರಕಟಣೆ ತಿಳಿಸಿದೆ.
ಪಾರ್ವತಿ ಸ್ವಯಂವರ ಪೂಜೆಗೆ ಪ್ರಸಿದ್ಧಿಯಾಗಿರುವ ಕ್ಷೇತ್ರ:
ಮಜಲುಮಾರು ಕ್ಷೇತ್ರವು ಉಮಾ ಹಾಗೂ ಮಹೇಶ್ವರರು ಜತೆಯಾಗಿ ಅನುಗ್ರಹಿಸುವ ಅಪೂರ್ವ ಕ್ಷೇತ್ರವಾಗಿದೆ.ಇಲ್ಲಿ ಪಾರ್ವತಿ ಸ್ವಯಂವರ ಪೂಜೆ ದೇವರಿಗೆ ವಿಶೇಷ ಸೇವೆಯಾಗಿದೆ.ಕ್ಷೇತ್ರದಲ್ಲಿ ಸ್ವಯಂವರ ಪೂಜೆ ಸಲ್ಲಿಸಿದ ಭಕ್ತಾದಿಗಳಿಗೆ ಮಾಂಗಲ್ಯ ಭಾಗ್ಯ ಅನುಗ್ರಹಿಸಿದ ಹಲವು ನಿದರ್ಶನಗಳಿವೆ. ಮಾಂಗಲ್ಯ ಭಾಗ್ಯ ಕರುಣಿಸುವ ಪಾರ್ವತಿ ಸ್ವಯಂವರ ಪೂಜೆಗೆ ಮಜಲುಮಾರು ಕ್ಷೇತ್ರವು ಜಿಲ್ಲೆಯಲ್ಲಿಯೇ ಪ್ರಸಿದ್ದಿ ಪಡೆದಿದೆ.ಜೊತೆಗೆ ಸಂತಾನವಿಲ್ಲದವರು ಕ್ಷೇತ್ರದಲ್ಲಿ ಬಂದು ಪ್ರಾರ್ಥಿಸಿದರೆ ಸಂತಾನ ಪ್ರಾಪ್ತಿಯಾದ ನಿದರ್ಶನಗಳೂ ಇವೆ.