ಬಿಸಿಲ ಬೇಗೆ: ಪೌರಕಾರ್ಮಿಕರ ರಕ್ಷಣೆಯ ಸುತ್ತೋಲೆ – ಕಟ್ಟುನಿಟ್ಟಾಗಿ ಜಾರಿಗೊಳಿಸಲು ಹೈಕೋರ್ಟ್ ಸೂಚನೆ

0

ಬೆಂಗಳೂರು: ‘ಪೌರಕಾರ್ಮಿಕರು ಅಥವಾ ನೈರ್ಮಲ್ಯ ಕಾರ್ಮಿಕರನ್ನು ಬಿಸಿಗಾಳಿ ಹಾಗೂ ಸೂರ್ಯನ ಅತಿಯಾದ ತಾಪಮಾನದಿಂದ ರಕ್ಷಿಸುವ ನಿಟ್ಟಿನಲ್ಲಿ ಹೊರಡಿಸಲಾಗಿರುವ ಸುತ್ತೋಲೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಕರ್ನಾಟಕ ಹೈಕೋರ್ಟ್,ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

ಈ ಸಂಬಂಧ,‘ಅಖಿಲ ಭಾರತ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್’ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಅರ್ಜಿದಾರರ ಕೋರಿಕೆಗೆ ಸಂಬಂಧಿಸಿದಂತೆ ಪೌರಾಡಳಿತ ನಿರ್ದೇಶಕರು ಏ.2ರಂದು ಹೊರಡಿಸಿರುವ ಸುತ್ತೋಲೆಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರಲ್ಲದೆ, ಸುತ್ತೋಲೆಯ ಅನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ಸುತ್ತೋಲೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಆದೇಶಿಸಿತು. ಒಂದು ವೇಳೆ ಸುತ್ತೋಲೆ ಜಾರಿಗೊಳಿಸುವಲ್ಲಿ ಸರ್ಕಾರ ವಿಫಲವಾಗಿರುವುದು ಕಂಡು ಬಂದರೆ ಅರ್ಜಿದಾರರು ಪುನಃನ್ಯಾಯಾಲಯದ ಮೆಟ್ಟಿಲೇರಲು ಸ್ವತಂತ್ರರಿದ್ದಾರೆ ಎಂದು ಸೂಚಿಸಿ ಅರ್ಜಿ ವಿಲೇವಾರಿ ಮಾಡಿತು.

‘ಬೇಸಿಗೆ ಸಮಯದಲ್ಲಿ ಪೌರ ಕಾರ್ಮಿಕರ ರಕ್ಷಣೆಗೆ ಸಂಬಂಧಿಸಿದಂತೆ ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗ 2025ರ ಮಾರ್ಚ್ 12ರಂದು ಹೊರಡಿಸಿರುವ ಆದೇಶವನ್ನು ಪಾಲನೆ ಮಾಡುವಂತೆ ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಎಲ್ಲಾ ಜಿಲ್ಲಾಽಕಾರಿಗಳಿಗೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು.

ಮುನ್ನೆಚ್ಚರಿಕೆ ಕ್ರಮಗಳು: ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಶಾಖದ ಅಲೆಗಳ ದುಷ್ಪರಿಣಾಮ ನಿಭಾಯಿಸಲು ನಿರ್ದಿಷ್ಟ ಸಮಸ್ಯೆ ಹಾಗೂ ಶಾಖದ ಅಲೆಗಳ ನೇರ ದುಷ್ಪರಿಣಾಮಗಳಿಗೆ ಒಳಗಾಗುವ ಪ್ರದೇಶಗಳನ್ನು ಗುರುತಿಸಿ ಕ್ರಮ ವಹಿಸಬೇಕು.
ಕಟ್ಟಡ ನಿರ್ಮಾಣ ಕಾರ್ಮಿಕರು, ಪೌರಕಾರ್ಮಿಕರು, ಅಂಗನವಾಡಿ ನೌಕರರು, ಅಸಂಘಟಿತ ಕಾರ್ಮಿಕರು ಹೆಚ್ಚಿನ ರೀತಿಯಲ್ಲಿ ಶಾಖದ ಅಲೆಗಳಿಗೆ ಗುರಿಯಾಗುವ ಸಂಭವ ಇರುತ್ತದೆ.ಹೀಗಾಗಿ, ಕಾರ್ಮಿಕರ ಒತ್ತಡ ಕಡಿಮೆ ಮಾಡಲು ಸಮಯ ಬದಲಾವಣೆ, ಸಾರ್ವಜನಿಕರು ಕಚೇರಿಗೆ ಭೇಟಿ ನೀಡುವ ಸಮಯ ಬದಲಾಯಿಸಬೇಕು.
ಪೌರಕಾರ್ಮಿಕರ ಕಾರ್ಯ ನಿರ್ವಹಣೆಗೆ ಅನುಕೂಲವಾಗಲು ಸ್ಥಳೀಯ ಬಿಸಿಲಿನ ಪರಿಸ್ಥಿತಿಗೆ ಅನುಗುಣವಾಗಿ ಸಮಯ ನಿಗದಿಪಡಿಸಬೇಕು. ಕೆಲಸದ ಸಮಯದಲ್ಲಿ ಕುಡಿಯುವ ನೀರು ಹಾಗೂ ಉಪಾಹಾರ ಒದಗಿಸಬೇಕು.
ಅಸಂಘಟಿತ ಹಾಗೂ ಕಟ್ಟಡ ಕಾರ್ಮಿಕರು ಕೆಲಸ ಮಾಡುವ ಸ್ಥಳಗಳಲ್ಲಿ ಆಟದ ಮೈದಾನ ಹಾಗೂ ಪಾರ್ಕ್‌ಗಳಲ್ಲಿ ಕುಡಿಯುವ ನೀರು ಪೂರೈಸಬೇಕು. ರಾಜ್ಯದಲ್ಲಿ ಶಾಖದ ಪರಿಣಾಮಗಳಿಗೆ ತುತ್ತಾಗುವ ಜನರ ನಿಖರ ಸಂಖ್ಯೆ ತಿಳಿಯಲು ಸಂಬಂಧಿಸಿದ ಸಿಬ್ಬಂದಿಗೆ ‘ಹೀಟ್ ವೇವ್ ವಿಜ್ಞಾನ’ ಅರ್ಥ ಮಾಡಿಸಬೇಕು. ಮಾರುಕಟ್ಟೆ, ಬಸ್ ನಿಲ್ದಾಣ ಮತ್ತು ಜನಸಂದಣಿ ಸ್ಥಳಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಹಾಗೂ ನೆರಳಿನ ವ್ಯವಸ್ಥೆ ಕಲ್ಪಿಸುವುದು ಒಳಗೊಂಡಿದೆ.


LEAVE A REPLY

Please enter your comment!
Please enter your name here