ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಯಲ್ಲಿ ರೂ.6ಕೋಟಿಯ ಅಭಿವೃದ್ಧಿ ಕಾಮಗಾರಿ

0

ಪುತ್ತೂರು:ಕೇಂದ್ರ ಸರಕಾರದ ಕೇಂದ್ರ ರಸ್ತೆ ಹಾಗೂ ಮೂಲ ಸೌಕರ್ಯ ನಿಧಿ(ಸಿಆರ್‌ಐಎಫ್)ಯ ರೂ.6 ಕೋಟಿ ಅನುದಾನದಲ್ಲಿ ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿ 100ರಲ್ಲಿ ಅಭಿವೃದ್ಧಿ ಕಾಮಗಾರಿಗೆ ಏ.8ರಂದು ಆರ್ಯಾಪು ಗ್ರಾಮದ ಮಚ್ಚಿ ಮಲೆಯ ಎಕ್ರೆಜಾಲ್ ಎಂಬಲ್ಲಿ ದ.ಕ.ಸಂಸದ ಕ್ಯಾ|ಬ್ರಿಜೇಶ್ ಚೌಟ ಹಾಗೂ ಶಾಸಕ ಅಶೋಕ್ ಕುಮಾರ್ ರೈಯವರು ವಿವಿಧ ಜನಪ್ರತಿನಿಧಿಗಳೊಂದಿಗೆ ಶಿಲಾನ್ಯಾಸ ನೆರವೇರಿಸಿದರು.ಕಾರ್ಯಕ್ರಮದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಮಾಗಮ ನಡೆದಿತ್ತು.


ಆದ್ಯತೆಯಲ್ಲಿ ಮಾಣಿ-ಸಂಪಾಜೆ ಚತುಷ್ಪಥ ಕಾಮಗಾರಿ-ಕ್ಯಾ|ಬ್ರಿಜೇಶ್ ಚೌಟ:
ಶಿಲಾನ್ಯಾಸ ನೆರವೇರಿಸಿದ ದ.ಕ.ಸಂಸದ ಕ್ಯಾ|ಬ್ರಿಜೇಶ್ ಚೌಟ ಮಾತನಾಡಿ, ಮಾಣಿ-ಸಂಪಾಜೆ ಚತುಷ್ಪಥ ಕಾಮಗಾರಿಯು ಪುತ್ತೂರಿನ ಪ್ರಮುಖ ಯೋಜನೆಯಾಗಿದೆ.ಇದು ಜನರ ಬಹು ಸಮಯಗಳ ಬೇಡಿಕೆಯಾಗಿದ್ದು ಶೀಘ್ರದಲ್ಲೇ ಪ್ರಾರಂಭಗೊಳ್ಳಲಿದೆ.ಜಿಲ್ಲೆಯ ಪ್ರಮುಖ ಯೋಜನೆಗಳ ಜೊತೆಗೆ ಮಾಣಿ-ಸಂಪಾಜೆ ಚತುಷ್ಪಥ ಕಾಮಗಾರಿಯನ್ನು ಆದ್ಯತೆಯಲ್ಲಿ ನಡೆಸಲಾಗುವುದು. ಚತುಷ್ಪಥ ಕಾಮಗಾರಿಗೆ ಕೇಂದ್ರ ಹೆದ್ದಾರಿ ಇಲಾಖೆಯಿಂದ ಅನುಮತಿ ದೊರೆತಿದೆ.ರಸ್ತೆಯನ್ನು ಮೇಲ್ದರ್ಜೆಗೇರಿಸಲು ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರ ಜೊತೆಗೆ ಚರ್ಚಿಸಲಾಗಿದೆ.ಏಜೆನ್ಸಿ ಮೂಲಕ ಡಿಪಿಆರ್ ನಡೆಸಲು ಸೂಚನೆ ನೀಡಿದ್ದು ಪ್ರಕ್ರಿಯೆಗೆ ಚಾಲನೆ ದೊರೆತಿದೆ ಎಂದರಲ್ಲದೆ, ಡಿಪಿಆರ್ ಪೂರ್ಣಗೊಳಿಸಿ ಕೇಂದ್ರದಿಂದ ಅನುಮೋದನೆ ಪಡೆಯುವ ನಿಟ್ಟಿನಲ್ಲಿ ಡಿಪಿಆರ್‌ನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಶಾಸಕ ಅಶೋಕ್ ಕುಮಾರ್ ರೈ ಅವರಲ್ಲಿ ಮನವಿ ಮಾಡಿದರು.ಚತುಷ್ಪಥ ಕಾಮಗಾರಿಗೆ ಅವಶ್ಯಕವಾಗಿರುವ ಭೂ ಸ್ವಾಧಿನ ಹಾಗೂ ಕಾಮಗಾರಿಗೆ ಎಲ್ಲಾ ಸ್ಥಳೀಯ ಆಡಳಿತಗಳು, ಸಾರ್ವಜನಿಕರು ಸಹಕರಿಸುವಂತೆ ವಿನಂತಿಸಿದ ಸಂಸದರು, ಕೇಂದ್ರ ಸರಕಾರದ ಕೇಂದ್ರ ರಸ್ತೆ ಹಾಗೂ ಮೂಲ ಸೌಕರ್ಯ ನಿಧಿ(ಸಿಆರ್‌ಐಎಫ್)ಯ ರೂ.6 ಕೋಟಿ ಅನುದಾನದಲ್ಲಿ ಎರಡು ಕಡೆ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿದೆ ಎಂದರು.


ಅಭಿವೃದ್ಧಿಯಲ್ಲಿ ರಾಜಕೀಯವಿಲ್ಲ-ಅಶೋಕ್ ಕುಮಾರ್ ರೈ:
ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಪಕ್ಷ ಚುನಾವಣಾ ಸಮಯದಲ್ಲಿ ಮಾತ್ರ.ಅಭಿವೃದ್ಧಿಯಲ್ಲಿ ಯಾವುದೇ ಪಕ್ಷವಿಲ್ಲ.ಅನುದಾನ ಕೇಂದ್ರದ್ದೇ ಆಗಿರಲಿ ಅಥವಾ ರಾಜ್ಯದಿಂದ ಬರಲಿ ಅಭಿವೃದ್ಧಿಯೊಂದೇ ನಮ್ಮ ಗುರಿ. ನಾನು ಪುತ್ತೂರು ಕ್ಷೇತ್ರ ಅಭಿವೃದ್ಧಿಯ ಗುರಿಯಾಗಿಸಿದರೆ ಸಂಸದರಲ್ಲಿ ಜಿಲ್ಲೆಯ ಅಭಿವೃದ್ಧಿಯ ಕಲ್ಪನೆಯಿದೆ.ಅಭಿವೃದ್ಧಿಯಲ್ಲಿ ನಮ್ಮ ರಾಜಕೀಯವಿಲ್ಲ.ನಾನು ಮಾಡಿದ್ದೇನೆ ನಾನು ಮಾಡಿದ್ದೇನೆ ಅಂದರೆ, ಯಾರ‍್ಯಾರು ಎಲ್ಲೆಲ್ಲಿ ಮಾಡಿದ್ದಾರೆ ಎಂದು ಜನರಿಗೆ ಗೊತ್ತಾಗುತ್ತದೆ.ಮಾಣಿ-ಸಂಪಾಜೆ ಚತುಷ್ಪಥ ಕಾಮಗಾರಿಯ ಬಗ್ಗೆ ಮಾಜಿ ಸಂಸದರು ಹಾಗೂ ಈಗಿನ ಸಂಸದರಲ್ಲಿ ಚರ್ಚಿಸಲಾಗಿದೆ.ಡಿಪಿಆರ್‌ಗೆ ಟೆಂಡರ್ ಆಗಿದ್ದರೂ ಪ್ರಕ್ರಿಯೆ ವಿಳಂಬವಾಗಿದೆ.ಡಿಪಿಆರ್‌ಗೆ ಹೆಚ್ಚಿನ ಅನುದಾನ ನೀಡುವಂತೆ ಸಂಸದರು ಲೋಕೋಪಯೋಗಿ ಸಚಿವರಿಗೆ ಮನವಿ ಮಾಡಿದ್ದು ರೂ.3.19 ಕೋಟಿ ಅನುದಾನ ನೀಡಿದ್ದಾರೆ.ಕಾಮಗಾರಿ ಆದಷ್ಟು ಶೀಘ್ರದಲ್ಲಿ ಆಗಬೇಕು.ರಾಜಕೀಯವಿಲ್ಲದೆ ಅಭಿವೃದ್ಧಿಯಾಗುವುದಕ್ಕೆ ಇಂದಿನ ಕಾರ್ಯಕ್ರಮ ನಿದರ್ಶನವಾಗಿದೆ ಎಂದು ಹೇಳಿದರು.ಪ್ರಸಾದಂ ಯೋಜನೆಯಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಹಾಗೂ ಖೇಲೋ ಇಂಡಿಯಾದಲ್ಲಿ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಸಂಸದರೂ ಪ್ರಸ್ತಾವನೆ ಕಳುಹಿಸಿರುವುದಕ್ಕೆ ಶಾಸಕರು ಅಭಿನಂದನೆ ಸಲ್ಲಿಸಿದರು.


ಮಾಜಿ ಶಾಸಕ ಸಂಜೀವ ಮಠಂದೂರು, ನಗರ ಸಭಾ ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ, ಸದಸ್ಯೆ ದೀಕ್ಷಾ ಪೈ, ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಗೀತಾ, ಸದಸ್ಯರಾದ ವಸಂತ, ಸುಬ್ರಹ್ಮಣ್ಯ ಬಲ್ಯಾಯ, ಶ್ರೀನಿವಾಸ ರೈ, ಬಲ್ನಾಡು ಗ್ರಾ.ಪಂ ಅಧ್ಯಕ್ಷೆ ಪರಮೇಶ್ವರಿ ಭಟ್, ಸದಸ್ಯ ಬಾಲಸುಬ್ರಹ್ಮಣ್ಯ ಕೋಟ್ಯಾನ್, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯರ್ ರಾಧಾಕೃಷ್ಣ ರೈ, ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ವಿರೂಪಾಕ್ಷ ಭಟ್ ಮಚ್ಚಿಮಲೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಜಯಲಕ್ಷ್ಮೀ ಶಗ್ರಿತ್ತಾಯ, ನಿತಿಶ್ ಶಾಂತಿವನ, ವಿಶ್ವೇಶ್ವರ ಭಟ್ ಬಂಗಾರಡ್ಕ, ಸಂತೋಷ್ ರೈ ಕೈಕಾರ, ರತನ್ ರೈ ಕುಂಬ್ರ, ರಾಜೇಶ್ ರೈ ಪರ್ಪುಂಜ ಸೇರಿದಂತೆ ಹಲವು ಮಂದಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್‌ಚಂದ್ರ ಆಳ್ವ,ಬ್ಲಾಕ್ ಉಪಾಧ್ಯಕ್ಷ ಮೌರೀಸ್ ಮಸ್ಕರೇನಸ್, ಚಂದಪ್ಪ ಪೂಜಾರಿ ಕಾಡ್ಲ, ಗಿರೀಶ್ ರೈ ಮೂಲೆ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ರಾರಾಜಿಸಿದ ಫ್ಲೆಕ್ಸ್!
ಪುತ್ತೂರು-ಬೆಳಿಯೂರುಕಟ್ಟೆ ರಸ್ತೆಯ ಮಚ್ಚಿಮಲೆ ಸಮೀಪ ಎಕ್ರೆಜಾಲ್ ಎಂಬಲ್ಲಿ ಕಾಮಗಾರಿ ಶಿಲಾನ್ಯಾಸ ನಡೆದಿದ್ದು, ಸಂಸದರು ಹಾಗೂ ಶಾಸಕರಿಗೆ ಸ್ವಾಗತ ಬಯಸಿ ಬೃಹತ್ ಫ್ಲೆಕ್ಸ್ಗಳು ರಾರಾಜಿಸಿದ್ದವು.ಸಂಸದರಿಗೆ ಸ್ವಾಗತ ಬಯಸಿ 6 ಫ್ಲೆಕ್ಸ್ಗಳಿದ್ದರೆ, ಶಾಸಕರಿಗೆ ಸ್ವಾಗತ ಬಯಸಿ 2 ಫ್ಲೆಕ್ಸ್ಗಳನ್ನು ಅಳವಡಿಸಲಾಗಿತ್ತು.ಸಂಸದರು ಹಾಗೂ ಶಾಸಕರಿಬ್ಬರಿಗೂ ಸ್ವಾಗತ ಬಯಸಿ ಒಂದು ಫ್ಲೆಕ್ಸ್ ನ್ನು ಅಳವಡಿಸಿರುವುದೂ ಕಂಡು ಬಂದಿತ್ತು.

ಫಂಡ್ ಸೆಂಟ್ರಲಿದ್ದು..ಸ್ಟೇಟಿದ್ದು…! ಶಾಸಕರು, ಸಂಸದರ ಸಮರ್ಥನೆ
ಶಿಲಾನ್ಯಾಸದ ಪ್ರಾರಂಭದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯ ಅನುದಾನದ ವಿಚಾರದಲ್ಲಿ ಶಾಸಕರು ಹಾಗೂ ಸಂಸದರು ರಾಜ್ಯ, ಕೇಂದ್ರ ಎಂದು ಸಮರ್ಥಿಸಿಕೊಂಡರು.ಅನುದಾನದಲ್ಲಿ ರಾಜ್ಯದ ಪಾಲಿದೆ ಎಂದು ಶಾಸಕರು ತಿಳಿಸಿದರೆ, ಪೂರ್ತಿ ಅನುದಾನ ಕೇಂದ್ರದ್ದು ಎಂದು ಸಂಸದರು ಸಮರ್ಥಿಸಿದರು.ಈ ಕಾಮಗಾರಿಗೆ ಪೂರ್ತಿ 6 ಕೋಟಿ ಅನುದಾನ ಕೂಡ ಕೇಂದ್ರದ ಸಿಆರ್‌ಐಎಫ್‌ ನಿಂದ ಬಂದಿದೆ ಎಂದು ಸಂಸದ ಕ್ಯಾ|ಬ್ರಿಜೇಶ್ ಚೌಟ ತಿಳಿಸಿದರು.ಬೆಳಿಯೂರುಕಟ್ಟೆ ರಸ್ತೆಗೆ 6.2 ಕೋಟಿ ರೂ.ಅನುದಾನವಿದೆ.ಒಟ್ಟು ರೂ.1,344 ಕೋಟಿ ಅನುದಾನ ಬಂದಿದ್ದು ಇದರಲ್ಲಿ ರೂ.697 ಕೋಟಿ ಕೇಂದ್ರದ್ದು, 697 ಕೋಟಿ ರಾಜ್ಯದ ಪಾಲಿದೆ ಎಂದು ಇಲಾಖೆಯ ಬೆಂಗಳೂರು ಕಚೇಯಿಂದ ಮಾಹಿತಿ ಬಂದಿದೆ.ನಿಮ್ಮಲ್ಲಿ ಹೆಚ್ಚಿನ ಮಾಹಿತಿಗಳಿದ್ದರೆ ಸರಿಯಾದ ಮಾಹಿತಿ ನೀಡಿ ನಮಗೇನೂ ಅಭಿವೃದ್ಧಿಯಲ್ಲಿ ಬಿಜೆಪಿ, ಕಾಂಗ್ರೆಸ್ ಎಂದಿಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.ಹೆಚ್ಚಿನ ಅನುದಾನಕ್ಕೆ ಪ್ರಸ್ತಾವನೆ ಕಳುಹಿಸಿದ್ದಾರೆ.ಅದನ್ನು ಭರ್ತಿ ಮಾಡುವುದಾಗಿ ರಾಜ್ಯದಿಂದ ಹೇಳಿದ್ದಾರೆ.ಆದರೆ ಭರ್ತಿ ಮಾಡಿಲ್ಲ.ಇದು ಪೂರ್ಣ ಕೇಂದ್ರದ ಅನುದಾನವಾಗಿದೆ ಎಂದ ಸಂಸದರು, ಸ್ಪಷ್ಟ ಮಾಹಿತಿ ನೀಡುವಂತೆ ಅಧಿಕಾರಿಗಳಲ್ಲಿ ತಿಳಿಸಿದರು.ಈ ಅನುದಾನವನ್ನು ಕೇಂದ್ರದ ಸಿಆರ್‌ಐಎಫ್ ನಿಂದ ಕೇಂದ್ರ ರಸ್ತೆ ಅನುದಾನ ಎಂದು ನೀಡಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.ಸ್ಟೇಟ್‌ನಿಂದ ನೀಡಿಲ್ವಾ ಎಂದು ಶಾಸಕ ಅಶೋಕ್ ಕುಮಾರ್ ರೈ ಪ್ರಶ್ನಿಸಿದರು.ಕಾಮಗಾರಿಯ ಹೆಸರು ಉಲ್ಲೇಖಿಸಿಯೇ ಕೇಂದ್ರದ ಯೋಜನೆಯಲ್ಲಿ ಅನುದಾನ ನೀಡಿರುವುದಾಗಿ ಸಂಸದರು ಹಾಗೂ ಅಧಿಕಾರಿಗಳು ತಿಳಿಸಿದರು.

LEAVE A REPLY

Please enter your comment!
Please enter your name here