ನಿಡ್ಪಳ್ಳಿ: ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಸೂರಂಬೈಲು ಇದರ 2024-25 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಹಂತದ ಸಮುದಾಯ ದತ್ತ ಶಾಲಾ ಕಾರ್ಯಕ್ರಮ ಎಸ್.ಡಿ.ಎಂ.ಸಿ ಅಧ್ಯಕ್ಷ ಶ್ರೀನಿವಾಸ ಪ್ರಸಾದ್ ರವರ ಅಧ್ಯಕ್ಷತೆಯಲ್ಲಿ ಏ.8 ರಂದು ಜರಗಿತು.
ಸುಬೋಧ ಪ್ರೌಢಶಾಲೆ ಪಾಣಾಜೆ ಇದರ ಸಹಶಿಕ್ಷಕಿ ನಿರ್ಮಲಾ ಮಾರ್ಗದರ್ಶಿ ಶಿಕ್ಷಕಿಯಾಗಿ ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಪರಮೇಶ್ವರಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಹಾಗೂ ಸಹಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಅವರನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತಯಾರುಗೊಳಿಸುವ ಕುರಿತು ಪೋಷಕರಿಗೆ ಮಾಹಿತಿ ನೀಡಿದರು.ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಅಂಬಿಕಾ ಉಪಸ್ಥಿತರಿದ್ದರು.
ಸಿ.ಸಿ ಕ್ಯಾಮೆರಾ ಕೊಡುಗೆ ಹಸ್ತಾಂತರ; ಶಾಲೆಯ 7ನೇ ತರಗತಿ ವಿದ್ಯಾರ್ಥಿ ತೇಜಸ್ ಬಿ. ಎಸ್ ಹಾಗೂ ಹಿರಿಯ ವಿದ್ಯಾರ್ಥಿ ಧನುಷ್ ಇವರ ಪರವಾಗಿ ಶಾಲಾ ಪೋಷಕರಾದ ಶ್ರೀಧರ ನಾಯ್ಕ ತೂಂಬಡ್ಕ ಮತ್ತು ಭವಾನಿ ಇವರು ಶಾಲೆಗೆ ಕೊಡುಗೆಯಾಗಿ ನೀಡಿದ ಸಿ.ಸಿ ಕ್ಯಾಮರಾವನ್ನು ಹಸ್ತಾಂತರಿಸಿದರು.
ಶಾಲಾ ಮುಖ್ಯ ಗುರು ಊರ್ಮಿಳಾ ಇಲಾಖಾ ಮಾಹಿತಿಯೊಂದಿಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯಲ್ಲಿ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಬಹುಮಾನ ಪಟ್ಟಿಯನ್ನು ಗೌರವ ಶಿಕ್ಷಕಿ ಯಶಸ್ವಿನಿ ವಾಚಿಸಿದರು.
ಶಾಲಾ ವಿದ್ಯಾರ್ಥಿಗಳಾದ ಧನ್ಯಶ್ರೀ,ಯಶಸ್ವಿನಿ, ಪಯಸ್ವಿನಿ, ಧನ್ಯಶ್ರೀ,ಯಶಸ್ವಿ ಇವರು ಪ್ರಾರ್ಥಿಸಿದರು. ಶಿಕ್ಷಕಿ ಪವಿತ್ರ ಎಂ. ಆರ್ ಸ್ವಾಗತಿಸಿದರು. ಸಹಶಿಕ್ಷಕ ನಾಗೇಶ ಪಾಟಾಳಿ.ಕೆ ವಂದಿಸಿದರು. ಅತಿಥಿ ಶಿಕ್ಷಕಿ ಸುಪ್ರಿತ ಕಾರ್ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿ ವಿದ್ಯಾಲಕ್ಷ್ಮಿ ಸಹಕರಿಸಿದರು.