ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ನಡೆಯುತ್ತಿರುವ ವ್ಯಕ್ತಿತ್ವ ವಿಕಸನ ಶಿಬಿರ ಯುರೇಕಾ – 2025ರ ಮೂರನೇ ದಿನದ ಪ್ರಥಮ ಅವಧಿಯನ್ನು ಡಾ| ವಿನ್ಯಾಸ್ ಎಚ್, ಸಹಾಯಕ ಪ್ರಾಧ್ಯಾಪಕರು ಕೆ.ಎಸ್.ಎಸ್ ಪದವಿ ಕಾಲೇಜು ಸುಬ್ರಹ್ಮಣ್ಯ ಇವರು ನಡೆಸಿಕೊಟ್ಟರು.

ವಾಣಿಜ್ಯ ಕ್ಷೇತ್ರ – ಅಸೀಮ ಸಾಧ್ಯತೆಗಳತ್ತ ಒಂದು ಇಣುಕು ನೋಟ ವಿಷಯದ ಕುರಿತಾಗಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ವಾಣಿಜ್ಯ ವಿಷಯದ ಅಧ್ಯಯನ ಯಾಕೆ ಮುಖ್ಯ? ಈ ಕ್ಷೇತ್ರದಲ್ಲಿ ಮುಂದುವರಿಯುವುದರಿಂದ ನಮ್ಮ ವೃತ್ತಿ ಜೀವನದಲ್ಲಿ ತೆರೆದುಕೊಳ್ಳುವ ವಿಭಿನ್ನ ಅವಕಾಶಗಳೇನು? ಒಂದು ದೇಶದ ಹಣಕಾಸು ವ್ಯವಸ್ಥೆಯ ಮೇಲೆ ವಾಣಿಜ್ಯಶಾಸ್ತ್ರದ ಅರಿವು ಯಾವ ರೀತಿಯ ಪರಿಣಾಮ ಬೀರಬಹುದು? ಒಂದು ಕ್ಷೇತ್ರ ಒಳಗೊಳ್ಳುವ ವಿಷಯಗಳ ಕುರಿತು ಕೇವಲ ಅಧ್ಯಯನ ಮಾಡುವುದಷ್ಟೇ ಅಲ್ಲದೆ, ಆ ವಿಷಯದಲ್ಲಿ ಪ್ರಾವೀಣ್ಯತೆಯನ್ನು ಪಡೆದುಕೊಳ್ಳುವುದರ ಪ್ರಾಮುಖ್ಯತೆ ಮುಂತಾದ ವಿಷಯಗಳ ಕುರಿತಾಗಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.

ಬಳಿಕ ನಡೆದ ಎರಡನೇ ಅವಧಿಯನ್ನು ರಾಜೇಶ್ ಭಟ್, ಶಿಕ್ಷಣ ಸಲಹೆಗಾರರು ಮತ್ತು ಅಧ್ಯಾಪಕರು ಆಕ್ಸ್‌ಫರ್ಡ್ ಸ್ಕೂಲ್ ಬೆಂಗಳೂರು ಇವರು ನಡೆಸಿಕೊಟ್ಟರು. ಹಲವು ವೈಜ್ಞಾನಿಕ ಪರಿಕಲ್ಪನೆಗಳ ಪರಿಚಯ, ನಿತ್ಯ ಜೀವನದಲ್ಲಿ ಅವುಗಳ ಬಳಕೆ, ಭೌತಶಾಸ್ತ್ರ ಹಾಗೂ ಗಣಿತಶಾಸ್ತ್ರದ ಹಲವಾರು ವಿಷಯಗಳನ್ನು ಸುಲಭದಲ್ಲಿ ಅರ್ಥಮಾಡಿಕೊಳ್ಳಲು ಸಹಕಾರಿಯಾಗುವಂತಹ ಪ್ರಾಯೋಗಿಕ ಪ್ರಾತ್ಯಕ್ಷಿಕೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು.

ಅಪರಾಹ್ನದ ಬಳಿಕ ಜೀವಶಾಸ್ತ್ರ ವಿಭಾಗದ ಉಪನ್ಯಾಸಕರು ವಿದ್ಯಾರ್ಥಿಗಳಿಗಾಗಿ ಪ್ರಾಯೋಗಿಕ ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಟ್ಟರು.