ಪುತ್ತೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸಿದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1 ರ ಫಲಿತಾಂಶ ಪ್ರಕಟಗೊಂಡಿದ್ದು, ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಹಲವಾರು ರ್‍ಯಾಂಕ್ ಗಳನ್ನು ಬಾಚಿಕೊಳ್ಳುವುದರೊಂದಿಗೆ ಉತ್ತಮ ಸಾಧನೆಯನ್ನು ಮೆರೆದಿದ್ದಾರೆ.

ಸಾಧಕ ವಿದ್ಯಾರ್ಥಿಗಳಿಗೆ ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ಸನ್ಮಾನವನ್ನು ಮಾಡಲಾಯಿತು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಪಿ ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆಯನ್ನು ಸಲ್ಲಿಸುತ್ತಾ, ನಿರಂತರವಾದ ಶ್ರಮ, ಸಾಧನೆ ನಮ್ಮನ್ನು ಶಿಖರಕ್ಕೆ ಕೊಂಡೊಯ್ದು ನಿಲ್ಲಿಸಬಲ್ಲದು ಎಂಬುದನ್ನು ನಮ್ಮ ವಿದ್ಯಾರ್ಥಿಗಳು ಇಂದು ಸಾಬೀತುಪಡಿಸಿದ್ದಾರೆ. ವಿವೇಕಾನಂದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಕಲಿಕಾ ವಾತಾವರಣವನ್ನು ನೀಡುವುದರೊಂದಿಗೆ ಅವರ ಬೌದ್ಧಿಕ ವಿಕಸನಕ್ಕೆ ಪೂರಕವಾದ ಪರಿಸರವನ್ನು ಒದಗಿಸಿ ಅವರ ಸಂಪೂರ್ಣ ಬೆಳವಣಿಗೆಯಲ್ಲಿ ಸಹಕರಿಸುತ್ತಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ರಾಜ್ಯಮಟ್ಟದಲ್ಲಿ ವಿವಿಧ ರ್‍ಯಾಂಕ್‌ಗಳನ್ನು ಗಳಿಸಿದ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿ, ಸನ್ಮಾನಗೈದು ಸಿಹಿತಿಂಡಿ ಹಂಚಲಾಯಿತು. ಈ ಸಂದರ್ಭದಲ್ಲಿ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕರುಗಳಾದ ಡಾ. ಕೆ ಎನ್ ಸುಬ್ರಹ್ಮಣ್ಯ, ವತ್ಸಲಾ ರಾಜ್ಞಿ, ಉಪ ಪ್ರಾಂಶುಪಾಲರಾದ ದೇವಿಚರಣ್ ರೈ,ವಿದ್ಯಾರ್ಥಿಗಳ ಹೆತ್ತವರು, ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಉಪನ್ಯಾಸಕಿ ದಯಾಮಣಿ ಟಿ.ಕೆ ಕಾರ್ಯಕ್ರಮ ನಿರೂಪಿಸಿದರು.