ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಸಂದರ್ಭ ತಾತ್ಕಾಲಿಕ ಎಲಂಗೆ ಸ್ಟಾಲ್ ಪಡೆದವರು, ಸ್ವಚ್ಛತೆ, ಆಹಾರದ ಸುರಕ್ಷತೆ, ಸ್ವಚ್ಛತೆಯ ಕುರಿತು ದೇವಸ್ಥಾನದಿಂದ ನಿಗಾ ಇಡುವಂತೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿಯಿಂದ ಶಾಸಕರಿಗೆ ಮತ್ತು ದೇವಳದ ಅಧ್ಯಕ್ಷರು, ಕಾರ್ಯನಿರ್ವಹಣಾಧಿಕಾರಿಗೆ ಮನವಿ ನೀಡಲಾಗಿದೆ ಎಂದು ಸಂರಕ್ಷಣಾ ಸಮಿತಿಯ ಪ್ರಮುಖರು ತಿಳಿಸಿದ್ದಾರೆ.
ಜಾತ್ರೆಯ ಸಮಯದಲ್ಲಿ ಅಂಗಡಿಯ ಸ್ವಚ್ಚತೆಗೆ ಆದ್ಯತೆ ನೀಡಬೇಕು. ಸ್ವಚ್ಚತೆಯ ಜಾಗೃತಿಗಾಗಿ ನಮ್ಮ ಸಮಿತಿಯಿಂದ ಅಭಿಯಾನ ಮಾಡಲಿದ್ದೇವೆ. ಎಲಂಗೆ ಪಡೆದ ಅಂಗಡಿಯವರಿಂದ ಸ್ವಚ್ಚತೆಗೆ ಮತ್ತೆ ಹಣ ವಸೂಲಿ ಮಾಡುವುದು ಸಮಂಜಸವಲ್ಲ. ಮದ್ಯಪಾನ/ದೂಮಪಾನಕ್ಕೆ ಅವಕಾಶ ನೀಡಬಾರದು. ಕಳೆದ ಬಾರಿ ಬಿಯರ್ ಬಾಟಲಿ ಒಂದು ಅಂಗಡಿಯ ಹಿಂಬದಿ ಕಂಡು ಬಂದಿದ್ದು, ಈ ಬಗ್ಗೆ ಪರವಾನಿಗೆ ನೀಡುವಾಗಲೇ ಈ ಎಲ್ಲಾ ವಿಚಾರಗಳ ಬಗ್ಗೆ ಅಫಿಡವಿಟ್ ಮಾಡಿ ಪಡಕೊಂಡರೆ ಒಳ್ಳೆಯದು. ಮೊಬೈಲ್ ಶೌಚಾಲಯದ ಸ್ವಚ್ಛತೆಗೆ ಸಿಬ್ಬಂದಿ ನೇಮಕ ಮಾಡಬೇಕು. ಮಕ್ಕಳು ವ್ಯಾಪಾರ ಮಾಡದಂತೆ ಮಕ್ಕಳ ಆಯೋಗವು ಗಮನಹರಿಸುವಂತೆ ವ್ಯವಸ್ಥೆ ಕಲ್ಪಿಸಬೇಕು. ಅಂಗಡಿ ಏಲಂ ಪಡೆದ ವ್ಯಕ್ತಿ ಅನ್ಯರಿಗೆ ಒಳಬಾಡಿಗೆಗೆ ಅಂಗಡಿ ನೀಡಿದ್ದಲ್ಲಿ ಮತ್ತೆ ಏಲಂ ಪ್ರಕ್ರಿಯೆ ನಡೆಸತಕ್ಕದ್ದು. ಅಲ್ಲದೇ ಎಲ್ಲಾ ಸ್ಟಾಲ್‌ಗಳು ಏಲಂ ಪ್ರಕ್ರಿಯೆಯಲ್ಲಿ ಭಾಗಿಯಾಗಿದೆಯೇ ಎಂದು ಮನವಿಯಲ್ಲಿ ತಿಳಿಸಿರುವುದಾಗಿ ತಿಳಿಸಿದ್ದಾರೆ.