ನೆಲ್ಯಾಡಿ: ಎ.9ರಂದು ಸಂಜೆ ಸುರಿದ ಭಾರೀ ಮಳೆ ನೆಲ್ಯಾಡಿ ಪೇಟೆಯಲ್ಲಿ ಅವಾಂತರವನ್ನೇ ಸೃಷ್ಟಿಸಿದೆ. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ನೆಲ್ಯಾಡಿ ಪೇಟೆಯಲ್ಲಿ ಅಪೂರ್ಣ ಹಂತದಲ್ಲಿದ್ದು ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ಮಳೆ ನೀರು ಪ್ರವಾಹದಂತೆ ರಸ್ತೆಯಲ್ಲೇ ಹರಿದು ತಗ್ಗುಪ್ರದೇಶಗಳಿಗೆ ನುಗ್ಗಿದೆ.
ನೆಲ್ಯಾಡಿ ಭಾಗದಲ್ಲಿ ಸಂಜೆ 4 ಗಂಟೆಯಿಂದ 6 ಗಂಟೆ ತನಕ ಸುಮಾರು 2 ತಾಸು ಭಾರೀ ಮಳೆಯಾಗಿದ್ದು ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೇ ಮಳೆ ನೀರು ಪ್ರವಾಹದಂತೆ ಪೇಟೆಯಲ್ಲಿನ ಸರ್ವೀಸ್ ರಸ್ತೆಯಲ್ಲೇ ಹರಿದು ಹೋಗಿದೆ. ಸರ್ವೀಸ್ ರಸ್ತೆಯಲ್ಲಿ 1 ಅಡಿಗೂ ಹೆಚ್ಚು ನೀರು ನಿಂತಿತ್ತು. ಅಂಡರ್‌ಪಾಸ್‌ನಲ್ಲೂ ಮಳೆ ನೀರು ನಿಂತ ಪರಿಣಾಮ ವಾಹನ ಸವಾರರು, ಪಾದಚಾರಿಗಳು ಪರದಾಟ ನಡೆಸುವಂತಹ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ನೆಲ್ಯಾಡಿ ಪೇಟೆಯಲ್ಲಿನ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಅರ್ಧದಲ್ಲೇ ನಿಂತಿದ್ದು ಮೇಲ್ಸೇತುವೆಯಿಂದ ಧಾರಕಾರ ಮಳೆ ನೀರು ಸರ್ವೀಸ್ ರಸ್ತೆಗೆ ಹರಿದು ಬಂದಿದೆ. ಎರಡೂ ಬದಿಯ ಸರ್ವೀಸ್ ರಸ್ತೆಯ ಪಕ್ಕದಲ್ಲೇ ಚರಂಡಿ ವ್ಯವಸ್ಥೆ ಮಾಡಲಾಗಿದ್ದರೂ ಸರ್ವೀಸ್ ರಸ್ತೆಗಿಂತ ಕಾಂಕ್ರಿಟ್ ಚರಂಡಿ ಎತ್ತರವಾಗಿರುವುದರಿಂದ ನೀರು ಹರಿದು ಹೋಗುತ್ತಿಲ್ಲ. ಇದರಿಂದಾಗಿ ಸರ್ವೀಸ್ ರಸ್ತೆಯಲ್ಲೇ ಸುಮಾರು 1 ಅಡಿಗೂ ಹೆಚ್ಚು ನೀರು ನಿಂತಿತ್ತು. ಕೆಲವೊಂದು ತಗ್ಗು ಪ್ರದೇಶಗಳಲ್ಲಿ ನೀರು ಹರಿದ ಪರಿಣಾಮ ತಗ್ಗುಪ್ರದೇಶದಲ್ಲಿನ ಅಂಗಡಿಗಳಿಗೂ ನೀರು ನುಗ್ಗಿದೆ. ರಾಷ್ಟ್ರೀಯ ಹೆದ್ದಾರಿ ಇಲಾಖೆ ಹಾಗೂ ಗುತ್ತಿಗೆದಾರರು ತಕ್ಷಣ ಸ್ಪಂದಿಸಿ ಮಳೆಗಾಲದಲ್ಲಿ ಸಂಭವಿಸಬಹುದಾದ ಅಪಾಯಗಳನ್ನು ತಪ್ಪಿಸಲು ತ್ವರಿತ ಕ್ರಮ ಕೈಗೊಳ್ಳಬೇಕೆಂದು ನೆಲ್ಯಾಡಿಯ ವರ್ತಕರು, ಸಾರ್ವಜನಿಕರು ಒತ್ತಾಯಿಸಿದ್ದಾರೆ.