ದುರ್ಗಾಗಿರಿ ರುದ್ರಭೂಮಿ: ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 2.5 ಲಕ್ಷ ರೂ ಅನುದಾನ

0

ಉಪ್ಪಿನಂಗಡಿ: ಒಂದು ಧಾರ್ಮಿಕ ಕ್ಷೇತ್ರ ಯಾವ ರೀತಿ ಸಮಾಜಕ್ಕೆ ಸಂಪತ್ತಾಗಿ ಕಾರ್ಯನಿರ್ವಹಿಸಬಹುದು ಎನ್ನುವುದಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಗ್ರಾಮಾಭಿವೃದ್ಧಿ ಯೋಜನೆಯ ಪರಿಕಲ್ಪನೆಯೇ ಸಾಕ್ಷಿಯಾಗಿದೆ. ನಾಡಿನಾದ್ಯಂತ 734 ಸ್ಮಶಾನಗಳಿಗೆ ಸಿಲಿಕಾನ್ ಚೇಂಬರ್ ನೀಡುವ ಮೂಲಕ ಕನಿಷ್ಟ ಕಟ್ಟಿಗೆಯಲ್ಲಿ ಸುವ್ಯವಸ್ಥಿತ ಅಂತ್ಯಸಂಸ್ಕಾರ ನಡೆಸಲು ಸಹಕಾರಿಯಾಗಿದ್ದಾರೆ ಎಂದು ಉಪ್ಪಿನಂಗಡಿ ದುರ್ಗಾಗಿರಿಯಲ್ಲಿನ ಹರಿಶ್ಚಂದ್ರ ಘಾಟ್ ಸ್ಮಶಾನ ಸಮಿತಿಯ ಅಧ್ಯಕ್ಷ ಕಂಗ್ವೆ ವಿಶ್ವನಾಥ ಶೆಟ್ಟಿ ತಿಳಿಸಿದರು.


ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ದುರ್ಗಾಗಿರಿ ಸ್ಮಶಾನಕ್ಕೆ 2.5 ಲಕ್ಷ ರೂ ಅನುದಾನದಲ್ಲಿ ನೀಡಲಾದ 1.51 ಲಕ್ಷ ರೂ. ವೆಚ್ಚದ ಸಿಲಿಕಾನ್ ಚೇಂಬರ್ ಮತ್ತು ಮಿಕ್ಕಿ ಉಳಿದ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಧನ ಸಹಾಯ ರೂಪದಲ್ಲಿ ಸ್ವೀಕರಿಸಿ ಅವರು ಮಾತನಾಡಿದರು.


ಸ್ಮಶಾನ ಪ್ರಾರಂಭವಾದಾಗಲೂ ಶ್ರೀ ಕ್ಷೇತ್ರದಿಂದ ಒಂದು ಸಿಲಿಕಾನ್ ಚೇಂಬರ್ ನೀಡಲಾಗಿತ್ತು. ಇದೀಗ ಹೆಚ್ಚುವರಿಯಾಗಿ ಎರಡನೇ ಸಿಲಿಕಾನ್ ಚೇಂಬರ್ ಒದಗಿಸುವ ಮೂಲಕ ಈ ಭಾಗದ ಜನತೆಯ ಆಶೋತ್ತರಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯವರು ಸ್ಪಂದನೆ ನೀಡಿದ್ದಾರೆ. ಈ ಮೂಲಕ ಸರಕಾರದಿಂದಲೂ ಮಾಡಲಾಗದ ಕಾರ್ಯವನ್ನು ಧಾರ್ಮಿಕ ಕ್ಷೇತ್ರವೊಂದು ವ್ಯವಸ್ಥಿತವಾಗಿ ಮಾಡುತ್ತಾ ಸಮಾಜೋದ್ಧಾರ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವೆಂದರು.


ಶ್ರೀ ಕ್ಷೇತ್ರದ ಮಂಜೂರಾತಿ ಪತ್ರವನ್ನು ಹಸ್ತಾಂತರಿಸಿದ ಪುತ್ತೂರು ತಾಲೂಕು ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶಶಿಧರ್ ಎಂ. ಮಾತನಾಡಿ, ಕ್ಷೇತ್ರದ ಹಲವಾರು ಜನೋಪಯೋಗಿ ಕಾರ್ಯಗಳು ಸದ್ದಿಲ್ಲದೆ ನಡೆಯುತ್ತಿದ್ದು, ನಾಡಿನೆಲ್ಲೆಡೆ ರುದ್ರಭೂಮಿಯ ಅಭಿವೃದ್ಧಿಗೆ ಶ್ರೀ ಕ್ಷೇತ್ರವು ಸಹಕಾರ ನೀಡುತ್ತಿದೆ ಎಂದರು.


ಹಸ್ತಾಂತರ ಕಾರ್ಯಕ್ರಮದಲ್ಲಿ ಸ್ಮಶಾನ ಸಮಿತಿಯ ಪ್ರಮುಖರಾದ ಲೋಕೇಶ್ ಬೆತ್ತೋಡಿ, ಶ್ರೀರಾಮ ಭಟ್ ಪಾತಾಳ, ವೆಂಕಟರಮಣ ಭಟ್ ಮಣ್ಣಿಕಾನ, ಜನಾರ್ದನ ಮರಿಕೆ, ರಾಜೀವ ಹೆಗ್ಡೆ ನಿನ್ನಿಕ್ಕಲು, ಕೇಶವ ರಂಗಾಜೆ, ಮಾಲತಿ ಬೆತ್ತೋಡಿ, ರಮೇಶ್ ಭಂಡಾರಿ, ಹೊನ್ನಪ್ಪ ಗೌಡ ವರೆಕ್ಕಾ, ವಿಶ್ವನಾಥ್ ನಾಯ್ಕ್, ಅನುರಾಧಾ ವರೆಕ್ಕಾ, ಪುಷ್ಪ ವರೆಕ್ಕಾ, ರತ್ನಾ ಬೆತ್ತೋಡಿ, ಗೋಪಾಲಕೃಷ್ಣ ಪಲ್ಲದಕೋಡಿ, ಮನೋಜ್ ವರೆಕ್ಕಾ, ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಉಷಾ ಹರೀಶ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here