ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಯ ಸಾಮೆತ್ತಡ್ಕ ಎಂಬಲ್ಲಿ ಮಂಗಳೂರು-ಹಾಸನ ರೈಲು ಹಾದು ಹೋಗುವಲ್ಲಿನ ರೈಲ್ವೇ ಲೆವೆಲ್ ಕ್ರಾಸಿಂಗ್ ಬದಲು ಓವರ್ ಬ್ರಿಡ್ಜ್(ಮೇಲ್ಸೆತುವೆ) ನಿರ್ಮಿಸಿ ನಾಗರಿಕರ ಸುಲಭ ಸಂಚಾರಕ್ಕೆ ಅನುವು ಮಾಡಿ ಕೊಡುವಂತೆ ಸಾಮೆತ್ತಡ್ಕ ಪರಿಸರದ ನಾಗರಿಕರಿಂದ ಸಂಸದ ಕ್ಯಾ|ಬ್ರಿಜೇಶ್ ಚೌಟರವರಿಗೆ ಮನವಿ ಸಲ್ಲಿಸಿದ್ದಾರೆ. ಮೈಸೂರು ವಿಭಾಗದ ವಿಭಾಗೀಯ ರೈಲ್ವೇ ಮ್ಯಾನೇಜರ್ ರವರಿಗೂ ಮನವಿಯನ್ನು ಸಲ್ಲಿಸಿದ್ದಾರೆ.
ವಿವರ:
ದ.ಕ. ಜಿಲ್ಲೆಯ ಪುತ್ತೂರು ನಗರ ಸಭಾ ವ್ಯಾಪ್ತಿಯ ಸಾಮೆತ್ತಡ್ಕ ನಿವಾಸಿಗಳಾಗಿದ್ದು ನಾವು ವಾಸಿಸುತ್ತಿರುವ ಪ್ರದೇಶದಲ್ಲಿ ರೈಲ್ವೇ ರಸ್ತೆಯು ಹಾದು ಹೋಗುತ್ತದೆ. ಇಲ್ಲಿ ರೈಲ್ವೇ ರಸ್ತೆಯನ್ನು ನಾಗರೀಕರು ದಾಟಲು ಅನುಕೂಲವಾಗುವಂತೆ ಗೇಟ್ ನಂಬ್ರ 104 ರಲ್ಲಿ ರೈಲ್ವೇ ಲೆವೆಲ್ ಕ್ರಾಸಿಂಗ್‌ನ್ನು ನಿರ್ಮಿಸಿ ಮಾನವಸಹಿತ ಗೇಟ್ ಅಳವಡಿಸಲಾಗಿರುತ್ತದೆ. ಈ ರಸ್ತೆಯು ಮುಂದೆ ಚಲಿಸಿ ಉಪ್ಪಿನಂಗಡಿ ಬೆಂಗಳೂರು ರಸ್ತೆಗೆ ಹಾಗೂ ಕುಕ್ಕೆ ಸುಬ್ರಹ್ಮಣ್ಯ ರಸ್ತೆಗೆ ಕೂಡು ರಸ್ತೆಯಾಗಿರುತ್ತದೆ. ಸುಮಾರು 80 ಸಾವಿರ ಜನ ಸಂಖ್ಯೆಯಿರುವ ನಗರಸಭಾ ವ್ಯಾಪ್ತಿಯ ಈ ರೈಲ್ವೇ ಮಾರ್ಗದಲ್ಲಿ ದಿನವೊಂದಕ್ಕೆ 12 ರೈಲುಗಳು, 6 ಗೂಡ್ಸ್ ವ್ಯಾಗನ್‌ಗಳು ಚಲಿಸುತ್ತಿರುತ್ತವೆ. ಇದರಿಂದಾಗಿ ದಿನದಲ್ಲಿ ಸುಮಾರು 5 ಗಂಟೆಗಳ ಸಮಯ ರೈಲ್ವೇ ಗೇಟ್ ಮುಚ್ಚಲ್ಪಡುತ್ತದೆ.
ಸದ್ರಿ ಕ್ರಾಸಿಂಗ್‌ನಲ್ಲಿ ದಿನವೊಂದಕ್ಕೆ 600 ದ್ವಿಚಕ್ರ, 300 ನಾಲ್ಕು ಚಕ್ರ ಹಾಗೂ 7 ಶಾಲಾ ಬಸ್ಸುಗಳು, ಆಟೋ ರಿಕ್ಷಾಗಳು ಮತ್ತು ಲಾರಿಗಳು ಹೀಗೆ ಒಟ್ಟು ಅಂದಾಜು 28000 ವಾಹನಗಳ ಪ್ರಯಾಣದಿಂದ ಈ ರಸ್ತೆಯು ವಾಹನ ನಿಬಿಡ ರಸ್ತೆಯಾಗಿ ಮಾರ್ಪಟ್ಟಿರುತ್ತದೆ. ಜತೆಗೆ ದೈನಂದಿನ ಕೆಲಸ ಕಾರ್ಯಗಳಿಗೆ, ಶಾಲಾ ವಿದ್ಯಾರ್ಥಿಗಳಿಗೆ, ರೋಗಿಗಳಿಗೆ ಆಸ್ಪತ್ರೆ ತಲುಪಲು ಅನುಕೂಲವಾಗುವಂತೆ ಇಲ್ಲಿ ಪ್ರಸಕ್ತ ಇರುವ ರೈಲ್ವೇ ಲೆವೆಲ್ ಕ್ರಾಸಿಂಗ್‌ನ್ನು ಮುಚ್ಚಿ ಪಕ್ಕದಲ್ಲಿ ರೈಲ್ವೇ ರಸ್ತೆಗೆ ಮೇಲ್ಸೆತುವೆ (ರೋಡ್ ಓವರ್ ಬ್ರಿಡ್ಜ್) ಅತೀ ಶೀಘ್ರವಾಗಿ ನಿರ್ಮಿಸಿ ಕೊಡುವಂತೆ ಕ್ರಮ ಕೈಗೊಳ್ಳಲು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಮನವಿ ಸ್ವೀಕರಿಸಿದ ಸಂಸದ ಕ್ಯಾ|ಬ್ರಿಜೇಶ್ ಚೌಟರವರು ಈ ಕುರಿತು ರೈಲ್ವೇ ಇಲಾಖೆಯಲ್ಲಿ ಮಾತನಾಡಿ ಕ್ರಮ ಕೈಗೊಳ್ಳುವ ಭರವಸೆ ವ್ಯಕ್ತಪಡಿಸಿದರು. ಮನವಿ ನೀಡುವ ಸಂದರ್ಭದಲ್ಲಿ ಸಾಮೆತ್ತಡ್ಕ-ಕರಿಯಾಲ ನಿವಾಸಿಗಳಾದ ಸತ್ಯಶಂಕರ ಭಟ್, ಭೀಮಯ್ಯ ಭಟ್, ಮೌರಿಸ್ ಮಸ್ಕರೇನ್ಹಸ್, ದಿನಕರ ಗೌಡ ಉಪಸ್ಥಿತರಿದ್ದರು.