ಊರಿನ ಹಬ್ಬ ಜಾತಿ ಮತವಿಲ್ಲದೆ ನಡೆಯಲು ಎಲ್ಲರ ಸಹಕಾರ ಅಗತ್ಯ – ಪುತ್ತೂರು ಜಾತ್ರೆ,  ಗುಡ್‌ಪ್ರೈಡೆಗೆ ನಡೆದ ಶಾಂತಿ ಸಭೆಯಲ್ಲಿ ಇನ್‌ಸ್ಪೆಕ್ಟರ್ ಜಾನ್ಸಾನ್ ಡಿಸೋಜ

0



ಪುತ್ತೂರು: ಪುತ್ತೂರು ಜಾತ್ರೆ ಊರಿನ ಹಬ್ಬದ ವಾತಾವರಣ. ಇಲ್ಲಿ ಜಾತಿ ಮತವಿಲ್ಲದೆ ಸಂಭ್ರಮ ನಡೆಯಬೇಕು. ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಯಶಸ್ಸಿಯಾಗಿ ಜಾತ್ರೆ ನಡೆಯುವಂತೆ ನೋಡುವ ಜವಾಬ್ದಾರಿಯಿದೆ ಎಂದು ಪುತ್ತೂರು ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಜಾನ್ಸನ್ ಡಿಸೋಜ ಅವರು ತಿಳಿಸಿದ್ದಾರೆ.


ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆ ಮತ್ತು ಗುಡ್‌ಪ್ರೈಡೆಗೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಹಾರ ಸುರಕ್ಷತೆಯ ದೃಷ್ಟಿಯಿಂದ ಭೋಜನ ಶಾಲೆಗಳಲ್ಲಿ ಅಗತ್ಯ ಮುನ್ನೆಚರಿಕೆಯನ್ನು ತೆಗೆಕೊಳ್ಳಬೇಕು ಮತ್ತು ಕುಡಿಯಲು ಮಿನರಲ್ ವಾಟರ್ ನೀಡುವ ಕಾರ್ಯವನ್ನು ಮಾಡಬೇಕು. ದೇವರ ಸೇವೆಗೆ ಎಲ್ಲರಿಗೂ ಅವಕಾಶಗಳಿದ್ದು, ಸಹೋದರ ಧರ್ಮದವರು ಪಾನಕ, ಹಣ್ಣು ಹಂಪಲು ವಿತರಣೆ ಸಂದರ್ಭ ದೇವಸ್ಥಾನ ಸಮಿತಿಗೆ ಮಾಹಿತಿಯನ್ನು ಹಂಚಿಕೊಳ್ಳಬೇಕು. ಗಾಳಿ ಮಳೆ ಇರುವುದರಿಂದ ವಿದ್ಯುತ್ ಹಾಗೂ ಅಂಗಡಿಗಳ ಛಾವಣಿ ಬಗ್ಗೆ ಮುನ್ನೆಚರಿಕೆ ಅಗತ್ಯವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಬರೆಯುವ ಮೊದಲು ಸಂಬಂಧಪಟ್ಟವರ ಗಮನಕ್ಕೆ ತರುವ ಕಾರ್ಯವಾಗಬೇಕು. ತಲವಾರು ಹಿಡಿದು ಪೊಟೋ ತೆಗೆಯುವ ಬದಲು ಗುದ್ದಲಿ ಹಿಡಿಯುವುದು ಉತ್ತಮ. ಸಣ್ಣ ತಪ್ಪುಗಳಾದರೂ ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಎಂದರು.


ಪಾರ್ಕಿಂಗ್ ವ್ಯವಸ್ಥೆ, ಸಿಸಿ ಕ್ಯಾಮರ ಅಳವಡಿಸಲಾಗಿದೆ:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ ಕೆ. ವಿ. ಮಾತನಾಡಿ ರಥೋತ್ಸವದ ಸಂದರ್ಭ 40ಸಿಸಿ ಗಳನ್ನು ಅಳವಡಿಸಿದ್ದು, ಅದರ ಪರಿಶೀಲನೆಗೆ ಪೊಲೀಸರಿಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್‌ಗೆ ನಿಗದಿತ ಜಾಗವನ್ನು ಈಗಾಗಲೇ ನಿಗದಿ ಪಡಿಸಲಾಗಿದೆ. ವಿವಿಧ ಕಡೆಯಲ್ಲಿ ಗೃಹರಕ್ಷದಳದ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ನಗರ ಸಭೆಯಿಂದ ತ್ಯಾಜ್ಯ ವಿಲೇವಾರಿಗೆ ಅಗತ್ಯ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ ಎಂದು ತಿಳಿಸಿದರು.


ಎಸ್.ಐ ಆಂಜನೇಯ ರೆಡ್ಡಿ ಅವರು ಮಾತನಾಡಿ ಹಬ್ಬವನ್ನು ಶ್ರೇಷ್ಠವಾಗಿ ನಡೆಸಲು ಎಲ್ಲರ ಸಹಕಾರ ಅಗತ್ಯವಿದೆ. ಸಮಸ್ಯೆಗಳು ಕಂಡು ಬಂದ ತಕ್ಷಣ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರುವ ಕಾರ್ಯ ನಡೆಯಬೇಕು. ಯಾವುದೇ ಗೊಂದಲಗಳಿಗೆ ಅವಕಾಶವನ್ನು ನೀಡದೆ ಕಾರ್ಯಕ್ರಮಗಳು ನಡೆಯುವಂತೆ ಸಾರ್ವಜನಿಕರು ಇಲಾಖೆಗೆ ಜತೆಗೆ ಕೈಜೋಡಿಸಬೇಕು ಎಂದರು. ಪುತ್ತೂರು ಅಗ್ನಿಶಾಮಕದಳದ ಶಂಕರ್, ಆರೋಗ್ಯ ಇಲಾಖೆಯ ಡಾ. ಅಮಿತ್, ತಾ.ಪಂ ವ್ಯವಸ್ಥಾಪಕ ಜಯಪ್ರಕಾಶ್, ವರ್ತಕರ ಸಂಘದ ಕಾರ್ಯದರ್ಶಿ ನೌಶದ್ ಹಾಜಿ, ಕೇಂದ್ರ ಜುಮ್ಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಆಜಾದ್, ಕ್ರಿಶ್ಚಯನ್ ಯೂನಿಯನ್ ಅಧ್ಯಕ್ಷ ಮೌರೀಸ್ ಮಸ್ಕರೇನಿಯಸ್, ಬಿಜೆಪಿ ಮುಖಂಡ ಮುರಳೀಕೃಷ್ಣ ಹಸಂತಡ್ಕ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಝೊರೋಮ್ ಡಿಕೋಸ್ಟ, ಜೀನ್ ಕುಟೀನ್ಹ, ರಶೀದ್ ಮುರ ಮತ್ತಿತರರು ಉಪಸ್ಥಿತರಿದ್ದರು.


ಜಾತ್ರೋತ್ಸವದ ಸಂದರ್ಭ ಟ್ರಾಫಿಕ್ ದಟ್ಟಣೆ ಹೆಚ್ಚಿರುವ ಕಾರಣ ಪರ್ಯಾಯ ವ್ಯವಸ್ಥೆಯನ್ನು ಮಾಡಬೇಕು. ಸ್ವಚ್ಛತೆಗೆ ಹೆಚ್ಚಿನ ಆಧ್ಯತೆಯನ್ನು ನೀಡಬೇಕು. ಸೌಹಾರ್ಧತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ. ಶಾಂತಿ ಸೌಹಾರ್ದತೆಯಿಂದ ಜಾತ್ರೆ ಯಶಸ್ವಿಯಾಗಿ ನಡೆಯಲಿ ಎಂದು ಸಭೆಯಲ್ಲಿ ಭಾಗವಹಿಸಿದವರು ಹೇಳಿದರು.

LEAVE A REPLY

Please enter your comment!
Please enter your name here