ಪುತ್ತೂರು:ಒಳಮೊಗ್ರು ಗ್ರಾಮದ ಮೈದಾನಿಮೂಲೆ ಮಸೀದಿಯಿಂದ ಮನೆಗೆ ಹೋಗುತ್ತಿದ್ದ ವೇಳೆ ಕುಟ್ಟಿನೋಪಿನಡ್ಕದಲ್ಲಿ ತಂಡವೊಂದು ಇಬ್ಬರಿಗೆ ಹಲ್ಲೆ ನಡೆಸಿದ ಆರೋಪದ ಘಟನೆಗೆ ಸಂಬಂಧಿಸಿ ನ್ಯಾಯಾಲಯದ ಸೂಚನೆ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಒಳಮೊಗ್ರು ಗ್ರಾಮದ ಇಡಿಂಜಿಲ ನಿವಾಸಿ ರಶೀದ್(35ವ.)ಎಂಬವರು ನೀಡಿದ ದೂರಿನ ಮೇರೆಗೆ ಇಬ್ರಾಹಿಂ ಬಾಳೆಯ, ಜಮಾಲುದ್ದೀನ್,ಅಬ್ದುಲ್ ರಹಿಮಾನ್, ಅಸ್ಕರ್, ಅನ್ಸಾರ್, ಮುನೀರ್ ಉಜುರೋಡಿ ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. “ಫೆ.9ರಂದು ರಾತ್ರಿ 7.30 ಗಂಟೆಗೆ ಮೈದಾನಿಮೂಲೆ ಮಸೀದಿಯಲ್ಲಿರುವಾಗ ಇಬ್ರಾಹಿಂರವರು ನನ್ನನ್ನು ಕರೆದಾಗ ನಾನು ಮತ್ತು ಉಜಿರೋಡಿ ನಿವಾಸಿ ಇರ್ಷಾದ್ರವರು ಇಬ್ರಾಹಿಂರವರಲ್ಲಿಗೆ ಹೋದ ಸಮಯ, ನೀವು ಯಾಕೆ ಸುಮ್ಮನೆ ನಮ್ಮ ಮೇಲೆ ದೂರು ನೀಡಲು ಠಾಣೆಗೆ ಹೋಗಿರುತ್ತೀರಿ ಎಂದು ನಾನು ಇಬ್ರಾಹಿಂರವರಲ್ಲಿ ಕೇಳಿದೆ. ಆ ವೇಳೆ ಇಬ್ರಾಹಿಂ ಅವರು, ನೀನು ನನಗೆ ಏನು ಮಾಡುತ್ತೀಯಾ, ನಾನು ರೋಯಲ್ ಮತ್ತು ಗುರುಗಳನ್ನು ಕರೆದುಕೊಂಡು ಬರುತ್ತೇನೆ ಎಂದು ಹೇಳಿ ಅಲ್ಲಿಂದ ಮನೆಗೆ ಹೋಗಿದ್ದರು. ನಂತರ ನಾನು ಮತ್ತು ಇರ್ಷಾದ್ ಮಸೀದಿಯಿಂದ ಮನೆಗೆ ಹೋಗಲು ಬರುತ್ತಿದ್ದ ಸಮಯ ರಾತ್ರಿ 8.15ಕ್ಕೆ ಒಳಮೊಗ್ರು ಗ್ರಾಮದ ಕುಟ್ಟಿನೋಪಿನಡ್ಕದಲ್ಲಿ ಆರೋಪಿಗಳು ಮತ್ತು ನನಗೆ ಮಾತಿಗೆ ಮಾತು ಬೆಳೆದಿತ್ತು.ಈ ವೇಳೆ ಆರೋಪಿಗಳು ನನಗೆ ಮತ್ತು ಇರ್ಷಾದ್ರವರಿಗೆ ಕೈಯಿಂದ ಹೊಡೆದು,ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಹೇಳಿ ಅಲ್ಲಿಂದ ಹೋಗಿರುತ್ತಾರೆ” ಎಂದು ರಶೀದ್ ಅವರು ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.
ಇದೊಂದು ಅಸಂಜ್ಞೆಯ ಪ್ರಕರಣವೆಂದು ಪೊಲೀಸರು ಆರಂಭದಲ್ಲಿ ದೂರು ದಾಖಲಿಸಿಕೊಳ್ಳದೆ, ನ್ಯಾಯಾಲಯದ ಅನುಮತಿ ಪಡೆಯುವಂತೆ ದೂರುದಾರರಿಗೆ ಹಿಂಬರಹ ನೀಡಿದ್ದರು.ಇದೀಗ ನ್ಯಾಯಾಲಯದ ಸೂಚನೆ ಮೇರೆಗೆ ಪುತ್ತೂರು ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳ ವಿರುದ್ಧ ಬಿಎನ್ಎಸ್ ಕಾಯ್ದೆ 2023ರ ಕಲಂ 115(2),351(3)ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.