ಅಕ್ಷಯ ಕಾಲೇಜಿನಲ್ಲಿ ಮೇಳೈಸಿದ ‘ಅಕ್ಷಯ ವೈಭವ’ ವಾರ್ಷಿಕೋತ್ಸವ

0

ವಿದ್ಯಾರ್ಥಿಗಳಿಗೆ ಬದುಕಿನ ಶಿಕ್ಷಣ ನೀಡುತ್ತಿದೆ ಅಕ್ಷಯ ಕಾಲೇಜು-ಕ್ಯಾ|ಬ್ರಿಜೇಶ್ ಚೌಟ

ಪುತ್ತೂರು: ಪುತ್ತೂರು:2014ರಲ್ಲಿ ಪ್ರಧಾನಮಂತ್ರಿ ಮೋದಿಯವರು ಈ ದೇಶದ ಆಡಳಿತ ತೆಗೆದುಕೊಂಡ ಮೇಲೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಮೇಲೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಶಿಕ್ಷಣ ಸಮಗ್ರವಾಗಿರಬೇಕು ಮತ್ತು ಎಲ್ಲರಿಗೂ ತಲುಪಬೇಕು, ವ್ಯಕ್ತಿಯ ವ್ಯಕ್ತಿತ್ವ ವಿಕಸನವಾಗಬೇಕು ಎನ್ನುವ ಕಲ್ಪನೆ ಇಟ್ಟುಕೊಂಡು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದ್ದಾರೆ. ಈ ನಿಟ್ಟಿನಲ್ಲಿ ಅಕ್ಷಯ ಕಾಲೇಜು ವಿದ್ಯಾರ್ಥಿಯ ಮುಂದಿನ ಬದುಕಿನ ಉನ್ನತಿಗೆ ಪೂರಕವಾದ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದು ಸಂಸದ ಕ್ಯಾ|ಬ್ರಿಜೇಶ್ ಚೌಟರವರು ಹೇಳಿದರು.


ಸಂಪ್ಯದಲ್ಲಿ ಅಕ್ಷಯ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್‌ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಎರಡು ದಿನಗಳ ‘ಅಕ್ಷಯ ವೈಭವ’ ಕಾರ್ಯಕ್ರಮದಲ್ಲಿ ಎ.10 ರಂದು ನಡೆದ ಕಾಲೇಜು ವಾರ್ಷಿಕೋತ್ಸವದಲ್ಲಿ ಅವರು ಕಾರ್ಯಕ್ರಮದ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಶಿಕ್ಷಣ ಸಂಸ್ಥೆಯಾಗಿರುವ ಈ ಅಕ್ಷಯ ಕಾಲೇಜಿನಲ್ಲಿ ವಿಭಿನ್ನ ರೀತಿಯ ಸಾಮಾಜಿಕ ಪರಿಸ್ಥಿತಿಯಲ್ಲಿ ಶಿಕ್ಷಣವನ್ನು ಕಲಿಸಿಕೊಡುವಲ್ಲಿ ಪ್ರಯತ್ನ ಮಾಡುತ್ತಿದೆ. ಭಾರತ ನಿರ್ಣಾಯಕ ಕಾಲಘಟ್ಟದಲ್ಲಿದ್ದು ಇದರಲ್ಲಿ ಅವಕಾಶಗಳ ಕೊರತೆ ಇಲ್ಲ ಎಂಬುದನ್ನು ವಿದ್ಯಾರ್ಥಿಗಳು ಮನಗಾಣಬೇಕು. ಈ ಅವಕಾಶಗಳಿಂದ ಹೇಗೆ ಉದ್ಯಮವನ್ನು ಸೃಷ್ಟಿಸುವುದು, ಆ ಉದ್ಯಮದ ಮುಖಾಂತರ ಉದ್ಯೋಗಗಳನ್ನು ಹೇಗೆ ಸೃಷ್ಟಿಸುವುದು ಎಂಬುದನ್ನು ನಾವಿಂದು ಅರ್ಥೈಸಬೇಕಾಗಿದೆ. ಈ ನಿಟ್ಟಿನಲ್ಲಿ ಅಕ್ಷಯ ಕಾಲೇಜು ವಿದ್ಯಾರ್ಥಿಗಳಿಗೆ ಉದ್ಯೋಗದ ಅವಕಾಶವನ್ನು ತೆರೆದಿರುವುದು ಶ್ಲಾಘನೀಯ ಎಂದರು.


ವಿದ್ಯಾರ್ಥಿಗಳ ಪಾಲಿಗೆ ಸಂಸ್ಥೆ ಅಕ್ಷಯ ಪಾತ್ರೆಯಂತೆ ಬೆಳೆದಿದೆ-ಡಾ.ಅಬ್ದುಲ್ ಬಶೀರ್:
ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ, ಕಠಿಣ ಪರಿಶ್ರಮ, ಕೈಚಳಕದಿಂದ ಹೊರ ಬಂದ ಪ್ರಥಮ ಅಕ್ಷಯ ಮ್ಯಾಗಜಿನ್ ಅನ್ನು ಮಂಗಳೂರು ಜನಪ್ರಿಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಅಬ್ದುಲ್ ಬಶೀರ್ ವಿ.ಕೆರವರು ಲೋಕಾರ್ಪಣೆಗೊಳಿಸಿ ಮಾತನಾಡಿ, 20 ವಿದ್ಯಾರ್ಥಿಗಳಿದ್ದ ಬರೇ ಐದು ವರ್ಷದಲ್ಲಿ ಸಂಸ್ಥೆಯಲ್ಲಿ ಇದೀಗ 500 ವಿದ್ಯಾರ್ಥಿ ಸಮೂಹವಿರುವುದು ಮೆಚ್ಚಬೇಕಾದ್ದು. ಸಂಸ್ಥೆಯ ಹೆಸರೇ ಅಕ್ಷಯ. ಅದರಂತೆ ವಿದ್ಯಾರ್ಥಿಗಳ ಪಾಲಿಗೆ ಈ ಸಂಸ್ಥೆಯು ಅಕ್ಷಯ ಪಾತ್ರೆಯಂತೆ ಬೆಳೆದಿದೆ ಅಂದರೆ ತಪ್ಪಾಗಲ್ಲ. ಇಲ್ಲಿ ಓದಿರುವ ವಿದ್ಯಾರ್ಥಿಗಳು ಇಂದು ಒಳ್ಳೆಯ ಉದ್ಯೋಗದಲ್ಲಿದ್ದು ಹೆಸರು ಗಳಿಸಿದ್ದಾರೆ. ಈ ಸಂಸ್ಥೆಯು ಒಳ್ಳೆಯ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರ, ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಸ್ಥೆಯು ವಿದ್ಯಾರ್ಥಿಗಳ ಪಾಲಿಗೆ ಅಕ್ಷಯ ಪಾತ್ರೆಯಾಗಿ ಮುಂದುವರೆಯಲಿ ಎಂದರು.


ಪ್ರಸ್ತುತ ವರ್ಷ ಪದವಿ ಪೂರ್ವ ಶಿಕ್ಷಣವನ್ನು ಆರಂಭಿಸಲಿದ್ದೇವೆ-ಜಯಂತ್ ನಡುಬೈಲು:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಚೇರ್‌ಮ್ಯಾನ್ ಜಯಂತ್ ನಡುಬೈಲು ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆಗೆ ಸೂಕ್ತವಾಗಿ ಈ ಅಕ್ಷಯ ಕಾಲೇಜು ವೇದಿಕೆಯನ್ನು ನಿರ್ಮಿಸಿ ಕೊಡುತ್ತಾ ಬಂದಿದೆ. ಸಂಸ್ಥೆ ಮಾಡಿರುವುದು ವ್ಯವಹಾರದ ಉದ್ದೇಶವಲ್ಲ. ನಾಲ್ಕು ಮಕ್ಕಳಿಗೆ ವಿದ್ಯೆ ನೀಡಿ ಅವರ ಕೈಗಳಿಗೆ ಉದ್ಯೋಗ ಕೊಟ್ಟು ಅವರ ಜೀವನವನ್ನು ಸಲಹುವಂತಹ ಕೈಂಕರ್ಯ ಹೊಂದಿದೆ ಸಂಸ್ಥೆ. ವಿದ್ಯಾರ್ಥಿಗಳ ಜೀವನ ಒಳ್ಳೆಯ ದಾರಿಯಲ್ಲಿ ಹೋದರೆ ಅದುವೇ ಅಕ್ಷಯ ಕಾಲೇಜಿನ ಉದ್ಧೇಶ ಈಡೇರಿದಂತಾಗುತ್ತದೆ. ಪ್ರತಿ ವರ್ಷ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಮ್ಮ ಕಾಲೇಜು ಪ್ರಥಮ, ದ್ವಿತೀಯ ರ‍್ಯಾಂಕ್ ಗಳಿಸುವ ಮೂಲಕ ಸಂಸ್ಥೆಯ ಹೆಗ್ಗಳಿಕೆಯಾಗಿದೆ. ಪ್ರಸ್ತುತ ವರ್ಷ ಪದವಿ ಪೂರ್ವ ಶಿಕ್ಷಣವನ್ನು ಆರಂಭಿಸಲಿದ್ದೇವೆ, ಅದಕ್ಕೆ ಎಲ್ಲರ ಸಹಕಾರವಿರಲಿ ಎಂದರು.


sಭವಿಷ್ಯವನ್ನು ಕಟ್ಟುವಲ್ಲಿ ಯುವಜನತೆಯ ಪ್ರಾಮುಖ್ಯತೆ ಬಹಳಷ್ಟಿದೆ-ಪಟ್ಲ ಸತೀಶ್ ಶೆಟ್ಟಿ:
ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಇದರ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳ ಕಾರ್ಯಕ್ರಮ ಅಂದರೆ ಬಹಳ ಅಚ್ಚುಮೆಚ್ಚು. ಓರ್ವ ಕಲಾವಿದನಾಗಿ ನಾವು ದುಡಿಯುತ್ತಿರುವ ರಂಗದಲ್ಲಿ ಏನು ಮಾಡಬಹುದೋ ಅದನ್ನು ಯೋಚಿಸಿ ಕರ್ತವ್ಯಗಳನ್ನು ನಿಭಾಯಿಸುತ್ತಿದ್ದೇವೆ. ಯಾವುದೇ ರಂಗವಿರಲಿ, ಸಮಾಜದಿಂದ ಏನು ಪಡೆದುಕೊಂಡಿದ್ದೇವೆ ಎಂಬುದು ಮುಖ್ಯವಲ್ಲ, ನಾವು ಸಮಾಜಕ್ಕೆ ಏನನ್ನು ಕೊಟ್ಟಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಭಾರತದ ಭವಿಷ್ಯವನ್ನು ಕಟ್ಟುವಲ್ಲಿ ಇಂದಿನ ಯುವಜನತೆಯ ಪ್ರಾಮುಖ್ಯತೆ ಬಹಳಷ್ಟಿದೆ ಏಕೆಂದರೆ ಯುವಜನತೆ ಸರಿಯಾದ ಮಾರ್ಗದರ್ಶನದಲ್ಲಿ ನಡೆದರೆ ಆ ದೇಶ ಸುಭೀಕ್ಷೆಯತ್ತ ಸಾಗಬಲ್ಲುದು ಎಂದರು.


ಜಯಂತ್ ನಡುಬೈಲುರವರ ನೇತೃತ್ವದಲ್ಲಿ ವೈದ್ಯಕೀಯ ಕಾಲೇಜು ಆರಂಭವಾಗಲಿ-ಚಿತ್ತರಂಜನ್ ಬೋಳಾರ್:
ಮಂಗಳೂರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಮಾತನಾಡಿ, ಅಕ್ಷಯ ತೃತೀಯದಂದು ಏನಾದರೂ ಖರೀದಿ ಮಾಡಿದರೆ ಅದು ಅಕ್ಷಯದಂತಿರುತ್ತದೆ ಎಂದು. ಅದರಲ್ಲೂ ಅಕ್ಷಯ ಕಾಲೇಜಿನಲ್ಲಿ ಕಲಿತಂತಹ ವಿದ್ಯಾರ್ಥಿಗಳು ಕೂಡ ತಮ್ಮ ಬಾಳು ಅಕ್ಷಯದಂತೆ ಕೂಡಿರುತ್ತದೆ. ವಿದ್ಯಾರ್ಥಿಗಳು ಕಲಿತಂತಹ ಶಿಕ್ಷಣವೇ ಪೋಷಕರಿಗೆ ನಿಜವಾದ ಆಸ್ತಿಯಾಗಿರುತ್ತದೆ. ಈ ಗ್ರಾಮೀಣ ಭಾಗದಲ್ಲಿನ ಕೋರ್ಸ್‌ಗಳು ವಿದ್ಯಾರ್ಥಿಗಳ ಪಾಲಿಗೆ ಬದುಕನ್ನು ಕಲ್ಪಿಸಿಕೊಡುವಂತಹುದಾಗಿದೆ. ಮುಂದಿನ ದಿನಗಳಲ್ಲಿ ಉದ್ಯಮಿ ಜಯಂತ್ ನಡುಬೈಲುರವರ ನೇತೃತ್ವದಲ್ಲಿ ವೈದ್ಯಕೀಯ ಕಾಲೇಜು ಆರಂಭವಾಗಲಿ ಎಂದು ಶುಭ ಹಾರೈಸಿದರು.


ಬಹುಮಾನ ವಿತರಣೆ:
ಕಾಲೇಜು ಹಮ್ಮಿಕೊಂಡ ಡಿ-ವಾಕ್ ಫ್ಯಾಶನ್ ಶೋ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿಯನ್ನು ನೀಡಲಾಯಿತು. ಕಾಲೇಜು ಹಮ್ಮಿಕೊಂಡ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಹಾಗೂ ಉಪನ್ಯಾಸಕ ಮತ್ತು ಆಡಳಿತ ಸಿಬ್ಬಂದಿ ವರ್ಗದವರಿಗೆ ಬಹುಮಾನ ನೀಡಲಾಯಿತು.


ವಿದ್ಯಾರ್ಥಿಗಳು ಪ್ರಾರ್ಥಿಸಿದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀಧರ್ ಶೆಟ್ಟಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಶಾಂತ್ ಪೂವಾಜೆ, ಕಾಲೇಜಿನ ವ್ಯವಸ್ಥಾಪಕಿ ನಿರ್ದೇಶಕಿ ಕಲಾವತಿ ಜಯಂತ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೀವನ್, ಕಾರ್ಯದರ್ಶಿ ಪೂಜಿತಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜು ಪ್ರಾಂಶುಪಾಲ ಸಂಪತ್ ಕೆ.ಪಕ್ಕಳ ಕಾಲೇಜು ವಾರ್ಷಿಕ ವರದಿ ಮಂಡಿಸಿದರು. ಕಾಲೇಜು ಆಡಳಿತಾಧಿಕಾರಿ ಅರ್ಪಿತ್ ಟಿ.ಎ ಸ್ವಾಗತಿಸಿ, ಉಪನ್ಯಾಸಕ ರಾಕೇಶ್ ಕೆ ವಂದಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಹರೀಶ್ಚಂದ್ರ, ಆಡಳಿತ ಸಿಬ್ಬಂದಿ ನಿವೇದಿತಾ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥೆ ದೀಕ್ಷಾ ರೈ, ವಾಣಿಜ್ಯ ವಿಭಾಗದ ಉಪನ್ಯಾಸಕ ಕಿಶನ್ ಎನ್.ರಾವ್.ರವರು ಅತಿಥಿಗಳ ಪರಿಚಯ ಮಾಡಿದರು. ಆಂಗ್ಲ ವಿಭಾಗದ ಮುಖ್ಯಸ್ಥೆ ರಶ್ಮಿ ಕೆ.ರವರು ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಸಾಧಕರ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಅವಾರ್ಡ್ ಅನ್ನು ಓದಿದರು. ಫ್ಯಾಶನ್ ಶೋ ವಿಜೇತರ ಪಟ್ಟಿಯನ್ನು ವಾಣಿಜ್ಯ ವಿಭಾಗದ ಉಪನ್ಯಾಸಕಿ ಅನುಷಾ ಓದಿದರು. ಹಾಸ್ಪಟಾಲಿಟಿ ವಿಭಾಗದ ಉಪನ್ಯಾಸಕಿ ಶೃತಾ, ಆಂಗ್ಲ ಭಾಷಾ ವಿಭಾಗದ ಉಪನ್ಯಾಸಕಿ ದೀಪ್ತಿ ಎ.ಸಿರವರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

ಕೌಶಲ್ಯ ಎಂದಿಗೂ ಕೈಕೊಡೋದಿಲ್ಲ…
ನಾನು ಓರ್ವ ಪ್ರೊಫೆಶನಲ್ ಆಕ್ಟರ್ ಆಗಿರಬಹುದು ಆದರೆ ನಾನು ಕೂಡ ಶಿಕ್ಷಕನಾಗಿ ಕೆಲಸ ಮಾಡಿದ್ದೀನಿ. ಪ್ರತಿಭೆ ಅನ್ನುವುದು ಜನುಮದಲ್ಲಿಯೇ ಬರುತ್ತದೆ ಆದರೆ ಕೌಶಲ್ಯ ಅನ್ನುವುದು ಕಲಿತಾಗ ಬರುತ್ತದೆ. ಪ್ರತಿಭೆ ಅನ್ನುವುದು ಯಾವಾಗ ಬೇಕಾದರೂ ಕೈಕೊಡಬಹುದು ಆದರೆ ಕೌಶಲ್ಯ ಅನ್ನುವುದು ಎಂದಿಗೂ ಕೈಕೊಡೋದಿಲ್ಲ. ಆದ್ದರಿಂದ ಕೌಶಲ್ಯವನ್ನು ವಿದ್ಯಾರ್ಥಿಗಳು ಜೀವನದಲ್ಲಿ ಬೆಳೆಸುವಂತಾಗಲಿ. ನಿಮ್ಮ ಜೀವನದ ಕನಸುಗಳನ್ನು ಪೂರೈಸಲು ಕೌಶಲ್ಯ ಪ್ರಮುಖವಾಗಿ ಬೇಕಾಗುತ್ತದೆ. ವಿದ್ಯಾರ್ಥಿಗಳು ಯಶಸ್ಸು ಪಡೆದರೆ ಕಾಲೇಜು ಕೂಡ ಹೆಸರು ಪಡೆಯುತ್ತದೆ. ಅಕ್ಷಯ ವೈಭವ ನಿರಂತರವಾಗಿ ನಡೆಯಲಿ. ಇಲ್ಲಿಗೆ ಜಿಲ್ಲೆಯಿಂದ, ರಾಜ್ಯದಿಂದ ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಬರಲಿ.
-ಯಶ್ ಶೆಟ್ಟಿ, ಬಹುಭಾಷಾ ಚಲನಚಿತ್ರ ನಟ

ಸನ್ಮಾನ/ಅಭಿನಂದನೆ..
ಮಂಗಳೂರು ವಿಶ್ವವಿದ್ಯಾನಿಲಯದಿಂದ ರ‍್ಯಾಂಕ್‌ಗಳನ್ನು ಗಳಿಸಿದ ಕಾಲೇಜಿನ ಫ್ಯಾಶನ್ ಡಿಸೈನಿಂಗ್ ಆಂಡ್ ಇಂಟೀರಿಯರ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳಾದ ಪ್ರಣಮ್ಯ(ಪ್ರಥಮ ರ‍್ಯಾಂಕ್), ಶ್ರದ್ಧಾ(ಮೂರನೇ ರ‍್ಯಾಂಕ್), ಜೀವಿತಾ(ಪ್ರಥಮ ರ‍್ಯಾಂಕ್), ರಿಯಾ ಪೊನ್ನಮ್ಮ(ದ್ವಿತೀಯ ರ‍್ಯಾಂಕ್)ರವರುಗಳನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಸಂಸ್ಥೆಯಲ್ಲಿ ಉಪನ್ಯಾಸಕರಾಗಿದ್ದು ಉನ್ನತ ಶಿಕ್ಷಣವನ್ನು ಪಡೆದಿರುವಂತಹ ಗಂಧರ್ವ(ಕೆಸೆಟ್), ಕಿಶೋರ್ ಕುಮಾರ್ ರೈ ಕೆ(ಬಿಎಡ್) ಪ್ರಭಾವತಿ ಕೆ(ಎಂಲಿಬ್)ವೀಣಾ ಬಿ.ಕೆ(ಎಂಬಿಎ)ರವರುಗಳನ್ನು ಹಾಗೂ 2024-25ರ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೀವನ್(ಬೆಸ್ಟ್ ಲೀಡರ್ ಅವಾರ್ಡ್)ಮಧುರಾ(ಬೆಸ್ಟ್ ಔಟ್‌ಗೋಯಿಂಗ್ ಅವಾರ್ಡ್)ರವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

LEAVE A REPLY

Please enter your comment!
Please enter your name here