ಉಪ್ಪಿನಂಗಡಿ: ಮನೆಗೆ ನುಗ್ಗಿ 1.25 ಲಕ್ಷ ರೂ. ನಗ- ನಗದು ಕಳವು

0

ಉಪ್ಪಿನಂಗಡಿ: ಇಲ್ಲಿನ ಸಮೀಪದ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಯಂತ್ರಡ್ಕ ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು 1.28 ಲಕ್ಷ ರೂಪಾಯಿ ಮೌಲ್ಯದ ನಗ ನಗದನ್ನು ಕದ್ದೊಯ್ದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

ಅಬೂಬಕ್ಕರ್ ಸಿದ್ದಿಕ್ ಎಂಬವರು ತನ್ನ ಮನೆಯವರೊಂದಿಗೆ ಮೂಡಬಿದ್ರೆಯಲ್ಲಿನ ಸಂಬಂಧಿಕರ ಮದುವೆಗೆಂದು ಗುರುವಾರ ಮುಂಜಾನೆ ಹೋದವರು ಸಂಜೆ ಹಿಂದುರುಗಿ ಬಂದು ಮನೆಯ ಬೀಗ ತೆರೆದು ಒಳ ಹೊಕ್ಕಾಗ , ಮನೆಯ ಕಪಾಟು ತೆರೆದುಕೊಂಡಿರುವುದು ಕಂಡು ಬಂದಿತ್ತು. ಪರಿಶೀಲಿಸಿದಾಗ ಮನೆಯ ಮೇಲ್ಛಾವಣಿಯ ಹಂಚು ತೆಗೆದು ಒಳಪ್ರವೇಶಿಸಿದ ಕಳ್ಳರು, ಮಲಗುವ ಕೋಣೆಯಲ್ಲಿದ್ದ ಕಬ್ಬಿಣದ ಕಪಾಟಿನ ಬೀಗವನ್ನು ಯಾವುದೋ ಸಾಧನದಿಂದ ಮುರಿದು ಕಪಾಟಿನಲ್ಲಿದ್ದ 58 ಸಾವಿರ ನಗದು ಹಣ , 70 ಸಾವಿರ ರೂ ಮೌಲ್ಯದ 2 ಪವನ್ ತೂಕದ ಚಿನ್ನಾಭರಣಗಳನ್ನು ಕದ್ದಿರುವುದು ಬೆಳಕಿಗೆ ಬಂದಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಹೆಚ್ಚುತ್ತಿರುವ ಕಳ್ಳರ ಹಾವಳಿ:
ಕಳೆದ ಕೆಲ ಸಮಯಗಳಿಂದ ಹಲವೆಡೆ ಕಳ್ಳತನದ ಪ್ರಕರಣಗಳು ನಡೆಯುತ್ತಿದ್ದು, ಕಳ್ಳರ ಹಾವಳಿಯಿಂದ ಜನತೆ ಕಂಗಾಲಾಗುವಂತಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ 34ನೇ ನೆಕ್ಕಿಲಾಡಿಯಲ್ಲಿ ನಾಲ್ಕು ಮನೆಗಳಲ್ಲಿ ಸರಣಿ ಕಳ್ಳತನ ನಡೆದಿದ್ದು, ಇದೀಗ ಕಣಿಯೂರು ಗ್ರಾಮದಲ್ಲಿಯೂ ಮನೆ ಮಂದಿ ಮನೆಯಲ್ಲಿ ಇಲ್ಲದ ಸಮಯ ನೋಡಿಕೊಂಡು ಹಾಡು ಹಗಲೇ ಕಳವು ಪ್ರಕರಣ ನಡೆದಿದೆ. ಯಾವ ಯಾವ ಪ್ರದೇಶದಲ್ಲಿ ಮನೆಮಂದಿ ಮನೆಯಿಂದ ನಿರ್ಗಮಿಸುತ್ತಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಪಡೆಯುವಲ್ಲಿ ಕಳ್ಳರು ಹೊಂದಿರುವ ಸಂಪರ್ಕ ಜಾಲ ಪ್ರಬಲವಾಗಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಹೆಚ್ಚಿನ ನಿಗಾವಿರಿಸಬೇಕಾಗಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

LEAVE A REPLY

Please enter your comment!
Please enter your name here