2009ರಲ್ಲಿ ಯಡಿಯೂರಪ್ಪ ನೀಡಿರುವ ಸೈಟ್ ಹೊರತುಪಡಿಸಿ ನನ್ನ ಹೆಸರಲ್ಲಿ ರಾಜ್ಯದ ಎಲ್ಲಿಯೂ ಯಾವುದೇ ಜಾಗ ಇಲ್ಲ- ನಳಿನ್

0

ಪುತ್ತೂರು:ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ 2009ರಲ್ಲಿ ನೀಡಿದ್ದ ಸೈಟ್ ಒಂದನ್ನು ಹೊರತುಪಡಿಸಿದರೆ ನನ್ನ ಹೆಸರಲ್ಲಿ ರಾಜ್ಯದ ಎಲ್ಲಿಯೂ ಯಾವುದೇ ಜಾಗ ಇಲ್ಲ ಎಂದು ಕರ್ನಾಟಕ ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ, ದ.ಕ.ಕ್ಷೇತ್ರದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಹೇಳಿದ್ದಾರೆ.


ನನ್ನ ಹೆಸರಲ್ಲಿ ಒಂದೇ ಒಂದು ಕಾರಿಲ್ಲ,ನನ್ನ ಹೆಸರಲ್ಲಿ ಒಂದೇ ಒಂದು ಬೈಕಿಲ್ಲ.ನನ್ನ ಹೆಸರಲ್ಲಿ ರಾಜ್ಯದ ಎಲ್ಲಿಯೂ ಯಾವುದೇ ಜಾಗ ಇಲ್ಲ.ನನ್ನ ಎಕೌಂಟ್ ಬೇಕಿದ್ದರೆ ತೆಗೆದು ತೋರಿಸ್ತೇನೆ ಅದರಲ್ಲಿ ಏನಾದರೂ ಇದ್ರೆ ಹೇಳ್ಬೇಕು.ಇರುವ ಒಂದು ಮನೆ ಜಾಗ ತಾಯಿ ಹೆಸರಲ್ಲಿದೆ.ಒಂದು ಫ್ಲ್ಯಾಟ್ ಇದೆ.ಅದು ಪತ್ನಿ ಹೆಸರಲ್ಲಿದೆ.ಅದು ಬಿಟ್ರೆ ನನ್ನ ಹೆಸರಲ್ಲಿ ಯಾವುದೇ ಜಾಗ ಇಲ್ಲ.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 2009ರಲ್ಲಿ ಬೆಂಗಳೂರುನಲ್ಲಿ ನನಗೊಂದು ಸೈಟ್ ಕೊಟ್ಟಿದ್ದಾರೆ.ಎಲ್ಲ ಎಂಪಿಗಳಿಗೆ ಒಂದೊಂದು ಸೈಟ್ ಕೊಡಲಾಗುತ್ತಿತ್ತು.ಅದಿನ್ನೂ ಪೂರ್ತಿಯಾಗಿ ನನ್ನ ಹೆಸರಲ್ಲಿ ಆಗಿಲ್ಲ.ಹಣ ಕಟ್ಟಿದ್ದೇವೆ.ಅದು ಕೋರ್ಟಲ್ಲಿದೆ.ಕಾನೂನು ಪ್ರಕಾರ ಇತ್ಯರ್ಥವಾದರೆ ಅದೊಂದು ಸೈಟ್ ನನ್ನ ಹೆಸರಲ್ಲಿರುತ್ತದೆ.ನನಗೆಂದು ಸರಕಾರದಿಂದ ಇರುವುದು ಅದೊಂದೇ ಸೈಟ್, ಆದರೆ ಅದಿನ್ನೂ ಪೂರ್ತಿಯಾಗಿಲ್ಲ.ರಿಜಿಸ್ಟ್ರೇಷನ್ ಆದರೆ ಅದು ನನ್ನ ಹೆಸರಿಗೆ ಬರುತ್ತದೆ.ಅದು ಬಿಟ್ಟು ರಾಜ್ಯದ ಬೇರೆಲ್ಲಿಯಾದರೂ ನನ್ನ ಹೆಸರಲ್ಲಿ ಜಾಗ ಇರುವುದನ್ನು ಯಾರಾದರೂ ತೋರಿಸಿದರೆ ಅವತ್ತೇ ನಾನು ಸಾರ್ವಜನಿಕ ಜೀವನದಿಂದ ಮುಕ್ತನಾಗುತ್ತೇನೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ನಳಿನ್ ಕುಮಾರ್ ಕಟೀಲ್ ಅವರಿಗೆ ಬೆಂಗಳೂರು ಎಚ್‌ಎಸ್‌ಆರ್ ಬಡಾವಣೆಯಲ್ಲಿ ಜಿ-ಕೆಟಗರಿ ಕೋಟಾದಲ್ಲಿ 50*80 ಅಡಿ ಅಳತೆಯ, ಅಂದಾಜು ರೂ.12 ಕೋಟಿ ಮೌಲ್ಯದ ನಿವೇಶನಕ್ಕೆ ಶುದ್ಧ ಕ್ರಯಪತ್ರ ಮಾಡಿಕೊಡಲು ರಾಜ್ಯ ಕಾಂಗ್ರೆಸ್ ಸರಕಾರ ಮುಂದಾಗಿದ್ದು, ಏ.11ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವ ಸಾಧ್ಯತೆ ಇದೆ.ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅನುಮೋದನೆಯ ಮೇರೆಗೆ ಈ ಟಿಪ್ಪಣಿಯನ್ನು ಸಚಿವ ಸಂಪುಟ ಸಭೆಗೆ ಮಂಡಿಸಲು ನಗರಾಭಿವೃದ್ಧಿ ಇಲಾಖೆ ಸಿದ್ಧತೆ ನಡೆಸಿದೆ ಎಂದು ಮಾಧ್ಯಮಗಳಲ್ಲಿ ವರದಿ ಪ್ರಟಕವಾಗಿದ್ದು,ಅದಕ್ಕೆ ಸ್ಪಷ್ಟೀಕರಣವಾಗಿ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಸಂಪುಟ ಸಭೆಯಲ್ಲಿ ನಡೆಯದ ಪ್ರಸ್ತಾಪ:
ನಳಿನ್ ಕುಮಾರ್ ಕಟೀಲ್ ಅವರಿಗೆ ಜಿ ಕೆಟಗರಿ ಕೋಟಾದಲ್ಲಿ ನಿವೇಶನದ ಯಾವುದೇ ವಿಚಾರ ಏ.11ರಂದು ಸಿಎಂ ಸಿದ್ಧರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪವಾಗಿಲ್ಲ ಎಂದು ಮಾಹಿತಿ ಲಭಿಸಿದೆ.

LEAVE A REPLY

Please enter your comment!
Please enter your name here