ನೆಲ್ಯಾಡಿ: ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಹಾಗೂ ಅಲ್ಲೇ ಪಕ್ಕದಲ್ಲಿ ನಿಂತಿದ್ದ ಸತೀಶ್ ಎಂಬವರಿಗೆ ಕಾರು ಡಿಕ್ಕಿಯಾಗಿರುವ ಘಟನೆ ಎ.10ರಂದು ರಾತ್ರಿ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ನಡೆದಿದೆ. ಗಾಯಗೊಂಡಿರುವ ಸತೀಶ್ ಅವರನ್ನು ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಕ್ಕಡ ಗ್ರಾಮದ ಕೊಡಂಗೆ ನಿವಾಸಿ ಜನಾರ್ದನ ಕೆ.ಪಿ. ಎಂಬವರು ಲಾರಿಯಲ್ಲಿ (ಕೆಎ 21, ಬಿ 3478) ರಬ್ಬರ್ ಮರದ ಕಟ್ಟಿಗೆಯನ್ನು ಲೋಡ್ ಮಾಡಿಕೊಂಡು ಸದ್ರಿ ಲಾರಿಯಲ್ಲಿ ಸತೀಶ್‌ರವರನ್ನು ಲೋಡರ್ ಆಗಿ ಹಾಗೂ ಅಬ್ದುಲ್ ರಝಾಕ್‌ರವರು ಚಾಲಕರಾಗಿ ಬಂದಿದ್ದು ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ತಲುಪಿದಾಗ ಸತೀಶ್ ಎಂಬವರಿಗೆ ಅವರ ಮನೆಗೆ ಹೋಗಲು ಬೇರೆ ಕಾರು ಇದ್ದ ಕಾರಣ, ಲಾರಿಯನ್ನು ರಸ್ತೆ ಬದಿ ನಿಲ್ಲಿಸಿ ಜನಾರ್ದನ ಮತ್ತು ಸತೀಶ್‌ರವರು ಲಾರಿಯಿಂದ ಇಳಿದು ಲಾರಿಯ ಹಿಂಭಾಗ ಬಲಬದಿ ನಿಂತುಕೊಂಡಿದ್ದ ವೇಳೆ ಕೊಕ್ಕಡ ಕಡೆಯಿಂದ ಧರ್ಮಸ್ಥಳ ಕಡೆಗೆ ಬರುತ್ತಿದ್ದ ಕಾರು (ಕೆಎ31, ಡಿ 2384) ಲಾರಿಯ ಹಿಂಭಾಗದ ಬಲಬದಿಗೆ ಹಾಗೂ ಅಲ್ಲಿ ನಿಂತುಕೊಂಡಿದ್ದ ಸತೀಶ್‌ರವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸತೀಶ್‌ರವರು ರಸ್ತೆಗೆ ಬಿದ್ದು ಗಾಯಗೊಂಡಿದ್ದು ಅವರಿಗೆ ಕೊಕ್ಕಡ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಜನಾರ್ದನ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.