ಪತ್ರಿಕೋದ್ಯಮ ಬಿಟ್ಟರೆ ಬೇರೆ ಇಲ್ಲ ಎಂದು ಜಡ್ಡು ಕಟ್ಟಿದ್ದ ಮನಸ್ಸಿಗೆ ಸಸ್ಯ ಜಾತ್ರೆ, ಅರಿವು ಕೇಂದ್ರ, ಶೈಕ್ಷಣಿಕ ಮೇಳ ಹೊಸ ಚಿಂತನೆ ತಂದಿದೆ

0

ಸಂತೋಷದ ಬದುಕು, ಜೀವನ ಕಟ್ಟುವ ಕೇಂದ್ರವಾಗಿ ಅರಿವು ಕೇಂದ್ರ ಬದಲಾಗಲಿದೆ, ಕೆಲಸ ಮಾಡಲಿದೆ

40 ವರ್ಷಗಳ ಪತ್ರಿಕೋದ್ಯಮದ ಬದುಕು ಅಂದರೆ ಅದು ಇನ್ನೊಬ್ಬರ ಬದುಕನ್ನು ಜಗತ್ತಿಗೆ ತೋರಿಸುವ ಜೀವನವಾಗಿದೆ. ಅದರಲ್ಲಿ ಕೆಲವೊಮ್ಮೆ ಎಡವಿದ್ದೇವೆ. ತಪ್ಪುಗಳನ್ನೂ ಮಾಡಿದ್ದೇವೆ. ಆದರೆ ಹೆಚ್ಚಿನ ಸಲ ಜನರ ಪರವಾಗಿ ಕೆಲಸ ಮಾಡಿವ. ಅದರ ಫಲವಾಗಿ ಸುಳ್ಯ, ಪುತ್ತೂರು, ಬೆಳ್ತಂಗಡಿಗಳಲ್ಲಿ ಸುದ್ದಿ ಬಿಡುಗಡೆ ಪತ್ರಿಕೆ ಮತ್ತು ಚಾನೆಲ್ ಅತ್ಯಂತ ಪ್ರಸಾರದ ಜನಪ್ರಿಯ ಮಾಧ್ಯಮವಾಗಿದೆ. ಈ ನಡುವಿನಲ್ಲಿ ಲಂಚ, ಭ್ರಷ್ಟಾಚಾರದ ವಿರುದ್ಧ, ಬಲಾತ್ಕಾರದ ಬಂದ್‌ಗಳ ವಿರುದ್ಧದ, ಸಾಮಾಜಿಕ ಜಾಲತಾಣದ ದುರುಪಯೋಗದ ಬಗ್ಗೆ ಆಂದೋಲನ ಮಾಡಿ, ಕಷ್ಟ ನಷ್ಟಗಳನ್ನು ಎದುರಿಸಿದ್ದರೂ ಯಶಸ್ವಿಯಾಗಿದ್ದೇವೆ. ಸಸ್ಯ ಜಾತ್ರೆ, ಉದ್ಯೋಗಮೇಳ, ಮಳೆಕೊಯ್ಲು, ಶಿಕ್ಷಣ ಮೇಳ, ಸಾಕ್ಷರತೆ ಬಗ್ಗೆ ಅಭಿಯಾನ ನಡೆಸಿದ್ದೇವೆ. ಈಗ ಆ ಎಲ್ಲಾ ಜವಾಬ್ದಾರಿಗಳನ್ನು ಅಲ್ಲಲ್ಲಿಯೇ ತಂಡಗಳು ಯಶಸ್ವಿಯಾಗಿ ನಿರ್ವಹಿಸುತ್ತಿವೆ.


ನಾನು ಅದರ ಜವಾಬ್ದಾರಿಯಿಂದ ಹೊರ ಬಂದು ಜನರ ಸುದ್ದಿಗಳಿಗೆ ಮಾಧ್ಯಮವಾಗಿ ಇರುವ ಕೆಲಸದ ಬದಲು ಜನರ ಸಂತೋಷದ ಬದುಕು ಮತ್ತು ಜೀವನ ಕಟ್ಟುವ ಕೇಂದ್ರವನ್ನಾಗಿ ಕೆಲಸ ಮಾಡುವ ಚಿಂತನೆ ಕಳೆದ 2 ವರ್ಷಗಳಿಂದ ಇಟ್ಟುಕೊಂಡಿದ್ದೇನೆ. ಪ್ರಯೋಗವಾಸ್ಥೆಯಲ್ಲಿ ಇದ್ದ ಆ ಯೋಚನೆಗೆ ಸಸ್ಯ ಜಾತ್ರೆ, ಅರಿವು ಕೃಷಿ ಕೇಂದ್ರ ಒಂದು ಗುರಿಯನ್ನು ನೀಡಿತ್ತು. ಇದೀಗ ಪುತ್ತೂರಿನಲ್ಲಿ ನಡೆದ ಶೈಕ್ಷಣಿಕ ಮತ್ತು ತರಬೇತಿ ಮೇಳ ಆ ಯೋಚನೆಗೆ ಒಂದು ಭದ್ರವಾದ ಅಡಿಪಾಯ ಹಾಕಿದೆ. ಅದರ ಬಗ್ಗೆ ಸಂಕ್ಷಿಪ್ತ ಮಾಹಿತಿ ಈ ಕೆಳಗೆ ನೀಡಿದ್ದೇನೆ.


ಶಿಕ್ಷಣವಾಗಲಿ, ತರಬೇತಿಯಾಗಲಿ, ಉದ್ಯೋಗವಾಗಲಿ ಎಲ್ಲರ ಉದ್ದೇಶ ಸಾಮರ್ಥ್ಯವನ್ನು ಬೆಳಕಿಗೆ ತಂದು ಅರ್ಥಪೂರ್ಣ ಜೀವನ ನಡೆಸುವಂತೆ ಮಾಡುವುದಾಗಿದೆ. ಆದರೆ ಈಗಿನ ಶಿಕ್ಷಣ, ತರಬೇತಿ, ಉದ್ಯೋಗ ಅದನ್ನು ಮಾಡುತ್ತಿದೆಯೇ ಎಂದರೆ ಹೆಚ್ಚಿನವರ ಉತ್ತರ ಇಲ್ಲ ಎಂದೇ ಆಗಿದೆ. ಹಾಗಿದ್ದರೆ ಈಗಿನ ವ್ಯವಸ್ಥೆಯನ್ನು, ಪರಿಸ್ಥಿತಿಯನ್ನು ಬದಲಾಯಿಸಿ ಜೀವನವನ್ನು ಆನಂದದಾಯಕವಾಗಿ ಪರಿಪೂರ್ಣ ಮಾಡುವುದು ಹೇಗೆ? ಎಂಬ ಚಿಂತನೆಯಿಂದ ಸಂತೋಷದ ಬದುಕಿನ, ಜೀವನ ಕಟ್ಟುವ ಉದ್ದೇಶದ ಅರಿವು ಕೇಂದ್ರ ಪ್ರಾರಂಭಿಸಿದ್ದೇವೆ. ಅದರ ಯಶಸ್ವಿಗಾಗಿ ಶೈಕ್ಷಣಿಕ ಮಾಹಿತಿ, ಸೇವಾ ಕೇಂದ್ರ, ಕೃಷಿ ಮಾಹಿತಿ ಸೇವಾ ಕೇಂದ್ರ, ಉದ್ಯೋಗ ಮಾಹಿತಿ ಸೇವಾ ಕೇಂದ್ರ, ಉದ್ಯಮ ಮಾಹಿತಿ ಸೇವಾ ಕೇಂದ್ರ, ಆರೋಗ್ಯ ಮಾಹಿತಿ ಸೇವಾ ಕೇಂದ್ರಗಳನ್ನು ಪ್ರಾರಂಭಿಸಿ ಅರಿವು ಕೇಂದ್ರದ ಉದ್ದೇಶವನ್ನು ಈಡೇರಿಸಲಿದ್ದೇವೆ. ಅದು ಒಂದು ವರ್ಷದ ಕಾಲದಲ್ಲಿ ಅಲ್ಲ. ಜೀವನ ಪರ್ಯಂತ ನಡೆಯಬೇಕಿದ್ದು ಅದು ನಮ್ಮ ನಂತರವೂ ಮುಂದುವರಿಯಬೇಕಾಗಿದೆ. ಆ ಬಗ್ಗೆ ಯೋಜನೆ ಮತ್ತು ಯೋಚನೆಗಳನ್ನು ಮುಂದಿನ ಸಂಚಿಕೆಯಲ್ಲಿ ಹಂಚಿಕೊಳ್ಳಲಿದ್ದೇನೆ. ಆಸಕ್ತರನ್ನು ಮತ್ತು ಸಮರ್ಥರನ್ನು ಭೇಟಿಯಾಗಿ ಸೇರಿಸಿಕೊಳ್ಳಲಿದ್ದೇನೆ.
| ಡಾ.ಯು.ಪಿ.ಶಿವಾನಂದ

LEAVE A REPLY

Please enter your comment!
Please enter your name here