ಡಾ. ಅಂಬೇಡ್ಕರ್ ರವರು ನೀಡಿದ, ಶ್ರೇಷ್ಠ ಸಂವಿಧಾನವನ್ನು ಬುಡ ಮೇಲುಗೊಳಿಸಲು ಪ್ರಯತ್ನಿಸುತ್ತಿರುವ ಕಾರ್ಯ, ವಿಷಾದನೀಯ. ಈ ಬಗ್ಗೆ ಜನರು ಜಾಗೃತರಾಗಬೇಕಾದ ಅವಶ್ಯಕತೆ ಇದೆ- ನ್ಯಾಯವಾದಿ ನೂರುದ್ದೀನ್ ಸಾಲ್ಮರ
ಪುತ್ತೂರು: ಜಗತ್ತು ಕಂಡ ಅತಿ ಶ್ರೇಷ್ಠ ಸಂವಿಧಾನಗಳಲ್ಲಿ ಒಂದಾದ ಭಾರತದ ಸಂವಿಧಾನವನ್ನು, ಕೆಲವು ದುಷ್ಟ ಶಕ್ತಿಗಳು, ಬುಡಮೇಲು ಗೊಳಿಸಲು ಪ್ರಯತ್ನಿಸುತ್ತಿರುವ ಕಾರ್ಯಗಳು ಇಂದು ಕಂಡು ಬರುತ್ತಿದೆ. ಇಂತಹ ಕಾರ್ಯಗಳನ್ನು ತಡೆಯುವುದು ಪ್ರಜ್ಞಾವಂತ ನಾಗರಿಕರ ಆದ್ಯ ಕರ್ತವ್ಯವಾಗಿರುತ್ತದೆ. ಈ ಬಗ್ಗೆ ಸಂವಿಧಾನವನ್ನು ಉಳಿಸಿ ರಕ್ಷಣೆ ಮಾಡಬೇಕಾದ ಕೆಲಸವನ್ನು ನಾವು ಮಾಡಿದಾಗ, ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರ 135ನೇ ಜನ್ಮದಿನವನ್ನು ಆಚರಿಸುವುದಕ್ಕೆ ಅರ್ಥ ಬಂದೀತು.ಮಾತ್ರವಲ್ಲ ಇದರಿಂದ ದಲಿತ, ಶೋಷಿತ, ಅಲ್ಪಸಂಖ್ಯಾತ ಹಾಗೂ ತುಳಿತಕ್ಕೆ ಒಳಗಾದ ಸಮಾಜಕ್ಕೆ ನ್ಯಾಯ ಕೊಟ್ಟಂತಾಗುತ್ತದೆ ಎಂದು ಪುತ್ತೂರು ತಾಲೂಕು ಅಹಿಂದದ ಅಧ್ಯಕ್ಷರಾದ ನ್ಯಾಯವಾದಿ ನೂರುದ್ದೀನ್ ಸಾಲ್ಮರವರು ಹೇಳಿದರು. ಅವರು ಪುತ್ತೂರು ತಾಲೂಕು ಅಹಿಂದದ ವತಿಯಿಂದ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾದ ಪುತ್ತೂರು ತಾಲೂಕು ಅಧ್ಯಕ್ಷರಾದ ದೇವಪ್ಪ ಕಾರೆಕ್ಕಾಡ್, ಸೈಯದ್ ಮಲೆ ಜುಮ್ಮಾ ಮಸ್ಜಿದ್ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಾಲ್ಮರ, ನ್ಯಾಯವಾದಿ ಸಾತ್ವಿಕ್ ಆರಿಗ ಬೆಳಂದೂರು, ಕರ್ನಾಟಕ ದಲಿತ ಸಂಘರ್ಷ ಸಮಿತಿ ಇದರ ಜಿಲ್ಲಾ ಸಂಘಟನಾ ಸಂಚಾಲಕ ಮಹೇಶ್ ಕೆ ಪಟ್ಟೆ, ಸಾಮಾಜಿಕ ಕಾರ್ಯಕರ್ತ ಇಸ್ಮಾಯಿಲ್ ಎಂ ಬಿ, ಫಾಸ್ಟ್ ಎಲೆಕ್ಟ್ರಿಕಲ್ ನ ಮುಸ್ತಾಕ್ ಸಂಪ್ಯ ಮತ್ತಿತರರು ಉಪಸ್ಥಿತರಿದ್ದರು.