*ಅಹಂಕಾರ, ಮಮಕಾರ ಮರೆತಾಗ ಭಗವಂತನ ಅನುಗ್ರಹ ಪ್ರಾಪ್ತಿ; ಒಡಿಯೂರು ಶ್ರೀ
ನೆಲ್ಯಾಡಿ: ಒಡಿಯೂರು ಶ್ರೀ ಚಾರಿಟೇಬಲ್ ಟ್ರಸ್ಟ್, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಸಂಚಾಲಿತ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಗೋಳಿತ್ತೊಟ್ಟು ವಲಯದ ಗೋಳಿತ್ತೊಟ್ಟು, ನೆಲ್ಯಾಡಿ ಹಾಗೂ ಪಟ್ಟೂರು ಘಟ ಸಮಿತಿಯ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯದತ್ತ ವ್ರತಪೂಜೆ ಎ.16ರಂದು ಬೆಳಿಗ್ಗೆ ಗೋಳಿತ್ತೊಟ್ಟು ಸರಕಾರಿ ಉನ್ನತ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.
ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನ ಶ್ರೀ ಗುರುದೇವಾನಂದ ಸ್ವಾಮೀಜಿಯವರು, 4ಜಿ- 5ಜಿಯ ಇಂದಿನ ಆಧುನಿಕ ಯುಗದಲ್ಲಿ ಮಾತಾಜಿ, ಪಿತಾಜಿ, ಗುರುಜಿ ಎಂಬ ತ್ರಿಜಿಗಳನ್ನು ಮರೆಯಬಾರದು. ನಿಸ್ವಾರ್ಥ ಸೇವೆ, ರಾಷ್ಟ್ರಸೇವೆ ಮಕ್ಕಳಿಂದ ಆರಂಭವಾಗಬೇಕು. ಈ ಬಗ್ಗೆ ಜಾಗೃತಿಗೊಳಿಸಬೇಕಾಗಿದೆ. ಅಹಂಕಾರವನ್ನು ತ್ಯಜಿಸುವುದೇ ಮಹಾತ್ಯಾಗ. ಅಹಂಕಾರ, ಮಮಕಾರ ಮರೆತಾಗ ಭಗವಂತನ ಅನುಗ್ರಹ ಪ್ರಾಪ್ತಿಯಾಗಲಿದೆ ಎಂದು ನುಡಿದರು. ವಿದ್ಯಾಲಯ, ದೇವಾಲಯ ಎರಡು ಕಣ್ಣುಗಳಿದ್ದಂತೆ. ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಊರಿನಲ್ಲಿ ವಿದ್ಯಾಲಯ, ದೇವಾಲಯದ ಅಗತ್ಯವಿದೆ. ಭಜನೆಯಲ್ಲಿ ಸಂಸ್ಕೃತಿ ಅಡಕವಾಗಿದೆ. ಸಂಸ್ಕಾರದ ಪಾಠವಿದೆ ಎಂದು ಹೇಳಿದ ಸ್ವಾಮೀಜಿ, ವ್ಯಕ್ತಿ ವಿಕಾಸ, ಗ್ರಾಮವಿಕಾಸದ ಆಗಬೇಕೆಂಬ ಸಂಕಲ್ಪವಿಟ್ಟುಕೊಂಡು ಗ್ರಾಮವಿಕಾಸ ಯೋಜನೆ ಆರಂಭಿಸಲಾಗಿದೆ. ಶ್ರೀ ಸತ್ಯದತ್ತ ವ್ರತಪೂಜೆಯಿಂದ ಚರ್ಮರೋಗ ನಿವೃತ್ತಿ,ಕಲ್ಯಾಣ ಪ್ರಾಪ್ತಿ ಆಗಲಿದೆ ಎಂದು ನುಡಿದರು.

ಶ್ರದ್ಧೆ, ನಿಷ್ಠೆಯ ಕೆಲಸಕ್ಕೆ ಗುರುಕೃಪೆ-ಸುರೇಶ್ ರೈ:
ಅತಿಥಿಯಾಗಿದ್ದ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಸುರೇಶ್ ರೈ ಮಾತನಾಡಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು 2011ರಲ್ಲಿ ಆರಂಭಗೊಂಡಿದ್ದು 23 ಶಾಖೆಗಳಿವೆ. 8 ಜಿಲ್ಲೆಗಳನ್ನೊಳಗೊಂಡ ಮೈಸೂರು ವಲಯದಲ್ಲಿ ಸಂಘವು ಪ್ರಥಮ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಈ ಭಾಗದಲ್ಲೂ ಶಾಖೆ ತೆರೆಯಲು ಸಿದ್ಧರಿದ್ದೇವೆ. ಸ್ವಾಮೀಜಿಯವರ ಕನಸು ನನಸು ಮಾಡುವ ಕೆಲಸ ಗುರುಬಂಧುಗಳಿಂದ ಆಗುತ್ತಿದೆ. ಶ್ರದ್ಧೆ,ನಿಷ್ಠೆಯ ಕೆಲಸಕ್ಕೆ ಗುರುಕೃಪೆ ಇರುತ್ತದೆ ಎಂದರು.

ಒಡಿಯೂರು ಸಂಘದಿಂದ ಸಹಕಾರ-ಗೋಪಾಲ ಗೌಡ:
ಗೋಳಿತ್ತೊಟ್ಟು ಸರಕಾರಿ ಉನ್ನತ ಹಿ.ಪ್ರಾ.ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಗೋಪಾಲ ಗೌಡರವರು ಮಾತನಾಡಿ, ಗೋಳಿತ್ತೊಟ್ಟು ಶಾಲೆಯು ಶತಮಾನೋತ್ಸವದ ಸಂಭ್ರಮದಲ್ಲಿದ್ದು ಒಡಿಯೂರು ಶ್ರೀಗಳ ಪಾದಸ್ಪರ್ಶದಿಂದ ಶಾಲೆಗೆ ಮತ್ತಷ್ಟೂ ಉತ್ತೇಜನ ಸಿಕ್ಕಿದೆ. ಒಡಿಯೂರು ಸಂಘದ ಸದಸ್ಯರು ಶಾಲೆಯಲ್ಲಿ ಶ್ರಮದಾನದ ಮೂಲ ಸ್ವಚ್ಛತಾ ಕೆಲಸ ಮಾಡಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

3 ಜಿಲ್ಲೆಯಲ್ಲಿ 8 ಸಾವಿರ ಸಂಘ-ಮಾತೇಶ್ ಭಂಡಾರಿ:
ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾತೇಶ್ ಭಂಡಾರಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, 2001ರಲ್ಲಿ ಆರಂಭಗೊಂಡ ಗ್ರಾಮವಿಕಾಸ ಯೋಜನೆ ದ.ಕ.,ಉಡುಪಿ ಹಾಗೂ ಕಾಸರಗೋಡು ಜಿಲ್ಲೆ ವ್ಯಾಪ್ತಿಗೆ ವಿಸ್ತಾರಗೊಂಡಿದೆ. ಯೋಜನೆಯಡಿ 8 ಸಾವಿರ ಸಂಘಗಳಿದ್ದು 60 ಸಾವಿರ ಸದಸ್ಯರಿದ್ದಾರೆ. 300 ಕಾರ್ಯಕರ್ತರು ಸೇವೆ ಸಲ್ಲಿಸುತ್ತಿದ್ದು ಜೊತೆಗೆ ಘಟ ಸಮಿತಿ ಪದಾಧಿಕಾರಿಗಳು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ ಎಂದರು. ಯೋಜನೆಯ ಮೂಲಕ ಸದಸ್ಯರಿಗೆ ಆರ್ಥಿಕ ಸಹಕಾರ ನೀಡಲಾಗುತ್ತಿದೆ. ಸದಸ್ಯರಿಗೆ ವಿಮಾ ಯೋಜನೆ ಸೌಲಭ್ಯವಿದೆ. ಸರಳ ದಾಖಲೆಗಳ ಮೂಲಕ ಸಾಲ ವಿತರಣೆ ಮಾಡಲಾಗುತ್ತಿದೆ. ಗೋಳಿತ್ತೊಟ್ಟು ವಲಯ ಶೇ.100 ಸಾಲ ವಸೂಲಾತಿ ಮೂಲಕ ಮಾದರಿ ವಲಯವಾಗಿದೆ. ಒಡಿಯೂರು ಶ್ರೀಗಳ ಸಂಕಲ್ಪದಂತೆ ಗ್ರಾಮ ವಿಕಾಸ ಯೋಜನೆ ಹಾಗೂ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಜೊತೆಯಾಗಿ ಸಮಾಜದ ಹಾಗೂ ಹಿಂದುಳಿದ ಜನರ ಏಳಿಗೆಗೆ ಶ್ರಮಿಸುತ್ತಿದೆ. ಗೋಳಿತ್ತೊಟ್ಟು ವಲಯದಲ್ಲಿ 141 ಸಂಘಗಳಿವೆ. ಗ್ರಾಮ ವಿಕಾಸ ಯೋಜನೆಗೆ 25 ವರ್ಷ ತುಂಬುತ್ತಿದ್ದು ಸಂಘದ ಚಟುವಟಿಕೆಗಳು ಇನ್ನಷ್ಟೂ ವಿಸ್ತಾರಗೊಳ್ಳಬೇಕೆಂದು ಹೇಳಿದರು.

ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷೆ ಸವಿತಾ ಪುಲಾರ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಪಟ್ಟೂರು ಘಟ ಸಮಿತಿ ಅಧ್ಯಕ್ಷ ದಿನೇಶ್ ಶೆಟ್ಟಿ, ಗೋಳಿತ್ತೊಟ್ಟು ಘಟ ಸಮಿತಿ ಅಧ್ಯಕ್ಷ ರವಿಚಂದ್ರ, ನೆಲ್ಯಾಡಿ ಘಟ ಸಮಿತಿ ಅಧ್ಯಕ್ಷ ಗಂಗಾಧರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೆಲ್ಯಾಡಿ, ಪಟ್ಟೂರು ಹಾಗೂ ಗೋಳಿತ್ತೊಟ್ಟು ಘಟ ಸಮಿತಿ ವತಿಯಿಂದ ಸ್ವಾಮೀಜಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ನೆಲ್ಯಾಡಿ ಘಟ ಸಮಿತಿ ಕಾರ್ಯದರ್ಶಿ ಗುಲಾಬಿ, ಪಟ್ಟೂರು ಘಟ ಸಮಿತಿ ಸಲಹೆಗಾರ ಬಾಬು, ನೆಲ್ಯಾಡಿ ಘಟ ಸಮಿತಿ ಸಂಘಟನಾ ಕಾರ್ಯದರ್ಶಿ ರಮೇಶ್, ಸದಸ್ಯರಾದ ತನಿಯಪ್ಪ, ಯಶವಂತ, ಅಣ್ಣು ಮತ್ತಿತರರು ಅತಿಥಿಗಳನ್ನು ಸ್ವಾಗತಿಸಿದರು.

ನೆಲ್ಯಾಡಿ ಘಟ ಸಮಿತಿ ಅಧ್ಯಕ್ಷ ಗಂಗಾಧರ ಶೆಟ್ಟಿ ಸ್ವಾಗತಿಸಿ, ಪಟ್ಟೂರು ಘಟ ಸಮಿತಿ ಸದಸ್ಯ ಅಣ್ಣು ಬಾಳೆಹಿತ್ಲು ವಂದಿಸಿದರು. ಉಪ್ಪಿನಂಗಡಿ ವಲಯಾಧ್ಯಕ್ಷ ದಿನೇಶ್ ಗಾಣಂತಿ, ಸಂಯೋಜಕಿ ಜಯಂತಿ ಜಿ., ನಿರೂಪಿಸಿದರು. ಪುಷ್ಪಾ ಪ್ರಾರ್ಥಿಸಿದರು. ಗೋಳಿತ್ತೊಟ್ಟು ವಲಯ ಸಂಯೋಜಕಿ ಭಾರತಿ ಡಿ.ಕೆ., ಉಪ್ಪಿನಂಗಡಿ ವಲಯ ಸಂಯೋಜಕಿ ಸುಮಿತ್ರ, ಪುತ್ತೂರು ವಲಯ ಮೇಲ್ವಿಚಾರಕಿ ಸವಿತಾ ರೈ ಹಾಗೂ ಸೇವಾ ದೀಕ್ಷಿತೆಯರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾದ ವೇಣುಗೋಪಾಲ ಮಾರ್ಲ, ಜಯಪ್ರಕಾಶ್, ಗೋಳಿತ್ತೊಟ್ಟು ಗ್ರಾ.ಪಂ.ಉಪಾಧ್ಯಕ್ಷ ಬಾಬು ಪೂಜಾರಿ ಕಿನ್ಯಡ್ಕ, ನಿವೃತ್ತ ಸೈನಿಕ ಕರುಣಾಕರ ಶೆಟ್ಟಿ ಅಂಬುಡೇಲು, ಸ್ಥಳೀಯ ಪ್ರಮುಖರಾದ ಕರಿಯ ಗಾಣಂತಿ, ವೆಂಕಪ್ಪ ಗೌಡ ಡೆಬ್ಬೇಲಿ, ನೋಣಯ್ಯ ಗೌಡ ಡೆಬ್ಬೇಲಿ, ನೋಣಯ್ಯ ಪೂಜಾರಿ ಅಂಬರ್ಜೆ, ಸುಂದರ ಭಂಡಾರಿ ಪುರ, ಪ್ರತಾಪಚಂದ್ರ ರೈ ಕುದ್ಮಾರುಗುತ್ತು, ಪ್ರವೀಣ್ ಭಂಡಾರಿ ಪುರ, ನೇಮಣ್ಣ ಪೂಜಾರಿ ಪಾಲೇರಿ, ಪಾರ್ಶ್ವನಾಥ ಜೈನ್ ಗೋಳಿತ್ತೊಟ್ಟು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

ಸಾಮೂಹಿಕ ಪೂಜೆ, ಭಜನೆ;
ವೆ.ಮೂ.ಬ್ರಹ್ಮಶ್ರೀ ಚಂದ್ರಶೇಖರ ಉಪಾಧ್ಯಾಯ ಕುರೋಮೂಲೆ ಇವರ ಪೌರೋಹಿತ್ಯದಲ್ಲಿ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಬಳಿಕ ಶ್ರೀ ಸತ್ಯದತ್ತವ್ರತ ಪೂಜೆ ಆರಂಭಗೊಂಡಿತು. ಮಧ್ಯಾಹ್ನ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಮಂಗಳಾರತಿ ನಡೆಯಿತು. ಬಳಿಕ ಕೊಣಾಲು ತಿರ್ಲೆ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿಯವರಿಂದ ಕುಣಿತ ಭಜನೆ ನಡೆಯಿತು. ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಘದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಸನ್ಮಾನ:
ನಾಟಿ ವೈದ್ಯೆಯರಾದ ಡೀಕಮ್ಮ ಅಲೆಕ್ಕಿ ಗೋಳಿತ್ತೊಟ್ಟು, ಧರ್ಣಮ್ಮ ಪೊಸೋಳಿಗೆ ನೆಲ್ಯಾಡಿ, ಕೊಕ್ಕಡ ಶ್ರೀ ದೇವಿ ಎಲೆಕ್ಟ್ರಿಕಲ್ಸ್ ಹಾರ್ಡ್‌ವೇರ್‌ನ ವಸಂತ ರಾವ್ ಅವರನ್ನು ಗೋಳಿತ್ತೊಟ್ಟು ವಲಯದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ನಿವೃತ್ತ ಸೈನಿಕ ಕರುಣಾಕರ ಶೆಟ್ಟಿ ಅಂಬುಡೇಲು ಅವರನ್ನು ಗೌರವಿಸಲಾಯಿತು. ವಾರ್ಷಿಕೋತ್ಸವಕ್ಕೆ ವಿವಿಧ ರೀತಿಯಲ್ಲಿ ಸಹಕಾರ ನೀಡಿದವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
