ಪುತ್ತೂರು:ಜಾತ್ರಾ ಗದ್ದೆಯಲ್ಲಿ ಮಗುವಿನ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ ಘಟನೆ ವರದಿಯಾಗಿದೆ.ಪುಣಚ ಮೂಡಾಯಿಬೆಟ್ಟು ಚಂದ್ರಶೇಖರ ನಾಯ್ಕ ಎಂಬವರು ಈ ಕುರಿತು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ.
‘ಏ.16ರಂದು ಸಾಯಾಂಕಾಲ ತಾನು ಹೆಂಡತಿ ಶ್ರುತಿ ಹಾಗೂ ಸುಮಾರು ಮೂರೂವರೆ ವರ್ಷ ಪ್ರಾಯದ ಮಗಳು ಪರಿಣಿತಳೊಂದಿಗೆ ಪುತ್ತೂರು ಜಾತ್ರೋತ್ಸವಕ್ಕೆ ಬಂದು ದೇವರ ದರ್ಶನ ಪಡೆದು ದೇವರ ಗದ್ದೆಯಲ್ಲಿನ ಸಂತೆಗೆ ಹೋಗಿದ್ದು ಈ ವೇಳೆ ಹೆಂಡತಿಯು ಮಗಳನ್ನು ಹೆಗಲ ಮೇಲೆ ಹೊತ್ತುಕೊಂಡಿದ್ದ ಸಮಯ ಓರ್ವ ಅಪರಿಚಿತ ವ್ಯಕ್ತಿಯು ಹಿಂಬಾಲಿಸಿಕೊಂಡು ಬಂದು, ಮಗುವಿನ ಕುತ್ತಿಗೆಗೆ ಕೈಹಾಕಿ ಕುತ್ತಿಗೆಯಲ್ಲಿದ್ದ ಪೆಂಡೆಂಟ್ ಇದ್ದ ಸುಮಾರು 8 ಗ್ರಾಂ ತೂಕದ ಚಿನ್ನದ ಸರವನ್ನು ಸುಲಿಗೆ ಮಾಡಿ ಓಡಿ ಹೋಗುತ್ತಿದ್ದ ವೇಳೆ ತಾನು ಹಿಂಬಾಲಿಸಿದಾಗ,ನನ್ನನ್ನು ನೋಡಿ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಾ ಜನರ ಮಧ್ಯದಲ್ಲಿ ಓಡಿ ಹೋಗಿ ತಪ್ಪಿಸಿಕೊಂಡಿರುತ್ತಾನೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕಳವಾದ ಚಿನ್ನದ ಸರದ ಅಂದಾಜು ಮೌಲ್ಯ ರೂ.40 ಸಾವಿರ ಆಗಬಹುದು ಎಂದು ದೂರಿನಲ್ಲಿ ತಿಳಿಸಿದ್ದಾರೆ.ಈ ಬಗ್ಗೆ ಪುತ್ತೂರು ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಚಿನ್ನದ ಸರ ಕಳವು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.